Harshika-Bhuvan: ಕೊಡವ ಸಂಪ್ರದಾಯದಂತೆ ಸತಿಪತಿಯಾದ ಹರ್ಷಿಕಾ-ಭುವನ್
ಕನ್ನಡ ಚಿತ್ರರಂಗದ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಆಗಸ್ಟ್ 24 ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಕೊಡಗಿನ ವಿರಾಜಪೇಟೆಯ ಅಮ್ಮತ್ತಿ ಕೊಡವ ಸಮಾಜದಲ್ಲಿ ಮದುವೆ ಸಮಾರಂಭ ನಡೆದಿದೆ. ಕುಟುಂಬಸ್ಥರು, ಬಂಧು ಬಳಗವರು, ಗಣ್ಯರ ಸಮ್ಮುಖದಲ್ಲಿ ನವಜೋಡಿ ತಮ್ಮ ಹೊಸ ಜೀವನಕ್ಕೆ ಮುನ್ನುಡಿ ಬರೆದಿದ್ದಾರೆ.
12 ವರ್ಷಗಳ ಪ್ರೀತಿಗೆ ಭುವನ್ ಹಾಗೂ ಹರ್ಷಿಕಾ ದಾಂಪತ್ಯದ ಮುದ್ರೆ ಒತ್ತಿದ್ದಾರೆ. ತಮ್ಮ ಪ್ರೀತಿಗೆ ಯಾರ ದೃಷ್ಠಿ ತಾಗದಿರಲಿ ಎಂದು ಭುವನ್ ಬಯಸಿದ್ದಂತೆ ಇಬ್ಬರ ಪ್ರೀತಿ ದಡ ಮುಟ್ಟಿದೆ. ಮದುವೆ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಕೆ.ಸುಧಾಕರ್, ಮುರುಗೇಶ್ ನಿರಾಣಿ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭಾಗಿಯಾಗಿ ದಂಪತಿಗೆ ಶುಭ ಹಾರೈಸಿದ್ದಾರೆ.

ಕೊಡವ ಸಂಪ್ರದಾಯದಂತೆ ಹರ್ಷಿಕಾ ಮದುವೆ
ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಮದುವೆ ಕೊಡವ ಪದ್ಧತಿಯಂತೆ ನಡೆದಿದೆ. ಆಗಸ್ಟ್ 23 ರಂದು ಊರುಕೊಡುವ ಶಾಸ್ತ್ರ ಮುಗಿದಿತ್ತು. ತಾಳಿ ಕಟ್ಟುವ ಶಾಸ್ತ್ರವೂ ಮುಗಿದಿತ್ತು. ಸಂಪ್ರದಾಯದಂತೆ ನಟಿ ಹರ್ಷಿಕಾ ಕೊರಳಿಗೆ ಅವರ ತಾಯಿ ತಾಳಿ ಕಟ್ಟಿದ್ದರು. ಕೊಡವ ಸಂಪ್ರದಾಯದಲ್ಲಿ ಗಂಡು ಹೆಣ್ಣಿಗೆ ತಾಳಿ ಕಟ್ಟುವ ಶಾಸ್ತ್ರ ಇರುವುದಿಲ್ಲ.
ಇನ್ನು, ದಂಪತಿ ಮೂಹೂರ್ತದಲ್ಲಿ ಎಡಬದಿಯಲ್ಲಿ ವಧು ಹಾಗೂ ಬಲಗಡೆಯಲ್ಲಿ ವರನನ್ನು ಮೂರು ಕಾಲಿನ ಮಣೆ ಹಾಕಿ ಕೂರಿಸಿ, ಸಾಂಪ್ರದಾಯಿಕ ರೀತಿಯ ಶಾಸ್ತ್ರವನ್ನು ಮಾಡುತ್ತಾರೆ, ವರನ ಮನೆಯವರು ಪೋಳಿಯದ ಒಳಗೆ ಇಟ್ಟಿರುವ ಹಾಲನ್ನು ಮೂಹೂರ್ತ ನಡೆಯುವಾಗ ವಧುವಿಗೆ ಕೊಡುತ್ತಾರೆ.

ಕೆಂಪು ಸೀರೆಯಲ್ಲಿ ಮಿಂಚಿದ ಹರ್ಷಿಕಾ, ವೀರನಂತೆ ಬಂದ ಭುವನ್!
ಸ್ಯಾಂಡಲ್‌ವುಡ್ ಜೋಡಿ ಮದುವೆಯಲ್ಲಿ ಕೊಡವ ಲುಕ್‌ನಲ್ಲಿ ಮಿಂಚಿದ್ದಾರೆ. ನಟಿ ಹರ್ಷಿಕಾ ಕೆಂಪು ಬಣ್ಣದ ಸೀರೆ ಧರಿಸಿದ್ದರೇ, ಭುವನ್ ಕೊಡವ ಲುಕ್‌ನಲ್ಲಿ ವೀರ ಮದುಮಗನಂತೆ ಕಾಣುತ್ತಿದ್ದರು. ಕೆಂಪು ರೇಷ್ಮೆಯಲ್ಲಿ ಚಿನ್ನದ ಬಣ್ಣದ ಬಾರ್ಡರ್, ನಟಿಯ ಒಡವೆಗಳು, ಸಿಂಪಲ್ ಮೇಕಪ್ ಆಕೆಯ ಅಂದವನ್ನು ಮತ್ತಷ್ಟು ಹೆಚ್ಚಿಸಿದ್ದವು.
ಬುಧವಾರ ರಾತ್ರಿ ಮೆಹಂದಿ ಶಾಸ್ತ್ರ ನಡೆದಿದ್ದು, ಅತಿ ಸರಳವಾಗಿ ನಟಿ ಹರ್ಷಿಕಾ ಪೂಣಚ್ಚ ಮೆಹಂದಿ ಹಾಕಿಸಿಕೊಂಡಿದ್ದರು. ಕೈಯಲ್ಲಿನ ಮದರಂಗಿ ಡಿಸೈನ್ ಕೂಡ ಸಿಂಪಲ್ ಆಗಿದ್ದು, ಹರ್ಷಿಕಾ ತಮ್ಮ ಕೈಗಳಲ್ಲಿ ಭುವನ್ ಮತ್ತು ತಮ್ಮ ಹೆಸರನ್ನು ಸೂಚಿಸುವ ಅಕ್ಷರಗಳನ್ನು ಬರೆಸಿಕೊಂಡಿದ್ದಾರೆ. ಅಂದರೆ ಇಬ್ಬರ ಹೆಸರಿನ ಮೊದಲ ಅಕ್ಷರಗಳನ್ನು ತಮ್ಮ ಮೆಹಂದಿಯಲ್ಲಿ ಸೇರಿಸಿಕೊಂಡಿದ್ದಾರೆ. ಮೆಹಂದಿಯಲ್ಲಿ H (ಹರ್ಷಿಕಾ) ಹಾಗೂ B (ಭುವನ್) ಎಂದು ಬರೆಸಿಕೊಂಡಿದ್ದಾರೆ.
ನಿನ್ನೆ ನಡೆದ ಹಲವು ಕಾರ್ಯಕ್ರಮಗಳಲ್ಲಿ ಪಿಂಕ್ ಸೀರೆಯುಟ್ಟು ಅಪ್ಸರೆಯಂತೆ ಕಾಣಿಸುತ್ತಿದ್ದರು. ಕಳೆದ 12 ವರ್ಷಗಳಿಂದ ಪ್ರೀತಿಯಲ್ಲಿದ್ದ ಭುವನ್ ಹಾಗೂ ಹರ್ಷಿಕಾ ಪ್ರೀತಿಗೆ ದಾಂಪತ್ಯದ ಮುದ್ರೆ ಬೀದ್ದಿದೆ. ಮದುವೆ ಘೋಷಣೆಯಾದ ಬೆನ್ನಲ್ಲೆ ಹರ್ಷಿಕಾ ನಿರ್ಮಾಪಕಿಯಾಗಿ ಬಡ್ತಿ ಪಡೆದಿದ್ದರು. ಭುವನ್ ಹೊಸ ಮನೆ ಗೃಹಪ್ರವೇಶ ಮಾಡಿಸಿದ್ದರು.
ಭುವನ್‌ಗಾಗಿ ನಟಿ ಹರ್ಷಿಕಾ ಪೂಣಚ್ಚ 'ಭುವನಂ ಎಂಟರ್ಟೇನ್ಮೆಂಟ್' ಎಂಬ ಹೊಸ ಪ್ರೊಡಕ್ಷನ್ ಹೌಸ್ ಶುರು ಮಾಡಿದ್ದಾರೆ. ಈ ಸಂಸ್ಥೆ ಅಡಿಯಲ್ಲಿ 'ಭುವನಂ ಶ್ರೇಷ್ಠಮ್ ಗಚ್ಚಾಮಿ' ಸಿನಿಮಾ ನಿರ್ಮಾಣವಾಗಲಿದ್ದು, ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಲಾಗಿದೆ. ಈ ಸಿನಿಮಾ ಮೂಲಕ ಹರ್ಷಿಕಾ ಪೂಣಚ್ಚ ನಿರ್ಮಾಪಕಿಯಾಗಿದ್ದಾರೆ. ಇನ್ನು, ಭುವನ್ ಪೊನ್ನಣ್ಣ ತಮ್ಮ ತೋಟದ ಮನೆಯಲ್ಲಿ ಹೊಸ ಮನೆಯನ್ನು ಕಟ್ಟಿಸಿದ್ದು, ಮದುವೆಗೂ ಮೊದಲೇ ಹರ್ಷಿಕಾ ದೀಪವಿಡಿದು ಗೃಹಪ್ರವೇಶ ಮಾಡಿದ್ದರು.


Click it and Unblock the Notifications










