ನಟ ಶಿವರಂಜನ್ ಬೋಳಣ್ಣವರ್ ಮೇಲೆ ಗುಂಡಿನ ದಾಳಿ!
ನಟ, ಉದ್ಯಮಿ ಶಿವರಂಜನ್ ಬೋಳಣ್ಣವರ್ ಹಾಗೂ ಕುಟುಂಬದ ಮೇಲೆ ಅಘಂತುಕರು ನಿನ್ನೆ ಗುಂಡಿನ ದಾಳಿ ನಡೆಸಿದ್ದಾರೆ.
ನಟ, ಉದ್ಯಮಿಯೂ ಆಗಿರುವ ಶಿವರಂಜನ್ ಕುಟುಂಬದೊಂದಿಗೆ ಕಾರಿನಲ್ಲಿ ಬರುವಾಗ ಬೆಳಗಾವಿಯ ಬೈಲಹೊಂಗಲ ಪಟ್ಟಣದ ಹನುಮಂತ ದೇವಾಲಯದ ಬಳಿ ಇಬ್ಬರು ದುಷ್ಕರ್ಮಿಗಳು ಬೈಕಿನಲ್ಲಿ ಬಂದು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತ್ವರಿತವಾಗಿ ತನಿಖೆ ನಡೆಸಿರುವ ಪೊಲೀಸರು ಈಗಾಗಲೇ ಒಬ್ಬನನ್ನು ಬಂಧಿಸಿದ್ದಾರೆ. ಪರಿಚಯಸ್ಥರಿಂದಲೇ ಈ ಗುಂಡಿನ ದಾಳಿ ನಡೆದಿದ್ದು, ಕೌಟುಂಬಿಕ ವ್ಯಾಜ್ಯದ ಕಾರಣ ಈ ಗುಂಡಿನ ದಾಳಿ ನಡೆದಿದೆ ಎನ್ನಲಾಗಿದೆ. ದಾಳಿಗೆ ಸ್ಪಷ್ಟ ಕಾರಣ ಇನ್ನಷ್ಟೆ ತಿಳಿದು ಬರಬೇಕಿದೆ.

ಘಟನೆ ಸಂಬಂಧ ಮಾಧ್ಯಮಗಳಿಗೆ ಶಿವರಂಜನ್ ಮಾಹಿತಿ ನೀಡಿದ್ದು, ನಿನ್ನೆ (ಜೂನ್ 12) ರಂದು 7:30 ರ ಸುಮಾರಿಗೆ ನನ್ನ ಹಾಗೂ ಸಹೋದರ, ಆತನ ಹೆಂಡತಿ, ಸೋದರಿಯ ಮಗ ಒಟ್ಟಿಗೆ ಬರಬೇಕಾದರೆ ಗುಂಡಿನ ದಾಳಿ ಮಾಡಲಾಗಿದೆ. ಐದು ಸುತ್ತು ಗುಂಡು ಹಾರಿಸಲಾಯ್ತು. ಆದರೆ ಯಾವ ಗುಂಡೂ ಸಹ ನಮಗೆ ತಾಗಲಿಲ್ಲ. ಗುರುಗಳ ಹಾಗೂ ಸ್ನೇಹಿತರ ಆಶೀರ್ವಾದದಿಂದ ನನಗೆ ಏನೂ ಆಗಲಿಲ್ಲ. ನನ್ನ ಸಂಬಂಧಿಕರೇ ಈ ಕೃತ್ಯ ಎಸಗಿದ್ದಾರೆ'' ಎಂದು ಹೇಳಿದ್ದಾರೆ.
ಪೊಲೀಸರು ತಕ್ಷಣ ಎಚ್ಚರವಹಿಸಿ ಕಾರ್ಯನಿರ್ವಹಿಸಿದ್ದಾರೆ. ಈಗಾಗಲೇ ಒಬ್ಬನನ್ನು ಸೆರೆ ಹಿಡಿದಿದ್ದಾರೆ. ಇನ್ನೊಬ್ಬನನ್ನು ಶೀಘ್ರವಾಗಿ ಸೆರೆ ಹಿಡಿಯುತ್ತೇವೆ ಎಂದು ಹೇಳಿದ್ದಾರೆ ಎಂದಿದ್ದಾರೆ ಶಿವರಂಜನ್.
ಶಿವರಂಜನ್ 'ಅಮೃತಸಿಂಧು' ಹೆಸರಿನ ಸಿನಿಮಾದಲ್ಲಿ ನಟಿ ಶ್ರುತಿಯೊಟ್ಟಿಗೆ ನಟಿಸಿದ್ದರು. ಈ ಸಿನಿಮಾದಲ್ಲಿ ಅವರು ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದರು. ಎಸ್.ಆರ್.ಭಟ್ ನಿರ್ದೇಶಿಸಿದ್ದ ಈ ಸಿನಿಮಾಕ್ಕೆ ಗಂಗಪ್ಪಣ್ಣ ಎಂಬುವರು ಬಂಡವಾಳ ಹೂಡಿಸಿದ್ದರು. ಈ ಸಿನಿಮಾದಲ್ಲಿ ಗುಡಿಗೇರಿ ಬಸವರಾಜ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.


Click it and Unblock the Notifications











