ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ ಸುರೇಂದ್ರ ಬಾಬು

ಹೇಮಶ್ರೀ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸುರೇಂದ್ರ ಬಾಬು, ಜಾಮೀನು ಅರ್ಜಿಯನ್ನು ಬೆಂಗಳೂರಿನ 9 ನೇ ತ್ವರಿತಗತಿ ನ್ಯಾಯಾಲಯ ಫೆ.4 ರಂದು ವಜಾಗೊಳಿಸಿತ್ತು. ಅಧೀನ ನ್ಯಾಯಾಲಯದ ಈ ಆದೇಶ ಪ್ರಶ್ನಿಸಿ ಸುರೇಂದ್ರ ಬಾಬು ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಸರ್ಕಾರಿ ವಕೀಲರ ವಾದ ಆಲಿಸಿ, ಸರ್ಕಾರಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ನೋಟಿಸ್ ಜಾರಿಗೊಳಿಸಿದೆ.
ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸರ್ಕಾರಿ ವಕೀಲರು ಕೊಲೆ ಪ್ರಕರಣದ ತನಿಖೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಕರಣದ ಪ್ರಮುಖ ಆರೋಪಿ ಸುರೇಂದ್ರ ಬಾಬುವಿಗೆ ಜಾಮೀನು ನೀಡಬಾರದು. ಸುರೇಂದ್ರ ಬಾಬು ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಜಾಮೀನು ನೀಡಿದರೆ, ಸಾಕ್ಷ್ಯ ನಾಶ ಪಡಿಸಿ ತನಿಖೆಗೆ ಹಿನ್ನೆಡೆ ಉಂಟುಮಾಡುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿ, ಜಾಮೀನು ನೀಡಲು ಪ್ರಬಲವಾದ ಆಕ್ಷೇಪಣೆಗಳಿವೆ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದಾರೆ.
ಹೇಮಶ್ರೀ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರೇಂದ್ರ ಬಾಬು ಪೊಲೀಸರಿಗೆ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯಲ್ಲಿ 2012ರ ಅ.7ರ ಭಾನುವಾರ ಮುಂಜಾನೆ ಹೇಮಶ್ರೀಯನ್ನು ಅವರ ಮನೆಯಿಂದ ಕರೆದುಕೊಂಡು ಹೋಗಿ ಕ್ಲೋರೋಫಾರ್ಮ್ ಪ್ರಯೋಗಿಸಿ ಪ್ರಜ್ಞೆ ತಪ್ಪುವಂತೆ ಮಾಡಿದೆ. ದಾರಿ ಮಧ್ಯೆ ಹೇಮಶ್ರೀಗೆ ಎಚ್ಚರವಾದಾಗಲೂ ಅದೇ ರೀತಿ ಕ್ಲೋರೋಫಾಮ್ ನೀಡಿದ್ದೆ. ಹೀಗೆ ಹಲವು ಬಾರಿ ಕ್ಲೋರೋಫಾಮ್ ನೀಡಿದ್ದೇ ಆಕೆಯ ಸಾವಿಗೆ ಕಾರಣವಾಗಿದೆ ಎಂದು ತಿಳಿಸಿದ್ದರು. ವೈದ್ಯಕೀಯ ಪರೀಕ್ಷೆಗಳು ಇದನ್ನು ಧೃಡಪಡಿಸಿದ್ದವು. (ಏಜೆನ್ಸೀಸ್)


Click it and Unblock the Notifications











