Pinaka Teaser: ಗಣೇಶ್ ಇನ್ಮುಂದೆ ಮೆಗಾಸ್ಟಾರ್; 'ಪಿನಾಕ' ಅಖಾಡದಲ್ಲಿ ಸಮರ ಯೋಧನಾಗಿ ಅಬ್ಬರ
ಗೋಲ್ಡನ್ ಸ್ಟಾರ್ ಗಣೇಶ್ ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಇದೇ ಸಂಭ್ರಮದಲ್ಲಿ 'ಪಿನಾಕ' ಹಾಗೂ 'ಬೃಂದಾವಿಹಾರಿ' ಸಿನಿಮಾಗಳ ರಿಲೀಸ್ ಡೇಟ್ ಘೋಷಣೆಯಾಗಿತ್ತು. ಪೋಸ್ಟರ್ ಬಿಟ್ಟು ಗಣಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದ 'ಪಿನಾಕ' ಚಿತ್ರತಂಡ ಈಗ ಆಕ್ಷನ್ ಪ್ಯಾಕ್ಡ್ ಟೀಸರ್ ರಿಲೀಸ್ ಮಾಡಿದ್ದಾರೆ.
ಬಿ. ಧನಂಜಯ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು ದೊಡ್ಡ ತಾರಾಗಣ ಚಿತ್ರದಲ್ಲಿದೆ. 'ಮಗಧೀರ', 'ಬಾಹುಬಲಿ' ರೀತಿಯ ಕಾಲ್ಪನಿಕ ಐತಿಹಾಸಿಕ ಕಥಾಹಂದರದ ಸಿನಿಮಾ ಇದು ಎನ್ನುವುದು ಗೊತ್ತಾಗುತ್ತಿದೆ. ಚಿತ್ರದಲ್ಲಿ ಮಂತ್ರವಾದಿ ಹಾಗೂ ಸಮರ ಯೋಧನಾಗಿ ಎರಡು ಪಾತ್ರಗಳಲ್ಲಿ ಗಣೇಶ್ ನಟಿಸಿರುವಂತೆ ಕಾಣ್ತಿದೆ. ಚಿತ್ರದ ಮೂಲಕ ಗೋಲ್ಡನ್ ಮೆಗಾಸ್ಟಾರ್ ಎಂಬ ಬಿರುದು ಅವರಿಗೆ ಸಿಕ್ಕಿದೆ. 1.30 ನಿಮಿಷದ ಟೀಸರ್ ಚಿತ್ರದ ಕಥೆ ಏನು ಎನ್ನುವ ಸುಳಿವು ನೀಡುವಂತಿದೆ.

ಭಾರೀ ಸೆಟ್‌ಗಳನ್ನು ನಿರ್ಮಿಸಿ ಬಹಳ ಅದ್ಧೂರಿಯಾಗಿ ಪಿನಾಕನ ಕಥೆ ಕಟ್ಟಿಕೊಡಲಾಗಿದೆ. ಗ್ರಾಫಿಕ್ಸ್ ಬಳಸಿ ಮತ್ತಷ್ಟು ರೋಷಕವಾಗಿ ಪ್ರೇಕ್ಷಕರನ್ನು ರಂಜಿಸುವ ಪ್ರಯತ್ನ ನಡೀತಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಟಿಜಿ ವಿಶ್ವನಾಥ್ ಪ್ರಸಾದ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ಶ್ರೀನಿವಾಸ್ ಮೂರ್ತಿ, ಶೋಭರಾಜ್ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ.
ರೊಮ್ಯಾಂಟಿಕ್ ಹೀರೊ ಆಗಿಯೇ ಬಹುತೇಕ ಸಿನಿಮಾಗಳಲ್ಲಿ ಗಣೇಶ್ ನಟಿಸಿದ್ದಾರೆ. 'ಪಟಾಕಿ' ಹಾಗೂ ಸ್ಟೈಲ್ ಕಿಂಗ್ ಸಿನಿಮಾಗಳಲ್ಲಿ ಆಕ್ಷನ್ ಕಟ್ ಮುಖ ಮಾಡಿದ್ರು ಮತ್ತೆ ರೊಮ್ಯಾಂಟಿಕ್ ಹೀರೊ ಆಗಿಯೇ ಗೆಲುವು ಕಂಡರು. ಆದರೆ ಇದೇ ಮೊದಲ ಬಾರಿಗೆ ಹೊಸ ಅವತಾರದಲ್ಲಿ ಇತಿಹಾಸ ಹಾಗೂ ಪೌರಾಣಿಕ ಅಂಶಗಳಿರುವ ಚಿತ್ರದಲ್ಲಿ ಅವರು ನಟಿಸಿದ್ದಾರೆ. ಉದ್ದ ಕೂದಲು ಬಿಟ್ಟು ಸಮರ ಯೋಧನ ರೀತಿ ರಣರಂಗದಲ್ಲಿ ಸೆಣಸಾಡಿದ್ದಾರೆ.
ವರ್ತಮಾನದ ಕಥೆಯಲ್ಲಿ ಮಂತ್ರವಾದಿಯಾಗಿ ಫ್ಯಾಶ್‌ಬ್ಯಾಕ್‌ನಲ್ಲಿ ಹೀಗೆ ಸಮರ ವೀರನಾಗಿ ಗಣೇಶ್ ನಟಿಸಿರುವುದು ಗೊತ್ತಾಗುತ್ತಿದೆ. ಇದು ಟೈಮ್ ಟ್ರಾವಲ್ ಸಿನಿಮಾನಾ? ಎನ್ನುವ ಅನುಮಾನ ಕೂಡ ಮೂಡುತ್ತದೆ. ಕರಮ್ ಚಾವ್ಲಾ ಹಾಗೂ ರಾಮ ಮಾರುತಿ ಛಾಯಾಗ್ರಹಣ ಚಿತ್ರಕ್ಕಿದೆ. ಗೌರ ಹರಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಒಟ್ಟಾರೆ ಟೀಸರ್ ಬಗ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ 'ಪಿನಾಕ' ಸಿನಿಮಾ ಹೇಗೆ ನಿರೀಕ್ಷೆ ಹೆಚ್ಚಿಸುತ್ತದೆ ಎನ್ನುವುದನ್ನು ಕಾದು ನೋಡಬೇಕು.
ಚಾರುಕೇಶ ಪಿನಾಕ ರಾಜನ ಕಾಲ್ಪನಿಕ ಕಥೆಯನ್ನು ಚಿತ್ರದಲ್ಲಿ ಹೇಳಿರುವುದಾಗಿ ಗಣೇಶ್ ಹೇಳಿದ್ದಾರೆ. ಈ ಫ್ಲ್ಯಾಶ್‌ಬ್ಯಾಕ್ ದೃಶ್ಯಗಳಿಗಾಗಿ 35 ದಿನ ಚಿತ್ರೀಕರಣ ಮಾಡಿರುವುದಾಗಿ ಹೇಳಿದ್ದಾರೆ. ಕ್ಲೈಮ್ಯಾಕ್ಸ್ ಚಿತ್ರದ ಹೈಲೆಟ್. ಅದನ್ನು ತೆರೆಮೇಲೆ ನೋಡಬೇಕು. ರಂಗಾಯಣ ರಘು, ಸಾಧು ಕೋಕಿಲ ಕೂಡ ಚಿತ್ರದಲ್ಲಿದ್ದಾರೆ. ನಾವು ಚಿಕ್ಕಂದಿನಲ್ಲಿ ಚಂದಮಾಮ ಕಥೆಗಳನ್ನು ಕೇಳುತ್ತಿದ್ದೆವು. ಈ ಸಿನಿಮಾ ಕೂಡ ಅದೇ ಅನುಭವ ನೀಡುತ್ತದೆ ಎಂದು ಗಣೇಶ್ ಹೇಳಿದ್ದಾರೆ.


Click it and Unblock the Notifications