ರಕ್ತದಲ್ಲಿ ಪ್ರೇಮ ಪತ್ರ ಬರೆದಿದ್ದ ಧನಂಜಯ್, ವಾಟ್ಸಾಪ್ ಎಮೋಜಿಗಳಿಗೆ ಕನ್ಫ್ಯೂಸ್ ಆಗೋದು ಯಾಕೆ?
ಡಾಲಿ ಧನಂಜಯ್ ನಟನೆಯ 'ಗುರುದೇವ್ ಹೊಯ್ಸಳ' ಸಿನಿಮಾ ರಿಲೀಸ್ ಆಗಿ ಧೂಳೆಬ್ಬಿಸಿದೆ. ಧನು ಖಾಕಿ ಖದರ್ ನೋಡಿದವರು ಥ್ರಿಲ್ಲಾಗಿದ್ದಾರೆ. ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಪ್ರಮೋಷನ್ ಭಾಗವಾಗಿ ಚಿತ್ರತಂಡ ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡಿತ್ತು. ಸಂದರ್ಶನವೊಂದರಲ್ಲಿ ನಟ ಧನಂಜಯ ವಾಟ್ಸಾಪ್ ಎಮೋಜಿಗಳ ಬಗ್ಗೆ ಇಂಟ್ರೆಸ್ಟಿಂಗ್ ಸಂಗತಿ ಹಂಚಿಕೊಂಡಿದ್ದಾರೆ.
ಪ್ರೀತಿ, ಪ್ರೇಮ, ನಗು, ಅಳು, ನಾಚಿಕೆ, ಗಾಬರಿ, ಕೋಪ, ಅಚ್ಚರಿ ಈ ಎಲ್ಲಾ ಭಾವನೆಗಳನ್ನು ಬೇರೆಲ್ಲೋ ಇರುವವರಿಗೆ ವರ್ಚುವಲ್ಲಾಗಿ ಕಳಿಸಲು ಈ ಎಮೋಜಿಗಳ ಸಹಕಾರಿಯಾಗಿದೆ. ವಾಟ್ಸಾಪ್ ತೆಗೆದರೆ ನೂರಾರು ಬಗೆಯ ಎಮೋಜಿಗಳಿವೆ. ಹೊಸ ಹೊಸ ಎಮೋಜಿಗಳು ಬಂದು ಸೇರಿಕೊಳ್ಳುತ್ತಲೇ ಇದೆ. ಒಂದು ಸಂದೇಶದ ಜೊತೆಗೆ ಎಮೋಜಿ ಸಮೇತ ನಮ್ಮ ಮನಸ್ಸಿನ ಭಾವನೆಯನ್ನು ತಿಳಿಸಬಹುದು. ಆದರೆ ಈ ಎಮೋಜಿಗಳಿಂದ ನಟ ಧನಂಜಯ್ ಸಾಕಷ್ಟು ಬಾರಿ ಕಿರಿಕಿರಿ ಅನುಭವಿಸಿದ್ದಾರಂತೆ.

ಸಂದರ್ಶನದಲ್ಲಿ ಮಾತನಾಡುತ್ತಾ ಧನು ಪತ್ರ ಬರೆಯುವ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಪತ್ರ ಬರೆದರೆ ಚೆನ್ನಾಗಿರುತ್ತದೆ ಎಂದಿದ್ದಾರೆ. ನೀವು ಯಾರಿಗಾದರೂ ಪತ್ರ ಬರೆದಿದ್ದೀರಾ ಎನ್ನುವ ಪ್ರಶ್ನೆಗೆ ಹ್ಞೂಂ ಬರೆದಿದ್ದೀನಿ. ಬ್ಲೇಡ್‌ನಲ್ಲಿ ಕೈ ಕೊಯ್ದುಕೊಂಡು ರಕ್ತದಲ್ಲಿ ಪತ್ರ ಬರೆದಿದ್ದೇನೆ ಎಂದಿದ್ದಾರೆ. ಆಕೆ ಯಾರು? ಏನು ಅನ್ನುವ ಪ್ರಶ್ನೆಗೆ ಅವರು ಎಲ್ಲೋ ತಮ್ಮ ಲೈಫ್‌ನಲ್ಲಿ ಬ್ಯುಸಿಯಾಗಿದ್ದಾರೆ ಅವರ ಹೆಸರು ಯಾಕೆ ಈಗ ಎಂದು ಟಾಪಿಕ್ ಅಲ್ಲಿಗೆ ನಿಲ್ಲಿಸಿದ್ದಾರೆ.
ರಕ್ತದಲ್ಲಿ ಪತ್ರ ಬರೆಯೋದು ಬೇಸರ ಆಗಲ್ಲ, ತಗೊಂಡುಹೋಗಿ ಕೊಟ್ಟಾಗ ಬಿಸಾಕಿದರೆ ನೋವಾಗುತ್ತಿತ್ತು ಎಂದಿದ್ದಾರೆ. "ಈಗ ವಾಟ್ಸಾಪ್‌ನಲ್ಲಿ ಎಷ್ಟು ಹಾರ್ಟ್ ಸಿಂಬಲ್ ಬೇಕಾದರೂ ಕಳುಹಿಸಬಹುದು. ಆ ವಾಟ್ಸಾಪ್ ಸ್ಮೈಲಿಗಳು ಯಾವ್ಯಾವ್ದು ಅನ್ನೋದೇ ಅರ್ಥವಾಗಲ್ಲ. ಮೊದಲಿಗೆ ಹುಂ(😘) ಅಂತ ಇರೋ ಎಮೋಜಿ ಮುತ್ತು ಕೊಡೋದು ಎಂದುಕೊಂಡುಬಿಟ್ಟಿದ್ದೆ. ಆಮೇಲೆ ಎಲ್ಲರೂ ಎಲ್ಲರಿಗೂ ಕಳುಹಿಸೋದು ನೋಡಿ ಪ್ರೀತಿ ತೋರಿಸೋದು ಅಂತ ಗೊತ್ತಾಯ್ತು ಎಂದಿದ್ದಾರೆ.
ಪಕ್ಕದಲ್ಲೆ ಇದ್ದ ಅಮೃತಾ ಅಯ್ಯಂಗಾರ್ ಆ ಎಮೋಜಿ ನಿಮಗೆ ಯಾರು ಕಳುಹಿಸ್ತಾರೆ ಹೇಳು ಎಂದು ಕೇಳಿದ್ದಾರೆ. "ಹಗ್(🤗) ಎಮೋಜಿ ನೋಡಿ ಮೊದಲು ನಾನು ಬೇರೆ ಏನೋ ಅಂದುಕೊಂಡಿದ್ದೆ. ಅದನ್ನು ಯಾರಾದರು ನನಗೆ ಕಳುಹಿಸಿದರೆ, ಯಾಕೆ ನಾನು ಏನು ಹೇಳಿದೆ ಅಂತ ಅವರು ಈ ಎಮೋಜಿ ಕಳುಹಿಸಿದ್ದಾರೆ ಎಂದುಕೊಳ್ಳುತ್ತಿದ್ದೆ ಎಂದಿದ್ದಾರೆ". ಇದರ ನಡುವೆ ಅಮೃತಾ ನಾವು ದೊಡ್ಡದಾಗಿ ಟೈಪ್ ಮಾಡಿ ಮೆಸೇಜ್ ಕಳುಹಿಸಿದರೆ ಬರೀ ಹು, ಕೆ ಅಂತ ಅಷ್ಟೇ ಧನಂಜಯ್ ರಿಪ್ಲೇ ಮಾಡ್ತಾರೆ ಎನ್ನುವ ಕಂಪ್ಲೇಂಟ್ ಕೂಡ ಮಾಡಿದ್ದಾರೆ.

"ಇನ್ನೊಂದು ಎಮೋಜಿ ಹಾಕಿರುತ್ತಾರೆ. ನಾಲಿಗೆ ತೆಗೆದು ಕಣ್ಣತ್ರ ಹಿಂಹೆ ಇರುತ್ತೆ, ಕೆಂಪು ಕಲರ್ ಇರುತ್ತದೆ. ಚಿಂದಿ ಗುರು ಅಂತ ಹೇಳಿ ಆ ಎಮೋಜಿ(🥵) ಹಾಕಿರುತ್ತಾರೆ. ನಾನು ಯಾಕೆ, ಇದು ಅಸಹ್ಯ ತರ ಕಾಣುತ್ತಲ್ಲ. ಇದನ್ನು ಯಾಕೆ ಕಳಿಸ್ತಾರೆ ಎನಿಸುತ್ತದೆ. ಒಟ್ನಲ್ಲಿ ವಾಟ್ಸಪ್ ಎಮೋಜಿಗಳು ತುಂಬಾ ಕನ್ಫ್ಯೂಸ್ ಮಾಡ್ತಾವೆ" ಎಂದು ಧನು ಹೇಳಿದ್ದಾರೆ. ಎಮೋಜಿಗಳ ಭಾವವನ್ನು ಧನು ಆಕ್ಷನ್ ಮಾಡಿ ತೋರಿಸಿದ್ದಾರೆ. ಇನ್ನು ಧನಂಜಯ, ಅಮೃತಾ ಅಯ್ಯಾಂಗಾರ್, ನವೀನ್ ಶಂಕರ್ ನಟನೆಯ 'ಗುರುದೇವ್ ಹೊಯ್ಸಳ' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ವಿಜಯ್ .ಎನ್ ನಿರ್ದೇಶನದ ಈ ಚಿತ್ರವನ್ನು ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ನಿರ್ಮಾಣ ಮಾಡಿದೆ. ಚಿತ್ರಕ್ಕೆ ಮೊದಲ ದಿನವೇ ಭರ್ಜರಿ ಓಪನಿಂಗ್ ಸಿಕ್ಕಿತ್ತು. ನಟಿ ರಮ್ಯಾ ಕೂಡ ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ನಿರ್ಮಾಪಕರು ಮರುದಿನವೇ ನಟ ಧನಂಜಯ್‌ಗೆ 1 ಕೋಟಿ ರೂ. ಮೌಲ್ಯದ ಕಾರನ್ನು ಟೊಯೊಟೊ ವೆಲ್‌ಫೇರ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರೂ ಪ್ರೇಕ್ಷಕರು ಸಿನಿಮಾ ನೋಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ವಾದವೂ ಇದೆ.


Click it and Unblock the Notifications











