'ಕೃಷ್ಣಂ ಪ್ರಣಯಸಖಿ' ಚಿತ್ರ ಗೆದ್ದು ಹೆಚ್ಚಾಯ್ತು ಗಣೇಶ್ ಸಂಭಾವನೆ? ಈಗ ಎಷ್ಟು ಕೋಟಿ?
ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು, ಆಪ್ತರು ಶುಭಾಶಯ ಕೋರುತ್ತಿದ್ದಾರೆ. ಒಂದೊಳ್ಳೆ ಬ್ರೇಕ್ ಪಡೆಯಲು ಕಾಯುತ್ತಿದ್ದ ಗಣಿ 'ಕೃಷ್ಣಂ ಪ್ರಣಯಸಖಿ' ಸಿನಿಮಾ ಮಾಡಿ ಕಂಬ್ಯಾಕ್ ಮಾಡಿದ್ದರು.
ಇದೀಗ 'ಪಿನಾಕ' ಚಿತ್ರದಲ್ಲಿ ಗಣಿ ನಟಿಸುತ್ತಿದ್ದಾರೆ. ಮತ್ತೆರಡು ಸಿನಿಮಾಗಳ ಚಿತ್ರೀಕರಣ ನಡೀತಿದೆ. ಮುಖ್ಯವಾಗಿ 'ಕೃಷ್ಣಂ ಪ್ರಣಯಸಖಿ' ಸಕ್ಸಸ್ ಬಳಿಕ ಗಣೇಶ್ ಸಂಭಾವನೆ ಹೆಚ್ಚಾಗಿದೆ. ಒಂದು ಸಿನಿಮಾ ಗೆದ್ದರೆ ನಾಯಕ ನಟರ ಸಂಭಾವನೆ ದಿಢೀರ್ ಹೆಚ್ಚಾಗುವುದು ಸರ್ವೇ ಸಾಮಾನ್ಯ. ಹಾಗಿದ್ದರೆ ಈಗ ಗಣೇಶ್ ಒಂದು ಚಿತ್ರಕ್ಕೆ ಎಷ್ಟು ಪಡೆಯುತ್ತಾರೆ ಎನ್ನುವ ಕುತೂಹಲ ಸಹಜ.

'ಮುಂಗಾರು ಮಳೆ' ಸಿನಿಮಾ ಹಿಟ್ ಆಗುತ್ತಿದ್ದಂತೆ ನಟ ಗಣೇಶ್ ಸಂಭಾವನೆ 10 ಪಟ್ಟು ಹೆಚ್ಚಾಗಿತ್ತು. ಅದಕ್ಕೂ ಮುನ್ನ 10-15 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದ ಗಣಿ 'ಗಾಳಿಪಟ' ಚಿತ್ರಕ್ಕೆ 72 ಲಕ್ಷ ರೂ. ಪಡೆದಿದ್ದರು. ಅವತ್ತಿನ ಕಾಲಕ್ಕೆ ಅದು ಭಾರೀ ಸಂಭಾವನೆ ಎನಿಸಿಕೊಂಡಿತ್ತು. ಬಳಿಕ ಸಿನಿಮಾದಿಂದ ಸಿನಿಮಾಗೆ ಅವರ ಸಂಭಾವನೆ ಮೊತ್ತ ಏರುತ್ತಾ ಬರುತಿತ್ತು. 'ಕೃಷ್ಣಂ ಪ್ರಣಯಸಖಿ' ಚಿತ್ರಕ್ಕೆ 3 ಕೋಟಿ ರೂ. ಸಂಭಾವನೆ ಗಣೇಶ್ ತೆಗೆದುಕೊಂಡಿದ್ದರು ಎನ್ನಲಾಗುತ್ತದೆ. ಆ ಸಿನಿಮಾ ಬಳಿಕ ಸಂಭಾವನೆ ಜಾಸ್ತಿ ಮಾಡಿದ್ದಾರೆ.
ತಮ್ಮ ಹೊಸ ಚಿತ್ರಕ್ಕೆ ಗೋಲ್ಡನ್ ಸ್ಟಾರ್ 5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಊಹಾಪೋಹ ಇದೆ. 'ಕೃಷ್ಣಂ ಪ್ರಣಯಸಖಿ' ಕಾಂಬಿನೇಷನ್‌ನಲ್ಲೇ ಮತ್ತೊಂದು ಸಿನಿಮಾ ಮಾಡುವ ತಯಾರಿ ನಡೀತಿದೆ. ಸಿನಿಮಾ ಬಜೆಟ್, ಗಣಿ ಸಂಭಾವನೆ ಕೂಡ ಹೆಚ್ಚಾಗುತ್ತಿದೆ. ಒಟ್ಟಾರೆ ಒಂದೇ ಒಂದು ಸಕ್ಸಸ್ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆಗಳಿಗೆ ಏರಿಳಿತಕ್ಕೆ ಕಾರಣವಾಗುತ್ತದೆ. ಕಳೆದ ವರ್ಷದಲ್ಲಿ ಮೊದಲ 6 ತಿಂಗಳು ಯಾವುದೇ ಸಿನಿಮಾ ದೊಡ್ಡದಾಗಿ ಗೆದ್ದಿರಲಿಲ್ಲ. 'ಕೃಷ್ಣಂ ಪ್ರಣಯಸಖಿ' ಸಿನಿಮಾ ಆ ಬರ ನೀಗಿಸಿತ್ತು.

'ದ್ವಾಪರ' ಹಾಡು ಹಿಟ್ ಆಗಿ ಚಿತ್ರಕ್ಕೆ ದೊಡ್ಡ ಬಲ ತಂದಿತ್ತು. ಕಿರುತೆರೆಯಿಂದ ಹಿರಿತೆರೆಗೆ ಬಂದು ಸಕ್ಸಸ್ ಕಂಡವರು ಗಣೇಶ್. ಸಣ್ಣ ಪುಟ್ಟ ಪಾತ್ರಗಳ ಮೂಲಕ ಆರಂಭಿಸಿ ಬಳಿಕ ಹೀರೊ ಆಗಿದ್ದರು. 'ಚೆಲ್ಲಾಟ' ಚಿತ್ರದಲ್ಲಿ ಮೊದಲಿಗೆ ನಾಯಕರಾಗಿ ನಟಿಸಿದ್ದರು. ಯೋಗರಾಜ್ ಭಟ್ ನಿರ್ದೇಶನದ 'ಮುಂಗಾರುಮಳೆ' ಸಿನಿಮಾ ಬ್ರೇಕ್ ಕೊಟ್ಟಿತ್ತು. ಬಳಿಕ ಹಿಂತಿರುಗಿ ನೋಡಲಿಲ್ಲ. ರೊಮ್ಯಾಂಟಿಕ್ ಹೀರೊ ಆಗಿ ಪ್ರೇಕ್ಷಕರನ್ನು ರಂಜಿಸುತ್ತಾ ಬರುತ್ತಿದ್ದಾರೆ.
ಆಗೊಮ್ಮೆ ಈಗೊಮ್ಮೆ ಬೇರೆ ತರಹದ ಪಾತ್ರಗಳಲ್ಲಿ ಕೂಡ ನಟಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ರೊಮ್ಯಾಂಟಿಕ್ ಹೀರೊ ಆಗಿಯೇ ಇವತ್ತಿಗೂ ಅಭಿಮಾನಿಗಳಿಗೆ ಇಷ್ಟವಾಗಿದ್ದಾರೆ. ನಟರಾಗಿ ಮಾತ್ರವಲ್ಲದೇ ನಿರ್ದೇಶಕರಾಗಿ ನಿರ್ಮಾಪಕರಾಗಿಯೂ ಗಣೇಶ್ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. ಆದರೆ ಬಳಿಕ ನಟನೆಯಲ್ಲೇ ಮುಂದುವರೆದರು.
ಸದ್ಯ ಹುಟ್ಟುಹಬ್ಬದ ಸಂಭ್ರಮದಲ್ಲಿ ಗಣೇಶ್ ನಟನೆಯ ಎರಡ್ಮೂರು ಸಿನಿಮಾಗಳ ಅಪ್‌ಡೇಟ್ ಸಿಕ್ಕಿದೆ. 'ಯುವರ್ಸ್ ಸಿನ್ಸಿಯರ್ಲಿ ರಾಮ್' ಚಿತ್ರದ ಹೊಸ ಪೋಸ್ಟರ್ ಬಂದಿದೆ. ಆಂಜನೇಯನ ಗೆಟಪ್‌ನಲ್ಲಿ ಗೋಲ್ಡನ್ ಸ್ಟಾರ್ ಮಿಂಚಿದ್ದಾರೆ. ಇನ್ನು 'ಪಿನಾಕ' ಚಿತ್ರತಂಡ ಕೂಡ ಹೊಸ ಪೋಸ್ಟರ್ ಬಿಟ್ಟು ಹುಟ್ಟುಹಬ್ಬ ಶುಭಾಶಯ ಕೋರಿದೆ. ಅರಸು ಅಂತಾರೆ ನಿರ್ದೇಶನದಲ್ಲಿ ಗಣೇಶ್ ಒಂದು ಚಿತ್ರದಲ್ಲಿ ನಟಿಸುವ ಬಗ್ಗೆ ಸುದ್ದಿ ಇತ್ತು. ಆ ಚಿತ್ರಕ್ಕೆ 'ದಿ ಜಂಗೋ ಕೃಷ್ಣಮೂರ್ತಿ' ಎಂದು ಟೈಟಲ್ ಫಿಕ್ಸ್ ಆಗಿದೆ.
ಬಹದ್ದೂರ್ ಚೇತನ್ ನಿರ್ದೇಶನದಲ್ಲಿ ಗಣೇಶ್ ನಟನೆಯ ಸಿನಿಮಾ ಪಕ್ಕಾ ಆಗಿದೆ. ಎಂ. ಮುನೇಗೌಡ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಶೀಘ್ರದಲ್ಲೇ ಆ ಸಿನಿಮಾ ಸೆಟ್ಟೇರಲಿದೆ. ಇನ್ನು ಹುಟ್ಟುಹಬ್ಬದ ದಿನ ಗಣೇಶ್ ಅಭಿಮಾನಿಗಳನ್ನು ಭೇಟಿ ಆಗುತ್ತಿಲ್ಲ. ಈ ಬಗ್ಗೆ ಇತ್ತೀಚೆಗೆ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದರು.


Click it and Unblock the Notifications











