ಚೆನ್ನಾಂಬಿಕಾ ಫಿಲ್ಮ್ಸ್ ಬ್ಯಾನರ್‌ನಲ್ಲಿ ನೀವು ನಟಿಸಬೇಕಾ? ಇಲ್ಲಿದೆ ನಿಖಿಲ್ ಜೊತೆ ನಟಿಸುವ ಸುವರ್ಣಾವಕಾಶ!
ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಮತ್ತೊಂದು ಹೊಸ ಚಿತ್ರಕ್ಕೆ ಸಿದ್ದತೆ ನಡೆಸಿದ್ದಾರೆ. 'ರೈಡರ್' ನಂತರ ನಿಖಿಲ್ ನಟನೆಯ 'ಯದುವೀರ್' ಸಿನಿಮಾ ಶುರುವಾಗಿತ್ತು. ಆದರೆ ಕಾರಣಾಂತರಗಳಿಂದ ಈ ಸಿನಿಮಾ ಶೂಟಿಂಗ್ ನಡೀತಿಲ್ಲ. ಇದೀಗ ನಿಖಿಲ್ ಹೋಮ್ ಬ್ಯಾನರ್‌ನಲ್ಲೇ ಹೊಸ ಚಿತ್ರಕ್ಕೆ ಸಿದ್ಧತೆ ನಡೀತಿದೆ. ಚೆನ್ನಾಂಬಿಕಾ ಫಿಲ್ಮ್ಸ್ ಬ್ಯಾನರ್‌ನ ಮುಂದಿನ ಚಿತ್ರದಲ್ಲಿ ನೀವು ಕೂಡ ನಟಿಸಬಹುದು.
ಚೆನ್ನಾಂಬಿಕಾ ಫಿಲ್ಮ್ಸ್ ಬ್ಯಾನರ್‌ನ 8ನೇ ಚಿತ್ರಕ್ಕಾಗಿ ಶೀಘ್ರದಲ್ಲೇ ಆಡಿಷನ್ ನಡೆಯಲಿದೆ. ಸಿನಿಮಾದಲ್ಲಿ ನಟಿಸುವ ಆಸಕ್ತಿ ಇರುವವರು, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶಕ್ಕಾಗಿ ಕಾಯುತ್ತಿರುವವರಿಗೆ ಒಳ್ಳೆ ವೇದಿಕೆ ಸಿದ್ಧವಾಗ್ತಿದೆ. ಈ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಹೀರೊ ಆಗಿ ನಟಿಸ್ತಿದ್ದು, ಇನ್ನುಳಿದ ತಾರಾಗಣ, ತಂತ್ರಜ್ಞರ ಬಗ್ಗೆ ಮಾಹಿತಿ ಮುಂದಿನ ದಿನಗಳಲ್ಲಿ ಸಿಗಲಿದೆ. ಸದ್ಯ ಚಿತ್ರಕ್ಕಾಗಿ ಹೊಸ ಪ್ರತಿಭೆಗಳ ಹುಡುಕಾಟ ನಡೀತಿದ್ದು, ಪ್ರಯತ್ನಿಸಿದರೆ ನಿಮಗೂ ಅವಕಾಶ ಸಿಗಬಹುದು. ಅನಿತಾ ಕುಮಾರಸ್ವಾಮಿ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.
ಈಗಾಗಲೇ 'ಜಾಗ್ವಾರ್', 'ಸೀತಾರಾಮ ಕಲ್ಯಾಣ', 'ಕುರುಕ್ಷೇತ್ರ' ಹಾಗೂ 'ರೈಡರ್' ಸಿನಿಮಾಗಳಲ್ಲಿ ನಟಿಸಿ ನಿಖಿಲ್ ಗೆದ್ದಿದ್ದಾರೆ. ಇದು 5ನೇ ಸಿನಿಮಾ. ನಟನೆಯ ಅನುಭವ ಇರುವವರು, ಹೊಸಬರಿಗೂ ಅವಕಾಶ ಸಿಗಲಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಡ್ಯಾನ್ಸ್ ಮತ್ತು ಫೈಟ್ ಕಲಿತಿರುವವರಿಗೆ ವಿಶೇಷ ಆದ್ಯತೆ ಕೂಡ ಇದೆ.'ಜಿತೇಂದ್ರ', 'ಪ್ರೇಮೋತ್ಸವ', 'ಸೂರ್ಯವಂಶ', 'ಗಲಾಟೆ ಅಳಿಯಂದ್ರು', 'ಚಂದ್ರಚಕೋರಿ', 'ಜಾಗ್ವಾರ್', 'ಸೀತಾರಾಮ ಕಲ್ಯಾಣ' ಆದಮೇಲೆ ಚೆನ್ನಾಂಬಿಕಾ ಫಿಲ್ಮ್ಸ್ ಸಂಸ್ಥೆ ನಿರ್ಮಿಸುತ್ತಿರುವ 8ನೇ ಸಿನಿಮಾ ಇದು.

ಇನ್ನು ಹೆಸರಿಡದ ಈ ಚಿತ್ರದಲ್ಲಿ ನಟಿಸಲು ನೀವು ಮಾಡಬೇಕಿರುವುದು ಇಷ್ಟೆ. ನಿಮ್ಮ ಸ್ವವಿವರ, ಫೋಟೊಗಳ ಜೊತೆಗೆ ಒಂದು ನಿಮಿಷದ ಮಿತಿಯೊಳಗೆ ನಿಮ್ಮ ನಟನೆಯ ವಿಡಿಯೋವನ್ನು ಚೆನ್ನಾಂಬಿಕಾ ಫಿಲ್ಮ್ಸ್ ಇಮೇಲ್ ಐಡಿಗೆ ಮೇಲ್ ಮಾಡಿ. ಸಂಸ್ಥೆ ನೀಡಿರುವ ನಂಬರ್‌ಗೆ ವಾಟ್ಸಾಪ್ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು. ಅರ್ಹ ಪ್ರತಿಭೆಗಳನ್ನು ಆಡಿಷನ್‌ಗೆ ಕರೆಯಲಾಗುತ್ತದೆ. ಆಡಿಷನ್‌ನಲ್ಲಿ ಆಯ್ಕೆಯಾದವರು ಚೆನ್ನಾಂಬಿಕಾ ಫಿಲ್ಮ್ಸ್ ಬ್ಯಾನರ್‌ನ್ ಮುಂದಿನ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಜೊತೆ ನಟಿಸಬಹುದು.

ಮಂಜು ಅಥರ್ವ ನಿರ್ದೇಶನದ 'ಯದುವೀರ್' ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಬಣ್ಣ ಹಚ್ಚಬೇಕಿತ್ತು. ನಿಖಿಲ್ ಹುಟ್ಟುಹಬ್ಬದ ದಿನ ಚಿತ್ರದ ಖಡಕ್ ಪೋಸ್ಟರ್ ಕೂಡ ರಿಲೀಸ್ ಆಗಿತ್ತು. ಆದರೆ ಕಾರಣಾಂತರಗಳಿಂದ 'ಯದುವೀರ್' ಸಿನಿಮಾ ನಿಂತು ಹೋಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಮೂಲಕ ನಿಶಾ ವೆಂಕಟ್ ಕೊನಂಕಿ ಮತ್ತು ಸುಪ್ರಿತ್ ಚಿತ್ರ ಸಿನಿಮಾ ನಿರ್ಮಾಣ ಮಾಡಬೇಕಿತ್ತು. ಸಿನಿಮಾ ಹಾಗೂ ರಾಜಕೀಯರಂಗದಲ್ಲಿ ನಿಖಿಲ್ ಬ್ಯುಸಿಯಾಗಿದ್ದಾರೆ. ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿಯೂ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.


Click it and Unblock the Notifications











