ಅಭಿಮಾನ್ ಸ್ಟುಡಿಯೋ ವಶಕ್ಕೆ ಪಡೆದ ರಾಜ್ಯ ಸರ್ಕಾರ, 10 ಗುಂಟೆ ಜಾಗ ಕೇಳಿದ ಅಳಿಯ ಅನಿರುದ್ಧ್
''ಅಭಿಮಾನ''ದ ಪ್ರತೀಕದಂತೆ ''ಅಭಿಮಾನ್ ಸ್ಟುಡಿಯೋ''ದಲ್ಲಿದ್ದ ವಿಷ್ಣುವರ್ಧನ್ ಸಮಾಧಿಯನ್ನು ನೆಲ ಸಮ ಮಾಡಿ, ಆ ಸಮಾಧಿಯ ಮೇಲೆ ತಮ್ಮ ಭವ್ಯವಾದ ಮಾಲ್ ನಿಲ್ಲಿಸುವ ಕನಸು ಕಂಡಿದ್ದರು ಬಾಲಣ್ಣನ ಮಕ್ಕಳು. ಆದರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಎನ್ನುವಂತೆ ಈ ಕನಸಿಗೆ ರಾಜ್ಯ ಸರ್ಕಾರ ಬೆಂಕಿ ಇಟ್ಟಿದೆ. ಅಭಿಮಾನ್ ಸ್ಟುಡಿಯೋ ಜಾಗವನ್ನು ಅರಣ್ಯ ಭೂಮಿ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ...
ಅಧಿಕೃತ ಆದೇಶ ಹೊರಡಿಸಿದ್ದು 20 ಎಕರೆ ಜಾಗವನ್ನು ಸರ್ಕಾರ ತನ್ನ ವಶಕ್ಕೆ ಪಡೆದಿದೆ. ಇದರ ಬೆನ್ನಲ್ಲೇ ಸ್ಮಾರಕ ವಿಚಾರದಲ್ಲಿ ಬೆಂಗಳೂರಿನಲ್ಲಿ ನಮಗೆ ಜಾಗ ಕೊಡಿ ಎಂದು ಹೇಳಲು ಸಾಧ್ಯ ಇಲ್ಲ, ನಮಗೆ ಆ ಅಧಿಕಾರ ಈಗ ಇಲ್ಲ ಎಂದು ಹೇಳುತ್ತಾ ಬಂದಿದ್ದ ಸಾಹಸಸಿಂಹ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಈಗ ಸರ್ಕಾರಕ್ಕೆ ಹತ್ತು ಗುಂಟೆ ಜಾಗ ಕೇಳಲು ಮುಂದಾಗಿದ್ದಾರೆ.

ಈ ಕುರಿತು ಮಾಧ್ಯಮದವರ ಜೊತೆ ಇಂದು ಮಾತನಾಡಿರುವ ಅನಿರುದ್ದ್, ಅಭಿಮಾನ್ ಸ್ಟುಡಿಯೋ ಜಾಗವನ್ನು ವಶಕ್ಕೆ ಪಡೆಯಬಹುದು ಎನ್ನುವ ವಿಚಾರ ನಮಗೆ ಮೊದಲಿಂದ ಗೊತ್ತಿತ್ತು. ಈ ದಿಸೆಯಲ್ಲಿ ನಾವು ಆರೂವರೆ ವರ್ಷ ಪ್ರಯತ್ನವನ್ನು ಕೂಡ ಮಾಡಿದೆವು, ಆದರೆ ನಿಮಗೆಲ್ಲಾ ಗೊತ್ತಿರುವಂತೆ ಅದಾಗಲೇ ಇಲ್ಲ ಎಂದು ಹೇಳಿದ್ದಾರೆ.
ಈಗ ಸರ್ಕಾರ ಅದನ್ನು ವಶ ಪಡೆಸಿಕೊಂಡಿದೆ. ಅರಣ್ಯ ಇಲಾಖೆ ಎಂದು ಘೋಷಣೆ ಮಾಡಿದೆ. ಹೀಗಾಗಿ ನಮಗೆ ಒಂದು ರೀತಿಯಲ್ಲಿ ಖುಷಿಯಾಗಿದೆ ಎಂದು ಹೇಳಿರುವ ಅನಿರುದ್ಧ್, ಎಲ್ಲರಿಗೆ ಗೊತ್ತಿರುವಂತೆ ಕೆಲ ದಿನಗಳ ಹಿಂದೆ ಭಾರತಿ ಅಮ್ಮ ಅಪ್ಪಾವ್ರ ಅಂತ್ಯ ಸಂಸ್ಕಾರ ನಡೆದ ಜಾಗದಲ್ಲಿ ಕಟ್ಟಿಸಿದ್ದ ಮಂಟಪವನ್ನು ತೆರವುಗೊಳಿಸಿದ್ದರು. ಇದರಿಂದ ನಮ್ಮೆಲ್ಲರಿಗೆ ಕನ್ನಡಿಗರಿಗೆ ನೋವುಂಟಾಗಿತ್ತು. ಈಗ ಸರ್ಕಾರ ಆ ಜಾಗವನ್ನು ವಶಪಡಿಸಿಕೊಂಡ ಹಿನ್ನೆಲೆ ನಾನು ಮತ್ತು ಭಾರತಿ ಅಮ್ಮ ಸರ್ಕಾರಕ್ಕೆ ಅಭಿಮಾನಿಗಳ ಪರವಾಗಿ ಮನವಿಯನ್ನು ಮಾಡಿಕೊಳ್ಳಲಿದ್ದೇವೆ, ಹತ್ತು ಗುಂಟೆ ಜಾಗವನ್ನು ಕೇಳಲಿದ್ದೇವೆ ಎಂದು ಹೇಳಿದ್ದಾರೆ.

ಅಭಿಮಾನ್ ಸ್ಟುಡಿಯೋದ ಜೊತೆ ಅಭಿಮಾನಿಗಳಿಗೆ ಭಾವನಾತ್ಮಕವಾದ ನಂಟಿದೆ, ವರ್ಷಾನುವರ್ಷ ಅಭಿಮಾನಿಗಳು ಅಲ್ಲಿ ಬಂದು ವಿಶೇಷ ರೀತಿಯಲ್ಲಿ ಪೂಜೆ ಸಲ್ಲಿಸುತ್ತಾರೆ. ಅಭಿಮಾನಿಗಳ ಪಾಲಿಗೆ ಅದೊಂದು ಪುಣ್ಯಕ್ಷೇತ್ರ. ಹೀಗಾಗಿ ಆ ಜಾಗಕ್ಕೆ ಅದರದ್ದೇ ಆದ ಆದ್ಯತೆ ಮತ್ತು ಪ್ರಾಮುಖ್ಯತೆ ಇದೆ ಎಂದು ಹೇಳಿರುವ ಅನಿರುದ್ಧ್ ಈ ಎಲ್ಲಾ ಕಾರಣಗಳಿಂದ ಅಲ್ಲಿ ಒಂದು ಮಂಟೊ ಕಟ್ಟುವುದಕ್ಕೆ ಅನುಮತಿ ಕೊಡಿ, ಪೂಜೆ ಸಲ್ಲಿಸುವುದಕ್ಕೆ ಅವಕಾಶ ಮಾಡಿಕೊಡಿ ಎಂದು ನಾವು ಮಾನ್ಯ ಮುಖ್ಯಮಂತ್ರಿಗಳ ಬಳಿ ಮುಂಬರುವ ದಿನಗಳಲ್ಲಿ ಮನವಿಯನ್ನು ಮಾಡಿಕೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.
ಮುಂದುವರೆದು ಅಪ್ಪಾವ್ರ 75ನೇ ಜನ್ಮದಿನದಂದು ಅಭಿಮಾನ್ ಸ್ಟುಡಿಯೋ ಬಳಿ ಸ್ಮಾರಕ ಕಟ್ಟಲು ಅಡಿಪಾಯ ಹಾಕುವ ಆಶಯ ಇದೆ ಎಂದು ಹೇಳಿರುವ ಅನಿರುದ್ದ್ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಲು ನಾವು ತುಂಬಾ ಕಷ್ಟ ಪಟ್ಟಿದ್ದೇವೆ, ಅಭಿಮಾನ್ ಸ್ಟುಡಿಯೋದಲ್ಲಿ ಕೂಡ ಸ್ಮಾರಕ ಆಗಬೇಕೆಂದು ಹೋರಾಟವನ್ನು ಮಾಡಿದ್ದೇವೆ ಎಂದು ಹೇಳಿದ್ದಾರೆ. ಇದೇ ಸಮಯದಲ್ಲಿ ನಿಜವಾದ ಅಭಿಮಾನಿಗಳು ನಮ್ಮ ಜೊತೆಯಲ್ಲಿಯೇ ಇದ್ದಾರೆ. ಅವರವರ ಬಡಾವಣೆಗಳಲ್ಲಿ ಅವರೆಲ್ಲ ವಿಷ್ಣುವರ್ಧನ್ ಅವರ ಪ್ರತಿಮೆ ಇಟ್ಟು ಪೂಜೆ ಮಾಡುತ್ತಿದ್ದಾರೆ ಎಂದು ಕೂಡ ಹೇಳಿರುವ ಅನಿರುದ್ದ್ ನಮ್ಮ ಮತ್ತು ಅಭಿಮಾನಿಗಳ ನಡುವೆ ಬಿರುಕು ಮೂಡಿಸಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಅವರು ನಿಜವಾದ ವಿಷ್ಣುವರ್ಧನ್ ಅವರ ಅಭಿಮಾನಿಗಳಲ್ಲ ಎಂದು ತಮ್ಮ ಹಳೆಯ ಮಾತನ್ನು ಪುನರುಚ್ಚಿಸಿದ್ದಾರೆ. ಅಂತವರಿಂದ ದೂರ ಇರಿ ಎಂದು ನಿಜವಾದ ಅಭಿಮಾನಿಗಳಿಗೆ ಕಿವಿ ಮಾತನ್ನು ಕೂಡ ಹೇಳಿದ್ದಾರೆ.


Click it and Unblock the Notifications











