ನಾದಬ್ರಹ್ಮ ಹಂಸಲೇಖ ಅನಾರೋಗ್ಯ ವದಂತಿ: ಕುಟುಂಬಸ್ಥರಿಂದ ಸ್ಪಷ್ಟನೆ
ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿದ್ದು, ಅವರ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದರು. ಈ ಬಗ್ಗೆ ಹಂಸಲೇಖ ಅವರ ಕುಟುಂಬಸ್ಥರು ಸ್ಪಷ್ಟನೆ ನೀಡಿದ್ದಾರೆ.
ನಾದಬ್ರಹ್ಮ ಹಂಸಲೇಖ ಅವರು ಆಸ್ಪತ್ರೆಗೆ ದಾಖಲಾಗಿರು ಸುದ್ದಿ ಸುಳ್ಳು ಎಂದು ಹಂಸಲೇಖ ಅವರ ಮಗಳು ತೇಜಸ್ವಿನಿ ಹಂಸಲೇಖ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಸೂರ್ಯ ಪ್ರಕಾಶ್ ಹಾಗೂ ತೇಜಸ್ವಿನಿ ಹಂಸಲೇಖ, ಪೂಜ್ಯ ಕನ್ನಡಿಗರೇ, ನಮ್ಮ ತಂದೆ ಡಾ. ಹಂಸಲೇಖ ಅವರ ಆರೋಗ್ಯದ ಬಗ್ಗೆ ಹಾಗೂ ಅವರು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ.
ನಮ್ಮ ತಂದೆಯ ಆರೋಗ್ಯ ವಿಚಾರದ ವದಂತಿ ಸುಳ್ಳಾಗಿದ್ದು, ಅವರ ಅಭಿಮಾನಿಗಳು ಆತಂಕಪಡಬಾರದು ಹಾಗೂ ಈ ವದಂತಿ ಇನ್ನೂ ಹರಡದಂತೆ ನೋಡಿಕೊಳ್ಳಬೇಕು ಎಂದು ನಮ್ರತೆಯಿಂದ ಕೇಳಿಕೊಳ್ಳುತ್ತಿದ್ದೇವೆ ಎಂದು ಸೂರ್ಯ ಪ್ರಕಾಶ್ ಹಾಗೂ ತೇಜಸ್ವಿನಿ ಹಂಸಲೇಖ ತಿಳಿಸಿದ್ದಾರೆ. ಸದ್ಯ ಈ ಪ್ರಕಟಣೆ ವೈರಲ್ ಆಗುತ್ತಿದ್ದು, ನಾದಬ್ರಹ್ಮ ಹಂಸಲೇಖ ಅಭಿಮಾನಿಗಳು ನಿರಾಳರಾಗಿದ್ದಾರೆ.

ಇಂದು(ಅಕ್ಟೋಬರ್ 10) ಬೆಳಗ್ಗೆ ನಾದಬ್ರಹ್ಮ ಹಂಸಲೇಖ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜಾಜಿನಗರದ ಫಸ್ಟ್ ಬ್ಲಾಕ್‌ನಲ್ಲಿರುವ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಈ ಹಿಂದೆ ಹಂಸಲೇಖ ಓಪನ್ ಹಾರ್ಟ್ ಸರ್ಜರಿ ಮಾಡಿಸಿ ಕೊಂಡಿರುವ ಕಾರಣ ಅಭಿಮಾನಿಗಳು ಆತಂಕಗೊಂಡಿದ್ದರು.
ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಹಂಸಲೇಖ ಅವರ ಆರೋಗ್ಯದ ಬಗ್ಗೆ ಆತಂಕಗೊಂಡಿದ್ದು, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬೇಗ ಚೇತರಿಸಿಕೊಳ್ಳಿ ಎಂದು ಆಶಿಸಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಖ್ಯಾತ ಸಂಗೀತ ನಿರ್ದೇಶಕರು ಮತ್ತು ಆತ್ಮೀಯರಾಗಿರುವ ಹಂಸಲೇಖ ಅವರು ಶೀಘ್ರ ಗುಣಮುಖರಾಗಿ ಕಲಾಸೇವೆ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತಾಗಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದರು.
ಕನ್ನಡ ಚಿತ್ರರಂಗಕ್ಕೆ ಹಂಸಲೇಖ ಅವರ ಕೊಡುಗೆ ಅಪಾರವಾಗಿದ್ದು, ತಮ್ಮ ಹಾಡುಗಳಿಂದ ಹಂಸಲೇಖ ಅಸಂಖ್ಯಾತ ಕನ್ನಡಿಗರ ಮನಗೆದ್ದಿದ್ದರು. 90ರ ದಶಕದಲ್ಲಿ ಹಂಸಲೇಖ ಅವರ ಹಾಡುಗಳು ಸೂಪರ್ ಹಿಟ್ ಆಗಿದ್ದು, ಸಂಗೀತ ಅಂದರೆ ಹಂಸಲೇಖ ಎನ್ನುವಂತಾಗಿತ್ತು. ನೂರಾರು ಚಿತ್ರಗೀತೆಗಳನ್ನು ರಚಿಸಿರುವ ಹಂಸಲೇಖ ಅವರಿಗೆ ನಾದಬ್ರಹ್ಮ ಎನ್ನುವ ಬಿರುದು ನೀಡಲಾಗಿತ್ತು. ಇನ್ನು ಇತ್ತೀಚಿನ ದಿನಗಳಲ್ಲಿ ಹಂಸಲೇಖ ಅವರು ಕಿರುತೆರೆ ಸಂಗೀತ ಶೋನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು.


Click it and Unblock the Notifications











