ಬೆಳ್ಳಿತೆರೆಯಲ್ಲಿ ಮೂಡಲಿದೆ ಜೆಡಿಎಸ್ 'ದಳಪತಿ'ಯ T20 ಆಡಳಿತ
ಸಿನಿಮಾ ಕಲಾವಿದರು, ಕ್ರೀಡಾಪಟುಗಳು, ಸ್ವತಂತ್ರ ಹೋರಾಟಗಾರರ ಕುರಿತು ಹಲವು ಚಿತ್ರಗಳು ತೆರೆಮೇಲೆ ಬಂದಿವೆ. ಈಗ ಕರ್ನಾಟಕದ ಜನಪ್ರಿಯ ರಾಜಕಾರಣಿಯೊಬ್ಬರ ಕುರಿತು ಸಿನಿಮಾವಾಗ್ತಿದೆ.
ಹೌದು, ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾಗಿದ್ದ ಹೆಚ್.ಡಿ ಕುಮಾರಸ್ವಾಮಿ ಅವರ ಸಿನಿಮಾ ಈಗ ಸ್ಯಾಂಡಲ್ ವುಡ್ ಬೆಳ್ಳಿತೆರೆಯ ಮೇಲೆ ಮೂಡಿಬರುತ್ತಿದೆ. ಹೌದು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ T-20 ಆಡಳಿತದ ಸುತ್ತ ಸಿನಿಮಾ ತಯಾರಾಗ್ತಿದೆ.
ಈ ಚಿತ್ರಕ್ಕೆ ಕನ್ನಡ ಸ್ಟಾರ್ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿದ್ದು, ದಕ್ಷಿಣ ಭಾರತದ ಜನಪ್ರಿಯ ನಟ ಕುಮಾರಸ್ವಾಮಿ ಅವರ ಪಾತ್ರವನ್ನ ನಿರ್ವಹಿಸಲಿದ್ದಾರೆ. ಅಷ್ಟಕ್ಕೂ, ಈ ಚಿತ್ರದ ನಿರ್ದೇಶಕ ಯಾರು? ನಾಯಕ ನಟ ಯಾರು? ಟೈಟಲ್ ಏನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ......

T20 ಆಡಳಿತದ ಸುತ್ತಾ ಕಥೆ!
ಹೆಚ್.ಡಿ ಕುಮಾರಸ್ವಾಮಿ ಅವರು 20 ತಿಂಗಳ ಮುಖ್ಯಮಂತ್ರಿ ಆಗಿದ್ದ ಸಮಯವನ್ನೇ ಕಥಾವಸ್ತುವಾಗಿ ಇರಿಸಿಕೊಂಡು ಈ ಸಿನಿಮಾ ತಯಾರಾಗ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಕಾಲಾವಧಿಯಲ್ಲಿ ನಡೆದ T20 ಆಡಳಿತವೇ ಮುಖ್ಯಕಥೆಯಾಗಿದ್ದು, ಹೆಚ್.ಡಿ ಕುಮಾರಸ್ವಾಮಿ ಅವರ ನಾಯಕತ್ವ ಬಗ್ಗೆ ಈ ಸಿನಿಮಾ ಮೂಡಿಬರಲಿದೆ.

ಎಸ್.ನಾರಾಯಣ್ ನಿರ್ದೇಶನ
ಕಲಾ ಸಾಮ್ರಾಟ್ ಎಸ್.ನಾರಾಯಣ್ ಈ ಚಿತ್ರಕ್ಕೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಅವರ ನಿರ್ಮಾಣದ ಚಿತ್ರಗಳಿಗೆ ಆಕ್ಷನ್ ಕಟ್ ಹೇಳುತ್ತಿದ್ದ ಎಸ್.ನಾರಾಯಣ್ ಈಗ ಅವರದ್ದೇ ಆಡಳಿತವನ್ನ ತೆರೆಮೇಲೆ ತರಲು ಮುಂದಾಗಿದ್ದಾರೆ.

ನಾಯಕ ಯಾರು?
ಮೂಲಗಳ ಪ್ರಕಾರ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ತೆರೆಮೇಲೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಪಾತ್ರವನ್ನ ನಿರ್ವಹಿಸಲಿದ್ದಾರಂತೆ.

ಚಿತ್ರದ ಟೈಟಲ್?
ಈಗಾಗಲೇ ಈ ಚಿತ್ರಕ್ಕೆ ಟೈಟಲ್ ಕೂಡ ಫಿಕ್ಸ್ ಆಗಿದ್ದು, ಈ ನಿರೀಕ್ಷೆಯ ಚಿತ್ರಕ್ಕೆ 'ಭೂಮಿಪುತ್ರ' ಎಂಬ ಶೀರ್ಷಿಕೆಯನ್ನ ಇಡಲಾಗಿದೆಯಂತೆ.

123 ಪಾತ್ರಗಳು!
T20 ಆಡಳಿತ ಕಥೆ ಎಂದ ಮೇಲೆ ಕುಮಾರಸ್ವಾಮಿ ಅವರ ಜೊತೆ ಘಟಾನುಘಟಿ ರಾಜಕಾರಣಿಗಳು ಬರುತ್ತಾರೆ. ಯಡಿಯೂರಪ್ಪ, ಹೆಚ್.ಡಿ.ದೇವೇಗೌಡ,ಸೇರಿದಂತೆ ಬಹುತೇಕರ ಪಾತ್ರಗಳು ಇಲ್ಲಿ ಬರಲಿವೆಯಂತೆ. ಹೀಗಾಗಿ ಸುಮಾರು 123 ಪಾತ್ರಗಳು ಪ್ರಧಾನವಾಗಿರಲಿದೆಯಂತೆ

ಮೇ 8ಕ್ಕೆ ಚಾಲನೆ!
ಅಂದ್ಹಾಗೆ, ಮೇ 8 ರಂದು 'ಭೂಮಿಪುತ್ರ' ಚಿತ್ರಕ್ಕೆ ಚಾಲನೆ ದೊರೆಯಲಿದ್ದು, ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಚಿತ್ರದ ಮುಹೂರ್ತ ನಡೆಯಲಿದೆ. ಈ ಮುಹೂರ್ತ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಮುಂತಾದವರು ಭಾಗಿಯಾಗಲಿದ್ದಾರೆ.

ಪ್ರಭು ಕುಮಾರನ್ ನಿರ್ಮಾಪಕ
ಇನ್ನು ಈ ಚಿತ್ರವನ್ನ ಪ್ರಭು ಕುಮಾರ್ ಎಂಬುವವರು ನಿರ್ಮಾಣ ಮಾಡುತ್ತಿದ್ದು, ಕನ್ನಡ ಖ್ಯಾತ ಕಲಾವಿದರು ಚಿತ್ರದಲ್ಲಿ ಅಭಿನಯಿಸದ್ದಾರಂತೆ. ಎಲ್ಲ ಅಂದುಕೊಂಡಂತೆ ಆದರೇ, ಡಿಸೆಂಬರ್ ಹೊತ್ತಿಗೆ ಸಿನಿಮಾ ತೆರೆಮೇಲೆ ತರುವ ತಯಾರಿಯಲ್ಲಿದ್ದಾರಂತೆ.


Click it and Unblock the Notifications











