ತೆರೆಮೇಲೆ ಬರ್ತಿದೆ 'ಅಮೃತ್ ಅಪಾರ್ಟ್ ಮೆಂಟ್ಸ್'ನ ಮರ್ಡರ್ ಮಿಸ್ಟರಿ
ಸ್ಯಾಂಡಲ್‌ವುಡ್‌ನಲ್ಲಿ ನೈಜ ಘಟನೆ ಆಧಾರಿತ ಅನೇಕ ಸಿನಿಮಾಗಳು ತೆರೆಕಂಡಿವೆ ಮತ್ತು ತಯಾರಾಗುತ್ತಿವೆ. ಸಾಕಷ್ಟು ಸಿನಿಮಾಗಳು ಸೂಪರ್ ಸಕ್ಸಸ್ ಆಗಿವೆ. ಸಮಾಜದಲ್ಲಿ ನಡೆಯುವ ಅನೇಕ ಘಟನೆಗಳು ಸಿನಿಮಾಗಳಿಗೆ ಸ್ಫೂರ್ತಿಯಾಗಿರುತ್ತಿವೆ. ಇದೀಗ ಚಂದನವದಲ್ಲಿ ಮತ್ತೊಂದು ನೈಜ ಘಟನೆ ಆಧಾರಿತ ಸಿನಿಮಾ ಸದ್ದಿಲ್ಲದೆ ತಯಾರಾಗಿದ್ದು ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಅದು ಮತ್ಯಾವುದು ಅಲ್ಲ 'ಅಮೃತ್ ಅಪಾರ್ಟ್‌ಮೆಂಟ್ಸ್'.
ಗುರುರಾಜ್ ಬಿ ಕುಲಕರ್ಣಿ ಸಾರಥ್ಯದಲ್ಲಿ ಬಂದಿರುವ ಅಮೃತ್ ಅಪಾರ್ಟ್‌ಮೆಂಟ್ಸ್ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದೆ. ಗುರುರಾಜ್ ಬಿ ಕುಲಕರ್ಣಿ ಈಗಾಗಲೇ ಆಕ್ಸಿಡೆಂಟ್ ಮತ್ತು ಲಾಸ್ಟ್ ಬಸ್ ಎನ್ನುವ ಸಿನಿಮಾ ನಿರ್ಮಾಣ ಮಾಡಿ ಅನುಭವ ಹೊಂದಿದ್ದಾರೆ. ಇದೀಗ ಅಮೃತ್ ಅಪಾರ್ಟ್‌ಮೆಂಟ್ಸ್ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.
ಅಪಾರ್ಟ್‌ಮೆಂಟ್‌ಗಳಲ್ಲಿ ಬದುಕುವ ವ್ಯಕ್ತಿಗಳ ಲೋಕವೇ ಬೇರೆ. ಅದೆ ಒಂದು ಜಗತ್ತು ಎನ್ನುವ ರೀತಿಯಲ್ಲಿ ಜೀವಿಸುತ್ತಿರುತ್ತಾರೆ. ಬೆಂಗಳೂರಿನಲ್ಲಿ ಸಾವಿರಾರು ಅಪಾರ್ಟ್‌ಮೆಂಟ್‌ಗಳಿವೆ. ಒಂದು ಅಪಾರ್ಟ್‌ಮೆಂಟ್‌ನಲ್ಲಿ ನಾನಾರೀತಿಯ ಜನರು ವಾಸಿಸುತ್ತಿರುತ್ತಾರೆ. ಬಹು ಸಂಸ್ಕೃತಿ ಹಿನ್ನಲೆಯುಳ್ಳ ಮತ್ತು ಬಹು ಭಾಷೆಯ ಜನರು ಅಪಾರ್ಟ್‌ಮೆಂಟ್ ನಲ್ಲಿರುತ್ತಾರೆ. ಅಪಾರ್ಟ್‌ಮೆಂಟ್‌ನಲ್ಲಿ ನಡೆಯುವ ಕಥೆಯನ್ನು ಇಟ್ಟುಕೊಂಡು ಅಮೃತ್ ಅಪಾರ್ಟ್‌ಮೆಂಟ್ ಮೂಲಕ ತೆರೆಮೇಲೆ ತರುತ್ತಿದ್ದಾರೆ ನಿರ್ದೇಶಕ ಗುರುರಾಜ್ ಬಿ ಕುಲಕರ್ಣಿ.

ಅಮೃತ್ ಅಪಾರ್ಟ್‌ಮೆಂಟ್ಸ್ ಮರ್ಡರ್ ಮಿಸ್ಟರಿ ಚಿತ್ರವಾಗಿದೆ. ಹಲವು ಟ್ವಿಸ್ಟ್ ಮತ್ತು ಟರ್ನ್ ಗಳೊಂದಿಗೆ ತೆರೆಗೆ ತರುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಈಗಾಗಲೇ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಚಿತ್ರದಿಂದ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಸದ್ಯ ಪ್ರಮೋಷನ್ ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ನವೆಂಬರ್ ನಲ್ಲಿ ಚಿತ್ರಮಂದಿರಕ್ಕೆ ಬರುವ ಸಾಧ್ಯತೆ ಇದೆ.
ಚಿತ್ರದಲ್ಲಿ ತಾರಕ್ ಪೊನ್ನಪ್ಪ ನಾಯಕನಾಗಿ ನಟಿಸಿದ್ದಾರೆ. ಈಗಾಗಲೇ ಕಿರುತೆರೆ ಮತ್ತು ಕೆಜಿಎಫ್ 1, ಯುವರತ್ನ, ಸದ್ಯ ಬಿಡುಗಡೆಗೆ ರೆಡಿಯಿರುವ ಬಹುನಿರೀಕ್ಷಿತ ಸಿನಿಮಾಗಳಾದ ಕೆಜಿಎಫ್ ಚಾಪ್ಟರ್ 2 ಹಾಗೂ ಕೋಟಿಗೊಬ್ಬ 3 ಚಿತ್ರಗಳಲ್ಲಿ ನಟಿಸಿರುವ ತಾರಕ್ ಪೊನ್ನಪ್ಪ ಮೊದಲ ಬಾರಿಗೆ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ತಾರಕ್ ಅವರಿಗೆ ನಾಯಕಿಯಾಗಿ ಊರ್ವಶಿ ಗೋವರ್ಧನ್ ನಟಿಸುತ್ತಿದ್ದು ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಲ್ಲಿ ನಟಿಸುತ್ತಿದ್ದಾರೆ. ಉಳಿದಂತೆ ಬಾಲಾಜಿ ಮನೋಹರ್, ಸಂಪತ್ ಕುಮಾರ್, ಮಾನಸ ಜೋಶಿ, ಸೀತಾ ಕೋಟೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎಸ್ ಡಿ ಅರವಿಂದ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಈಗಾಗಲೇ ಸಿನಿ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ಅಮೃತಾ ಅಪಾರ್ಟ್ ಮೆಂಟ್ ಟೀಸರ್ ಅನ್ನು ಸ್ಯಾಂಡಲ್ ವುಡ್ ನ ಹಿರಿಯ ನಿರ್ಮಾಪಕ ದಿವಂಗತ ಕೆ ಸಿ ಎನ್ ಚಂದ್ರಶೇಖರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಹಾರೈಸಿದ್ದರು. ಇನ್ನು ಹಿರಿಯ ನಿರ್ಮಾಪಕಿ ಮತ್ತು ನಿರ್ದೇಶಕಿ ವಿಜಯಲಕ್ಷ್ಮಿಸಿಂಗ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡದ ಬೆನ್ನು ತಟ್ಟಿದ್ದಾರೆ.
ಇಡೀ ಕುಟುಂಬ ಯಾವುದೇ ಮುಜುಗರವಿಲ್ಲದೇ ನೋಡಬಹುದಾದ ಕುತೂಹಲಕಾರಿ ಅಂಶಗಳನ್ನು ಚಿತ್ರ ಒಳಗೊಂಡಿದ್ದು, ಈಗಾಗಲೇ ಟೀಸರ್ ಮೂಲಕ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಅಷ್ಟು ಮಾತ್ರವಲ್ಲ ಖುದ್ದು ಸಿನಿಮಾ ನೋಡಿದ ಸೆನ್ಸಾರ್ ಮಂಡಳಿ ಸದಸ್ಯರೂ ಸಹ ಅಮೃತ್ ಅಪಾರ್ಟ್ ಮೆಂಟ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಕೊರೊನಾ ಪರಿಸ್ಥಿತಿ ಸುಧಾರಿಸಿದ್ದು, ಚಿತ್ರಮಂದಿರಗಳು ಶೇ.100 ಭರ್ತಿಗೆ ಅವಕಾಶ ನೀಡಲಾಗಿದೆ. ಹಾಗಾಗಿ ಸಾಲು ಸಾಲು ಸಿನಿಮಾಗಳು ಬಿಡುಗಡೆ ಸಿದ್ಧವಾಗಿದ್ದು, ತೆರೆಗೆ ಬರಲು ಸಜ್ಜಾಗಿವೆ.


Click it and Unblock the Notifications











