ನಿಜ ಜೀವನದಲ್ಲಿ ಅಪ್ಪನ ಪ್ರೀತಿಯಿಂದ ವಂಚಿತನಾದ 'ಶನಿ' ಧಾರಾವಾಹಿ ಯಮ
'ಶನಿ' ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಧಾರಾವಾಹಿ. ನೋಡುಗರನ್ನ ಆರಂಭದಿಂದಲೂ ತನ್ನತ್ತ ಸೆಳೆದಿಟ್ಟುಕೊಂಡಿರುವ ಶನಿ ಧಾರಾವಾಹಿ. ಪೌರಾಣಿಕ ಧಾರಾವಾಹಿಗಳನ್ನು ನಿರ್ಮಾಣ ಮಾಡಿ ಪ್ರೇಕ್ಷಕರನ್ನು ಸೆಳೆಯಬಹುದು ಎನ್ನುವುದನ್ನು ತೋರಿಸಿಕೊಟ್ಟ ಸೀರಿಯಲ್ 'ಶನಿ'.
'ಶನಿ' ಧಾರಾವಾಹಿಯ ಪಾತ್ರಗಳು ಕೂಡ ಸೀರಿಯಲ್ ಸಕ್ಸಸ್ ಆಗಲು ಒಂದು ಕಾರಣ ಎಂದರೆ ತಪ್ಪಾಗುವುದಿಲ್ಲ. ಶನಿ, ಸೂರ್ಯ ದೇವಾ, ಇಂದ್ರ, ಛಾಯಾ, ಹೀಗೆ ಸಾಕಷ್ಟು ಪಾತ್ರಗಳು ನೋಡುಗರಿಗೆ ತುಂಬಾ ಹತ್ತಿರವಾಗಿತ್ತು. ಇವೆಲ್ಲರ ಮಧ್ಯೆ ಕೋಪಿಷ್ಟ ಅಂತಾನೇ ಪ್ರಖ್ಯಾತಿ ಪಡೆದುಕೊಂಡಿರುವ ಯಮ ಕೂಡ ಎಲ್ಲರಿಗೂ ಮೆಚ್ಚುಗೆ ಆಗಿದ್ದ.
ತೆರೆ ಮೇಲೆ ತಂದೆಯ ಮುದ್ದಿನ ಮಗನಾಗಿರುವ ಯಮ ತನ್ನ ನಿಜ ಜೀವನದಲ್ಲಿ ತಂದೆಯ ಪ್ರೀತಿಯನ್ನೇ ಕಂಡಿಲ್ಲ ಎಂದರೇ ನಂಬಲೇ ಬೇಕು. ಹಾಗಾದರೆ ಶನಿ ಧಾರಾವಾಹಿಯಲ್ಲಿ ಅಭಿನಯ ಮಾಡುತ್ತಿರುವ ಯಮ ಪಾತ್ರಧಾರಿಯ ಹೆಸರೇನು? ಯಾವ ಊರಿನವರು? ಸೀರಿಯಲ್ ನಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ.

ಯಮನ ಪಾತ್ರದಲ್ಲಿ ವಿಕಾಸ್ ಮೋರೆ
'ಶನಿ' ಧಾರಾವಾಹಿಯಲ್ಲಿ ಯಮ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟನ ಹೆಸರು ವಿಕಾಸ್ ಮೋರೆ. ಮೂಲತಃ ಹಾಸನದವರಾದ ವಿಕಾಸ್, ಮಾಲ್ತೇಶ್ ಹಾಗೂ ಉಷಾ ರಾಣಿ ಅವರ ಎರಡನೇ ಪುತ್ರ. ವಿಕಾಸ್ ಅವರಿಗೆ ಒಬ್ಬ ಅಣ್ಣ ಕೂಡ ಇದ್ದಾರೆ.

ಚಿಕ್ಕ ವಯಸ್ಸಿನಲ್ಲೇ ದೂರವಾಯ್ತು ಅಪ್ಪನ ಆಸರೆ
ಧಾರಾವಾಹಿಯಲ್ಲಿ ತಂದೆಯ ಪ್ರೀತಿ ಮಗನಾಗಿರುವ ವಿಕಾಸ್ ತಮ್ಮ ನಿಜ ಜೀವನದಲ್ಲಿ ತಂದೆಯ ಪ್ರೀತಿಯನ್ನೇ ನೋಡಿಲ್ಲ. ತಮ್ಮ ಸಣ್ಣ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ವಿಕಾಸ್ ಬೆಳೆದಿದ್ದು ತಮ್ಮ ಚಿಕ್ಕಪ್ಪ ವೇಣುಗೋಪಾಲ್ ಅವರ ಬಳಿಯೇ. ಹಾಗಾಗಿ ಇಂದಿಗೂ ತಮ್ಮ ಅಪ್ಪನ ಪ್ರೀತಿಯನ್ನು ಚಿಕ್ಕಪ್ಪನಲ್ಲಿ ಕಾಣುತ್ತಿದ್ದಾರೆ.

ಅವಕಾಶ ಸಿಕ್ಕಿದ್ದೆ ವಿಶೇಷ
ವಿಕಾಸ್ ಬಣ್ಣದ ಜಗತ್ತಿನಲ್ಲಿ ವೃತ್ತಿ ಜೀವನವನ್ನು ಆರಂಭ ಮಾಡಬೇಕು ಎನ್ನುವ ಆಸೆಯನ್ನು ಸಾಕಷ್ಟು ವರ್ಷದಿಂದಲೂ ಹೊಂದಿದ್ದರು. ಅದಕ್ಕೆ ತಕ್ಕಂತೆ ಸಾಕಷ್ಟು ಆಡಿಷನ್ ಕೂಡ ಕೊಟ್ಟಿದ್ದರು. ಆದರೆ ಅವಕಾಶ ಮಾತ್ರ ಸಿಕ್ಕಿರಲಿಲ್ಲ. 'ಶನಿ' ಧಾರಾವಾಹಿ ಆಡಿಷನ್ ಆಗುವಾಗ ಕಾಸ್ಟಿಂಗ್ ಡೈರೆಕ್ಟರ್ ದೀಪಕ್ ಕರೆ ಮಾಡಿ ಆಡಿಷನ್ ಗೆ ಬರುವಂತೆ ತಿಳಿಸಿ ಅವಕಾಶ ಕೊಡಿಸಿದ್ದಾರೆ.

ವರ್ಕ್ ಶಾಪ್ ನಲ್ಲಿ ಸ್ಪಷ್ಟ ಕನ್ನಡ ತರಬೇತಿ
ನೋಡಲು ಸಖತ್ ಸ್ಮಾಟ್ ಅಂಡ್ ಹ್ಯಾಂಡ್ ಸಮ್ ಆಗಿರುವ ವಿಕಾಸ್ ಭಾಷೆ ಕೂಡ ಹಾಗೆ ಇತ್ತಂತೆ. ನೋಡಲು ರಾಜನ ಮಗನಂತೆ ಇರುವ ಕಾರಣದಿಂದ ವಿಕಾಸ್ ಅವರಿಗೆ ಅವಕಾಶ ಕೊಟ್ಟು ನಂತರ ವರ್ಕ್ ಶಾಪ್ ಮೂಲಕ ಕನ್ನಡ ಭಾಷೆಯ ಉಚ್ಛಾರಣೆಯನ್ನು ಕಲಿಸಿದ್ದಾರೆ ನಿರ್ದೇಶಕ ರಾಘವೇಂದ್ರ ಹೆಗ್ಡೆ.

ಫಾರಿನ್ ನಟ ನಂತಿರುವ ವಿಕಾಸ್
ವಿಕಾಸ್ ತೆರೆ ಮೇಲೆ ನೋಡುವುದಕ್ಕೂ, ಎದುರಿಗೆ ನೋಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಮೊದಲಿಗೆ ವಿಕಾಸ್ ಅವರನ್ನು ಯಾರೇ ನೋಡಿದ್ರು ಫಾರಿನ್ ನಟ ಎಂದುಕೊಳ್ಳುತ್ತಾರೆ.

ಅಪ್ಪನಿಲ್ಲದ ಕೊರಗು ನೀಗಿಸಿದ ಸೂರ್ಯ
ವಿಕಾಸ್ ತಾನು ಮಾಡಿರುವ ಸಾಧನೆಯನ್ನು ತಂದೆ ನೋಡಬೇಕಿತ್ತು ಎನ್ನುವ ಆಸೆಯನ್ನು ಹೊಂದಿದ್ದಾರೆ. ಅಪ್ಪನ ಪ್ರೀತಿ ಸಿಗಲಿಲ್ಲ ಎಂದು ಬೇಸರದಲ್ಲಿದ್ದ ವಿಕಾಸ್ ಜೀವನದಲ್ಲಿ ತಂದೆಯಾಗಿ ಕಾಳಜಿ ಮಾಡಿದ್ದು ನಟ ರಂಜಿತ್ ಕುಮಾರ್(ಸೂರ್ಯ ಪಾತ್ರಧಾರಿ). ತೆರೆ ಮೇಲೆ ತಂದೆಯಾಗುವುದಷ್ಟೇ ಅಲ್ಲದೆ ಚಿತ್ರೀಕರಣದಲ್ಲಿ ಇರುವಷ್ಟು ದಿನ ತಂದೆಯ ಪ್ರೀತಿ ಕೊಟ್ಟು ಕಾಳಜಿ ಮಾಡಿದ್ದಾರೆ.

ಉತ್ತಮ ಪಾತ್ರಗಳ ಬಗ್ಗೆ ಗಮನ
ಸದ್ಯ ಶನಿ ಧಾರಾವಾಹಿಯ ಚಿತ್ರೀಕರಣ ಮುಗಿಸಿರುವ ವಿಕಾಸ್ ಮುಂದಿನ ದಿನಗಳಲ್ಲಿಯೂ ಸೀರಿಯಲ್ ಗಳಲ್ಲಿ ನಟಿಸುವ ಆಸಕ್ತಿ ಇಟ್ಟುಕೊಂಡಿದ್ದಾರೆ. ಒಳ್ಳೆ ಪ್ರೊಡಕ್ಷನ್ ನಲ್ಲಿ ಉತ್ತಮ ಪಾತ್ರ ಬಂದರೆ ಅಭಿನಯಿಸಲು ಮುಂದಾಗುತ್ತಾರಂತೆ.


Click it and Unblock the Notifications











