ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್
'ಮ್ಯಾಕ್ಸ್' ಸಿನಿಮಾ ರಿಲೀಸ್ ಯಾವಾಗ? ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಇತ್ತೀಚೆಗ ಟೀಸರ್ ಬಿಡುಗಡೆಯಾಗಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಸೆಪ್ಟೆಂಬರ್ 2ಕ್ಕೆ ಸುದೀಪ್ ಹುಟ್ಟುಹಬ್ಬ. ಅದೇ ಸಮಯದಲ್ಲಿ ಸಿನಿಮಾ ತೆರೆಗೆ ಬರಬಹುದು ಎನ್ನುವ ನಿರೀಕ್ಷೆಯಿದೆ.
'ವಿಕ್ರಾಂತ್ ರೋಣ' ಸಿನಿಮಾ ಬಿಡುಗಡೆಯಾಗಿ 2 ವರ್ಷ ಕಳೀತು. ಆದರೆ ಇನ್ನು 'ಮ್ಯಾಕ್ಸ್' ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿಲ್ಲ. ಆ ಬಳಿಕ ಕಿಚ್ಚ ಯಾವ ಸಿನಿಮಾ ಕೈಗೆತ್ತಿಕೊಳ್ಳುತ್ತಾರೆ ಎನ್ನುವ ಬಗ್ಗೆಯೂ ಖಚಿತ ಮಾಹಿತಿಯಿಲ್ಲ. ಈಗಾಗಲೇ ಮೂರ್ನಾಲ್ಕು ಸ್ಕ್ರಿಪ್ಟ್ ಫೈನಲ್ ಮಾಡಿದ್ದಾರೆ. ಜೊತೆಗೆ ಬಿಗ್‌ಬಾಸ್ 11ನೇ ಸೀಸನ್ ಕೂಡ ಹತ್ತಿರವಾಗುತ್ತಿದೆ.

'ಮ್ಯಾಕ್ಸ್' ಸಿನಿಮಾ ವಿಚಾರ ಪಕ್ಕಕ್ಕಿಟ್ಟರೆ ಸುದೀಪ್ ನಟನೆಯ ಸೂಪರ್ ಹಿಟ್ 'ಹೆಬ್ಬುಲಿ' ಸಿನಿಮಾ ರೀ-ರಿಲೀಸ್‌ಗೆ ಸಜ್ಜಾಗಿದೆ. ಹೌದು ಸ್ಯಾಂಡಲ್‌ವುಡ್‌ನಲ್ಲೀಗ ಹಿಟ್ ಸಿನಿಮಾಗಳನ್ನು ಮತ್ತೆ ತೆರೆಗೆ ತರುವ ಟ್ರೆಂಡ್ ಶುರುವಾಗಿದೆ. 'ಜಾಕಿ' ಬಳಿಕ 'ಎ', 'ರಾಬರ್ಟ್' ಹಾಗೂ 'ಶಾಸ್ತ್ರೀ' ಸೇರಿದಂತೆ ಹಲವು ಸಿನಿಮಾಗಳು ಮತ್ತೆ ಪ್ರೇಕ್ಷಕರ ಮುಂದೆ ಬಂದಿವೆ. ಈ ವಾರ ಯಶ್ ನಟನೆಯ 'ರಾಜಾಹುಲಿ' ಸಿನಿಮಾ ಮತ್ತೆ ತೆರೆಗಪ್ಪಳಿಸುತ್ತಿದೆ.
ಮುಂದಿನ ವಾರ ಅಂದರೆ ಆಗಸ್ಟ್ 2ಕ್ಕೆ ಕಿಚ್ಚನ 'ಹೆಬ್ಬುಲಿ' ಸಿನಿಮಾ ಮರುಬಿಡುಗಡೆ ಆಗಲಿದೆ. 7 ವರ್ಷಗಳ ಹಿಂದೆ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ತೆರೆಗೆ ಬಂದಿತ್ತು. ಎಸ್. ಕೃಷ್ಣ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ರಘುನಾತ್ ಜೊತೆ ಸೇರಿ ಉಮಾಪತಿ ಶ್ರೀನಿವಾಸ್ ಚಿತ್ರಕ್ಕೆ ಹಣ ಹಾಕಿದ್ದರು. ಚಿತ್ರದಲ್ಲಿ ಕ್ಯಾಪ್ಟನ್ ರಾಮ್ ಆಗಿ ಸುದೀಪ್ ಅಬ್ಬರಿಸಿದ್ದರು. ಸುದೀಪ್ ಸ್ಟೈಲಿಶ್ ಲುಕ್ ಅಭಿಮಾನಿಗಳ ಗಮನ ಸೆಳೆದಿತ್ತು.
ಅಮಲಾ ಪೌಲ್ ನಾಯಕಿಯಾಗಿ ನಟಿಸಿದ್ದರೆ ಕ್ರೇಜಿಸ್ಟಾರ್ ರವಿಚಂದ್ರನ್, ಕಬೀರ್ ದುಹಾನ್ ಸಿಂಗ್, ರವಿಕಾಳೆ, ಕಲ್ಯಾಣಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. 18 ದಿನಗಳಲ್ಲಿ 'ಹೆಬ್ಬುಲಿ' 50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಸುದ್ದಿ ಆಗಿತ್ತು. ಅವತ್ತಿನ ಕಾಲಕ್ಕೆ ಬಹಳ ಬೇಗ ಈ ಸಾಧನೆ ಮಾಡಿದ 'ಹೆಬ್ಬುಲಿ' ಎನಿಸಿಕೊಂಡಿತ್ತು.

ಚಿತ್ರಕ್ಕಾಗಿ ಸುದೀಪ್ ಸ್ಟೈಲಿಶ್ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಘೋಷಣೆ ಆಗುತ್ತಿದ್ದಂತೆ ಬರೀ ಕಿಚ್ಚನ ಲುಕ್ ವೈರಲ್ ಆಗಿ ಟ್ರೆಂಡ್ ಹುಟ್ಟಾಕ್ಕಿತ್ತು. ಹಾಗಾಗಿ ಸಹಜವಾಗಿಯೇ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿತ್ತು. ಬಳಿಕ ಟೀಸರ್, ಸಾಂಗ್ಸ್ ಹಿಟ್ ಆಗಿ ಹೈಪ್ ಕ್ರಿಯೇಟ್ ಆಗಿತ್ತು. ಹಾಗಾಗಿ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿತ್ತು.
ದೇಶದ ಗಡಿಯಲ್ಲಿ 'ಸರ್ಜಿಕಲ್ ಸ್ಟ್ರೈಕ್' ಮಾಡಿ ಉಗ್ರರನ್ನು ಸದೆಬಡೆಯುವ ಪಾರಾ ಕಮಾಂಡೊ ಕ್ಯಾಪ್ಟನ್ ರಾಮ್ (ಸುದೀಪ್), ಬಳಿಕ ಅಣ್ಣನ ಕೊಲೆಯ ಜಾಡನ್ನು ಭೇದಿಸುವ ಕಥೆ ಚಿತ್ರದಲ್ಲಿದೆ. ನಿಷ್ಟಾವಂತ ಐಎಎಸ್ ಅಧಿಕಾರಿಯಾದ ತನ್ನ ಅಣ್ಣ ಸತ್ಯಮೂರ್ತಿ(ರವಿಚಂದ್ರನ್)ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಕೇಳಿ ರಾಮ್ ಊರಿಗೆ ಬರ್ತಾನೆ. ಅಣ್ಣನನ್ನು ಆತ್ಮಹತ್ಯೆ ಅಲ್ಲ, ಅದು ಕೊಲೆ ಎಂದು ತಿಳಿದುಕೊಳ್ಳುತ್ತಾರೆ. ಅದಕ್ಕೆ ಕಾರಣರಾದವರನ್ನು ಮಟ್ಟ ಹಾಕುವುದೇ ಇನ್ನುಳಿದ ಕಥೆ.
'ಹೆಬ್ಬುಲಿ' ಐಎಂಡಿಬಿಯಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿ ಸದ್ದು ಮಾಡಿತ್ತು. ಬಾಕ್ಸಾಫೀಸ್‌ನಲ್ಲಿ ಕೂಡ ಸಾಕಷ್ಟು ದಾಖಲೆಗಳನ್ನು ಬರೆದಿತ್ತು. ದೇಶಾದ್ಯಂತ 500 ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆ ಕಂಡಿತ್ತು. ಇದೀಗ ಮತ್ತೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ.


Click it and Unblock the Notifications










