»   » ‘...ಯಾಕಪ್ಪಾ ಬದುಕಿದ್ದೀನಿ ಅನಿಸುತ್ತೆ’

‘...ಯಾಕಪ್ಪಾ ಬದುಕಿದ್ದೀನಿ ಅನಿಸುತ್ತೆ’

Posted By: Super
Subscribe to Filmibeat Kannada

'ರಸಗಳಿಗೆ ಯಾವುದು ಅಂತ ನೀವು ಕೇಳಿದ್ರೆ ನನ್ನ ಬದುಕಿನ ಕ್ಯಾನ್‌ವಾಸಿನಲ್ಲಿ ನೀವು ದುರ್ಬೀನ್‌ ಇಟ್ಟುಕೊಂಡು ಹುಡುಕಬೇಕು..... ಕೇವಲ ಏಳು ಲಕ್ಷ ರೂಪಾಯಿಯಲ್ಲಿ ಶಂಕರಾಚಾರ್ಯ ಸಂಸ್ಕೃತ ಚಿತ್ರ ನಿರ್ಮಿಸಿದೆ. ಇದನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ಅಧಿಕಾರಿ ಹೀಗಳೆದಾಗ ನೊಂದು, ನಿಮ್ಮ ಒಂದು ದಿನದ ಊಟ ವಸತಿ ವೆಚ್ಚದಲ್ಲಿ ನಾನು ಒಂದು ಸಿನೆಮಾ ತೆಗೆದಿದ್ದೇನೆ ಎಂದು ಪ್ರತಿಯಾಡಿದಾಗ, ಅಚ್ಚರಿಪಟ್ಟ ಆತ ಚಲನಚಿತ್ರೋತ್ಸವದಲ್ಲಿ ನನ್ನ ಮೆರೆಸಿದರು. ಇದೇ ನನ್ನ ಬದುಕಿನ ಅತ್ಯಮೂಲ್ಯ ಕ್ಷಣ ಎನಿಸುತ್ತದೆ..." ಚಲನಚಿತ್ರ ಕ್ಷೇತ್ರದ ಹಿರಿಯ ನಿರ್ದೇಶಕ ಜಿ.ವಿ. ಅಯ್ಯರ್‌ ಗದ್ಗದಿತರಾಗಿದ್ದರು.

ಎಂಬತ್ತಾರರ ಜ್ಞಾನವೃದ್ಧ ಅಯ್ಯರ್‌ ಶನಿವಾರ ಸಂಜೆ ಬೆಂಗಳೂರಿನಲ್ಲಿ 'ಮನೆಯಂಗಳದಲ್ಲಿ ಮಾತುಕತೆ" ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. 'ರಾಶಿ ಕಷ್ಟಗಳು ಬಂದರೆ ಅವೇ ಅಭ್ಯಾಸವಾಗಿಬಿಡುತ್ತವೆ. ನಾನು ನೆಮ್ಮದಿಯಾಗಿದ್ದೇನೆ. ಯಾಕಂದ್ರೆ ನಾನು ಎಂದೂ ಹಾದಿ ತಪ್ಪಿಲ್ಲ. ಈಗ ಜಗತ್ತಿನ ಪುರಾಣಗಳಲ್ಲೊಂದಾದ ರಾಮಾಯಣವನ್ನು ಚಿತ್ರವಾಗಿಸುತ್ತಿದ್ದೇನೆ" ಅಯ್ಯರ್‌ ಕಣ್ಣಲ್ಲಿ ಉತ್ಸಾಹದ ಹೊಳಹು ಇತ್ತು.

ಚಿತ್ರದುರ್ಗದ ಹರಕು ಕೋಟೆಯ ನಡುವೆ ಗತ ವೈಭವ ಹೆಕ್ಕಿ ತೆಗೆದು ಹಂಸಗೀತೆಯ ಕಟ್ಟಿ ಬೆಳ್ಳಿ ತೆರೆ ಮೇಲಿಟ್ಟ ಈ ಹಿರಿಯ ನಿರ್ದೇಶಕ, ವಿವೇಕಾನಂದರ ಭವ್ಯ ವ್ಯಕ್ತಿತ್ವವನ್ನು ಬೆಳಕಿಗಿಟ್ಟವರು. ಈಗಿನ ಕನ್ನಡ ಚಿತ್ರರಂಗದ ಬಗ್ಗೆ ನಿಮಗೇನನಿಸುತ್ತದೆ ಎಂದು ಪ್ರಶ್ನೆ ಕೇಳುವ ಧೈರ್ಯ ಮಾಡಿದವರಿಗೆ ಜಿ.ವಿ. ಅಯ್ಯರ್‌ ಬೇಜಾರಿನಿಂದಲೇ ಉತ್ತರಿಸಿದರು.

ಕನ್ನಡ ಸಂಸ್ಕೃತಿ, ಕಲೆ ಎಂಬ ಪದಗಳ ಮರ್ಯಾದೆ ಕಳೆಯುವ ಚಿತ್ರಗಳು

ಕನ್ನಡ ಸಂಸ್ಕೃತಿ, ಕಲೆ ಎಂಬ ಪದಗಳ ಮರ್ಯಾದೆ ಕಳೆಯಲೆಂದೇ ನಿರ್ಮಿಸುವ ವ್ಯಾಪಾರೀ ಚಿತ್ರಗಳಲ್ಲಿ ಹನಿಯಷ್ಟು ಮೌಲ್ಯಗಳು ಕಾಣುವುದಿಲ್ಲ. ಉಕ್ಕಿದ ಹೊಳೆಯಲ್ಲಿ ಹರಿವ ನೀರಿನಂತೆ ಉದ್ಯಮದಲ್ಲಿ ಹಣ ಪೋಲಾಗುತ್ತಿದೆ. ಆಧುನಿಕ ಸುಲಭ ತಂತ್ರಜ್ಞಾನವೂ ಚಿತ್ರೋದ್ಯಮಕ್ಕೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತಿದೆ. ಆದರೆ ಒಳ್ಳೇ ಅಭಿರುಚಿಯಿಲ್ಲದ ಮೇಲೆ ಚಿತ್ರಗಳಿಗೆ ಮರ್ಯಾದೆ ಸಲ್ಲುವುದಾದರೂ ಹೇಗೆ ...

ರಂಗಭೂಮಿಯಿಂದ ಬಂದ ಕಲಾವಿದರು ಒಳ್ಳೆಯ ಚಿತ್ರ ತೆಗೆಯುತ್ತಾರೆ ಎನ್ನುವ ಅಭಿಪ್ರಾಯವೂ ಕದಡಿ ಹೋಗಿದೆ. 60ರ ದಶಕದಲ್ಲಿ ಕೇವಲ ನಾಲ್ಕೈದು ಚಿತ್ರ ತಯಾರಾದರೂ ಅವು ಸಭ್ಯ ಮತ್ತು ಉತ್ತಮ ಚಿತ್ರಗಳಾಗಿದ್ದವು. ಆದರೆ ಇಂದು ವರ್ಷಕ್ಕೆ ನೂರಾರು ಚಿತ್ರಗಳು ಬಂದರೂ ಒಳ್ಳೇ ಚಿತ್ರವನ್ನು ಮಸೂರವಿಟ್ಟು ಆಯಬೇಕಾಗಿದೆ ಎನ್ನುವ ಜಿ.ವಿ. ಅಯ್ಯರ್‌ ಇಂದಿನ ಚಿತ್ರಗಳನ್ನು ನೋಡಿದರೆ, ಇಂಥದ್ದನ್ನೆಲ್ಲಾ ನೋಡೋಕೆ ಯಾಕಪ್ಪಾ ಬದುಕಿದ್ದೀನಿ ಅನಿಸುತ್ತೆ ಎಂದು ದುಃಖಿಸಿದರು.

English summary
Kannada Edition of Oneindia- Kannada filmdom is not bothered about values : G.V. Ayyar

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada