»   » ಹೊಗಳು ಭಟ್ಟನಾದ ಸಾಹಿತಿ ಕಲ್ಯಾಣ್‌!

ಹೊಗಳು ಭಟ್ಟನಾದ ಸಾಹಿತಿ ಕಲ್ಯಾಣ್‌!

Posted By: Staff
Subscribe to Filmibeat Kannada

ಹಂಸಲೇಖಾ ಸ್ವಯಂ ನಿವೃತ್ತಿ ತೆಗೆದುಕೊಂಡಿರುವವರ ಥರಾ ಮುಖ್ಯ ವಾಹಿನಿಯಿಂದ ದೂರವಾಗಿದ್ದರೆ, ಮನೋಹರ್‌ ವಿನಾ ಕಾರಣ ಸಂಗೀತ ನೀಡುತ್ತಿಲ್ಲ, ಗುರುಕಿರಣ್‌ ಅವರಿಗೆ ಉಪೇಂದ್ರರಿಂದ ದೂರವಾದ ನಂತರ ಬ್ರೇಕ್‌ ಸಿಕ್ತಾ ಇಲ್ಲ, ರಾಜೇಶ್‌ ರಾಮನಾಥನ್‌ ರೀಮೇಕ್‌ ಚಿತ್ರಗಳಿಗೆ ಲಾಯಕ್ಕು ಎಂಬ ಭಾವನೆ ಮೂಡಿಸಿದ್ದಾರೆ, ಸಾಧು ಸಂಗೀತವನ್ನು ಕೇಳುವುದು ಕಷ್ಟ. ಇವೆಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಿರ್ಮಾಪಕರು ಪರಭಾಷಾ ಸಂಗೀತ ನಿರ್ದೇಶಕರನ್ನೇ ಕರೆದು ತರುವ ಹಳೇ ಸಂಪ್ರದಾಯಕ್ಕೆ ಶರಣಾಗಿದ್ದಾರೆ.

ಈ ಪೈಕಿ ಇತ್ತೀಚೆಗೆ ಬಂದವರೆಂದರೆ ದೇವಾ ಮತ್ತು ದಿನಾ. ಗ್ರಾಮದೇವತೆ ಮತ್ತು ಶಿವಪ್ಪನಾಯ್ಕ ಚಿತ್ರಗಳಿಗೆ ಸಂಗೀತ ನೀಡಿರುವ ದಿನಾ ತಮಿಳಿನಲ್ಲಿ ಸೀರಿಯಲ್‌ ಸಂಗೀತ ನಿರ್ದೇಶಕರಾಗಿದ್ದವರು. ಕನ್ನಡದಲ್ಲಿ ಅವರಿಗೆ ಬಡ್ತಿ ಸಿಕ್ಕಿದೆ. ಆದರೆ, ದೇವಾ ತಮಿಳಿನ ಜನಪ್ರಿಯ ಸಂಗೀತ ನಿರ್ದೇಶಕರಲ್ಲೊಬ್ಬರು. ಕಳೆದ 10 ವರ್ಷಗಳಲ್ಲಿ 250 ಚಿತ್ರಗಳಿಗೆ ಸಂಗೀತ ನೀಡಿದ ಸಾಧನೆ ಅವರದು. ಅದರಲ್ಲಿ ದಕ್ಷಿಣದ ಎಲ್ಲಾ ಭಾಷೆಗಳೂ ಸೇರಿವೆ. ರಜನಿ ಚಿತ್ರಗಳಿಗಂತೂ ಇವರೇ ಕಾಯಂ ಸಂಗೀತ ನಿರ್ದೇಶಕ.

ದೇವಾ ಸಾಧನೆಯ ಹಿಂದೆ ಒಂದು ಸ್ವಾರಸ್ಯಕರ ಕತೆಯಿದೆ. 1976ರಲ್ಲಿ ಇವರು ಮದ್ರಾಸ್‌ ದೂರದರ್ಶನ ಕೇಂದ್ರದಲ್ಲಿ ಫೋರ್‌ ಅಸಿಸ್ಟೆಂಟ್‌ ಆಗಿದ್ದವರು. ಇವರ ನಾಲ್ಕ ಜನ ತಮ್ಮಂದಿರು ಆಗ ಸಿನಿಮಾ ವಾದ್ಯಗಾರರಾಗಿದ್ದರೂ, ದೊಡ್ಡ ಮಗನಾಗಿದ್ದರಿಂದ ಮನೆ ಖರ್ಚು ನೋಡಿಕೊಳ್ಳುವ ಜವಾಬ್ದಾರಿ ಇವರ ಮೇಲಿತ್ತು. ಡಿ.ಡಿ.ಯ ಸ್ಟುಡಿಯೋಗೆ ವಾದ್ಯ ನುಡಿಸೋದಕ್ಕೆ ಬರುತ್ತಿದ್ದ ತಮ್ಮಂದಿರಿಗೆ ಅಣ್ಣನೇ ಕುರ್ಚಿ ಹಾಕಿ ಉಪಚರಿಸಬೇಕಾಗಿತ್ತು. ಆದರೆ, 90ರಲ್ಲಿ ದೇವಾ ಅದೃಷ್ಟ ಕುಲಾಯಿಸಿತು. ನಿರ್ಮಾಪಕರೊಬ್ಬರು ಇವರಲ್ಲಿರುವ ಪ್ರತಿಭೆಯನ್ನು ಪತ್ತೆ ಹಚ್ಚಿ ತಮ್ಮ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುವಂತೆ ಕೇಳಿಕೊಂಡರು. ಆವತ್ತಿನಿಂದ ತಮ್ಮಂದಿರೇ ಇವರಿಗೆ ಸಹಾಯಕರಾದರು. ವರ್ಷಕ್ಕೆ 25 ಚಿತ್ರಗಳಿಗೆ ಸಂಗೀತ ನೀಡಬಲ್ಲ ಏಕೈಕ ಸಂಗೀತ ನಿರ್ದೇಶಕ ಎಂಬ ದಾಖಲೆ ಇವರ ಹೆಸರಿನಲ್ಲೇ ಇದೆ.

ಕಾಲಕ್ಕೆ ತಕ್ಕಂತೆ ಬದಲಾಗಬಲ್ಲ ದೇವಾ ಮೇಲೆ ಕೆಲವು ವರ್ಷದ ಹಿಂದೆ ಒಂದು ಆಪಾದನೆ ಇತ್ತು. ಅವರು ಇಳೆಯರಾಜರ ಟ್ಯೂನ್‌ ಕದಿಯುತ್ತಾರೆ ಎಂದು ತಮಿಳು ಪತ್ರಿಕೆಗಳು ಬರೆದಿದ್ದವು. ಈಗ ದೇವಾ ಅವೆಲ್ಲವನ್ನೂ ಮೀರಿ ನಿಂತಿದ್ದಾರೆ. ಇವರ ಸೋದರನ ಮಗಳೇ ಇಳೆಯರಾಜಾರ ಪುತ್ರನನ್ನು ಮದುವೆಯಾಗುವ ಮೂಲಕ ಸಂಬಂಧವೂ ಕುದುರಿದೆ.

ಕನ್ನಡದಲ್ಲಿ ದೇವಾ ಹೆಸರು ಚಿರಪರಿಚಿತವಾಗಿದ್ದು, ಅಮೃತವರ್ಷಿಣಿ ಚಿತ್ರದ ಮೂಲಕ. ತುಂತುರು... ಹಾಡಂತೂ ಇಂದಿಗೂ ಹಿಟ್‌ ಆಗಿಯೇ ಉಳಿದಿದೆ. ಅನಂತರ ಗಲಾಟೆ ಅಳಿಯಂದಿರು ಚಿತ್ರದಲ್ಲಿ ನಾಲ್ಕು ಹಿಟ್‌ ಹಾಡುಗಳನ್ನು ಕೊಟ್ಟರು. ತಿಲ್ಲಾನ ತಿಲ್ಲಾನ., ಕುಂದಾಪುರದ ಮೀನಮ್ಮಾ, ಸಾಗರಿಯೇ, ಇತ್ಯಾದಿ.. ಇದೀಗ ಕೋಟಿಗೊಬ್ಬ ಚಿತ್ರಕ್ಕೂ ಇವರೇ ಸಂಗೀತ ನಿರ್ದೇಶಕ. ಅಮೃತ ವರ್ಷಿಣಿ ನಂತರ ದೇವಾ ಮತ್ತು ಕಲ್ಯಾಣ್‌ ಇಲ್ಲಿ ಮತ್ತೆ ಒಂದಾಗಿದ್ದಾರೆ. ವಿಷ್ಣುವರ್ಧನ್‌ ಸದ್ಯಕ್ಕೆ ಕನ್ನಡ ಚಿತ್ರರಂಗದ ಯಜಮಾನನಾಗಿರುವ ಹಿನ್ನೆಲೆಯಲ್ಲಿ ತಮ್ಮ ಜವಾಬ್ದಾರಿ ಜಾಸ್ತಿಯಾಗಿದೆ ಅನ್ನೋದು ದೇವಾಗೆ ಅರಿವಾಗಿದೆ. ಅದೇ ರೀತಿ ಕಲ್ಯಾಣ್‌ರಂಥ ಹುಟ್ಟು ಕವಿ ಕೂಡಾ ಯಜಮಾನನನ್ನು ಮೆಚ್ಚಿಸಲೋ ಎಂಬಂತೆ 'ವರ್ಧನಾ.. ವರ್ಧನಾ ವಿಷ್ಣುವರ್ಧನ... ಅವನೇ ನಮ್ಮ ಯಜಮಾನ..." ಎಂಬ ಸಾಲುಗಳನ್ನು ಹೆಣೆದಿದ್ದಾರೆ. ವಿಷ್ಣುವರ್ಧನ್‌ಗೆ ಮನಸ್ಸು ಓದುವ ಕಲೆಯೂ ಗೊತ್ತಿದೆ ಎಂದು ದೇವಾ ಸಂಶೋಧನೆ ಮಾಡಿದ್ದಾರೆ. ಅದು ಅವರ ತಂತ್ರವೂ ಹೌದು. ಸ್ಟಾರ್‌ಗಳಿಗೆ ಹತ್ತಿರವಾದರೆ ಜನರಿಗೆ ಹತ್ತಿರ ಆಗೋದು ಸುಲಭ ಎಂದ ಅವರು ನೇರವಾಗಿಯೇ ಹೇಳುತ್ತಾರೆ.

English summary
Hero worship in sandalwood- writer kalyan leads the way

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada