ಹೇಮಾ ಕಮಿಟಿ ವರದಿ: "ಆರೋಪಿಗಳು ಯಾರೇ ಆಗಿದ್ರು ಸಾಕ್ಷ್ಯಾಧಾರ ಇದ್ದರೆ ಶಿಕ್ಷೆ ಆಗಲಿ"; ಪ್ರಿಯಾಮಣಿ
ಮಲಯಾಳಂ ಚಿತ್ರರಂಗದಲ್ಲಿ ನಟಿಯರು ಕಿರುಕುಳ ಎದುರಿಸುತ್ತಿರುವುದು ನಿಜ ಎಂದು ಜಸ್ಟೀಸ್ ಹೇಮಾ ಕಮಿಟಿ ವರದಿ ನೀಡಿದೆ. ಈ ವರದಿ ಆಧರಿಸಿ ಕೇರಳ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಇದೇ ರೀತಿ ತೆಲುಗು ಚಿತ್ರರಂಗದ ಕಮಿಟಿ ವರದಿ ಪ್ರಕಟ ಆಗಲಿ ಎಂದು ಸಮಂತಾ ಸೇರಿ ಕೆಲ ನಟಿಯರು ಆಗ್ರಹಿಸಿದ್ದಾರೆ.
ಹೇಮಾ ಕಮಿಟಿ ವರದಿ ಬೆನ್ನಲ್ಲೇ ಮತ್ತೆ ಮೀಟು ಅಭಿಯಾನ ಶುರುವಾಗಿದೆ. ಕೆಲ ನಟಿಯರು ತಮಗಾದ ಕಹಿ ಅನುಭವವನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಖ್ಯಾತ ನಟ ನಿವಿನ್ ಪೌಲಿ ವಿರುದ್ಧ ಕೂಡ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ತಮ್ಮ ಮೇಲಿನ ಆರೋಪ ಸುಳ್ಳು, ನಾನು ಈ ಸಂಬಂಧ ಕಾನೂನು ಹೋರಾಟ ನಡೆಸುತ್ತೇನೆ ಎಂದು ನಿವಿನ್ ಪೌಲಿ ಹೇಳಿದ್ದಾರೆ.

ಸದ್ಯ ಭಾರೀ ಚರ್ಚೆ ಹುಟ್ಟುಹಾಕಿರುವ ಹೇಮಾ ಕಮಿಟಿ ವರದಿ ಬಗ್ಗೆ ಬಹುಭಾಷಾ ನಟಿ ಪ್ರಿಯಾಮಣಿ ಪ್ರತಿಕ್ರಿಯಿಸಿದ್ದಾರೆ. ಫಿಲ್ಮಿಬೀಟ್ ಕನ್ನಡ ಜೊತೆ ಈ ಬಗ್ಗೆ ಅವರು ಮಾತನಾಡಿದ್ದಾರೆ. "ಕೊನೆಗೂ ಇಂತಾದೊಂದು ಕಮಿಟಿ ನೇಮಕಗೊಂಡು ವರದಿ ಬಂದಿರುವುದು ಆಶಾದಾಯಕ ಬೆಳವಣಿಗೆ" ಎಂದಿದ್ದಾರೆ.
"ಆರೋಪಿಗಳು ಯಾರೇ ಆಗಿರಲಿ, ಅವರ ಮೇಲಿನ ಆರೋಪಕ್ಕೆ ಸಾಕ್ಷ್ಯಾಧಾರಗಳು ಇದ್ದು ಆರೋಪ ಸಾಬೀತಾದರೆ ಶಿಕ್ಷೆ ಆಗಲಿ. ಈಗಾಗಲೇ ಸಾಕಷ್ಟು ಜನ ಬಹಿರಂಗವಾಗಿ ತಮ್ಮಗಾದ ಕಹಿ ಅನುಭವದ ಬಗ್ಗೆ ಮಾತನಾಡುತ್ತಿದ್ದಾರೆ. ಕೆಲವರು ಆರೋಪ ಮಾಡುತ್ತಿದ್ದಾರೆ. ಅದು ನಿಜಾನಾ? ಸುಳ್ಳಾ? ಗೊತ್ತಿಲ್ಲ, ಅವರ ವರ್ಷನ್ ಅವರು ಹೇಳ್ತಿದ್ದಾರೆ. ಆರೋಪ ಸಾಬೀತಾದರೆ ಶಿಕ್ಷೆ ಆಗುತ್ತದೆ ಎಂದಷ್ಟೆ ನಾನು ಹೇಳುತ್ತೇನೆ" ಎಂದಿದ್ದಾರೆ.

"ಮಲಯಾಳಂ ಮಾತ್ರವಲ್ಲ ಕನ್ನಡ ಸೇರಿದಂತೆ ತೆಲುಗು, ತಮಿಳು ಮಾತ್ರವಲ್ಲ ಎಲ್ಲಾ ಇಂಡಸ್ಟ್ರಿಗಳಲ್ಲಿ ಇಂತಹ ಕಮಿಟಿ ರಚನೆ ಆಗಿ ವರದಿ ಬರಲಿ. ಅದು ಒಳ್ಳೆಯದೇ ಅಲ್ಲವೇ? ಬರೀ ಚಿತ್ರರಂಗ ಮಾತ್ರವಲ್ಲ, ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಇಂತಹ ಕೆಟ್ಟ ಪರಿಸ್ಥಿತಿ ಇದೆ. ಚಿತ್ರರಂಗ ಎನ್ನುವ ಕಾರಣಕ್ಕೆ ಹೆಚ್ಚು ಸುದ್ದಿ ಆಗುತ್ತಿದೆ ಅಷ್ಟೆ. ಎಂಎನ್‌ಸಿ ಕಂಪೆನಿ ಸೇರಿದಂತೆ ಎಲ್ಲಾ ಕಡೆ ಇದು ನಡೆಯುತ್ತಿದೆ. ಹೀಗೆ ಧೈರ್ಯವಾಗಿ ಮಾತನಾಡಿದರೆ ಎಲ್ಲರಿಗೂ ಇದು ಎಚ್ಚರಿಕೆ ಗಂಟೆಯಾಗುತ್ತದೆ"
ಮೀಟು ಆರೋಪಕ್ಕೆ ಕೆಲವರು ಸಾಕ್ಷ್ಯಾಧಾರ ಕೇಳುತ್ತಿದ್ದಾರೆ. ದೌರ್ಜನ್ಯದ ಸಮಯದಲ್ಲಿ ಫೋಟೊ, ವೀಡಿಯೋ ಮಾಡೋಕ್ಕಾಗುತ್ತಾ? ಎಂದು ಕೆಲ ನಟಿಯರು ಹೇಳುತ್ತಿದ್ದಾರೆ. ಈ ಬಗ್ಗೆ ಪ್ರಿಯಾಮಣಿ ಮಾತನಾಡಿ "ಖಂಡಿತ ಕೇಳುತ್ತಾರೆ. ಒಂದ್ಕಾಲದಲ್ಲಿ ಸಾಕ್ಷ್ಯಾಧಾರ ಒದಗಿಸಲು ಸಾಧ್ಯವಾಗುತ್ತಿರಲಿಲ್ಲ. ಈಗ ಕ್ಯಾಮರಾ ಫೋನ್‌ಗಳು ಬಂದಿದೆ. ಆಗ ಯಾರು ಮಾತನಾಡುತ್ತಿರಲಿಲ್ಲ. ಈಗ ಮಾತನಾಡುತ್ತಿದ್ದಾರೆ. ಸಾಕ್ಷಿ ಸಮೇತ ಹೇಳಿದಾಗ ಜನ ಒಪ್ಪುತ್ತಾರೆ"
"ಸಾಕ್ಷ್ಯಾಧಾರದ ಸಮೇತ ಹೇಳಿದಾಗ ಹೆಚ್ಚು ನಂಬಿಕೆ ಬರುತ್ತದೆ. ಸಂತ್ರಸ್ತರು ಹೇಳುವುದನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ಸಾಕ್ಷಿ ಸಮೇತ ಹೇಳಿದಾಗ ಹೆಚ್ಚಿನ ಖಚಿತತೆ ಸಿಗುತ್ತದೆ. ನಾನು ಪ್ರತಿದಿನ ಇಂತಹ ಸುದ್ದಿಗಳನ್ನು ಕೇಳುತ್ತಿದ್ದೇನೆ. ಕೊನೆಗೂ ಈಗ ಬಹಿರಂಗವಾಗಿ ಮಾತನಾಡುತ್ತಿದ್ದಾರೆ ಎನ್ನುವುದು ಗ್ರೇಟ್. ಇದು ಹೀಗೆ ಮುಂದುವರೆಯಬೇಕು"
"ಬರೀ ಮಹಿಳೆಯರು ಮಾತ್ರವಲ್ಲ, ಪುರುಷರು ಕೂಡ ಇಲ್ಲಿ ಟಾರ್ಗೆಟ್ ಆಗುತ್ತಿದ್ದಾರೆ. ಹಾಗಾಗಿ ಅವರು ಮಾತನಾಡಿದರೆ ಚೆನ್ನಾಗಿರುತ್ತದೆ. ಆಗ ಜನರಿಗೂ ಇದು ಏನು ಎಂದು ಗೊತ್ತಾಗುತ್ತದೆ. ಜನರ ಕಣ್ಣು ತೆರೆಸಿದಂತಾಗುತ್ತದೆ. ನನಗೆ ಇಂತಹ ಯಾವುದೇ ಕಹಿ ಅನುಭವ ಆಗಿಲ್ಲ. ದೌರ್ಜನ್ಯ ಎದುರಿಸಿದವರು ಯಾರು ಕೂಡ ನನ್ನ ಬಳಿ ಬಂದು ಮಾತನಾಡಿಲ್ಲ" ಎಂದು ಪ್ರಿಯಾಮಣಿ ತಿಳಿಸಿದ್ದಾರೆ.
"ಮಲಯಾಳಂ ಚಿತ್ರರಂಗ ಮಾತ್ರವಲ್ಲ. ಎಲ್ಲಾ ಚಿತ್ರರಂಗಗಳಲ್ಲಿ ಇಂತಹ ಕಮಿಟಿ ರಚನೆಯಾಗಿ ವರದಿ ಬಂದ್ರೆ ಒಳ್ಳೆಯದು. ಕೇವಲ ಮಲಯಾಳಂ ಇಂಡಸ್ಟ್ರಿ ಎಂದು ಪದೇ ಪದೆ ಹೇಳುವುದು ಸರಿಯಲ್ಲ. ಆ ಇಂಡಸ್ಟ್ರಿ ಉಪ್ಪು ನಾನು ತಿಂದಿದ್ದೀನಿ. ಕೊನೆಗೂ ಇಂತಾದೊಂದು ವರದಿ ಬಂದು ಎಲ್ಲರೂ ಚರ್ಚಿಸುವಂತಾಗಿದೆ. ಹಾಗಾಗಿ ಮಲಯಾಳಂ ಇಂಡಸ್ಟ್ರಿ ಜೊತೆಗೆ ಬಾಕಿ ಇಂಡಸ್ಟ್ರಿಗಳಲ್ಲಿ ವರದಿ ಬರಬೇಕು" ಎಂದು ಪ್ರಿಯಾಮಣಿ ಆಗ್ರಹಿಸಿದ್ದಾರೆ.


Click it and Unblock the Notifications