ರಾಜಿ- ಶರಣಾಗತಿ ; ನಿಮಗೆ ನಾಚಿಕೆಯಾಗಲ್ವಾ ? ಪ್ರಧಾನಿ ಮೋದಿ ವಿರುದ್ಧ ಕೆಂಡ ಕಾರಿದ ಕಿಶೋರ್
ಚಿತ್ರರಂಗ ಮತ್ತು ರಾಜಕೀಯ ಎರಡು ಒಂದೇ ನಾಣ್ಯದ ಎರಡು ಮುಖ. ಅಲ್ಲಿದ್ದವರು ಇಲ್ಲಿ ಸಲ್ಲುತ್ತಾರೆ. ಇಲ್ಲಿದ್ದವರು ಅಲ್ಲಿಯೂ ಬೆಳೆಯುತ್ತಾರೆ. ಇದಕ್ಕೆ ಅಣ್ಣಾದೊರೈ, ಕರುಣಾನಿಧಿ, ಜಯಲಲಿತಾ ಅವರನ್ನೊಳಗೊಂಡು ವಿಜಯಕಾಂತ್, ಶರತ್ ಕುಮಾರ್, ಕಮಲ್ ಹಾಸನ್ ವರೆಗೆ ಹತ್ತು ಹಲವು ಉದಾಹರಣೆ ಭಾರತೀಯ ಚಿತ್ರರಂಗದಲ್ಲಿವೆ. ಹಾಗಂಥ ಎಲ್ಲರೂ ಇಲ್ಲಿ ಬಹಿರಂಗವಾಗಿ ಚುನಾವಣೆಯ ಅಖಾಡಕ್ಕೆ ಧುಮುಕುವುದಿಲ್ಲ.
ಬದಲಿಗೆ ಕೆಲವರು ದೂರದಿಂದಲೇ ನಿಂತು ರಾಜಕೀಯ ವ್ಯವಸ್ಥೆಯ ಕುರಿತು ಪ್ರಶ್ನೆ ಮಾಡುತ್ತಾರೆ. ಅನ್ಯಾಯ-ಅಕ್ರಮ- ಭ್ರಷ್ಟಾಚಾರದ ಕುರಿತು ಪ್ರಶ್ನೆ ಮಾಡುತ್ತಾರೆ. ಸರ್ಕಾರದ ಲೋಪ ದೋಷ ಜಗಜ್ಜಾಹೀರಾದಾಗ ಕೆಂಡ ಕಾರುತ್ತಾರೆ. ತಮ್ಮ ರಾಜಕೀಯ ಸಿದ್ಧಾಂತ ಮತ್ತು ನಿಲುವುಗಳನ್ನು ಆಗಾಗ ಮಂಡಿಸುತ್ತಾರೆ. ಉದಾಹರಣೆಗೆ ಕಿಶೋರ್.

ಹೌದು, ಸಾಮಾಜಿಕವಾಗಿ ಅದೇನೇ ನಡೆದರೂ ಅದಕ್ಕೂ ತಮಗೂ ಸಂಬಂಧವಿಲ್ಲ ಎಂದು ಕಾಲ್ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುವ ತಾರೆಯರೇ ಚಿತ್ರರಂಗದಲ್ಲಿ ಹೆಚ್ಚಿದ್ದಾರೆ. ಇಲ್ಲಿ ಹೆಚ್ಚಿನವರಿಗೆ ಸಿನಿಮಾ ಕೂಡಾ ಅನ್ನಿಸಿದ್ದನ್ನು ಹೇಳುವ, ಆ ಮೂಲಕ ಜಾಗೃತಿ ಮೂಡಿಸುವ ಮಾಧ್ಯಮ ಅಂತಲೂ ಅನ್ನಿಸೋದಿಲ್ಲ.
ಆದರೆ ಕನ್ನಡ ಚಿತ್ರರಂಗದ ''ಹುಲಿ'' ಕಿಶೋರ್ ಇದಕ್ಕೆ ತದ್ವಿರುದ್ಧ. ಸಮಾಜದ ಆಗು-ಹೋಗುಗಳ ಬಗ್ಗೆ ಮೊದಲಿಂದ ಧ್ವನಿ ಎತ್ತುತ್ತಾ, ಕಳೆದ ಹತ್ತು-ಹನ್ನೆರಡು ವರ್ಷಗಳಿಂದ ಬಲಪಂಥೀಯವರ ಕೆಂಗಣ್ಣಿಗೆ ಗುರಿಯಾಗ್ತಾನೇ ಬಂದ ಕಿಶೋರ್ ಸದ್ಯ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ಕೆಂಡ ಕಾರಿದ್ದಾರೆ.
ಹೌದು, ಎಲ್ಲರಿಗೆ ಗೊತ್ತಿರುವಂತೆ ಮಧ್ಯಪ್ರಾಚ್ಯದ ಯುದ್ದದಿಂದ ಭಾರತದ ಮೇಲೆ ಪರಿಣಾಮ ಆಗಿದೆ.ಹೊರ್ಮುಜ್ ಜಲಸಂಧಿ ಸ್ಥಗಿತದಿಂದಾಗಿ ಪೆಟ್ರೋಲ್, ಡಿಸೇಲ್, ಅನಿಲ ಹಾಗೂ ರಾಸಯನಿಕ ಗೊಬ್ಬರಗಳಂತಹ ಅಗತ್ಯವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವುಂಟಾಗುತ್ತಿದೆ.
ಈ ಹಿನ್ನೆಲೆ ಒಂದು ರಾಷ್ಟ್ರದಂತೆ ಈ ಯುದ್ಧ ಅನಿಶ್ಚಿತ ಪರಿಸ್ಥಿತಿಯನ್ನು ನಾವು ಎದುರಿಸಬೇಕಾಗಿದೆ. ಕೋವಿಡ್ ಸಂದರ್ಭದಲ್ಲಿ ಒಂದಾದಂತೆ ಈಗಲೂ ಮಧ್ಯಪ್ರಾಚ್ಯದ ಸಂಕಷ್ಟದ ಈ ಸವಾಲನ್ನು ಸಹ ಎದುರಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಮೋದಿ ಅವರ ಈ ಹೇಳಿಕೆ ಕುರಿತು ಕಿಶೋರ್ ತಮ್ಮ ಆಕ್ರೋಶ ಹೊರ ಹಾಕಿದ್ಧಾರೆ. ನಿಮಗೆ ನಾಚಿಕೆ ಎನ್ನುವುದು ಇದೆಯಾ..? ಎಂದು ಪ್ರಶ್ನೆ ಮಾಡಿದ್ಧಾರೆ. ಹಾಗಿದ್ದರೆ ಕಿಶೋರ್ ಹೇಳಿದ್ದೇನು..? ಎಂದು ತಿಳಿಯಲು ಮುಂದೆ ಓದಿ.

ಕಿಶೋರ್ ಬರಹ
ಒಟ್ಟಿಗೆ!!!! ಒಂದು ರಾಷ್ಟ್ರದಂತೆ!!!!??? ನಮ್ಮನ್ನು ದ್ವೇಷದ ವಿಷ ಕಾರಿ, ಹಿಂದೂ ಮುಸ್ಲಿಂ ಕ್ರಿಶ್ಚಿಯನ್ನರೆಂದು ಇನ್ನೆಂದೂ ಒಂದಾಗಲು ಸಾಧ್ಯವೇ ಇಲ್ಲದಂತೆ ಒಡೆದ ನಂತರ?? ನಿಮಗೆ ನಾಚಿಕೆಯೆಂಬುದೇನಾದರೂ ಇದೆಯೇ???
ಇಲ್ಲ! ನಾವು ಭಾರತದ ಜನ ತಯಾರಿಲ್ಲ... ನಿಮ್ಮ ರಾಜಿ, ಶರಣಾಗತಿಯಿಂದಾಗಿ ನಾವು ಇನ್ನೂ ಎಷ್ಟು ಸವಾಲುಗಳನ್ನು ಎದುರಿಸಬೇಕು??? ನಿಮ್ಮ ತಪ್ಪುಗಳು, ರಹಸ್ಯಗಳನ್ನು ಮುಚ್ಚಿಡಲು ನಾವಿನ್ನೆಷ್ಟು ಬೆಲೆ ತೆರಬೇಕು??? ಸಾಮೂಹಿಕ ಕೊಲೆಗಾರರು ಮತ್ತು ಶಿಶುಕಾಮಿಗಳನ್ನು ಅಪ್ಪಿಕೊಂಡು "ನಾವು ಯುದ್ಧ ಅಪರಾಧಿಗಳ ಜೊತೆ ನಿಲ್ಲುತ್ತೇವೆ" ಎಂದು ಘೋಷಿಸುವ ಮೊದಲು ನೀವು ನಮ್ಮನ್ನು ಕೇಳಿದ್ದಿರಾ???
ರಫೇಲ್‌ನಿಂದ ಎಪ್ಸ್ಟೀನ್‌ವರೆಗೆ, ನೋಟು ರದ್ದತಿಯಿಂದ ಕೊರೊನಾ ಲಾಕ್‌ಡೌನ್‌ವರೆಗೆ, ಕೃಷಿ ಕಾನೂನುಗಳಿಂದ ಅಗ್ನಿವೀರ್‌ವರೆಗೆ, ಮಣಿಪುರದಿಂದ ಕಾಶ್ಮೀರ, ಲಡಾಖ್ ನವರೆಗೆ ನಿಮ್ಮ ಯಾವುದೇ ಉನ್ಮಾದ ಭರಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ನಮ್ಮನ್ನೋ ಅಥವಾ ವಿರೋಧ ಪಕ್ಷದ ನಮ್ಮ ಪ್ರತಿನಿಧಿಗಳನ್ನೋ ಅಥವಾ ನಮ್ಮ ತೆರಿಗೆಯಿಂದ ನಾವು ಸಂಬಳ ಕೊಟ್ಟಿಟ್ಟಿರುವ ನಿಮ್ಮ ಸ್ವಂತ ಅಧಿಕಾರಿಗಳನ್ನೋ ಕೇಳಿದ್ದಿರಾ??
ನಿಮ್ಮ ರಾಜಿ, ಸರೆಂಡರ್ ಮತ್ತು ಮೂರ್ಖತನದ ಪರಿಣಾಮವಾಗಿ ಬಂದ ಸವಾಲುಗಳನ್ನು ಎದುರಿಸಲು ಈಗ ನಮ್ಮನ್ನು ಕೇಳಲು ನಿಮಗೆ ಯಾವ ಹಕ್ಕಿದೆ???.
ಇನ್ನು ಸಾಕು.. ಕೊರೊನಾ ಸಮಯದಲ್ಲಿ ಮಾಡಿದ ರೀತಿ ಕುರಿಗಳ ಹಿಂಡಿನಂತೆ ಸಾಯಲು ನಾವು ಸಿದ್ಧರಿಲ್ಲ. ಸತ್ತ 50 ಲಕ್ಷ ಜನರನ್ನು ನಿಮ್ಮ ಕಡತಗಳಲ್ಲಿ ಸತ್ತವರೆಂದು ಪರಿಗಣಿಸಲೂ ಯೋಗ್ಯರಲ್ಲದಂತೆ ಮಾಡಿದಿರಲ್ಲ..ದೇಶದ ಅತ್ಯುನ್ನತ ಸ್ಥಾನವನ್ನು ನಗೆಪಾಟಲಾಗಿಸಿದ. ಸರ್ವಾಧಿಕಾರದ ಮತ್ತಿನ ನಿಮ್ಮ ನಾನ್-ಬಯಲಾಜಿಕಲ್ ಹುಚ್ಚುತನಕ್ಕೆ ಪದವಿ ಬಿಟ್ಟು ಹೊರಡುವ ಸಮಯ ಬಂದಿದೆ..
ಎಂದಿನಂತೆ ಕಿಶೋರ್ ಅವರ ಈ ಅಭಿಪ್ರಾಯದ ಕುರಿತು ಪರ ವಿರೋಧದ ಚರ್ಚೆ ನಡೆಯುತ್ತಿದೆ. ಕೆಲವರು ಕಿಶೋರ್ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ಧಾರೆ. ಇನ್ನು ಕೆಲವರು ಕಿಶೋರ್ ಅವರ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.


Click it and Unblock the Notifications











