ಅಹನಾ ಅಗ್ನಿಹೋತ್ರ ಧಾರಾವಾಹಿಯಲ್ಲಿ ಹರಿಪ್ರಿಯಾ ; ಸಿಂಹನ ಸಿಂಹಿಣಿ ಘರ್ಜಿಸಿದ್ದೇಕೆ..?
''ಉಗ್ರಂ'' ಚಿತ್ರದ ಮೂಲಕ ಕೇವಲ ''ಶ್ರೀಮುರಳಿ'' ಹಣೆಬರಹ ಅಷ್ಟೇ ಅಲ್ಲ ''ಹರಿಪ್ರಿಯಾ'' ಅದೃಷ್ಟವೂ ಬದಲಾಗಿತ್ತು. ಅಲ್ಲಿಯವರೆಗೆ ತಮಿಳು.. ತೆಲುಗು ಹಾಗೂ ಮಲಯಾಳಂ ಚಿತ್ರರಂಗವನ್ನ ಒಂದು ರೌಂಡ್ ಸುತ್ತಾಕಿಕೊಂಡು ಬಂದಿದ್ದ ''ಚಿಕ್ಕಬಳ್ಳಾಪುರದ ಈ ಚೆಲುವೆ'' ಆ ನಂತರ ಬದುಕು ಕಟ್ಟಿಕೊಂಡಿದ್ದು ಕನ್ನಡ ಚಿತ್ರರಂಗದಲ್ಲಿಯೇ.
ನಿಗದಿತ ಪಾತ್ರಗಳಿಗೆ ನಟನೆ ಎಂಬುದು ಸೀಮಿತವಾಗಿರದೇ ಎಲ್ಲ ರೀತಿಯ ಪಾತ್ರಗಳನ್ನ ಮಾಡಬೇಕೆಂಬ ಆಸ್ಥೆಯಿಂದ ಒಂದಕ್ಕಿಂತೊಂದು ಭಿನ್ನವಾದ ಪಾತ್ರಗಳನ್ನು ಮಾಡಿ ಜನ ಮನ ಗೆದ್ದವರು ಹರಿಪ್ರಿಯಾ. ಉದಾಹರಣೆಗೆ ''ಬೆಲ್ ಬಾಟಂ''.. ''ನೀರ್ ದೋಸೆ''.. ''ಡಾಟರ್ ಆಫ್ ಪಾರ್ವತಮ್ಮ''.. ''ಸೂಜಿದಾರ''..

ಹೀಗೆ ಬೇರೆ ಬೇರೆ ತರಹದ ಪಾತ್ರಗಳು ಇದರ ಜೊತೆಯಲ್ಲಿ ನಟನೆಯಲ್ಲಿ ''ತೊಡಗಿಸುವಿಕೆ''.. ''ಛಲ''..''ಶ್ರಮ''.. ಹರಿಪ್ರಿಯಾ ಅವರನ್ನ ಉನ್ನತಮಟ್ಟಕ್ಕೇರುವಂತೆ ಮಾಡಿತ್ತು. ಬ್ಯಾಕ್ ಟು ಬ್ಯಾಕ್ ''ಹಿಟ್'' ಸಿನಿಮಾಗಳಲ್ಲಿ ನಟಿಸಿ ಸೈ ಅನಿಸಿಕೊಂಡ ಹರಿಪ್ರಿಯಾ ''ಕಾಲ್ ಶೀಟ್'' ಅವತ್ತು'' ಖಾಲಿ'' ಇರಲಿಲ್ಲ. ಇವತ್ತು ''ಖಾಲಿ'' ಇಲ್ಲ.
ಆದರೆ.. ಹರಿಪ್ರಿಯಾ ''ಮದುವೆ''ಯಾಗಿರುವುದನ್ನೇ ''ಅಡ್ವಾಟೆಂಜ್'' ಆಗಿ ತೆಗೆದುಕೊಂಡಿರುವ ಕೆಲವರು ತುಂಬಾ ನಿಯತ್ತಿಂದ ''ಅಪಪ್ರಚಾರ'' ಮಾಡುತ್ತಾ ಬರುತ್ತಿದ್ದಾರೆ. ಇದಕ್ಕೆ ಸಾಕ್ಷಿ ಅನ್ನುವಂತೆ ಆರಂಭದಲ್ಲಿ ''ಮದುವೆ'' ನಂತರ ಹರಿಪ್ರಿಯಾ ಫುಲ್ ಟೈಮ್ ''ಯುಟ್ಯೂಬರ್'' ಆಗಿದ್ದಾರೆ ಎಂದು ಹುಯಿಲೆಬ್ಬಿಸಿದ ಮಂದಿ ಮೊನ್ನೆ ''ಅಹನಾ ಅಗ್ನಿಹೋತ್ರ'' ಎಂಬ ಧಾರಾವಾಹಿಯ ''ಪ್ರೋಮೋ '' ಹೊರ ಬಿದ್ದ ನಂತರ ಹರಿಪ್ರಿಯಾ ''ಅವಕಾಶಗಳ ಕೊರತೆ''ಯನ್ನ ಎದುರಿಸುತ್ತಿದ್ದಾರೆ. ಹೀಗಾಗಿಯೇ ''ಕಿರುತೆರೆ''ಯತ್ತ ಮುಖ ಮಾಡಿದ್ದಾರೆ ಎಂದು ''ತಮಟೆ''ಯನ್ನ ಹೊಡೆದರು. ಅನೇಕರು ಇದು ''ನಿಜಾ'' ಎಂದು ನಂಬಿದರೆ, ಇನ್ನೂ ಕೆಲವರು ''ಇದು ಸಾಧ್ಯನಾ''..? ಎಂಬ ಪ್ರಶ್ನೆಯನ್ನ ನೇರವಾಗಿ ಹರಿಪ್ರಿಯಾ ಅವರಲ್ಲಿ ಕೇಳಿದರು.
ಇದೀಗ ಖುದ್ದು ಹರಿಪ್ರಿಯಾ, ಅವರ ಅಭಿಮಾನಿಗಳಲ್ಲಿದ್ದ ''ಅನುಮಾನ''ಗಳನ್ನ ಬಗೆಹರಿಸಿದ್ದಾರೆ. ನಾನು ಯಾವುದೇ ''ಧಾರಾವಾಹಿ''ಯನ್ನು ಒಪ್ಪಿಲ್ಲ. ನಾನು ನಿರ್ವಹಿಸಿರುವುದು ಒಂದೆರೆಡು ದಿನಗಳ ''ಅತಿಥಿ ಪಾತ್ರ''ವಷ್ಟೇ. ಒಂದೊಳ್ಳೆಯ ಸಿನಿಮಾದ ಸುದ್ದಿಯೊಂದಿಗೆ ನಿಮ್ಮ ಮುಂದೆ ಶೀಘ್ರದಲ್ಲೇ ಬರಲಿದ್ದೇನೆ ಎಂದು ಹೇಳಿದ್ದಾರೆ.

ಇನ್ನೂ ಸರಿಯಾದ ಸಮಯಕ್ಕೆ ಹರಿಪ್ರಿಯಾ ತಮ್ಮ ಈ ''ಮನದ ಮಾತು''ಗಳನ್ನ ಹಂಚಿಕೊಳ್ಳದೇ ಇದ್ದಿದ್ದರೆ ಏನಾಗುತ್ತಿತ್ತು ಗೊತ್ತಿಲ್ಲ.ಆದರೆ ಹರಿಪ್ರಿಯಾ ಕೊಟ್ಟಿರುವ ಈ ಸ್ಪಷ್ಟೀಕರಣದಿಂದ ಇವರ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ನಿಮ್ಮ ಸ್ಥಾನ ''ಹಿರಿತೆರೆ''ಯಲ್ಲಿ ಇದೆ ಹೊರತು ''ಕಿರುತೆರೆ''ಯಲ್ಲಿ ಅಲ್ಲ, ದಯವಿಟ್ಟು ಈ ತರ ''ಶಾಕ್'' ನೀಡಬೇಡಿ ಎಂಬ ಮನವಿಯನ್ನ ಮಾಡಿಕೊಳ್ತಿದ್ದಾರೆ. ಆದಷ್ಟು ಬೇಗ ಹೊಸ ಸಿನಿಮಾ ಮಾಹಿತಿಯನ್ನ ಹಂಚಿಕೊಂಡು ''ಆಡಿಕೊಳ್ಳೋರ ಬಾಯಿಗೆ ಬೀಗ ಹಾಕಿ'' ಎಂಬ ಒತ್ತಡವನ್ನು ಕೂಡ ಹರಿಪ್ರಿಯಾ ಮೇಲೆ ಹಾಕುತ್ತಿದ್ದಾರೆ
ಒಟ್ನಲ್ಲಿ ಸದ್ಯಕ್ಕೆ ಹರಿಪ್ರಿಯಾ ನಾನು ಯಾವುದೇ ಧಾರಾವಾಹಿಯನ್ನೂ ಮಾಡುತ್ತಿಲ್ಲ. ಮಾಡಿದ್ದು ಕೇವಲ ''ಗೆಸ್ಟ್ ಅಪಿಯರೆನ್ಸ್'' ಎಂದು ಹೇಳಿದ್ದಾರೆ. ಸದ್ಯದಲ್ಲಿಯೇ ದೊಡ್ಡದಾಗಿ ''ಸಿಗ್ನಲ್'' ಕೊಡುವುದಾಗಿ ಹೇಳಿದ್ದಾರೆ. ಆ ಸಿಗ್ನಲ್ ಕ್ಲಿಯರ್ ಆದ ನಂತರವಷ್ಟೇ ''ಹರಿಪ್ರಿಯಾ'' ಮುಂದಿನ ಯೋಜನೆಗಳ ಬಗ್ಗೆ ಸ್ಪಷ್ಟವಾದ ಚಿತ್ರಣ ಸಿಗಲಿದೆ. ಅಲ್ಲಿಯವರೆಗೆ ''ವದಂತಿ''ಗಳಿಗೆ ಕಿವಿಗೊಡಬೇಡಿ ಅನ್ನುವುದು ''ಸಿಂಹಪ್ರಿಯಾ'' ಮಾಡಿಕೊಂಡಿರುವ ಕಳಕಳಿಯ ಮನವಿ.


Click it and Unblock the Notifications











