ಉಪ್ಪಿ ಜೊತೆ 'ಕಬ್ಜಾ' ಚಿತ್ರದಲ್ಲಿ ನಟಿಸಬೇಕಾ: ಇಲ್ಲಿದೆ ಸುವರ್ಣ ಅವಕಾಶ!
ಕಬ್ಜ ಕನ್ನಡದ ಬಹುನಿರೀಕ್ಷೆಯ, ಬಿಗ್ ಬಜೆಟ್ ಸಿನಿಮಾ. ಈ ಚಿತ್ರದಲ್ಲಿ ನಟ ಉಪೇಂದ್ರ ನಾಯಕ ನಟನಾಗಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಉಪ್ಪಿಯ ಲುಕ್ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿರುವುದು ಸುಳ್ಳಲ್ಲ. ಈ ಚಿತ್ರ ಭೂಗತ ಲೋಕದ ಕಥೆಯಾಗಿದೆ.
ಇಂಥಹ ಸಿನಿಮಾದಲ್ಲಿ ನಟಿಸಬೇಕು ಎನ್ನುವ ಆಸೆ ನಿಮಗೂ ಇರಬಹುದು. ಹಾಗಿದ್ದರೆ ನೀವೂ ಕೂಡ ಒಮ್ಮೆ ಟ್ರೈ ಮಾಡಿ ನೋಡಿ. ಉಪ್ಪಿ ಜೊತೆಗೆ, ಕಬ್ಜ ಟೀಮ್ ಸೇರುವ ಅವಕಾಶ ನಿಮಗೂ ಸಿಕ್ಕರೂ ಸಿಗಬಹುದು. ಅದು ಹೇಗಪ್ಪ ನಾವು ಈ ಚಿತ್ರದಲ್ಲಿ ಅಭಿನಯ ಮಾಡುವುದು ಅಂತ ತಲೆಕೆಡಿಸಿಕೊಳ್ಳಬೇಡಿ. ಈ ಬಗ್ಗೆ ಚಿತ್ರತಂಡ ಏನು ಹೇಳುತ್ತಿದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.
ಕಬ್ಜ ಬಹುದೊಡ್ಡ ಕ್ಯಾನ್ವಸ್ ಇರುವ ಚಿತ್ರ. ಕೊರೊನಾ, ಲಾಕ್‌ಡೌನ್ ಕಾರಣಕ್ಕೆ ಚಿತ್ರದ ಶೂಟಿಂಗ್ ಮತ್ತಷ್ಟು ಮುಂದೆ ಹೋಗಿದೆ. ಸದ್ಯ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಚಿತ್ರಕ್ಕೆ ಮತ್ತಷ್ಟು ನವ ಕಲಾವಿದರ ಅವಶ್ಯಕತೆ ಇದೆ. ಅದಕ್ಕಾಗಿ ಸಿನಿಮಾ ತಂಡ ಕಾಸ್ಟಿಂಗ್ ಕಾಲ್ ನಡೆಸಿದೆ. ಆಸಕ್ತಿ ಇರುವ ಕಲಾವಿದರಿಗೆ ಅವಕಾಶ ಕೊಡಲು ಚಿತ್ರತಂಡ ಮುಂದಾಗಿದೆ.

ಆದರೆ ಇಲ್ಲಿ ಕೆಲವೇ, ವಿಶೇಷವಾದ ಪಾತ್ರಕ್ಕೆ ಮಾತ್ರ ಕಲಾವಿದರನ್ನು ಹುಡುಕಲಾಗುತ್ತಿದೆ. ಹಾಗಾಗಿ ಎಲ್ಲರೂ ಆಡಿಷನ್‌ಗೆ ಹೋಗ್ತಿವಿ, ಸಿನಿಮಾದಲ್ಲಿ ನಟನೆ ಮಾಡ್ತೀವಿ ಅಂದರೆ ಸಾಧ್ಯವಿಲ್ಲ. ಇಲ್ಲಿ ಕೇವಲ ಪುರುಷರಿಗೆ ಮಾತ್ರ ಅವಕಾಶ ಎಂದು ಚಿತ್ರತಂಡ ಪೋಸ್ಟರ್‌ನಲ್ಲಿ ಸ್ಪಷ್ಟಪಡಿಸಿದೆ.

ಕಲಾವಿದನಿಗೆ ಇರಬೇಕಾದ ಅರ್ಹತೆಗಳು ಹೀಗಿವೆ!
ಕಬ್ಜ ಚಿತ್ರ ತಂಡ ಪ್ರಕಟ ಮಾಡಿರುವ ಪೋಸ್ಟರ್‌ನಲ್ಲಿ ವಿವರಗಳು ಹೀಗಿವೆ. ನಟನೆಯಲ್ಲಿ ಆಸಕ್ತಿಯುಳ್ಳ ಒಬ್ಬ ಪುರುಷ ಕಲಾವಿದ ಬೇಕಾಗಿದ್ದಾರೆ ಎಂದು ಮೊದಲ ಸಾಲಿನಲ್ಲಿ ಬರೆಯಲಾಗಿದೆ. 6 ಫೀಟ್ ಎತ್ತರ ಇರಬೇಕು, ವಯಸ್ಸು 35 ರಿಂದ 50ರ ಒಳಗೆ ಇರಬೇಕು. ಎಂದು ಬರೆದು ಪೋಸ್ಟರ್‌ನಲ್ಲಿ ಚಿತ್ರತಂಡದ ಸಂಪರ್ಕ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಇದಿಷ್ಟು ಇದ್ದರೆ ನೀವು ಉಪ್ಪಿ ಜೊತೆಗೆ ಕಬ್ಜ ಚಿತ್ರದಲ್ಲಿ ಮಿಂಚಬಹುದು.
ಈ ಚಿತ್ರಕ್ಕೆ ನಟ ಉಪೇಂದ್ರನ ಜೊತೆಗೆ ಕಿಚ್ಚ ಸುದೀಪ್ ವಿಶೇಷ ಪಾತ್ರ ಒಂದರಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಉಪೇಂದ್ರ ಅವರ ಪಾತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಹಾಗಾಗಿ ಕಿಚ್ಚ ಸುದೀಪ್ ಭಾಗದ ಚಿತ್ರೀಕರಣ ಕೂಡ ಮುಗಿದೆ. ಸುದೀಪ್ ಪಾತ್ರದ ಹೆಸರು 'ಭಾರ್ಗವ ಭಕ್ಷಿ' ಈ ಹೆಸರೇ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ಪೊಲೀಸ್ ಪಾತ್ರದಲ್ಲಿ ಸುದೀಪ್ ಅಭಿನಯಿಸುತ್ತಲಿರುವುದು ಈ ಹಿಂದೆ ರಿವೀಲ್ ಆಗಿತ್ತು. ಕಬ್ಜ ಚಿತ್ರಕ್ಕೆ ಆರ್. ಚಂದ್ರು ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದಾರೆ.


Click it and Unblock the Notifications











