»   » ಡಾ.ರಾಜ್ ಸ್ಮಾರಕಕ್ಕೆ 2.5 ಎಕರೆ ಭೂಮಿ ಮಂಜೂರು

ಡಾ.ರಾಜ್ ಸ್ಮಾರಕಕ್ಕೆ 2.5 ಎಕರೆ ಭೂಮಿ ಮಂಜೂರು

Subscribe to Filmibeat Kannada

ಬೆಂಗಳೂರು, ಜೂ.13: ವರನಟ ಡಾ.ರಾಜ್‌ಕುಮಾರ್ ಅವರ ಪುಣ್ಯಭೂಮಿಯನ್ನು ಅಭಿವೃದ್ಧಿಪಡಿಸಲು ಸರ್ಕಾರ 2.5 ಎಕರೆ ಭೂಮಿಯನ್ನು ಕಂಠೀರವ ಸ್ಟುಡಿಯೋದಲ್ಲಿ ಮಂಜೂರು ಮಾಡಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಕಟ್ಟಡವನ್ನು ಗುರುವಾರ ಯಡಿಯೂರಪ್ಪ ಉದ್ಘಾಟಿಸಿದ ಬಳಿಕ ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದರು. ಡಾ.ರಾಜ್ ಸ್ಮಾರಕ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಡಾ.ರಾಜ್ ಸ್ಮಾರಕ ನಿರ್ಮಾಣಕ್ಕಾಗಿ ಈಗಾಗಲೇ 6 ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗಿದೆ. ಸ್ಮಾರಕ ಪ್ರದೇಶದಲ್ಲಿ ಭವ್ಯವಾದ ಸಭಾಂಗಣ ಮತ್ತು ವಸ್ತುಸಂಗ್ರಹಾಲಯ ನಿರ್ಮಾಣ ಮಾಡಲು 4 ಕೋಟಿ ರು.ಗಳನ್ನು ನೀಡಲಾಗುವುದು ಎಂದರು.

ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿ ಪಡೆದ ಕಲಾವಿದರನ್ನು ಸರ್ಕಾರದ ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆಸಲಾಗುವುದು. ಕನ್ನಡದಲ್ಲಿ ಸದಭಿರುಚಿಯ, ಸ್ವಂತಿಕೆಯ ಚಿತ್ರಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಕಲಾವಿದರ ಬದುಕು ತೆರೆಯ ಮೇಲೆ ಕಂಡಷ್ಟು ಸುಂದರವಾಗಿಲ್ಲ. ಅವರ ಸಮಸ್ಯೆಗಳನ್ನು ಪರಿಹರಿಸರು ಸರ್ಕಾರ ಸದಾ ಸಿದ್ಧವಿದೆ ಎಂದು ಭರವಸೆ ನೀಡಿದರು.

ರೀಮೇಕ್ ಚಿತ್ರಗಳಿಗೆ ತೆರಿಗೆ ವಿನಾಯಿತಿ ಸೇರಿದಂತೆ, ಪೈರಸಿ ಗೂಂಡಾ ಕಾಯ್ದೆ ಜಾರಿಗೆ ತರುವ ಕುರಿತು ಚಿತ್ರರಂಗದ ಪ್ರಮುಖರೊಂದಿಗೆ ಚರ್ಚಿಸಲಾಗುವುದು. ಹಾಗೆಯೇ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸೇವೆ ಸಲ್ಲಿಸಿ ಈಗ ಸಂಕಷ್ಟದಲ್ಲಿರುವ ಕಲಾವಿದರಿಗೆ ಸರ್ಕಾರದಿಂದ ಸಹಾಯ ಒದಗಿಸಲಾಗುವುದು ಎಂದು ವಾರ್ತಾ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ತಿಳಿಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ತಲ್ಲಂ ನಂಜುಂಡ ಶೆಟ್ಟಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಸಂಸದ ಅಂಬರೀಶ್, ಡಾ.ವಿಷ್ಣುವರ್ಧನ್, ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಉಪಸ್ಥಿತರಿದ್ದರು.

(ದಟ್ಸ್‌ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada