ಮಗನ ಸಿನಿಮಾ 'ರೈಡರ್' ಬಗ್ಗೆ ಕುಮಾರಸ್ವಾಮಿ ಮಾತು
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ಅವರ 'ರೈಡರ್' ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.
Recommended Video
ಬಿಡದಿ ಪಟ್ಟಣ ಪಂಚಾಯತಿ ಚುನಾವಣೆ ಸಂಬಂಧ ಇಂದು ಭೈರವನ ದೊಡ್ಡಿ (ವಾರ್ಡ್ ನಂಬರ್ 18)ಯಲ್ಲಿ ಪ್ರಚಾರ ಮಾಡುವ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ''ನಿಖಿಲ್ ಕುಮಾರಸ್ವಾಮಿ ಅವರು ನಟಿಸಿರುವ ರೈಡರ್ ಸಿನಿಮಾ ಚೆನ್ನಾಗಿ ಬಂದಿದೆ ಎನ್ನುವ ವರದಿ ಬಂದಿದೆ'' ಎಂದಿದ್ದಾರೆ.
''ನಿಖಿಲ್ ನಟರಾಗಿ ವೃತ್ತಿ ಪ್ರಾರಂಭಿಸಿದ್ದಾರೆ. ಈಗಾಗಲೇ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. ನಮ್ಮ ಕುಟುಂಬದಲ್ಲಿ ಯಾರು ಕಲಾವಿದರಿರಲಿಲ್ಲ. ದೈವ ಕೃಪೆಯಿಂದ ಅವರು ನಟರಾಗಿದ್ದಾರೆ. ಅವರು ಕಲಾವಿದರಾಗಿಯೂ ಮುಂದುವರಿಯಲಿ ಎಂಬುದು ನನ್ನ ಅಭಿಪ್ರಾಯ'' ಎಂದು ಇದೇ ವೇಳೆ ಅವರು ತಿಳಿಸಿದರು.

ನಿಖಿಲ್ ಕುಮಾರಸ್ವಾಮಿ ನಟಿಸಿದ ಮೊದಲ ಸಿನಿಮಾ 'ಜಾಗ್ವಾರ್' ಹಾಗೂ ಎರಡನೇ ಸಿನಿಮಾ 'ಸೀತಾರಾಮ ಕಲ್ಯಾಣ' ಅನ್ನು ಕುಮಾರಸ್ವಾಮಿಯವರೇ ತಮ್ಮ ಚೆನ್ನಾಂಬಿಕ ಪ್ರೊಡಕ್ಷನ್ ಹೌಸ್‌ನಿಂದ ನಿರ್ಮಾಣ ಮಾಡಿದ್ದರು. ಸಿನಿಮಾ ನಿರ್ಮಾಣ ಕುಮಾರಸ್ವಾಮಿ ಅವರಿಗೆ ಹೊಸದೇನೂ ಅಲ್ಲ. ಸಕ್ರಿಯ ರಾಜಕೀಯಕ್ಕೆ ಬರುವ ಮುನ್ನ ಕುಮಾರಸ್ವಾಮಿವರು ಸಿನಿಮಾ ವಿತರಣೆ, ನಿರ್ಮಾಣ ಮಾಡಿದ್ದರು. ವಿಷ್ಣುವರ್ಧನ್ ನಟನೆಯ 'ಸೂರ್ಯವಂಶ' ಸೇರಿದಂತೆ ಕೆಲವು ಒಳ್ಳೆಯ ಸಿನಿಮಾಗಳನ್ನು ಕುಮಾರಸ್ವಾಮಿ ನೀಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ನಟಿಸಿರುವ 'ರೈಡರ್' ಸಿನಿಮಾ ಇಂದು ಬಿಡುಗಡೆ ಆಗಿದೆ. ವಿಜಯ್ ಕುಮಾರ್ ಕೊಂಡ ನಿರ್ದೇಶಿಸಿರುವ ಈ ಸಿನಿಮಾದ ಬಗ್ಗೆ ಧನಾತ್ಮಕ ವಿಮರ್ಶೆಗಳು ಕೇಳಿ ಬಂದಿದ್ದು, ಸಿನಿಮಾ ಚೆನ್ನಾಗಿದೆ ಎನ್ನಲಾಗುತ್ತಿದೆ. ಮೊದಲ ದಿನ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾದಲ್ಲಿ ಕಶ್ಮೀರ ಪರದೇಶಿ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ಅಚ್ಯುತ್ ಕುಮಾರ್, ಚಿಕ್ಕಣ್ಣ ಇದ್ದಾರೆ. ವಿಲನ್ ಆಗಿ ಗರುಡ ರಾಮ್ ಇದ್ದಾರೆ. ಸಿನಿಮಾವನ್ನು ಲಹರಿ ಸಂಸ್ಥೆ ನಿರ್ಮಾಣ ಮಾಡಿದೆ.
ಈ ಸಿನಿಮಾದ ಬಳಿಕ ಇನ್ನೆರಡು ಸಿನಿಮಾಗಳಲ್ಲಿ ನಿಖಿಲ್ ನಟಿಸಲಿದ್ದಾರೆ. ಅವುಗಳಲ್ಲಿ ಒಂದು ಸಿನಿಮಾವನ್ನು ನಂದ ಕಿಶೋರ್ ನಿರ್ದೇಶನ ಮಾಡಲಿದ್ದು, ಆ ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್ ಸಹ ನಟಿಸಲಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications











