ದರ್ಶನ್-ಉಮಾಪತಿ ಕಿತ್ತಾಟ.. ಒಕ್ಕಲಿಗರ ಸಂಘ ಎಂಟ್ರಿ; ಈ ವಿವಾದಕ್ಕೆ ಜಾತಿ ಬಣ್ಣ ಕಟ್ಟಲಾಗುತ್ತಿದೆಯೇ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ನಡುವಿನ ವಿವಾದ ಬೇರೆ ದಾರಿ ಹಿಡಿಯುತ್ತಿದೆಯೇ? ಇಂತಹದ್ದೊಂದು ಪ್ರಶ್ನೆ ಎದ್ದಿದೆ. ದರ್ಶನ್ ಹಾಗೂ ಉಮಾಪತಿ ನಡುವಿನ ವೈಮನಸ್ಸು ಇಂದಿನದಲ್ಲ. ಕಳೆದ ಕೆಲವು ವರ್ಷಗಳಿಂದ ಇಬ್ಬರು ಒಬ್ಬರ ಮುಖ ಇನ್ನೊಬ್ಬರು ನೋಡದೇ ಇರುವಷ್ಟು ಸಂಬಂಧವನ್ನು ಹದಗೆಡಿಸಿಕೊಂಡಿದ್ದಾರೆ. ಈಗ ಮತ್ತೆ 'ಕಾಟೇರ' ಟೈಟಲ್ ವಿಷಯಕ್ಕೆ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ.
'ಕಾಟೇರ' ನಾನೇ ಕೊಟ್ಟಿದ್ದು ಅಂದಿದ್ದ ನಿರ್ಮಾಪಕ ಉಮಾಪತಿ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹರಿಹಾಯ್ದಿದ್ದರು. ಉಮಾಪತಿಗೆ 'ತಗಡು' ಅನ್ನೋ ಪದವನ್ನು ಬಳಸಿದ್ದರು. ಅದು ಉಮಾಪತಿ ಆಕ್ರೋಶಕ್ಕೆ ಕಾರಣವಾಗಿತ್ತು. ದರ್ಶನ್ ಮಾತುಗಳನ್ನು ಖಂಡಿಸಿರೋ ಉಮಾಪತಿ ಕಳೆದೆರಡು ದಿನಗಳಿಂದ ತಿರುಗೇಟು ಕೊಡುತ್ತಿದ್ದಾರೆ. ಮಹಿಳೆಯರು, ಕೆಲ ಸಂಘಟನೆಗಳು ದರ್ಶನ್ ವಿರುದ್ಧ ಅಖಾಡಕ್ಕೆ ಇಳಿದಿವೆ.

ಇನ್ನೊಂದು ಕಡೆ ಪ್ರತಿಷ್ಠಿತ ಒಕ್ಕಲಿಗರ ಸಂಘ ಕೂಡ ದರ್ಶನ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದೆ ಎಂದು ವರದಿಗಳಾಗಿವೆ. ಈ ಮೂಲಕ ಇವರಿಬ್ಬರ ಕಿತ್ತಾಟಕ್ಕೆ ಜಾತಿ ಬಣ್ಣ ಬಳಿಯಲಾಗುತ್ತಿದೆಯೇ? ಎಂಬ ಪ್ರಶ್ನೆ ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆಯಾಗುತ್ತಿದೆ. ಒಬ್ಬ ನಟ ಹಾಗೂ ಒಬ್ಬ ನಿರ್ಮಾಪಕನ ನಡುವಿನ ಮುನಿಸಿಗೆ ಜಾತಿಯನ್ನು ಮಧ್ಯೆ ತರಲಾಗುತ್ತಿದೆಯೇ ಎಂಬ ಪ್ರಶ್ನೆಯಂತೂ ಮೂಡಿದೆ.
ನಿನ್ನೆ (ಫೆಬ್ರವರಿ 22) ನಿರ್ಮಾಪಕ ಉಮಾಪತಿ ಪರ ಒಕ್ಕಲಿಗರ ಸಂಘ ಅಖಾಡಕ್ಕೆ ಇಳಿದಿತ್ತು. ದರ್ಶನ್ ಹೇಳಿಕೆಗಳನ್ನು ತೀವ್ರವಾಗಿ ವಿರೋಧಿಸಿದೆ ಎಂದು ಹೇಳಲಾಗಿತ್ತು. ನಿರ್ಮಾಪಕ ಉಮಾಪತಿ ಒಕ್ಕಲಿಗರ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ತಮ್ಮ ಸಮುದಾಯದ ವ್ಯಕ್ತಿಗೆ ದರ್ಶನ್ ನಿಂದಿಸಿದ್ದಾರೆಂದು ಆಕ್ರೋಶ ಹೊರಹಾಕಿದ್ದಾರೆಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ ದರ್ಶನ್‌ಗೆ ಒಕ್ಕಲಿಗರ ಸಂಘ ಬುದ್ದಿ ಮಾತುಗಳನ್ನು ಹೇಳಿದೆ ಎಂದೂ ವರದಿಯಾಗಿದೆ.
ಉಮಾಪತಿ ಶ್ರೀನಿವಾಸ್ ಗೌಡಗೂ ಒಕ್ಕಲಿಗರ ಸಂಘಕ್ಕೆ ಕೇವಲ ಜಾತಿಯೊಂದೇ ನಂಟಲ್ಲ. ಈ ಸಂಘದ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ತಮ್ಮ ಸಂಘದ ನಿರ್ದೇಶಕರಿಗೆ ದರ್ಶನ್ 'ತಗಡು', 'ಗುಮ್ಮಿಸಿಕೊಳ್ತೀಯಾ' ಅನ್ನುವ ಪದ ಬಳಸಿದ್ದು ಅವಮಾನ ಮತ್ತು ಅವಹೇಳನಕಾರಿ ಎಂದು ಪರಿಗಣಿಸಿದೆ. ಸಿನಿಮಾ ಕ್ಷೇತ್ರದಲ್ಲಿ ನಿರ್ಮಾಪಕರಾಗಿ ತಮ್ಮದೇ ಸ್ಥಾನ ಮಾನ ಗಿಟ್ಟಿಸಿಕೊಂಡಿರುವ ಉಮಾಪತಿಗೆ ಮಾಧ್ಯಮಗಳ ಮುಂದೆ ಇಂತಹ ಪದ ಬಳಸಿದ್ದು ಸರಿಯಲ್ಲ ಎಂದು ಒಕ್ಕಲಿಗರ ಸಂಘದ ಅಭಿಪ್ರಾಯ ಎನ್ನಲಾಗಿದೆ.
ನಿರ್ಮಾಪಕರು ಇಲ್ಲದೆ ಇದ್ದರೆ ಸಿನಿಮಾರಂಗ ಬೆಳೆಯುವುದು ಕಷ್ಟ. ಚಿತ್ರರಂಗ ಬೆಳೆಯಬೇಕು ಅಂದರೆ, ನಿರ್ಮಾಪಕರ ಪಾತ್ರ ತುಂಬಾನೇ ಮುಖ್ಯ. ಹೀಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಉಮಾಪತಿ ಇಬ್ಬರೂ ತಮ್ಮೊಳಗಿನ ವಿವಾದಗಳನ್ನು ಕೂಡ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದೆ ಎನ್ನಲಾಗಿದೆ. ಆದರೆ, ನಟ, ನಿರ್ಮಾಪಕ ನಡುವಿನ ಕಿತ್ತಾಟಕ್ಕೆ ಜಾತಿ ಬಣ್ಣ ಬಳಿಯುವ ಪ್ರಯತ್ನ ಆಯ್ತಾ? ಅನ್ನೋ ಪ್ರಶ್ನೆ ಎದ್ದು ಕಾಣುತ್ತಿದೆ.
ಒಟ್ನಲ್ಲಿ ನಿರ್ಮಾಪಕ ಉಮಾಪತಿ ಹಾಗೂ ದರ್ಶನ್ ಇಬ್ಬರ ನಡುವಿನ ಕಿತ್ತಾಟಕ್ಕೆ ಇನ್ನೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಇನ್ನೂ ಇಬ್ಬರ ನಡುವಿನ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಹೀಗಾಗಿ ಉಮಾಪತಿ ಹಾಗೂ ದರ್ಶನ್ ಮುಂದಿನ ನಡೆಯೇನು? ಅನ್ನೋದು ಸದ್ಯಕ್ಕೆ ಕುತೂಹಲ. ನಿರ್ಮಾಪಕ ಉಮಾಪತಿ ಪ್ರತಿಕ್ರಿಯೆ ದರ್ಶನ್ ಕೂಡ ಏನೂ ರೆಸ್ಪಾನ್ಸ್ ಮಾಡಿಲ್ಲ. ಈ ಕಾರಣಕ್ಕೆ ಇಬ್ಬರ ನಡುವಿನ ಕಾದಾಟ ಮುಂದಿನ ದಿನಗಳಲ್ಲಿ ಯಾವ ರೂಪ ಪಡೆಯುತ್ತೆ ಅನ್ನೋದು ಸದ್ಯಕ್ಕೆ ಕುತೂಹಲ.


Click it and Unblock the Notifications











