ನನ್ನ ಅಣ್ಣ ದರ್ಶನ್‌ನ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ, ಪ್ರಜ್ವಲ್ ದೇವರಾಜ್ ಭಾವುಕ
ದರ್ಶನ್ ಕೇವಲ ನೇರಾ ನೇರ ನಡುವಳಿಕೆಗೆ ಹೆಸರಾದವರಲ್ಲ. ಬದಲಿಗೆ ನೇರವಂತಿಕೆಯ ಜೊತೆಗೆ ಹೃದಯವಂತಿಕೆ ಕೂಡಾ ಅವರ ವ್ಯಕ್ತಿತ್ವದ ಟ್ರೇಡ್‌ಮಾರ್ಕ್. ತಾನು ಬೆಳೆಯುತ್ತಲೇ ಇತರರನ್ನೂ ಬೆಳೆಸಬೇಕೆಂಬ ಇರಾದೆ ದರ್ಶನ್ ಅವರದ್ದು. ಇದಕ್ಕೆ ಕೈಗನ್ನಡಿ ಎಂಬಂತೆ ಕನ್ನಡ ಚಿತ್ರರಂಗದ ಹಲವಾರು ತಾರೆಯರ ಚಿತ್ರಗಳಿಗೆ ಈ ಹಿಂದೆ ಬೆನ್ನೆಲುಬಾಗಿದ್ದರು. ತಮ್ಮ ಚಿತ್ರಕ್ಕೂ ಕೊಡದ ಮಹತ್ವವನ್ನು ಬೇರೆಯವರ ಚಿತ್ರಕ್ಕೆ ನೀಡಿ ಆ ಚಿತ್ರದ ಪ್ರಚಾರವನ್ನು ಕಾಯಾ ವಾಚಾ ಮನಸಿಂದ ಮಾಡಿದ್ದರು.
ಆದರೆ, ದುರ್ದೈವ ಇದೇ ಸಮಯದಲ್ಲಿ ಅಪವಿತ್ರ ಸಂಬಂಧಕ್ಕೆ ದರ್ಶನ್ ಹಾತೊರೆದರು. ಸಹವಾಸ ದೋಷದಿಂದ ತಮ್ಮ ಇಮೇಜ್‌ನ ತಾವೇ ಡ್ಯಾಮೇಜ್ ಮಾಡಿಕೊಂಡರು. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡರು. ಒಂದು ವರ್ಷದ ಹಿಂದೆಯೂ ಸೆರೆವಾಸ ಅನುಭವಿಸಿದರು. ಈಗಲೂ ಮತ್ತೆ ಜೈಲು ಪಾಲಾದರು.

ಇನ್ನು ಕಳೆದ ವರ್ಷ ದರ್ಶನ್ ಜೈಲು ಪಾಲಾದಾಗ ದರ್ಶನ್ ಅವರ ನಿಜವಾದ ಅಭಿಮಾನಿಗಳು ಮಮ್ಮಲ ಮರುಗಿದ್ದರು. ಈ ಕ್ಷಣಕ್ಕೂ ಮರುಗುತ್ತಿದ್ದಾರೆ. ಸಮಾಜಕ್ಕೆ ಉತ್ತಮವಾದ ಸಂದೇಶ ನೀಡಬೇಕಿದ್ದ ನಮ್ಮ ಹೀರೋ ಹೀಗೆ ದುಷ್ಕೃತ್ಯದ ಪಾಲುದಾರರಾಗಿ ಜೈಲು ಸೇರಿದರಲ್ಲ ಅಂಥಾ ಅಕ್ಷರಶಃ ಕೊರಗುತ್ತಿದ್ದಾರೆ.
ಆದರೆ ಇದೇ ಸಮಯದಲ್ಲಿ ಕನ್ನಡ ಚಿತ್ರರಂಗದ ಹಲವರು, ಅದರಲ್ಲಿಯೂ ಒಂದು ಕಾಲದಲ್ಲಿ ದರ್ಶನ್ ಅವರ ಸಹಾಯ ಪಡೆದವರು ಮೌನಕ್ಕೆ ಶರಣಾಗಿದ್ದಾರೆ. ಮೌನಕ್ಕೆ ಶರಣಾಗಿದ್ದಾರೆ ಎನ್ನುವುದಕ್ಕಿಂತ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ಯಾರ ಪರ ವಹಿಸಬೇಕು, ಯಾರ ವಿರುದ್ಧ ಮಾತನಾಡಬೇಕು ಎನ್ನುವುದು ಗೊತ್ತಾಗದೇ ಗೊಂದಲಕ್ಕೀಡಾಗಿದ್ದಾರೆ. ಮಾಧ್ಯಮದವರು ಎಲ್ಲಿ ಈ ಕುರಿತು ಪ್ರಶ್ನೆ ಕೇಳುತ್ತಾರೆ ಎನ್ನುವ ಭಯದಲ್ಲಿ ಹಲವರು ಕ್ಯಾಮರಾಗಳನ್ನು ಅವಾಯ್ಡ್ ಮಾಡುತ್ತಾ ಓಡಾಡುತ್ತಿದ್ದಾರೆ.

ಹೀಗಿರುವಾಗ ಇದೀಗ ದರ್ಶನ್ ಕುರಿತು ಪ್ರಜ್ವಲ್ ದೇವರಾಜ್ ಮಾತನಾಡಿದ್ದಾರೆ. ಮಾತನಾಡುತ್ತಾ ಭಾವುಕರಾಗಿದ್ದಾರೆ. ಈ ಕುರಿತು ''FDFC ಕನ್ನಡ'' ಯೂಟ್ಯೂಬ್ ಚಾನೆಲ್‌ಗೆ ಪ್ರತಿಕ್ರಿಯೆಯನ್ನು ನೀಡಿರುವ ಪ್ರಜ್ವಲ್, ಸಾಮಾನ್ಯವಾಗಿ ನಮ್ಮ ನಡುವೆ ಇರುವ ಯಾರಾದರೂ ಸ್ನೇಹಿತನಿಗೆ ತೊಂದರೆಯಾದರೆ ನಮಗೆ ನೋವಾಗುತ್ತೆ, ಹೀಗಿರುವಾಗ ದರ್ಶನ್ ನನ್ನ ಪಾಲಿಗೆ ಅಣ್ಣ ಇದ್ದಂತೆ ಅವರ ಜೊತೆ ತುಂಬಾ ಸಮಯ ಕಳೆದಿದ್ದೇನೆ ಎಂದು ಹೇಳಿದ್ದಾರೆ. ನಮ್ಮ ಮನೆತನಕ್ಕೆ ದರ್ಶನ್ ಅಣ್ಣ ಎಷ್ಟು ಹತ್ತಿರವಾಗಿದ್ದವರು ಎನ್ನುವುದು ಎಲ್ಲರಿಗೆ ಗೊತ್ತಿರುವ ವಿಚಾರ ಎಂದು ಹೇಳಿದ್ದಾರೆ.
ಇನ್ನೂ ಇದೇ ಸಮಯದಲ್ಲಿ ಕಳೆದ ಬಾರಿ ಜೈಲಿಂದ ಹೊರ ಬಂದ ನಂತರ ಕೂಡ ನನಗೆ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ, ಅವರನ್ನು ನೋಡುವುದಕ್ಕೆ ಆಗಲಿಲ್ಲ, ಇದು ತುಂಬಾ ದುಃಖದ ವಿಚಾರ ಎಂದು ಹೇಳಿರುವ ಪ್ರಜ್ವಲ್ ಈ ಹಿಂದೆ ನಾನು ಸಾಕಷ್ಟು ಪ್ರಯತ್ನ ಮಾಡಿದೆ ಆದರೆ ದುರಾದೃಷ್ಟ ಆ ಪ್ರಯತ್ನಕ್ಕೆ ಫಲ ಸಿಗಲೇ ಇಲ್ಲ ಎಂದು ಹೇಳಿದ್ದಾರೆ. ಈ ವಿಚಾರ ನೆನೆದಾಗೆಲ್ಲಾ ಖಿನ್ನತೆ ನನಗೆ ಕಾಡುತ್ತೆ ಎಂದು ಹೇಳಿದ್ದಾರೆ. ಮತ್ತೆ ಅವರು ಜೈಲಿಗೆ ಹೋಗಿದ್ದು ನನಗೆ ತುಂಬಾ ನೋವಾಗಿದೆ ಎಂದು ಕೂಡ ಹೇಳಿದ್ದಾರೆ.
ಕೇವಲ ದರ್ಶನ್ ಬಗ್ಗೆ ಮಾತ್ರ ಮಾತನಾಡದ ಪ್ರಜ್ವಲ್ ದೇವರಾಜ್ , ವಿಜಯಲಕ್ಷ್ಮಿ ಧೈರ್ಯ ಮತ್ತು ಅವರ ಹೋರಾಟದ ಕುರಿತು ಕೂಡ ಮಾತನಾಡಿದ್ದು, ವಿಜಯಲಕ್ಷ್ಮಿ ಅವರಿಗೆ ಯಾರ ಬೆಂಬಲ ಬೇಕಿಲ್ಲ ಯಾಕೆಂದರೆ ಅವರು ತುಂಬಾನೇ ಗಟ್ಟಿಗಿತ್ತಿ. ಕಳೆದ ಬಾರಿ ಅವರು ಎಷ್ಟು ಓಡಾಡಿದ್ದಾರೆ. ಹೋರಾಡಿದ್ದಾರೆ. ಎನ್ನುವುದು ಕರುನಾಡಿಗೆ ಗೊತ್ತು ಎಂದಿರುವ ಪ್ರಜ್ವಲ್ ಆದರೂ ಕೂಡ ನಾವು ಅವರ ಜೊತೆ ಸದಾ ಇದ್ದೇ ಇರುತ್ತೇವೆ ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ಮನದ ನೋವನ್ನು ಹೊರ ಹಾಕಿದ್ದಾರೆ.


Click it and Unblock the Notifications











