UI vs MAX: ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ 'ಯುಐ'; ಕಿಚ್ಚನ 'ಮ್ಯಾಕ್ಸ್'ಗೆ ಮುಳುವಾಗುತ್ತಾ?
ಚಿತ್ರರಂಗದಲ್ಲಿ ಬಾಕ್ಸಾಫೀಸ್ ಕ್ಲ್ಯಾಶ್ ಎನ್ನುವುದು ಇನ್ನು ನಿನ್ನೆಯದಲ್ಲ. ಒಂದೇ ದಿನ ಬಿಡುಗಡೆ ಆಗುವ ಚಿತ್ರಗಳು ಮಾತ್ರವಲ್ಲ, ಒಂದು ವಾರದ ಅಂತರದಲ್ಲಿ ದೊಡ್ಡ ಚಿತ್ರಗಳು ಬಿಡುಗಡೆ ಆದರೂ ಸಮಸ್ಯೆ ಆಗಿರುವ ಉದಾಹರಣೆಯಿದೆ. ಸದ್ಯ ಕನ್ನಡದ ಚಿತ್ರರಂಗದಲ್ಲಿ 'ಯುಐ' ಹಾಗೂ 'ಮ್ಯಾಕ್ಸ್' ಮಧ್ಯೆ ಇಂತದ್ದೇ ವಾತಾವರಣ ಇದೆ.
ಉಪೇಂದ್ರ ನಿರ್ದೇಶಿಸಿ ನಟಿಸಿರುವ 'ಯುಐ' ಸಿನಿಮಾ ತೆರೆಗೆ ಬಂದು ಸದ್ದು ಮಾಡ್ತಿದೆ. ಉಪ್ಪಿ ಮತ್ತೊಬ್ಬ ತಮ್ಮ ವಿಭಿನ್ನ ಆಲೋಚನೆಯನ್ನು ತೆರೆಗೆ ತಂದಿದ್ದಾರೆ. ಕೆಲವರು ಸಿನಿಮಾ ಚೆನ್ನಾಗಿಲ್ಲ ಎಂದರೆ ಮತ್ತೆ ಕೆಲವರು ಅದ್ಭುತ ಎಂದು ಕೊಂಡಾಡುತ್ತಿದ್ದಾರೆ. ಒಟ್ಟಾರೆ ಮಿಶ್ರಪ್ರತಿಕ್ರಿಯೆ ನಡುವೆಯೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿದೆ. ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ.

'ಯುಐ' ಸಿನಿಮಾ ನೋಡಿದವರಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ರಿವ್ಯೂ ಕೊಡುತ್ತಿದ್ದಾರೆ. ಆದರೆ ಪ್ರೇಕ್ಷಕರು ಚಿತ್ರದಲ್ಲಿ ಅಂತಾದ್ದೇನಿದೆ ನೋಡೇಬಿಡೋಣ ಎಂದು ಚಿತ್ರಮಂದಿರದತ್ತ ಮುಖ ಮಾಡಿದ್ದಾರೆ. ಇನ್ನು ಒಮ್ಮೆ ನೋಡಿದರೆ ಅರ್ಥವಾಗಲ್ಲ, ಎಂದು ಕೆಲವರು ಮತ್ತೆ ಮತ್ತೆ ಚಿತ್ರಮಂದಿರಕ್ಕೆ ಹೋಗುತ್ತಿದ್ದಾರೆ. ಇದೀಗ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಅಬ್ಬರ ಶುರುವಾಗುತ್ತಿದೆ.
ಡಿಸೆಂಬರ್ 25ಕ್ಕೆ ಕ್ರಿಸ್‌ಮಸ್ ಸಂಭ್ರಮದಲ್ಲಿ 'ಮ್ಯಾಕ್ಸ್' ಚಿತ್ರ ತೆರೆಗೆ ಬರ್ತಿದೆ. ಈಗಾಗಲೇ ಭರ್ಜರಿ ಪ್ರಚಾರ ಶುರುವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ರಯತ್ನ ನಡೀತಿದೆ. 'ಯುಐ' ಭರ್ಜರಿ ಸಕ್ಸಸ್ 'ಮ್ಯಾಕ್ಸ್' ಚಿತ್ರದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಚರ್ಚೆ ಶುರುವಾಗಿದೆ.
ಸದ್ಯ ಚಿತ್ರದುರ್ಗದಲ್ಲಿ 'ಮ್ಯಾಕ್ಸ್' ಸಿನಿಮಾ ಪ್ರೀ ರಿಲೀಸ್ ಈವೆಂಟ್ ನಡೀತಿದೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ಬುಧವಾರವೇ ಸಿನಿಮಾ ಬಿಡುಗಡೆ ಆಗುತ್ತಿದೆ. ಅದಕ್ಕೂ ಮುನ್ನ ಟ್ರೈಲರ್ ಹೊರ ಬೀಳಲಿದೆ. ಉಪೇಂದ್ರ ನಿರ್ದೇಶನದ 'ಯುಐ' ಚಿತ್ರ ದಿನದಿಂದ ದಿನಕ್ಕೆ ಕ್ರೇಜ್ ಹೆಚ್ಚಿಸಿಕೊಳ್ತಿದೆ. ಶುಕ್ರವಾರಕ್ಕಿಂತ ಶನಿವಾರ, ಅದೇ ರೀತಿ ಶನಿವಾರಕ್ಕಿಂತ ಭಾನುವಾರ ಚಿತ್ರ ನೋಡುವವರ ಸಂಖ್ಯೆ ಹೆಚ್ಚಾಗಿದೆ.
ಬುಕ್‌ಮೈಶೋನಲ್ಲಿ ಟಿಕೆಟ್ ಬುಕ್ಕಿಂಗ್ ನೋಡುತ್ತಿದ್ದರೆ 'ಯುಐ' ಆರ್ಭಟ ಜೋರಾಗುತ್ತಿರುವುದು ಗೊತ್ತಾಗುತ್ತಿದೆ. ಹಾಗಾಗಿ ಮುಂದೆ ಕೂಡ ಸಿನಿಮಾ ಸದ್ದು ಮಾಡುವ ಸುಳಿವು ಸಿಗುತ್ತಿದೆ. ಎರಡೂ ಚಿತ್ರಗಳು ಚೆನ್ನಾಗಿದ್ದರೆ ಎರಡನ್ನೂ ಪ್ರೇಕ್ಷಕರು ನೋಡುತ್ತಾರೆ ಎನ್ನುವ ಲೆಕ್ಕಾಚಾರ ಇದೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ. ಆದರೆ ಎರಡೂ ಚಿತ್ರಗಳನ್ನು ನೋಡುವ ಪ್ರಮಾಣ ಎಷ್ಟಿರುತ್ತದೆ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ.
ಸಾಮಾನ್ಯವಾಗಿ ಎರಡು ಸಿನಿಮಾಗಳು ಬಿಡುಗಡೆ ಆದಾಗ ಯಾವುದಕ್ಕೆ ಒಳ್ಳೆ ರೆಸ್ಪಾನ್ಸ್ ಸಿಗುತ್ತದೆ. ಅದನ್ನು ಪ್ರೇಕ್ಷಕರು ಹೆಚ್ಚು ನೋಡುತ್ತಾರೆ. 'ಯುಐ' ಈಗಾಗಲೇ ಗೆದ್ದಿದೆ. ಹಾಗಾಗಿ 'ಮ್ಯಾಕ್ಸ್' ಚಿತ್ರ ಎಷ್ಟರಮಟ್ಟಿಗೆ ಪ್ರೇಕ್ಷಕರ ಮನಗೆಲ್ಲುತ್ತದೆ ಎನ್ನುವುದರ ಮೇಲೆ ಈ ಬಾಕ್ಸಾಫೀಸ್ ಫೈಟ್ ಫಲಿತಾಂಶ ಹೊರಬೀಳಲಿದೆ.
ವಿಜಯ್ ಕಾರ್ತಿಕೇಯನ್ ನಿರ್ದೇಶನದ 'ಮ್ಯಾಕ್ಸ್' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಬಹಳ ದಿನಗಳ ಬಳಿಕ ಸುದೀಪ್ ನಟಿಸಿರುವ ಸಿನಿಮಾ ಆಗಿರುವುದರಿಂದ ನಿರೀಕ್ಷೆ ಹೆಚ್ಚಿದೆ. ಪಕ್ಕಾ ಮಾಸ್ ಎಂಟರ್‌ಟೈನರ್ ಸಿನಿಮಾ. 'ಯುಐ' ಚಿತ್ರದಲ್ಲಿ ಮನರಂಜನೆ ಇಲ್ಲ ಎಂದು ಕೆಲವರು ಗೊಣಗುತ್ತಿದ್ದಾರೆ. ಅಂತಹವರಿಗೆ 'ಮ್ಯಾಕ್ಸ್' ಇಷ್ಟವಾಗುವುದರಲ್ಲಿ ಅನುಮಾನವಿಲ್ಲ.
'ಯುಐ' ರೀತಿಯಲ್ಲೇ ಪರಭಾಷೆಗಳಲ್ಲಿ 'ಮ್ಯಾಕ್ಸ್' ಚಿತ್ರವನ್ನು ದೊಡ್ಡದಾಗಿ ಪ್ರಚಾರ ಮಾಡುತ್ತಿಲ್ಲ. ಅದು ಯಾಕೆ ಎನ್ನುವುದು ಗೊತ್ತಿಲ್ಲ. ಆದರೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಕನ್ನಡ ಬಿಟ್ಟರೆ ತಮಿಳಿನಲ್ಲಿ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸುವ ಸಾಧ್ಯತೆಯಿದೆ. ಕ್ರಿಸ್‌ಮಸ್ ರಜೆ ಚಿತ್ರಕ್ಕೆ ಪ್ಲಸ್ ಆಗುತ್ತಾ ಕಾದು ನೋಡಬೇಕಿದೆ.
'ಯುಐ' ಚಿತ್ರಕ್ಕೆ ತೆಲುಗಿನಲ್ಲಿ ಕೂಡ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಈಗಾಗಲೇ ಬುಕ್‌ಮೈ ಶೋನಲ್ಲಿ 3 ಲಕ್ಷಕ್ಕೂ ಅಧಿಕ ಟಿಕೆಟ್ ಬುಕ್ ಆಗಿ ಸದ್ದು ಮಾಡ್ತಿದೆ. ಈ ವರ್ಷ ಮೊದಲ 3 ದಿನಕ್ಕೆ ಅತಿ ಹೆಚ್ಚು ಟಿಕೆಟ್ ಬುಕ್ ಆಗಿರುವ ಕನ್ನಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ 'ಯುಐ' ಚಿತ್ರದಾಗಿದೆ. ವಿದೇಶಗಳಲ್ಲಿ ಕೂಡ ಒಳ್ಳೆ ಕ್ರೇಜ್ ಶುರುವಾಗಿದೆ.
ಫ್ಯಾಮಿಲಿ ಆಡಿಯನ್ಸ್‌ಗೆ 'ಯುಐ' ಸಿನಿಮಾ ಅಷ್ಟಾಗಿ ಇಷ್ಟವಾಗುವುದು ಕಷ್ಟ. ಮುಖ್ಯವಾಗಿ ಮಕ್ಕಳಿಗೆ ಸಿನಿಮಾ ಅರ್ಥವಾಗಲ್ಲ. ಹಾಗಾಗಿ ಅಂತಹವರಿಗೆ 'ಮ್ಯಾಕ್ಸ್' ಒಳ್ಳೆ ಆಯ್ಕೆ ಆಗಲಿದೆ. ಹಾಗಾಗಿ ಮುಂದೆ ಎರಡೂ ಚಿತ್ರಗಳ ನಡುವೆ ಬಾಕ್ಸಾಫೀಸ್ ಪೈಪೋಟಿ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.


Click it and Unblock the Notifications











