ಬೆಂಗಳೂರಿನ ಏರ್‌ಪೋರ್ಟ್‌ಗೆ ಹೋಗುತ್ತಿದ್ದಳು ನಟಿ, ನಡುರಾತ್ರಿ ಕ್ಯಾಬ್ ನಿಲ್ಲಿಸಿದ ಡ್ರೈವರ್ - ಆಮೇಲೇನಾಯ್ತು ?
ಬೆಂಗಳೂರು ಅಂದರೆ ಉದ್ಯಾನಗಳ ನಗರ. ಗಗನ ಚುಂಬಿ ಕಟ್ಟಡ. ತಂತ್ರಜ್ಞಾನದ ಕೇಂದ್ರ. 2022ರ ವರದಿಯ ಪ್ರಕಾರ 800ಕ್ಕೂ ಅಧಿಕ ಪಬ್ ಆಂಡ್ ಬಾರ್‌ಗಳ ತವರೂರು. ಇಷ್ಟೇ ಅಲ್ಲ ಹಲವಾರು ಸಂಗೀತ ಕಾರ್ಯಕ್ರಮಕ್ಕೆ.. ಸ್ಟ್ಯಾಂಡಪ್ ಕಾಮಿಡಿ ಕಾರ್ಯಕ್ರಮಕ್ಕೆ.. ಬೆಂಗಳೂರು ಕೇಂದ್ರ ಬಿಂದು. ಇನ್ನು ವಲಸಿಗರ ಪಾಲಿಗೆ ಬೆಂಗಳೂರು ಸ್ವರ್ಗ. ಅದೆಲ್ಲಿಂದಲೋ ಬಂದು ಇಲ್ಲಿ ಹಲವರು ಬದುಕು ರೂಪಿಸಿಕೊಂಡಿದ್ದಾರೆ.
ಕನ್ನಡಿಗರೇ ನಾಚುವಂತೆ ವ್ಯಾಪಾರ-ವ್ಯವಹಾರ-ಕೆಲಸ ಮಾಡಿಕೊಂಡು ಬದುಕುತ್ತಿದ್ದಾರೆ. ಇಂಥಾ ಬೆಂಗಳೂರಿನ ಕುರಿತು ಹಲವರು ಈಗೀಗ ಅಪಪ್ರಚಾರ ಮಾಡಲು ಶುರು ಮಾಡಿದ್ದಾರೆ. ಚಿಕ್ಕ ಚಿಕ್ಕ ವಿಚಾರ-ವೈಮನಸ್ಸುಗಳೆಲ್ಲವನ್ನೂ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇಲಿ ಹೋದರೆ ಹುಲಿ ಹೋಯ್ತು ಎಂಬಂತೆ ಬಿಂಬಿಸುತ್ತಿದ್ದಾರೆ.

ಹಾಗಂಥ ಬೆಂಗಳೂರು ಅವರು ಇವರು ಹೇಳಿದಂತೆ ಇಲ್ಲ. ಎಲ್ಲರಿಗೆ ಇಲ್ಲಿ ಕಹಿ ಅನುಭವ ಕೂಡ ಆಗುವುದಿಲ್ಲ. ಉದಾಹರಣೆಗೆ ಯೋಗಿತಾ ರಾಥೋಡ್ ಅವರಿಗಾದ ಅನುಭವ.
ಹೌದು, ಯೋಗಿತಾ ರಾಥೋಡ್ .. ಮಹಾರಾಷ್ಟ್ರದ ಚೆಲುವೆ. ''ಖೇಲ್ ಖಲ್ಲಾಸ್'' .. ''ಜಬ್ರೀಯಾ ಜೋಡಿ'' .. ಸೇರಿ ಕೆಲ ಚಿತ್ರಗಳಲ್ಲಿ ಆಕ್ಟ್ ಮಾಡಿರುವ ಯೋಗಿತಾ, ''ವ್ಯಾಸಲೀನ್''.. ''ಪಾಂಡ್ಸ್''..''ಕಲ್ಯಾಣ್ ಜ್ಯುವೆಲ್ಸರ್ಸ್'' ಜಾಹೀರಾತುಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.
ಹೀಗೆ ಚಿತ್ರರಂಗ ಮತ್ತು ಮಾಡೆಲಿಂಗ್ ಎರಡು ಕಡೆ ತಮ್ಮ ಛಾಪು ಮೂಡಿಸುತ್ತಿರುವ ಯೋಗಿತಾ ರಾಥೋಡ್ ಸದ್ಯ ಬೆಂಗಳೂರಿನಲ್ಲಾದ ತಮ್ಮ ಸಿಹಿ ಅನುಭವ ಹಂಚಿಕೊಂಡಿದ್ದಾರೆ. ಉಬರ್‌ನ ಕ್ಯಾಬ್ ಡ್ರೈವರ್‌ನ ಮಾನವೀಯತೆಯನ್ನು ಕಂಡು ಭಾವುಕರಾಗಿದ್ದಾರೆ.
ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಯೋಗಿತಾ,ಬೆಂಗಳೂರಿನಲ್ಲಿ ನಡೆದ ಘಟನೆಯೊಂದು ನಾನು ಜೀವನ ಪರ್ಯಂತ ಮರೆಯಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ. ಚಿತ್ರದ ಚಿತ್ರೀಕರಣದ ಪ್ರಯುಕ್ತ ನಾನು ಬಂದಿದ್ದೇ, ನಿರಂತರವಾದ ಕೆಲಸದಿಂದ ನಾನು ತುಂಬಾ ಸುಸ್ತಾಗಿದ್ದೆ ಎಂದು ಹೇಳಿರುವ ಯೋಗಿತಾ ನನಗೆ ಅಕ್ಷರಶಃ ಅಳು ಬಂದಂತಾಗಿತ್ತು ಎಂದು ಹೇಳಿದ್ದಾರೆ.

ಈ ಸಮಯದಲ್ಲಿ ನಾನು ನನ್ನ ಸ್ನೇಹಿತೆಗೆ ಕರೆ ಮಾಡಿ ಅಳಲನ್ನು ತೋಡಿಕೊಳ್ಳುತ್ತಿದ್ದೇ, ಬೆಂಗಳೂರಿನ ವಿಮಾನ ನಿಲ್ದಾಣದ ಕಥೆ ನಿನಗೆ ಗೊತ್ತು. ನಾನಲ್ಲಿ ತಲುಪುವುದು ಯಾವಾಗ..? ತಿಂಡಿ ತಿನ್ನೋದು ಯಾವಾಗ..? ನನ್ನ ಫ್ಲೈಟ್ ಬೆಳಗಿನ 2 ಗಂಟೆಗೆ ಇದೆ.. ನನಗೆ ತುಂಬಾ ಸುಸ್ತಾಗಿದೆ ಎಂದು ನಾನು ಹೇಳುತ್ತಿದ್ದೆ ಎಂದು ಹೇಳಿರುವ ಯೋಗಿತಾ ಇದೇ ಸಮಯದಲ್ಲಿ ಕ್ಯಾಬ್ ಡ್ರೈವರ್ ಕಾರು ನಿಲ್ಲಿಸಿದ ಎಂದು ಹೇಳಿದ್ದಾರೆ. ಎರಡು ನಿಮಿಷ ಬಂದೇ ಇರಿ ಎಂದು ಕೆಳಗಿಳಿದು ಹೋದ ಎಂದಿದ್ದಾರೆ.
ಕ್ಯಾಬ್ ಡ್ರೈವರ್ ವಾಶಿಂಗ್ ರೂಮ್‌ಗೆ ಹೋಗಿರಬಹುದು ಅಥವಾ ಅವರಿಗೆ ಏನಾದರು ಕೆಲಸ ಇರಬಹುದು ಎಂದುಕೊಂಡು ನಾನು ಸುಮ್ಮನಾದೆ ಎಂದು ಹೇಳಿರುವ ಯೋಗಿತಾ ಕ್ಯಾಬ್ ಡ್ರೈವರ್ ಮರಳಿ ಬಂದಾಗ ನನಗೆ ಅಕ್ಷರಶಃ ಅಚ್ಚರಿಯಾಗಿತ್ತು ಎಂದಿದ್ದಾರೆ.
ಆ ಕ್ಯಾಬ್ ಡ್ರೈವರ್ ನನಗೋಸ್ಕರ ಸ್ಯಾಂಡ್ವಿಚ್ ತೆಗೆದುಕೊಂಡು ಬಂದಿದ್ದರು ಎಂದು ಹೇಳಿರುವ ಯೋಗಿತಾ, ತುಂಬಾ ಸಲ ಹಸಿವು ಆಗುತ್ತಿದೆ ಎಂದು ನೀವು ಹೇಳುತ್ತಿದ್ದೀರಿ, ನನಗೆ ಅದು ಇಷ್ಟ ಆಗಲಿಲ್ಲ. ನನ್ನ ಸಹೋದರಿ ಹಸಿವಿನಲ್ಲಿ ಇದ್ದರೆ ನನಗೆ ನೋವಾಗುತ್ತೆ. ನೀವು ಸಸ್ಯಾಹಾರಿ ಎಂದು ಹೇಳಿದ್ದರಿಂದ ನಾನು ಹುಡುಕಿಕೊಂಡು ತಗೊಂಡು ಬಂದಿದ್ದೇನೆ ಎಂದು ಕ್ಯಾಬ್ ಡ್ರೈವರ್ ನನಗೆ ಹೇಳಿದರು ಎಂದು ಹೇಳಿದ್ದಾರೆ. ಮಾತನಾಡುತ್ತಾ ಭಾವುಕರಾಗಿದ್ದಾರೆ. ನಿಮ್ಮ ಈ ಸಹಾಯಕ್ಕೆ ಮತ್ತು ನಿಮ್ಮ ಈ ನಡೆಗೆ ನಿಮ್ಮನ್ನು ನಾನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಇಂತಹ ಅದ್ಭುತ ಚಾಲಕರಿಗೆ ಧನ್ಯವಾದಗಳು ಎಂದು ಕೂಡ ಹೇಳಿದ್ದಾರೆ.
ಸದ್ಯ ಯೋಗಿತಾ ಹಂಚಿಕೊಂಡ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಲವರು ಕ್ಯಾಬ್ ಡ್ರೈವರ್‌ನ ಪ್ರಶಂಸೆ ಮಾಡಿದ್ದಾರೆ. ಬೆಂಗಳೂರಿನಲ್ಲಿರುವ ಕ್ಯಾಬ್ ಡ್ರೈವರ್‌ಗಳು, ಆಟೋ ಚಾಲಕರು, ಎಲ್ಲರೂ ಕೆಟ್ಟವರಲ್ಲ ಎಂದು ಹೇಳುತ್ತಿದ್ದಾರೆ. ಬೆಂಗಳೂರಿಗೆ ಕಪ್ಪು ಚುಕ್ಕೆ ತರುವ ಪ್ರಯತ್ನ ಮಾಡುತ್ತಿರುವ ಪರಭಾಷೆಯವರಿಗೆ ಈ ವಿಡಿಯೋ ಅರ್ಪಣೆ ಎಂದೆಲ್ಲಾ ಕ್ಯಾಪ್ಷನ್ ನೀಡಿ ಈ ವಿಡಿಯೋವನ್ನು ಹಲವರು ಹಂಚಿಕೊಳ್ಳುತ್ತಿದ್ದಾರೆ.


Click it and Unblock the Notifications











