'ಬಿತ್ರಿ' ಹರ್ಷಿಕಾ ಪೋಸ್ಟರ್ ನೊಳಗ ಅಂತದ್ದೇನಿತ್ರಿ?
ಒಂದು ಸಿನಿಮಾಗೆ ಅವಕಾಶ ಹೇಗೆ ಸಿಗಬಹುದು? ನಟನೆಯಲ್ಲಿ ಪ್ರತಿಭೆಯಿದ್ರೆ ಅವಕಾಶ ಹುಡುಕಿಕೊಂಡು ಬರುತ್ತೆ. ನಟನೆ ಬರ್ಲಿಲ್ಲ ಅಂದ್ರೂ ನೋಡೋಕೆ ಸುಂದರವಾಗಿದ್ದರೆ, ಚಾನ್ಸ್ ಗ್ಯಾರೆಂಟಿ. ಹೊಸಬರಾದರೆ, ಫೋಟೋಗಳನ್ನ ನೋಡಿ, ಮುಖ ಕ್ಯಾಮರಾ ಫ್ರೆಂಡ್ಲಿ ಅನ್ನುವಹಾಗಿದ್ರೆ, ಆಡಿಷನ್ ಮಾಡಿ ಸೆಲೆಕ್ಟ್ ಮಾಡ್ತಾರೆ. ಆದ್ರೆ, ಈಗಾಗಲೇ ತೆರೆಮೇಲೆ ಗುರುತಿಸಿಕೊಂಡಿರುವ ನಟಿಯಾಗಿದ್ದರೆ..!?
ಉತ್ತರ ಕೊಡುವುದು ಸ್ವಲ್ಪ ಕಷ್ಟ. ಯಾಕಂದ್ರೆ, ಆ ನಟಿ ಹಿಟ್ ಮೇಲೆ ಹಿಟ್ ಕೊಟ್ಟು ಬಹುಬೇಡಿಕೆಯಲ್ಲಿದ್ದರೆ ಅವಕಾಶ ಸಿಗುವುದು ಸಹಜ. ಇಲ್ಲಾಂದ್ರೆ.? ಚಾನ್ಸ್ ಬಗ್ಗೆ ನಾವು ಇಷ್ಟೆಲ್ಲಾ ಯಾಕೆ ಹೇಳ್ತಿದ್ದೀವಿ ಅಂತ ತಲೆಕೆರೆದುಕೊಳ್ಳಬೇಡಿ, ಕೂರ್ಗಿ ಬೆಡಗಿ ಹರ್ಷಿಕಾ ಪೂಣಚ್ಚ ಟಾಲಿವುಡ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ಕಥೆ ಕೇಳಿದ್ರೆ ಹೀಗೂ ಉಂಟಾ! ಅಂತ ನಿಮಗೂ ಅನಿಸಬಹುದು.

ಕನ್ನಡ ಚಿತ್ರರಂಗಕ್ಕೆ ಹರ್ಷಿಕಾ ಪೂಣಚ್ಚ ಕಾಲಿಟ್ಟು 8 ವರ್ಷಗಳು ಕಳೆದಿವೆ. ವರ್ಷಕ್ಕೆ ಐದಾರು ಸಿನಿಮಾಗಳಲ್ಲಿ ಬಿಜಿಯಾಗಿರುವ ಹರ್ಷಿಕಾ, ಪರಭಾಷೆ ಕಡೆ ಮುಖ ಮಾಡಿದ್ದೇ ಇಲ್ಲ. ಅದ್ರ ಬಗ್ಗೆ ಹರ್ಷಿಕಾಗೆ ಆಸಕ್ತಿ ಕೂಡ ಇರ್ಲಿಲ್ಲ. ಇದಕ್ಕಿದ್ದಂತೆ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಹೈದರಾಬಾದ್ ಗೆ ಹಾರಿಬಂದಿರುವ ಹರ್ಷಿಕಾ, ಸದ್ದಿಲ್ಲದೇ 'ಪಾನಿಪೂರಿ' ಅನ್ನುವ ತೆಲುಗು ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಬಂದಿದ್ದಾರೆ. [ಹರ್ಷಿಕಾ ಪೂಣಚ್ಚ ರಾತ್ರಿ ಸ್ಕಂದಗಿರಿ ಬೆಟ್ಟ ಹತ್ತಿದ್ಯಾಕೆ?]
ಹಾಗಾದ್ರೆ, ಟಾಲಿವುಡ್ ನಲ್ಲಿ ಹರ್ಷಿಕಾಗೆ ಅವಕಾಶ ಹೇಗೆ ಸಿಕ್ತು ಅಂದ್ರೆ 'ಬಿತ್ರಿ' ಮೂಲಕ ಅಂತಾರೆ. ಕನ್ನಡ ಚಿತ್ರರಂಗದಲ್ಲೇ ದೊಡ್ಡ ಮಟ್ಟಿಗೆ ಸದ್ದು ಮಾಡದ 'ಬಿತ್ರಿ' ಟಾಲಿವುಡ್ ವರೆಗೂ ಹೋಗಿದ್ದು ಹೇಗೆ ಅನ್ನುವ ಪ್ರಶ್ನೆಗೆ, ''ನಾನು ಬಿತ್ರಿ ಸಿನಿಮಾದಲ್ಲಿ ಮೇಕ್ ಓವರ್ ಮಾಡಿಕೊಂಡಿದ್ದೆ. ಸಿನಿಮಾದ ಪೋಸ್ಟರ್ ಗಳ ಡಿಸೈನ್ ತುಂಬಾ ಚೆನ್ನಾಗಿತ್ತು. ನನ್ನನ್ನ ಅದ್ರಲ್ಲಿ ಡಿಫರೆಂಟಾಗಿ ತೋರಿಸಿದ್ದರು. ಅದನ್ನ ನೋಡಿ ಟಾಲಿವುಡ್ ನಿಂದ ಕರೆಬಂದಿತು'' ಅಂತ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತನಾಡುತ್ತಾ ಹರ್ಷಿಕಾ ಹೇಳಿದರು.

''ನನ್ನ ಬಿತ್ರಿ ಸಿನಿಮಾದ ಪ್ರಮೋಷನ್ ಚೆನ್ನಾಗಿ ನಡೆದಿತ್ತು. ಬೆಂಗಳೂರಿನ ಎಲ್ಲಾ ಕಡೆ ಪೋಸ್ಟರ್ ಗಳನ್ನ ಹಾಕಲಾಗಿತ್ತು. ಅದೇ ಸಮಯಕ್ಕೆ ಟಾಲಿವುಡ್ ನಿರ್ಮಾಪಕ ಪ್ರದೀಪ್ ಕುಮಾರ್ ಬೆಂಗಳೂರಿಗೆ ಬಂದಿದ್ರು. ಎಲ್ಲೋ ಅಂಟಿಸಿದ್ದ ಪೋಸ್ಟರ್ ನಲ್ಲಿ ನನ್ನ ಲುಕ್ ನೋಡಿ, ಇಷ್ಟ ಆಗಿ ಆಫರ್ ಕೊಟ್ಟರು. ನನಗೆ ಅಲ್ಲಿ ಯಾರೂ ಪರಿಚಯ ಇಲ್ಲ. ಟಾಲಿವುಡ್ ನಿಂದ ಆಫರ್ ಬರುತ್ತೆ ಅಂತ ನಾನು ಊಹಿಸಿರಲಿಲ್ಲ. ಆದ್ರೆ 'ಬಿತ್ರಿ'ಯಿಂದ ಆಯ್ತು. ಅವಕಾಶಗಳು ಹೀಗೂ ಸಿಗುತ್ತೆ ಅಂತ ನನಗೆ ಗೊತ್ತಿರ್ಲಿಲ್ಲ'' ಅಂತಾರೆ ಹರ್ಷಿಕಾ ಪೂಣಚ್ಚ. [ತುಟಿಗೆ ತುಟಿ ಬೆರೆಸಿದ 'ಬಿತ್ರಿ' ಹರ್ಷಿಕಾ ಪೂಣಚ್ಚ]
'ಬಿತ್ರಿ' ಪೋಸ್ಟರ್ ಗಳಲ್ಲಿ ಟಾಲಿವುಡ್ ನಿರ್ಮಾಪಕರಿಗೆ ಹರ್ಷಿಕಾ ಅದ್ಹೇಗೆ ಕಂಡ್ರೋ ಗೊತ್ತಿಲ್ಲ. ಆದ್ರೆ, ಅವರು ಟಾಲಿವುಡ್ ನಲ್ಲಿ ಅದಾಗಲೇ 'ಪಾನಿ ಪೂರಿ' ಅಂತ ಸಿನಿಮಾ ಮಾಡಿದ್ದಾಗಿದೆ. ರವಿತೇಜಾ ಸಹೋದರ ಸೂರ್ಯ ತೇಜಾ ಹರ್ಷಿಕಾ ಜೊತೆ 'ಪಾನಿಪೂರಿ' ತಿಂದಿದ್ದಾರೆ. ಮಹೇಶ್ ಬಾಬೂ ಸಹೋದರ ನರೇಶ್, ಸುಮನ್ ರಂತಹ ದೊಡ್ಡ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.

ನಿರ್ದೇಶಕ ವಿಷ್ಣುವರ್ಧನ್ ಆಕ್ಷನ್ ಕಟ್ ಹೇಳುತ್ತಿರುವ ಈ ಚೊಚ್ಚಲ ಚಿತ್ರದಲ್ಲಿ ಸೀದಾ ಸಾದಾ ಹುಡುಗಿಯಾಗಿ ಹರ್ಷಿಕಾ ಕಾಣಿಸಿಕೊಂಡಿದ್ದಾರೆ. ಚಿತ್ರೀಕರಣ ಈಗಾಗಲೇ ಬಹುತೇಕ ಪೂರ್ಣಗೊಂಡಿದ್ದು, ಸಾಂಗ್ ಶೂಟಿಂಗ್ ಮಾಡೋದು ಬಾಕಿ ಇದೆ.
ಅಂತೂ 'ಬಿತ್ರಿ' ಕೃಪೆಯಿಂದ ಹರ್ಷಿಕಾ ಟಾಲಿವುಡ್ ಗೆ ಹಾರಿದ್ದಾರೆ. ಇದನ್ನ ಕೇಳಿಸಿಕೊಂಡಿರುವ ಇತರೆ ನಟಿಯರು ಇನ್ಮುಂದೆ ಪೋಸ್ಟರ್ ಡಿಸೈನ್ ನಲ್ಲಿ ತಮ್ಮ ಲುಕ್ ಬಗ್ಗೆ ಗಮನಹರಿಸ್ಬೇಕು ಅಂತ ಮಾತನಾಡಿಕೊಂಡರೆ ಎಲ್ಲಾ 'ಬಿತ್ರಿ' ಪ್ರಭಾವ! (ಫಿಲ್ಮಿಬೀಟ್ ಕನ್ನಡ)


Click it and Unblock the Notifications