ಕೋವಿಡ್ ರೋಗಿಗಳೊಂದಿಗೆ ಡ್ಯಾನ್ಸ್ ಮಾಡಿದ ಹರ್ಷಿಕಾ-ಭುವನ್
ಕೊರೊನಾ ವೈರಸ್ ಬಿಕ್ಕಟ್ಟಿನ ಸಮಯದಲ್ಲಿ ಕನ್ನಡ ಚಲನಚಿತ್ರ ನಟ ಭುವನ್ ಪೊನ್ನಣ್ಣ ಮತ್ತು ನಟಿ ಹರ್ಷಿಕಾ ಪೂಣಚ್ಚ ಜೋಡಿ ಉತ್ತಮ ಕೆಲಸಗಳಿಂದ ಗಮನ ಸೆಳೆಯುತ್ತಿದ್ದಾರೆ.
ಭುವನಂ ಫೌಂಡೇಶನ್ ಮೂಲಕ ಜನಸಾಮಾನ್ಯರಿಗೆ, ಕೋವಿಡ್ ಸೋಂಕಿಗೆ ತುತ್ತಾಗಿರುವ ಕುಟುಂಬಗಳ ಸಹಾಯಕ್ಕೆ ನಿಂತಿದ್ದಾರೆ. ಬೆಂಗಳೂರಿನಲ್ಲಿ ಆಕ್ಸಿಜನ್ ಬಸ್, ಉಚಿತ ಆಟೋ ಆಂಬುಲೆನ್ಸ್, ಟ್ಯಾಕ್ಸಿ ಸೇವೆ ಆರಂಭಿಸಿದ್ದ ಜೋಡಿ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಿದ್ದಾರೆ.
ಇದೀಗ, ಇನ್ನು ಒಂದು ಹೆಜ್ಜೆ ಮುಂದೆ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಕೊರೊನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಅವರ ಸಮ್ಮುಖದಲ್ಲಿ ಡ್ಯಾನ್ಸ್ ಮಾಡಿ ಮನರಂಜಿಸಿದ್ದಾರೆ.

ಕೋವಿಡ್ ಆಸ್ಪತ್ರೆಯೊಳಗೆ ಭುವನ್ ಮತ್ತು ಹರ್ಷಿಕಾ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.
ಇದಕ್ಕೂ ಮುಂಚೆ ಕೊಡಗಿನ ಸುತ್ತಮುತ್ತ ಪ್ರದೇಶದಲ್ಲಿರುವ ಕೊರೊನಾ ಪೀಡಿತರ ಮನೆಗಳಿಗೆ ಭೇಟಿ ನೀಡಿದ ಅಗತ್ಯ ದಿನಸಿ ಕಿಟ್ ವಿತರಿಸಿದ್ದರು. ಸಂಪೂರ್ಣವಾಗಿ ಸೀಲ್‌ಡೌನ್ ಮಾಡಿರುವ ಮನೆಯವರು ಭುವನಂ ಫೌಂಡೇಶನ್ ಸಂಪರ್ಕಿಸಿದ್ದರು. ಈ ಹಿನ್ನೆಲೆ ಖುದ್ದು ಹರ್ಷಿಕಾ-ಭುವನ್ ಹೋಗಿ ದಿನಸಿ ತಲುಪಿಸಿದ್ದರು.
ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಇಬ್ಬರು ಮೂಲತಃ ಕೊಡಗಿನವರು. ಕಳೆದ ಬಾರಿ ಕೊಡಗು ಹಾಗು ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾದ ಇವರಿಬ್ಬರು ಅಲ್ಲಿನ ಜನರ ಕಷ್ಟಕ್ಕೆ ಸ್ಪಂದಿಸಿದ್ದರು. ನಗರದಿಂದ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಿ ಮನೆಗಳಿಗೆ ತಲುಪಿಸಿದ್ದರು.


Click it and Unblock the Notifications











