'ಗುಳ್ಟು' ನವೀನ್ ಹೊಸ ಸಿನಿಮಾ; ವಿಭಿನ್ನವಾಗಿದೆ ಚಿತ್ರದ ಶೀರ್ಷಿಕೆ
ಎರಡು ವರ್ಷಗಳ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ಗುಳ್ಟು ಎನ್ನುವ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ಸಿನಿಮಾ ಮೂಲಕ ನಟ ನವೀನ್ ಶಂಕರ್ ಕನ್ನಡಚಿತ್ರಾಭಿಮಾನಿಗಳ ಗಮನ ಸೆಳೆದಿದ್ದರು. 2018ರಲ್ಲಿ ತೆರೆಗೆ ಬಂದ ಈ ಸಿನಿಮಾ ನೋಡಿ ಕನ್ನಡ ಸಿನಿಮಾ ಚಿತ್ರಪ್ರೇಕ್ಷಕರು ಫಿದಾ ಆಗಿದ್ದರು.
Recommended Video
ಇದೀಗ ಇದೇ ಗುಳ್ಟು ಖ್ಯಾತಿಯ ನವೀನ್ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಈ ಬಾರಿಯೂ ವಿಭಿನ್ನ, ವಿನೂತನ ಚಿತ್ರದ ಮೂಲಕ ಸಿನಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಸದ್ಯ ಚಿತ್ರದ ಟೈಟಲ್ ರಿವೀಲ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ನವೀನ್ ಹೊಸ ಸಿನಿಮಾಗೆ 'ನೋಡಿದವರು ಏನಂತಾರೆ' ಎನ್ನುವ ಶೀರ್ಷಿಕೆ ಇಡಲಾಗಿದೆ. ಚಿತ್ರಕ್ಕೆ ಕುಲ್ ದೀಪ್ ಕಾರಿಯಪ್ಪ ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಚಿತ್ರದ ಫಸ್ಟ್ ಲುಕ್ ಅನ್ನು ನಟ ಶ್ರೀಮುರಳಿ ರಿಲೀಸ್ ಮಾಡಿ, ಚಿತ್ರಕ್ಕೆ ಶುಭಹಾರೈಸಿದ್ದಾರೆ.
ಫಸ್ಟ್ ಲುಕ್ ಲಾಂಚ್ ಮಾಡಿ ಶ್ರೀಮುರಳಿ, 'ನೋಡಿದವರು ಏನಂತಾರೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನೋಡಿದವರು ನಿಜಕ್ಕೂ ದಂಗಾಗುತ್ತಾರೆ. ಹೊಸ ನಿರ್ದೇಶಕರು, ಹೊಸ ಕಲಾವಿದರು, ಹೊಸ ತಂತ್ರಜ್ಞರು ಹೊರಬಂದಷ್ಟು ಚಿತ್ರರಂಗ ಕಳೆಗಟ್ಟುತ್ತದೆ. ಗುಳ್ಟು ರಿಲೀಸ್ ಆದಾಗ ಎಲ್ಲೆಲ್ಲೂ ಆ ಚಿತ್ರದ ಹೀರೋ ನವೀರ್ ಶಂಕರ್ ಬಗ್ಗೆ ಮಾತು ಕೇಳಿಬರುತ್ತಿತ್ತು. ಆಗಿನಿಂದ ಇವರ ಬಗ್ಗೆ ನಾನು ಕುತೂಹಲಗೊಂಡಿದ್ದೆ. ನವೀನ್ ಸಹಜ ಅಭಿನಯ ಕೂಡ ನನಗೆ ಅಪಾರ ಇಷ್ಟವಾಗಿತ್ತು. ಈಗ ಅವರ ನಟನೆಯ ಹೊಸ ಚಿತ್ರದ ಪೋಸ್ಟರ್ ಲಾಂಚ್ ಮಾಡಿದ್ದು ಖುಷಿಯ ವಿಚಾರವಾಗಿದೆ' ಎಂದು ಹೇಳಿದ್ದಾರೆ.

ಹುಟ್ಟಿದಾಗಿನಿಂದ ಸಾಯುವ ತನಕ ಪ್ರತಿಯೊಂದಕ್ಕೂ ನೋಡಿದವರು ಏನಂತಾರೆ ಅಂದುಕೊಳ್ಳುತ್ತಲೇ ಸಮಾಜಕ್ಕಾಗಿ ಬದುಕುತ್ತಿರುತ್ತೇವೆ. ಕಡೆಗೊಂದು ದಿನ ನಿಜಕ್ಕೂ ಯಾರಾದರೂ ನಮ್ಮನ್ನು ನೋಡುತ್ತಿದ್ದಾರೆಯೇ ಎಂದು ಅನುಮಾನ ಬರುತ್ತೆ. ನಮಗಾಗಿ ಬದುಕಲು ಸಾಧ್ಯವೇ ಅಥವಾ ನೋಡಿದವರು ಏನಂತಾರೋ ಎಂಬ ಕಾರಣಕ್ಕೆ ಬದುಕಬೇಕಾ? ಎಂಬ ಎಲ್ಲಾ ಅಂಶಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡುತ್ತಿರುವುದಾಗಿ ನಿರ್ದೇಶಕ ಕುಲ್ ದೀಪ್ ಕಾರಿಯಪ್ಪ ಹೇಳಿದ್ದಾರೆ.

ನೋಡಿದವರು ಏನಂತಾರೆ ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ಚಿಕ್ಕಮಗಳೂರು ಮತ್ತು ಬೆಂಗಳೂರಿನಲ್ಲಿ 2 ಹಂತದ ಚಿತ್ರೀಕರಣ ಮುಗಿದಿದ್ದು, ಗೋಕರ್ಣ, ಕೊಡಗು, ಹಂಪಿ ಮತ್ತು ಮುಂಬೈ ಮುಂತಾದ ಕಡೆ ಚಿತ್ರೀಕರಣ ಬಾಕಿ ಇದೆ. ವಿಶೇಷ ಎಂದರೆ 'ಸೇಕ್ರೆಡ್ ಗೇಮ್ಸ್' ವೆಬ್ ಸೀರಿಸ್ ಗೆ ಕೆಲಸ ಮಾಡಿದ್ದ ಮುಂಬೈ ಉತ್ಸವ್ ಸ್ಟುಡಿಯೋದ ಮಯೂರೇಶ್ ಅಧಿಕಾರಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.


Click it and Unblock the Notifications











