ಈ ಆನ್‌ಲೈನ್ ರೌಡಿಸಂ ನಿಲ್ಲಿಸಿ; 'ಕಾಂತಾರ ಚಾಪ್ಟರ್- 1' ನಟ ಗುಲ್ಷನ್ ದೇವಯ್ಯ ತಿರುಗೇಟು
'ಕಾಂತಾರ- 1' ಚಿತ್ರದಲ್ಲಿ ನಟಿಸಿ ಗುಲ್ಷನ್ ದೇವಯ್ಯ ಪ್ರೇಕ್ಷಕರ ಮನಗೆದ್ದಿದ್ದಾರೆ. ಬೆಂಗಳೂರಿನಲ್ಲೇ ಹುಟ್ಟಿಬೆಳೆದು ಬಳಿಕ ಮುಂಬೈ ಸೇರಿದ್ದ ಅವರು ಇದೀಗ ಕನ್ನಡ ಚಿತ್ರರಂಗ ಪ್ರವೇಶಿಸಿದಂತಾಗಿದೆ. ಕನ್ನಡ ಭಾಷೆಯ ಬಗ್ಗೆ ಗುಲ್ಷನ್ ದೇವಯ್ಯ ಹೇಳಿಕೆಗಳು ಭಾರೀ ಚರ್ಚೆ ಹುಟ್ಟಾಕ್ಕಿದೆ. ಯಾವುದಕ್ಕೂ ಜಗ್ಗದೇ ತಮ್ಮ ನಿಲುವಿಗೆ ಬದ್ಧ ಎನ್ನುತ್ತಿದ್ದಾರೆ.
ಕನ್ನಡ ಭಾಷೆ ಉಚ್ಛಾರಣೆ ಬಗ್ಗೆ ಗುಲ್ಷನ್ ದೇವಯ್ಯ ಮಾತುಗಳು ಕನ್ನಡಿಗರನ್ನು ಕೆಣಕಿದೆ. ಕನ್ನಡ ಎನ್ನುವ ಬದಲು 'ಕನ್ನಡ್' ಎಂದು ಉಚ್ಛಾರಣೆ ಮಾಡಿದರೆ ತಪ್ಪೇನು ಇಲ್ಲ ಬಿಡಿ, ನಾವು ಕೂಡ ಬೇರೆ ಭಾಷೆ ಮಾತನಾಡುವಾಗ ಆ ಪದಗಳ ಉಚ್ಛಾರಣೆಯಲ್ಲಿ ತಪ್ಪಾಗುತ್ತದೆ. ನಾನೇ ಕೆಲವೊಮ್ಮೆ 'ಕನ್ನಡ್' ಎನ್ನುತ್ತೇನೆ. ಇದನ್ನೆಲ್ಲಾ ಗಂಭೀರವಾಗಿ ಪರಿಗಣಿಸುವುದು ಸರಿಯಲ್ಲ ಎಂದು ಗುಲ್ಷನ್ ದೇವಯ್ಯ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು.

ಗುಲ್ಷನ್ ದೇವಯ್ಯ ಹೇಳಿಕೆಯನ್ನು ಸಾಕಷ್ಟು ಜನ ವಿರೋಧಿಸಿ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅವರನ್ನು ಟ್ಯಾಗ್ ಮಾಡಿ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅದಕ್ಕೆ ಗುಲ್ಷನ್ ಕೂಡ ತಿರುಗೇಟು ನೀಡುತ್ತಿದ್ದಾರೆ. ನಾನು ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಇದಕ್ಕಿಂತ ಗಂಭೀರ ವಿಚಾರಗಳು ಬೇರೆ ಇದೆ. ಅದರ ಬಗ್ಗೆ ಮಾತನಾಡಿ. ಈ ಆನ್‌ಲೈನ್ ರೌಡಿಸಂ ಬಿಡಿ ಎಂದು ಪೋಸ್ಟ್ ಮಾಡಿದ್ದಾರೆ.
'ಕಾಂತಾರ -1' ಸಿನಿಮಾ ಸಕ್ಸಸ್ ಬಳಿಕ ಗುಲ್ಷನ್ ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಜಿಮ್ಮಿ ಜಿಮ್ಮಿ ದಿ ಶೋ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಭಾಗಿ ಆಗಿ ಮಾತನಾಡಿದ್ದಾರೆ. ಉತ್ತರ ಭಾರತದವರು ಕನ್ನಡ ಪದಗಳನ್ನು ಸರಿಯಾಗಿ ಉಚ್ಛಾರಣೆ ಮಾಡಲಿಲ್ಲ ಎಂದು ಪ್ರಶ್ನಿಸುತ್ತಾ ಕೂರುವುದು ಸರಿಯಲ್ಲ, ನನ್ನ ಪ್ರಕಾರ ಅದು ಚಿಲ್ರೆ ವಿಷ್ಯ ಎಂದಿದ್ದರು.
ಗುಲ್ಷನ್ ಮಾತನಾಡಿ ಇತ್ತೀಚೆಗೆ "ಪತ್ರಕರ್ತರೊಬ್ಬರು 'ಕನ್ನಡ್' ಎಂದಾಗ ನಾನು ಅದನ್ನು ಸರಿಪಡಿಸಲಿಲ್ಲ ಎಂದು ನನ್ನ ಮೇಲೆ ಗರಂ ಆಗಿದ್ದರು. ಅದರಲ್ಲಿ ತಪ್ಪೇನಿದೆ. ನಾನು ಕೆಲವೊಮ್ಮೆ ಹಿಂದಿ ಮಾತನಾಡುವಾಗ ಕನ್ನಡ್ ಅಂತೀನಿ. ನಾವು ಕೂಡ ಕೆಲ ಬೇರೆ ಭಾಷೆಯ ಪದಗಳನ್ನು ಸರಿಯಾಗಿ ಉಚ್ಛಾರಣೆ ಮಾಡುವುದಿಲ್ಲ. ನಮ್ಮ ಭಾಷೆಯನ್ನು ಸರಿಯಾಗಿ ಉಚ್ಛಾರಣೆ ಮಾಡಲ್ಲ ಎಂದು ಕೇಳುತ್ತಾ ಕೂರುವುದು ಮೂರ್ಖತನ. ನಾನು ಹುಟ್ಟಿದಾಗ ಬ್ಯಾಂಗಳೂರ್ ಅಂತ ಇತ್ತು. ಬಳಿಕ ಬೆಂಗಳೂರು ಮಾಡಿದರು. ಪರವಾಗಿಲ್ಲ. ಇದೆಲ್ಲಾ ಚಿಲ್ರೆ ವಿಷ್ಯ ಅಂತೀನಿ" ಎಂದಿದ್ದರು.
ಗುಲ್ಷನ್ ಹೇಳಿಕೆ ವೀಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಆಗಿದೆ. ಸಾಕಷ್ಟು ಜನ ಈ ಬಗ್ಗೆ ಕಾಮೆಂಟ್ ಮಾಡಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮ ಹೆಸರನ್ನು ಇದೇ ರೀತಿ ತಪ್ಪಾಗಿ ಉಚ್ಛಾರಣೆ ಮಾಡಿದರೆ ಸರೀನಾ? ಎಂದು ಪ್ರಶ್ನಿಸುತ್ತಿದ್ದಾರೆ. ಗುಲ್ಷನ್ ಈ ಬಗ್ಗೆ ಕಾಮೆಂಟ್ ಮಾಡಿ "ನಾನು ತಪ್ಪಾಗಿ ಏನು ಮಾತಾಡಿಲ್ಲ. ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕಿಗಾಗಿ ನನ್ನನ್ನು ಪ್ರಶ್ನಿಸಲಾಗುತ್ತಿದೆ. ದಯವಿಷ್ಟು ಈ ಆನ್‌ಲೈನ್ ರೌಡಿಸಂ ನಿಲ್ಲಿಸಿ" ಎಂದು ಬರೆದುಕೊಂಡಿದ್ದಾರೆ.
"ನೀವು ನನ್ನ ಮಾತನ್ನು ಒಪ್ಪಬೇಕಾಗಿಲ್ಲ. ನಾನು ಕೂಡ ನಿಮ್ಮ ನಿಂದನೆ ಮತ್ತು ಬೆದರಿಸುವಿಕೆಗೆ ಮಣಿಯಬೇಕಾಗಿಲ್ಲ. ಯಾವುದೇ ಭಾಷೆಯನ್ನು ಸರಿಯಾಗಿ ಉಚ್ಚರಿಸುವುದು ಹೇಗೆ ಎಂಬುದರ ಬದಲು ಉತ್ತಮ ರಸ್ತೆಗಳು, ನಾಗರಿಕ ಸೌಲಭ್ಯಗಳು, ಸಾರ್ವಜನಿಕ ಸಾರಿಗೆ, ಸಾಮಾನ್ಯ ಜೀವನದ ಗುಣಮಟ್ಟ ರೀತಿಯ ವಿಚಾರಗಳ ಬಗ್ಗೆ ವಾದಿಸಿ. ಇದು ಭಾರತೀಯರಾದ ನಮ್ಮ ಸಾರ್ವತ್ರಿಕ ಸಮಸ್ಯೆ. ಆದರೆ ಇಂತಹ ವಿಚಾರಗಳು ನಮ್ಮನ್ನು ವಿಭಾಗಿಸುತ್ತವೆ" ಎಂದು 'ಕಾಂತಾರ- 1' ಚಿತ್ರನಟ ಗುಲ್ಷನ್ ದೇವಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Click it and Unblock the Notifications











