»   » 26 ದೇಶೀ- ಪರದೇಶೀ ಗಾಯಕರ ಕಂಠಗಳ 60ಕ್ಕೂ ಹೆಚ್ಚು ಹಾಡುಗಳು.

26 ದೇಶೀ- ಪರದೇಶೀ ಗಾಯಕರ ಕಂಠಗಳ 60ಕ್ಕೂ ಹೆಚ್ಚು ಹಾಡುಗಳು.

Posted By: Staff
Subscribe to Filmibeat Kannada

ಮೊನ್ನೆ ಅದ್ನಾನ್‌ ಸಮಿ ಬಂದು, ಸೂಪರ್‌ಸ್ಟಾರ್‌ ಚಿತ್ರಕ್ಕೆ ಹಾಡಿ ಹೋದಾಗಲೂ ಅದಕ್ಕೆ ಟ್ಯೂನ್‌ ಹಾಕಿದ ಹಂಸಲೇಖ ಲೇಖನಿ ಬಿಡುವಿಲ್ಲದೆ ದುಡಿಯುತ್ತಿತ್ತು. ಇನ್ನೇನು ಈಗಲೋ ಆಗಲೋ 'ಪ್ರೀತಿಗಾಗಿ' ಮೆಗಾ ಸೀರಿಯಲ್‌ ಮೂಲಕ ಕಿರುತೆರೆ ಪ್ರವೇಶಿಸಲಿರುವ ಹಂಸ್‌, ಅದರಲ್ಲೂ ತಮ್ಮ ಟ್ಯೂನ್‌ಗಳನ್ನು ಫೈನ್‌ ಟ್ಯೂನ್‌ ಮಾಡಿಕೊಳ್ಳುವ ಯಜ್ಞಕ್ಕೆ ಕೈಹಾಕಿರುವ ವಿಷಯ ಹೊರಬಿದ್ದದ್ದೇ ಆಗ.

ಹಂಸ್‌ ಕಿರುತೆರೆ ಪ್ರವೇಶದ ವಿಷಯವನ್ನು ಘೋಷಿಸಿದಾಗಲೇ ಪೆನ್ನು- ಹಾರ್ಮೋನಿಯಂ ಬಿಟ್ಟು ಈತ ಸೆಟ್‌ಗಳಲ್ಲಿ ಸುಮ್ಮನೆ ತಲೆಕೆಡಿಸಿಕೊಂಡು ಓಡಾಡುವುದಾದರೂ ಹೇಗೆ ಅಂತ ಅನೇಕರು ಮಾತಾಡಿಕೊಂಡರು. ಸ್ಯಾಂಡಲ್‌ವುಡ್‌ನ ಈ ಹೊತ್ತಿನ ಡಿಮ್ಯಾಂಡಪ್ಪೋ ಡಿಮ್ಯಾಂಡು ಕೆ.ಕಲ್ಯಾಣ್‌ ಇನ್ನೂ ಮೂರಿಂಚು ಮೇಲೇರಿದ್ದೂ ನಿಜ. ಕೆಲ ಕಾಲಕ್ಕಾದರೂ ತಮಗೆ ಕಾಂಪಿಟಿಟರ್‌ ಇರುವುದಿಲ್ಲವೆಂಬುದು ಅವರ ಲೆಕ್ಕಾಚಾರ. ಆದರೆ ಆಗುತ್ತಿರುವುದೇ ಬೇರೆ.

ತಮ್ಮ ಮೆಗಾ ಸೀರಿಯಲ್‌ನಲ್ಲಿ ಹಂಸ್‌ ಪ್ರಥಮವೊಂದನ್ನು ಮಾಡಹೊರಟಿದ್ದಾರೆ. 60ಕ್ಕೂಹೆಚ್ಚು ಹಾಡುಗಳು. ನಮ್ಮವರಾದ ರಾಜೇಶ್‌, ಹೇಮಂತ್‌ ಮೊದಲಾದವರಲ್ಲದೆ ಸೋನು, ಉದಿತ್‌, ಹರಿಹರನ್‌, ಚಿತ್ರಾ ಮೊದಲಾದ ಇಂಪೋರ್ಟೆಡ್‌ ಗಾಯಕ(ಕಿ)ರ 26 ಕಂಠಗಳು ಕಿರುತೆರೆಯ ವೀಕ್ಷಕರ ಪಾಲಿಗೆ. ರವಿಚಂದ್ರನ್‌ ಚಿತ್ರಗಳಿಗೆ ತಮ್ಮ ಸಂಗೀತದಿಂದಲೇ ಹೊಸ ವೇಗ ದಕ್ಕಿಸಿಕೊಟ್ಟ ಹಂಸ್‌ ಇದೀಗ ಕಿರುತೆರೆಯ ಇಮೇಜನ್ನೇ ಬದಲಿಸುವ ಇರಾದೆ ಇಟ್ಟುಕೊಂಡಿದ್ದಾರೆ. ಆದರೆ ಇತ್ತೀಚೆಗೆ ಅವರು ಇಂಪೋರ್ಟೆಡ್‌ ಗಾಯಕರ ಪ್ರಭಾವಳಿಗೆ ಸಿಕ್ಕಾಪಟ್ಟೆ ಒಳಗಾಗಿರುವುದು ಯಾಕೋ ತಿಳಿಯುತ್ತಿಲ್ಲ.

ಹ್ಞಾಂ, ರಾಜ್ಯೋತ್ಸವದ ಕೊಡುಗೆಯಾಗಿ ಗಯ್ಯಾಳಿ ಎಂಬ ಇನ್ನೊಂದು ಮೆಗಾ ಧಾರಾವಾಹಿಯನ್ನೂ ಹಂಸಲೇಖ ನಿರ್ಮಿಸಲಿದ್ದಾರೆ. ದೂರದರ್ಶನದ 500 ಚಿಲ್ಲರೆ ಕಂತುಗಳ 'ಸಾಧನೆ'ಯ ಸಮಸ್ತ ಬಿ.ಸುರೇಶ್‌ ಇದನ್ನು ನಿರ್ದೇಶಿಸಲಿದ್ದಾರೆ. ಅಂದಹಾಗೆ, ಒಂದು ಕಾಲದಲ್ಲಿ ಇದೇ ಸುರೇಶ್‌ ರವಿಗೆ ಅಸಿಸ್ಟೆಂಟ್‌ ಆಗಿ ಅನುಭವ ಪಡಕೊಂಡವರು. ಹೀಗಾಗಿ ಹಂಸ್‌ಗೆ ಸುರೇಶ್‌ ಯೋಗ್ಯತೆ, ಅರ್ಹತೆ ಚೆನ್ನಾಗಿ ಗೊತ್ತು. ಸಿನಿಮಾದಲ್ಲಿ ಕಳಕೊಂಡ ಬೇಡಿಕೆ ಸುಧಾರಿಸಿಕೊಳ್ಳುತ್ತಿರುವಾಗಲೇ ಹಂಸ್‌ ಕಿರುತೆರೆ ಮೇಲೆ ಪ್ರೀತಿ ತೋರುತ್ತಿರುವುದು ಅವರ ಸಂಗೀತ ಪ್ರೀತಿಗಾಗಿ ಅನ್ನುವುದರಲ್ಲಿ ಅನುಮಾನವೇ ಇಲ್ಲ.

ಗಂಡನಿಗಿಂತ ಮೊದಲೇ.... : ಇದರ ನಡುವೆಯೇ ಹಂಸ್‌ಗಿಂತ ಮೊದಲೇ ಅವರ ಪತ್ನಿ, ಪ್ರಶಸ್ತಿ ವಿಜೇತ ಹಿನ್ನೆಲೆ ಗಾಯಕಿ (ಈ ಪ್ರಶಸ್ತಿ ಹೆಸರನ್ನು ಚಿತ್ರ ಎಂದು ತಪ್ಪಾಗಿ ಪ್ರಕಟಿಸಿದ್ದು ಬೇರೆ ವಿಚಾರ) ಲತಾ ಕಂಠ ಈಗಾಗಲೇ ಈ ಟಿವಿಯಲ್ಲಿ ಕೇಳುತ್ತಿದೆ. ಕೃಷ್ಣಮಾಚಾರಿ ಶ್ರೀಕಾಂತ್‌ ನಿರ್ಮಾಣದ 'ಗೌತಮಿ'ಯ ಟೈಟಲ್‌ ಹಾಡಿನ ಚೀರು ಕಂಠ ಲತಾ ಅವರದೇ. ಆದರೆ ಹಂಸ್‌ ಪ್ರೀತಿಗಾಗಿ ಪ್ರಾಜೆಕ್ಟ್‌ನಲ್ಲಿ ಲತಾ ಹಾಡಿದ್ದರೋ ಇಲ್ಲವೋ ಗೊತ್ತಿಲ್ಲ.

English summary
Hamsalekha to hit small screen in his own way
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada