ಹಾಸನ ಸೈಟ್ ವಿವಾದ ; ಎಸ್‌ಪಿ ಕಚೇರಿಯಿಂದ ಬರಿಗೈಲಿ ವಾಪಸ್ ಆದ ಯಶ್ ತಾಯಿ ಪುಷ್ಪ, ಏನಾಯ್ತು ಅಲ್ಲಿ?
ಹಾಸನ : ಬದುಕೆಂಬ ರಂಗಭೂಮಿಯಲ್ಲಿ ಮನೆ ಕೇವಲ ನಾಲ್ಕು ಗೋಡೆಗಳ ಕಟ್ಟಡವಲ್ಲ. ಬದಲಿಗೆ ಒಬ್ಬ ವ್ಯಕ್ತಿಯ ಪಾಲಿಗೆ ಸುರಕ್ಷಿತ ತಾಣ. ನೆಮ್ಮದಿಯ ಕೇಂದ್ರ. ಗೋಡೆಯಿಂದ ಕೇವಲ ಗಡಿ ಮಾತ್ರ ನಿರ್ಮಾಣವಾಗಲ್ಲ. ಬದಲಿಗೆ ನೆಮ್ಮದಿಗಾಗಿ ಕೂಡ ಈ ಗೋಡೆ ನಿರ್ಮಾಣವಾಗುತ್ತೆ. ಆದರೆ.. ಒಮ್ಮೊಮ್ಮೆ ಈ ಗಡಿಗಳೇ ತಲೆ ನೋವಾಗುತ್ತವೆ. ಬದಲಾದ ಈ ಕಾಲದಲ್ಲಿ ಒಂದು ಅಡಿ ಜಾಗಕ್ಕೂ ಕೂಡ ಇಲ್ಲಿ ಯುದ್ಧ ನಡೆಯುತ್ತೆ. ಉದಾಹರಣೆಗೆ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಅವರ ವಿವಾದವನ್ನೇ ತೆಗೆದುಕೊಳ್ಳಿ.
ಹೌದು, ಎಲ್ಲರಿಗೆ ಗೊತ್ತಿರುವಂತೆ ಈ ವರ್ಷದ ಆರಂಭದಲ್ಲಿಯೇ ಹಾಸನದ ವಿದ್ಯಾನಗರ ಬಡಾವಣೆಯಲ್ಲಿರುವ ಯಶ್ ಅವರ ಭವ್ಯವಾದ ಅರಮನೆ ವಿವಾದಕ್ಕೀಡಾಗಿತ್ತು. ಸುಮಾರು 1,500 ಅಡಿ ಜಾಗವನ್ನು ಒತ್ತುವರಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ನ್ಯಾಯಾಲಯದ ಆದೇಶದಂತೆ ಮನೆಯ ಕಾಂಪೌಂಡ್‌ನ್ನು ಜೆಸಿಬಿ ಮೂಲಕ ತೆರವು ಮಾಡಲಾಗಿತ್ತು.

ಆ ನಂತರ ಕೆಡವಿದ್ದ ಕಾಂಪೌಂಡ್‌ನ್ನು ಯಶ್ ಅವರ ತಾಯಿ ಪುಷ್ಪಾ ಮತ್ತೆ ಕಟ್ಟಿಸುವ ಪ್ರಯತ್ನ ಮಾಡಿದ್ದರು. ಈ ವೇಳೆ ಲಕ್ಷ್ಮ್ಯಮ್ಮ ಅವರ ಪರವಾದ ಜಿಪಿಎ ಹೋಲ್ಡರ್ ದೇವರಾಜು ಮತ್ತು ಯಶ್ ಅವರ ತಾಯಿ ಪುಷ್ಪಾ ನಡುವೆ ಮಾತಿನ ಚಕಮಕಿ ನಡೆದಿತ್ತು.
ಜಿಪಿಎ ಹೋಲ್ಡರ್ ದೇವರಾಜ್ ಹಾಕಿದ್ದ ತಂತಿಬೇಲಿಯನ್ನು ತೆರವು ಗೊಳಿಸಿ ಕಾಂಪೌಂಡ್ ನಿರ್ಮಾಣಕ್ಕೆ ಯಶ್ ತಾಯಿ ಮುಂದಾದಾಗ ಅಲ್ಲಿ ಬಂದಿದ್ದ ದೇವರಾಜ್ ಜೊತೆ ದಾಖಲೆ ಕೊಡಿ ಎಂದು ವಾಗ್ವಾದ ನಡೆಸಿದ್ದ ಪುಷ್ಪಾ ಅರುಣ್ ಕುಮಾರ್, ನೀನ್ಯಾರು ಸರ್ಕಾರಿ ಅಧಿಕಾರಿನಾ ಎಂದು ಪ್ರಶ್ನೆ ಮಾಡಿದ್ದರು. ಜಡ್ಜ್ ನ ಇಲ್ಲೇ ಕರೆಸು ಇಲ್ಲೇ ತೀರ್ಮಾನ ಆಗಲಿ ಎಂದು ಗುಡುಗಿದ್ದರು. ಈ ಎಲ್ಲ ರಾದ್ಧಾಂತಕ್ಕೆ ಅಂದು ಪಿಡಿಒ ಆಗಿದ್ದ ನಟರಾಜ್ ಅವರೇ ಕಾರಣ ಎಂದು ಆರೋಪವನ್ನು ಕೂಡ ಮಾಡಿದ್ದರು.
ಹೀಗೆ ಕಾಲ ಕಾಲಕ್ಕೆ ಭೂಮಿಯ ವಿಚಾರಕ್ಕೆ ವಿವಾದ ಮಾಡಿಕೊಳ್ಳುತ್ತಲೇ ಈ ವರ್ಷದ ಆರಂಭದಿಂದ ಸದ್ದು ಮಾಡುತ್ತಾ ಬಂದ ಪುಷ್ಪಾ ಅರುಣ್ ಕುಮಾರ್, ಸದ್ಯ ಎಸ್‌ಪಿಗಾಗಿ ಕಾದು ಕಾದು ಸುಸ್ತಾಗಿ ಮನೆಗೆ ಮರಳಿದ್ದಾರೆ.
ಹೌದು, ಅಸಲಿಗೆ ಮೂರು ದಿನಗಳ ಹಿಂದೆ ಅಂದರೆ ಮೇ 27ರಂದು ಪೊಲೀಸ್ ಮಹಾ ನಿರ್ದೇಶಕರನ್ನು ಪುಷ್ಪಾ ಅವರು ಭೇಟಿಯಾಗಿದ್ದರು. ಸುಮಾರು 24 ಲಕ್ಷ ರೂ. ಮೊತ್ತದ ವಸ್ತುಗಳು ಹಾನಿಯಾಗಿದೆ ಎಂದು ಜಿಪಿಎ ಹೋಲ್ಡರ್ ದೇವರಾಜ್ ಮತ್ತು ಧರ್ಮ ಎಂಬವರ ವಿರುದ್ಧ ದೂರು ನೀಡಿದರೂ ಕೂಡ ಕೇಸ್ ದಾಖಲು ಮಾಡದೆ ಎನ್‌ಸಿಆರ್ ದಾಖಲು ಮಾಡಿದ್ದಾರೆ ಎಂದು ಹಾಸನ ಬಡಾವಣೆ ಠಾಣೆಯ ಪೊಲೀಸರ ವಿರುದ್ಧವೇ ಆರೋಪ ಮಾಡಿದ್ದರು.

ಡಿಜಿಟಲ್ ಸಾಕ್ಷಿಗಳ ಜೊತೆ ಹಾಸನದ ಜೆಎಂಎಫ್‌ಸಿ ಕೋರ್ಟ್‌ಗೆ ಪುಷ್ಪಾ ಸಂಬಂಧಿ ದುರ್ಗಾಪ್ರಸಾದ್ ದೂರು ಸಲ್ಲಿಸಿದ್ದರು. ಹೀಗೆ ಸಲ್ಲಿಸಲಾದ ದೂರನ್ನು ಪರಿಶೀಲಿಸಿದ ನಂತರ ಎಸ್‌ಪಿ ಭೇಟಿಗೆ ಕೋರ್ಟ್ ನಿರ್ದೇಶನ ನೀಡಿತ್ತು. ಅದ್ರಂತೆ ಕೋರ್ಟ್ ಇಂದು (ಮೇ 30) ಪುಷ್ಪಾ ಅರುಣ್ ಕುಮಾರ್, ಎಸ್‌ಪಿ ಭೇಟಿಗೆ ಆಗಮಿಸಿದ್ದರು ಕೂಡ.
ಆದರೆ, ಹಾಸನ ಜಿಲ್ಲೆಯ 3ನೇ ಮಹಿಳಾ ಎಸ್‌ಪಿಯಾಗಿ ಜವಾಬ್ಧಾರಿ ವಹಿಸಿಕೊಂಡಿರುವ ಶುಭನ್ವಿತಾ ಅವರು ಇಂದು (ಮೇ 30) ಕಚೇರಿಯಲ್ಲಿರಲಿಲ್ಲ. ಬದಲಿಗೆ ಸಕಲೇಶಪುರಕ್ಕೆ ತೆರಳಿದ್ದರು. ಈ ಹಿನ್ನೆಲೆ ಯಶ್ ತಾಯಿ ಪುಷ್ಪಾ ಕಾದು ಕಾದು ವಾಪಸ್ ಆದರು.
ಸದ್ಯ ಯಶ್ ತಾಯಿ ಬರಿಗೈನಲ್ಲಿ ವಾಪಸ್ಸಾಗಿದ್ದು, ಮುಂದಿನ ದಿನಗಳಲ್ಲಿ ಶುಭನ್ವಿತಾ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ಈ ವಿವಾದ ಯಾವ ತಿರುವು ಪಡೆಯುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications