62ನೇ ವಸಂತಕ್ಕೆ ಕಾಲಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್: ಅಭಿಮಾನಿಗಳಿಂದ ಶುಭಾಶಯ
ಅಭಿಮಾನಿಗಳ ಪ್ರೀತಿಯ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು, ಆಪ್ತರು ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ. ನಟನಾಗಿ ನಿರ್ಮಾಪಕನಾಗಿ ನಿರ್ದೇಶಕನಾಗಿ ಸಂಗೀತ ನಿರ್ದೇಶಕನಾಗಿ ಗೀತ ಸಾಹಿತಿಯಾಗಿ ರವಿಚಂದ್ರನ್ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ತಮ್ಮ ಅದ್ಧೂರಿ ಸಿನಿಮಾಗಳಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. 1968ರಲ್ಲಿ 'ಧೂಮಕೇತು' ಚಿತ್ರದ ಮೂಲಕ ಬಾಲನಟನಾಗಿ ಕ್ರೇಜಿಸ್ಟಾರ್ ಚಿತ್ರರಂಗ ಪ್ರವೇಶಿಸಿದರು.
ತಂದೆ ವೀರಸ್ವಾಮಿ ಖ್ಯಾತ ನಿರ್ಮಾಪಕರು. ಹಾಗಾಗಿ ರವಿಚಂದ್ರನ್ ಚಿತ್ರರಂಗಕ್ಕೆ ಬರೋದು ಕಷ್ಟವಾಗಲಿಲ್ಲ. ಆದರೆ ಚಿತ್ರಪ್ರಪಂಚದಲ್ಲಿ ತಮ್ಮ ಪ್ರತಿಭೆಯಿಂದಲೇ ಗುರ್ತಿಸಿಕೊಂಡು. ಅದ್ಧೂರಿ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡಿದರು. ಅದ್ಧೂರಿ ಹಾಡುಗಳು, ಅದ್ಭುತ ದೃಶ್ಯವೈಭವವನ್ನು ತೆರೆಮೇಲೆ ತೆರೆದಿಟ್ಟರು. ಸ್ವಂತಿಕೆಯನ್ನು ಸಾಬೀತು ಮಾಡಿದರು. ಅದ್ಧೂರಿ ಸಿನಿಮಾಗಳಿಂದ ಕನ್ನಡ ಚಿತ್ರರಂಗವನ್ನು ಮತ್ತಷ್ಟು ಶ್ರೀಮಂತಗೊಳಿಸಿದರು. ಚೆಂದಚೆಂದದ ನಟಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಸಾಕಷ್ಟು ಪ್ರತಿಭೆಗಳಿಗೆ ಅವಕಾಶ ನೀಡಿ ಬೆಳೆಸಿದರು.

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಮೊದಲುಗಳಿಗೆ ರವಿಚಂದ್ರನ್ ನಾಂದಿ ಹಾಡಿದರು. 90ರ ದಶಗಳಲ್ಲೇ ಹತ್ತಾರು ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾಗಳನ್ನು ಮಾಡಿದ್ದರು. ಗೆದ್ದಾಗ ಹಿಗ್ಗದೇ ಸೋತಾಗ ಕುಗ್ಗದೇ ಬೆಳೆದು ಬಂದರು. ತಂದೆ ಆರಂಭಿಸಿದ ಈಶ್ವರಿ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು.

ಸ್ಯಾಂಡಲ್‌ವುಡ್ ಶೋಮ್ಯಾನ್
ಕನ್ನಡ ಚಿತ್ರರಂಗದ ಶೋಮ್ಯಾನ್ ಅಂತಲೇ ರವಿಚಂದ್ರನ್ ಗುರ್ತಿಸಿಕೊಂಡಿದ್ದಾರೆ. ಚಿತ್ರದ ಪ್ರತಿಫ್ರೇಮ್ ಸುಂದರವಾಗಿರಬೇಕು, ಅದ್ಭುತವಾಗಿರಬೇಕು ಎಂದು ಹವಣಿಸುವ ರವಿಚಂದ್ರನ್ ಅದಕ್ಕಾಗಿ ಶ್ರಮಿಸುತ್ತಾರೆ. ಹೂವು, ಹಣ್ಣು, ಹೆಣ್ಣನ್ನು ಮೋಹಕವಾಗಿ ತೋರಿಸುವ ಕಲಾವಿದ. ರವಿಚಂದ್ರನ್ ಸಿನಿಮಾ ಅಂದ್ರೆ ಕಣ್ಣಿಗೆ ಹಬ್ಬ. ಒಬ್ಬ ಪ್ರೇಕ್ಷಕನಾಗಿ ಪ್ರತಿ ಸಿನಿಮಾ ನೋಡುವ ರವಿಚಂದ್ರನ್, ತಮಗೆ ಇಷ್ಟ ಆಗುವವರೆಗೂ ಸಿನಿಮಾ ರಿಲೀಸ್ ಮಾಡಲ್ಲ. ಇದರಿಂದ ಇಷ್ಟೇ ನಷ್ಟವಾದರೂ ತಲೆ ಕೆಡಿಸಿಕೊಳ್ಳುವುದಿಲ್ಲ.
ಚೆಂದದ ನಟಿಯರ ಪರಿಚಯ
ತಮ್ಮ ಸಿನಿಮಾ ನಾಯಕಿಯರನ್ನು ರವಿಚಂದ್ರನ್ ಕ್ಯಾಮರಾ ಕಣ್ಣಲ್ಲಿ ಬಹಳ ಸುಂದರವಾಗಿ ರವಿಚಂದ್ರನ್ ತೋರಿಸುತ್ತಾರೆ. ಬಾಲಿವುಡ್, ಕಾಲಿವುಡ್, ಟಾಲಿವುಡ್ ನಟಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ದಕ್ಷಿಣ ಭಾರತದ ದೊಡ್ಡ ತಾರೆಯರು ರವಿಚಂದ್ರನ್ ಕೇಳಿದಾಕ್ಷಣ ಕಾಲ್‌ಶೀಟ್ ಕೊಡುತ್ತಾರೆ. ಯಾಕಂದ್ರೆ ರವಿಚಂದ್ರನ್ ಸಿನಿಮಾ ಆಸ್ಪಿಟಾಲಿಟಿ ಅಷ್ಟು ಚೆನ್ನಾಗಿರುತ್ತದೆ ಎಂದು ಎಲ್ಲರೂ ಹೇಳುತ್ತಾರೆ.
ಏಳುಬೀಳು ಕಂಡ ಕನಸುಗಾರ
ದಶಕಗಳ ಹಿಂದೆಯೇ ಅದ್ಭುತ ಪ್ರಯತ್ನಗಳನ್ನು ಮಾಡಿದ ಸಿನಿಮಾ ತಂತ್ರಜ್ಞ ರವಿಚಂದ್ರನ್. 90ರ ದಶಕದಲ್ಲೇ ಪ್ಯಾನ್ ಇಂಡಿಯಾ ಸಿನಿಮಾ ಕಂಡಿದ್ದರು. ಈಗಿನಂತೆ ಒಂದು ಭಾಷೆಯಲ್ಲಿ ಸಿನಿಮಾ ಮಾಡಿ 5 ಭಾಷರಯಲ್ಲಿ ರಿಲೀಸ್ ಮಾಡುವುದಲ್ಲ. ಬದಲಿಗೆ ಒಂದೇ ಕಥೆಯಲ್ಲಿ ಬೇರೆ ಬೇರೆ ಭಾಷೆಯಲ್ಲಿ ಆಯಾ ಚಿತ್ರರಂಗದ ಸ್ಟಾರ್‌ಗಳನ್ನು ಅಭಿನಯಿಸುವಂತೆ ಮಾಡಿದ್ದರು. ಆ ರೀತಿ ಮಾಡಿದ 'ಶಾಂತಿ ಕ್ರಾಂತಿ' ಸಿನಿಮಾ ಸೋಲುಂಡಿತ್ತು. ಆದರೆ ಅದಕ್ಕೆ ಕ್ರೇಜಿಸ್ಟಾರ್ ತಲೆ ಕೆಡಿಸಿಕೊಳ್ಳಲಿಲ್ಲ. ಚಿತ್ರರಂಗದಲ್ಲಿ ಸಾಕಷ್ಟು ಏಳುಬೀಳು ಕಂಡರೂ ಕ್ರೇಜಿ ಕನಸು ಕಮ್ಮಿ ಆಗಿಲ್ಲ.
ಹಲವು ಸಿನಿಮಾಗಳಲ್ಲಿ ನಟನೆ
ಇತ್ತೀಚಿನ ವರ್ಷಗಳಲ್ಲಿ ರವಿಚಂದ್ರನ್ ಸಿನಿಮಾಗಳು ತೆರೆಮೇಲೆ ಸದ್ದು ಮಾಡ್ತಿಲ್ಲ. ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ 'ರವಿ ಬೋಪಣ್ಣ' ಸಿನಿಮಾ ಗೆಲ್ಲಲಿಲ್ಲ. ಇಷ್ಟು ದಿನ ನನಗಾಗಿ ಸಿನಿಮಾ ಮಾಡಿದೆ, ಇನ್ನು ಮುಂದೆ ದುಡ್ಡು ಮಾಡಿ ತೋರಿಸುತ್ತೇನೆ ಎಂದು ಇತ್ತೀಚೆಗೆ ಹೇಳಿದ್ದರು. ಸದ್ಯ 'ಜಡ್ಜ್‌ಮೆಂಟ್ ಡೇ' ಎನ್ನುವ ಸಿನಿಮಾದಲ್ಲಿ ಕ್ರೇಜಿಸ್ಟಾರ್ ನಟಿಸುತ್ತಿದ್ದಾರೆ. ಮುಂದೆ ಮತ್ತೆ ಸಿನಿಮಾ ನಿರ್ಮಿಸಿ, ನಿರ್ದೇಶಿಸುವ ಲೆಕ್ಕಾಚಾರದಲ್ಲಿದ್ದಾರೆ. 'ಮಂಜಿನ ಹನಿ' ಸೇರಿದಂತೆ ಕೆಲ ಸಿನಿಮಾಗಳನ್ನು ಆರಂಭಿಸಿ ಕಾರಣಾಂತರಗಳಿಂದ ನಿಲ್ಲಿಸಿಬಿಟ್ಟರು. ಆ ಸಿನಿಮಾಗಳನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ 'ಮಂಜಿನ ಹನಿ' ಸಿನಿಮಾ ಬರೋದಿಲ್ಲ ಅನ್ನೋದನ್ನು ಈಗಾಗಲೇ ರವಿಚಂದ್ರನ್ ಹೇಳಿಬಿಟ್ಟಿದ್ದಾರೆ.


Click it and Unblock the Notifications











