ಚಾಮರಾಜನಗರದಲ್ಲಿ 'ಯುವ' ಸಂಭ್ರಮ; ಫಸ್ಟ್ ಸಾಂಗ್ ಬಿಡುಗಡೆ ಮಾಡುವ ಅತಿಥಿ ಯಾರು?
ಚಾಮರಾಜನಗರದಲ್ಲಿ 'ಯುವ' ಉತ್ಸವಕ್ಕೆ ವೇದಿಕೆ ಸಜ್ಜಾಗ್ತಿದೆ. ಯುವ ರಾಜ್‌ಕುಮಾರ್ ನಟನೆಯ ಬಹುನಿರೀಕ್ಷಿತ 'ಯುವ' ಚಿತ್ರದ ಮೊದಲ ಹಾಡು ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಮಾರ್ಚ್ 28ಕ್ಕೆ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ 'ಯುವ' ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬಂಡವಾಳ ಹೂಡಿದೆ.
ಚಾಮರಾಜನಗರದ ರಥದ ಬೀದಿ, ಚಾಮರಾಜೇಶ್ವರ ದೇವಸ್ಥಾನ ಮೈದಾನದಲ್ಲಿ ಅದ್ಧೂರಿ ಕಾರ್ಯಕ್ರಮ ನಡೀತಿದೆ. 'ಒಬ್ಬನೇ ಶಿವ ಒಬ್ಬನೇ ಯುವ' ಎನ್ನುವ ಲಿರಿಕಲ್ ವಿಡಿಯೋ ಸಾಂಗ್ ಅನಾವರಣವಾಗಲಿದೆ. ಇಂದು(ಮಾರ್ಚ್ 2) ಸಂಜೆ 5.30ರ ಸುಮಾರಿಗೆ ಕಾರ್ಯಕ್ರಮ ಶುರುವಾಗಲಿದೆ. ಇಡೀ ಚಿತ್ರತಂಡ ಅಣ್ಣಾವ್ರ ಹುಟ್ಟೂರಲ್ಲಿ ಯುವ ಸಂಭ್ರಮದಲ್ಲಿ ಭಾಗಿ ಆಗಲಿದೆ.

ಸಂಜೆ 7 ಗಂಟೆ ವೇಳೆಗೆ ಆನಂದ್ ಯೂಟ್ಯೂಬ್ ಚಾನಲರ್‌ನಲ್ಲಿ ಲಿರಿಕಲ್ ವಿಡಿಯೋ ಸಾಂಗ್ ಅಪ್‌ಲೋಡ್ ಆಗಲಿದೆ. ಫಸ್ಟ್ ಸಾಂಗ್‌ಗೆ ಖುದ್ದು ನಿರ್ದೇಶಕ ಸಂತೋಷ್ ಆನಂದ್‌ರಾಮ್ ಸಾಹಿತ್ಯ ಬರೆದಿದ್ದಾರೆ. ನಕಾಶ್ ಅಜೀಜ್ ಜೊತೆ ಸೇರಿ ಸಂತೋಷ್ ಆನಂದ್ ರಾಮ್ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಡಿದ್ದಾರೆ. ಮೋಹನ್ ಭಜರಂಗಿ ಸಾಂಗ್ ಕೊರಿಯೋಗ್ರಫಿ ಮಾಡಿದ್ದಾರೆ.
ಅಂದಾಜು 3 ಕೋಟಿ ರೂ. ಮೊತ್ತಕ್ಕೆ 'ಯುವ' ಆಡಿಯೋ ರೈಟ್ಸ್ ಆನಂದ್ ಆಡಿಯೋ ಪಾಲಾಗಿದೆ ಎನ್ನಲಾಗ್ತಿದೆ. ಯುವನಟನ ಚೊಚ್ಚಲ ಚಿತ್ರದ ಆಡಿಯೋ ರೈಟ್ಸ್ ಇಷ್ಟು ದೊಡ್ಡ ಮೊತ್ತಕ್ಕೆ ಬಿಕರಿಯಾಗಿರುವುದು ವಿಶೇಷ. ಈಗಾಗಲೇ ಸಣ್ಣ ಸಾಂಗ್ ಪ್ರೋಮೊ ರಿಲೀಸ್ ಆಗಿ ಸದ್ದು ಮಾಡ್ತಿದೆ. ಯುವ ರಾಜ್‌ಕುಮಾರ್ ಸಣ್ಣ ಸಾಂಗ್ ಝಲಕ್ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.

ಅಂದಹಾಗೆ ಚಾಮರಾಜನಗರದಲ್ಲಿ ನಡೆಯುತ್ತಿರುವ 'ಒಬ್ಬನೇ ಶಿವ ಒಬ್ಬನೇ ಯುವ' ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ಯಾರೆಲ್ಲಾ ಭಾಗಿ ಆಗುತ್ತಾರೆ ಎನ್ನುವ ಬಗ್ಗೆ ಕುತೂಹಲ ಮೂಡಿದೆ. ಈಗಾಗಲೇ ಯುವ ರಾಜ್‌ಕುಮಾರ್ ಚಾಮರಾಜನಗರ ತಲುಪಿದ್ದಾರೆ. ಇತ್ತೀಚೆಗೆ ಯುವ ಹಾಗೂ ಆನಂದ್‌ರಾಮ್ ವಿಡಿಯೋ ಮಾಡಿ ಸಾಂಗ್ ಲಾಂಚ್ ಮಾಡೋಕೆ ಸ್ಪೆಷಲ್ ಗೆಸ್ಟ್ ಒಬ್ಬರು ಇರ್ತಾರೆ, ಅದನ್ನು ವೇದಿಕೆಯಲ್ಲೇ ತಿಳುಸುತ್ತೇವೆ ಎಂದಿದ್ದರು.
ಅಷ್ಟಕ್ಕೂ 'ಯುವ' ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಮಾಡುವುದಕ್ಕೆ ಬರುವ ವಿಶೇಷ ಅತಿಥಿ ಯಾರು? ಎನ್ನುವ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ. ಶಿವಣ್ಣ, ಯಶ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೆಸರುಗಳು ಕೇಳಿಬರ್ತಿದೆ. ಜೊತೆಗೆ ತೆಲುಗು ನಟ ಜ್ಯೂ. ಎನ್‌ಟಿಆರ್ ಇರಬಹುದು ಎಂದು ಅಭಿಮಾನಿಗಳು ಗೆಸ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೀತಿದೆ.
ನಿರ್ದೇಶಕ ಪ್ರಶಾಂತ್ ನೀಲ್ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿ ಆಗಲು ತೆಲುಗು ನಟ ತಾರಕ್ ಬೆಂಗಳೂರಿಗೆ ಬಂದಿದ್ದಾರೆ. ಆ ಕಾರ್ಯಕ್ರಮದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬೆಂಗಳೂರಿನಿಂದ ಜ್ಯೂ. ಎನ್‌ಟಿಆರ್ ಚಾಮರಾಜನಗರಕ್ಕೆ ಪ್ರಯಾಣಿಸಿ 'ಯುವ' ಫಸ್ಟ್ ಸಾಂಗ್ ರಿಲೀಸ್ ಮಾಡುತ್ತಾರೆ ಎನ್ನುವುದು ಕೆಲವರ ಲೆಕ್ಕಾಚಾರ. ಆದರೆ ಇದು ಕೇವಲ ಊಹಾಪೋಹ ಎನ್ನಲಾಗುತ್ತಿದೆ.
ಪುನೀತ್ ರಾಜ್‌ಕುಮಾರ್ ಉಪಸ್ಥಿತಿಯಲ್ಲಿ 'ಯುವ' ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗುತ್ತದೆ ಎನ್ನುವುದು ಕೆಲವರ ವಾದ. ಅಂದರೆ ಅಪ್ಪು ಪ್ರತಿಮೆ ಅಥವಾ ಅಪ್ಪು AI ತಂತ್ರಜ್ಞಾನದ ಆಡಿಯೋ ಶುಭಾಶಯದ ಮೂಲಕ 'ಯುವ' ಸಾಂಗ್ ಲೋಕಾರ್ಪಣೆ ಆಗುತ್ತದೆ ಎನ್ನುವುದು ಕೆಲವರ ಅಂದಾಜು. ಒಟ್ನಲ್ಲಿ 'ಒಬ್ಬನೇ ಶಿವ ಒಬ್ಬನೇ ಯುವ' ಸಾಂಗ್ ಲಾಂಚ್ ಮಾಡುವ ವಿಶೇಷ ಅತಿಥಿ ಯಾರು? ಎನ್ನುವ ಕುತೂಹಲ ಮುಂದುವರೆದಿದೆ.
ರಾಘಣ್ಣನ ಕಿರಿಮಗ ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮಾ ಇದು. 'ಕಾಂತಾರ' ಖ್ಯಾತಿಯ ಸಪ್ತಮಿ ಗೌಡ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಕಿಶೋರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.


Click it and Unblock the Notifications











