ಮತ್ತೆ ಜೈಲು ಪಾಲಾದ ದರ್ಶನ್, ವಿಜಯಲಕ್ಷ್ಮಿ ಹೃದಯ ನುಚ್ಚುನೂರು
ದಾಂಪತ್ಯದಲ್ಲಿ ಚಿಕ್ಕ-ಚಿಕ್ಕ ವಿರಸಗಳು ಸಾಂಗತ್ಯದ ಅರ್ಥವನ್ನು ಗಟ್ಟಿ ಮಾಡುತ್ತವೆ. ಇಬ್ಬರ ನಡುವಿನ ಹೊಂದಾಣಿಕೆಯನ್ನು ಹೆಚ್ಚಿಸುತ್ತವೆ. ಇಬ್ಬರ ನಡುವೆ ಇರುವ ತಪ್ಪು ಅಭಿಪ್ರಾಯಗಳನ್ನು-ಗ್ರಹಿಕೆಗಳನ್ನು ಸರಿಪಡಿಸಿಕೊಂಡು ಹೋಗುವುದರಲ್ಲಿಯೇ ದಾಂಪತ್ಯದ ಅರ್ಥ ಅಡಗಿದೆ ಎನ್ನುವುದಕ್ಕೆ ಜ್ವಲಂತ ಉದಾಹರಣೆಯಂತೆ ಇರುವವರು ದರ್ಶನ್ ಮತ್ತು ವಿಜಯಲಕ್ಷ್ಮಿ. ಒಮ್ಮೆ ಬೈದಾಡಿಕೊಂಡು ಆ ನಂತರ ಮತ್ತೆ ಒಂದಾಗಿ ಇನ್ಯಾವತ್ತೋ ಇನ್ಯಾವುದೋ ಕಾರಣಕ್ಕೆ ಮುನಿಸಿಕೊಳ್ಳುತ್ತಾ ಮತ್ತೆ ಒಂದಾಗುತ್ತಾನೇ...
ದರ್ಶನ್ ಜೊತೆ 22 ವರ್ಷ ಕಳೆದ ವಿಜಯಲಕ್ಷ್ಮಿ ಕಳೆದ ವರ್ಷ ತಮ್ಮ ಗಂಡನನ್ನು ಜೈಲಿಂದ ಹೊರ ತರಲು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ದರ್ಶನ್ ಜೈಲು ಪಾಲಾದ ಕ್ಷಣದಿಂದ ಹಿಡಿದು ಹೊರ ಬರುವ ತನಕ ವಿರಮಿಸದ ವಿಜಯಲಕ್ಷ್ಮಿ ಕೊಲ್ಲೂರಿಂದ ಹಿಡಿದು ಅಸ್ಸಾಂನ ಕಾಮಾಕ್ಯ ದೇವಸ್ಥಾನದವರೆಗೆ ಸುತ್ತಾಡಿದರು. ಪ್ರಾರ್ಥನೆ ಸಲ್ಲಿಸಿದರು. ಹರಕೆಯನ್ನು ಹೊತ್ತರು. ವಿಜಯಲಕ್ಷ್ಮಿ ಅವರ ಈ ಪ್ರಾರ್ಥನೆಯ ಫಲ ಎಂಬಂತೆ ದರ್ಶನ್ ಜೈಲಿಂದ ಹೊರ ಬಂದರು ಕೂಡ.

ಆ ನಂತರ ದರ್ಶನ್ ಜೈಲಿಂದ ಹೊರ ಬರುತ್ತಿದ್ದಂತೆಯೇ ಸಂಕಷ್ಟಗಳಿಂದ ಪಾರು ಮಾಡುವಂತೆ ಕೇರಳದ ಕಣ್ಣೂರಿನಲ್ಲಿರುವ ಮಾಡಾಯಿಕಾವು ಶ್ರೀಭಗವತೀ ದೇವಸ್ಥಾನಕ್ಕೆ ಕೂಡ ಹೋದ ವಿಜಯಲಕ್ಷ್ಮಿ ಶತ್ರು ಸಂಹಾರ ಪೂಜೆಯನ್ನು ಕೂಡ ಮಾಡಿಸಿದರು. ಮೈಸೂರಿಗೆ ತೆರಳಿ ಚಾಮುಂಡಿ ಬೆಟ್ಟದಲ್ಲಿ ಹರಿಕೆಯನ್ನು ತೀರಿಸಿದ್ದರು. ಕಾಮಾಕ್ಯ ದೇವಸ್ಥಾನಕ್ಕೆ ಕೂಡ ತೆರಳಿ ಹರಕೆ ತೀರಿಸಿದರು.
ದರ್ಶನ್ ಇನ್ನು ಮತ್ತೆ ಜೈಲಿಗೆ ಹೋಗಲಾರರು ಎನ್ನುವ ನಂಬಿಕೆ ಸಹಜವಾಗಿ ವಿಜಯಲಕ್ಷ್ಮಿ ಅವರಲ್ಲಿತ್ತು. ಹೀಗಾಗಿಯೇ ಪತಿಯ ಜೊತೆ ನೆಮ್ಮದಿಯಿಂದ ವಿಜಯಲಕ್ಷ್ಮಿ ದರ್ಶನ್ ಇದ್ದರು. ಸಂಭ್ರಮದಿಂದ ಹಬ್ಬ ಹರಿದಿನಗಳನ್ನು ಆಚರಿಸಿದರು. ನೆರಳಿನಂತೆ ತಮ್ಮ ಪತಿಯನ್ನು ಹಿಂಬಾಲಿಸಿದರು.
ಆದರೆ ಈಗ ವಿಜಯಲಕ್ಷ್ಮಿ ನೆಮ್ಮದಿಗೆ ಮತ್ತೊಮ್ಮೆ ಬೆಂಕಿ ಬಿದ್ದಿದೆ. ದರ್ಶನ್ ಮತ್ತೆ ಜೈಲು ಪಾಲಾಗಿದ್ದಾರೆ. ಈ ಹಿನ್ನೆಲೆ ವಿಜಯಲಕ್ಷ್ಮಿ ಹೃದಯ ನುಚ್ಚು ನೂರಾಗಿದೆ. ತಮ್ಮ ಈ ನೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೂಡ ಹಂಚಿಕೊಂಡಿರುವ ವಿಜಯಲಕ್ಷ್ಮಿ ಏಕಾಂಗಿಯಾಗಿ ದರ್ಶನ್ ನಿಂತುಕೊಂಡಿರುವ ಫೋಟೋ ಶೇರ್ ಮಾಡಿದ್ದಾರೆ. ಕ್ಯಾಪ್ಶನ್ನಲ್ಲಿ ಒಡೆದ ಹೃದಯ ಸಿಂಬಲ್ ಹಾಕಿಕೊಂಡಿದ್ದಾರೆ.
ವಿಜಯಲಕ್ಷ್ಮಿ ದರ್ಶನ್ ಅವರ ಈ ಪೋಸ್ಟ್‌ಗೆ ಸದ್ಯ ಹಲವಾರು ಅಭಿಮಾನಿಗಳು ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಧೈರ್ಯವಾಗಿರಿ ಅತ್ತಿಗೆ ನಿಮ್ಮ ಜೊತೆ ನಾವು ಇದ್ದೇವೆ ಎನ್ನುತ್ತಿದ್ದಾರೆ. ಒಳ್ಳೆಯತನಕ್ಕೆ ಪರೀಕ್ಷೆಗಳು ಜಾಸ್ತಿ ಅತ್ತಿಗೆ ಎಂದು ಹೇಳುತ್ತಿದ್ದಾರೆ. ಕುಗ್ಗದೀರಿ ಅತ್ತಿಗೆ ನಿಮ್ಮೊಂದಿಗೆ ಎಂದಿನಂತೆ ಅಭಿಮಾನಿಗಳ ಸಮೂಹ ಇದೆ, ನಿಮ್ಮಗಿರುವ ಒಳ್ಳೆಯ ಮನಸ್ಸಿಗೆ ಆದಷ್ಟೂ ಬೇಗ ಒಳ್ಳೆಯದಿನಗಳು ಬರಲಿವೆ ಕಾಯೋಣ ಎಂದು ಹೇಳುವ ಮೂಲಕ ಧೈರ್ಯವನ್ನು ಕೂಡ ತುಂಬುತ್ತಿದ್ದಾರೆ. ಕತ್ತಲು ಬಂದಮೇಲೆ ಬೆಳಕು ಬಂದೆ ಬರುತ್ತದೆ..ನಿಮ್ಮೊಂದಿಗೆ ಸದಾ ಈ ಬಾಸ್ ಅಭಿಮಾನಿಗಳು ಇರುತ್ತವೆ.. ಕಾಲಯ ತಸ್ಮಯ ನಮಃ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನುಳಿದಂತೆ ಕಳೆದ ವರ್ಷ ಇದೇ ಸಮಯದಲ್ಲಿ ದರ್ಶನ್ ಜೈಲು ಪಾಲಾದಾಗ ಅಭಿಮಾನಿಗಳಿಗೆ ವಿಶೇಷವಾದ ಸಂದೇಶವನ್ನು ನೀಡಿದ್ದ ವಿಜಯಲಕ್ಷ್ಮಿ ನನಗೆ, ನಿಮಗೆ, ನಮ್ಮೆಲ್ಲರಿಗೆ ಇದೊಂದು ಪರೀಕ್ಷೆಯ ಸಮಯ. ತಾಳ್ಮೆ ಕಳೆದುಕೊಂಡು ಮಾತನಾಡುವುದರಿಂದ ನಮಗೆ ಹಾನಿಯಾಗುತ್ತೆ ಎಂದು ಹೇಳಿದ್ದರು. ನಾವೆಲ್ಲರೂ ತಾಳ್ಮೆ ಮತ್ತು ಶಾಂತಿಯಿಂದ ಇರೋಣ ಎಂದು ಅಭಿಮಾನಿಗಳಿಗೆ ಹೇಳಿದ್ದರು. ನಿಮ್ಮೆಲ್ಲರ ಆತಂಕವನ್ನು ನಾನು ದರ್ಶನ್ ಅವರಿಗೆ ಹೇಳಿದ್ದೇನೆ ಅವರು ನಿಮ್ಮ ಪ್ರತಿ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದ ವಿಜಯಲಕ್ಷ್ಮಿ ನಾವು ನಮ್ಮ ನ್ಯಾಯಾಲಯಗಳ ಮೇಲೆ ವಿಶ್ವಾಸವಿಡೋಣ, ನ್ಯಾಯ ಸಿಗುವ ಸಂಪೂರ್ಣ ಭರವಸೆ ನನಗೆ ಇದೆ ಎಂದು ಕೂಡ ಹೇಳಿದ್ದರು.ಆದರೆ ಈಗ ವಿಜಯಲಕ್ಷ್ಮಿ ಅವರೇ ಕುಗ್ಗಿ ಹೋದಂತೆ ಇದೆ.


Click it and Unblock the Notifications











