Hostel Hudugaru Bekagiddare: 2 ದಿನ 'ಹಾಸ್ಟೆಲ್ ಹುಡುಗರು' ಭರ್ಜರಿ ಓಟ.. ಹೀಗೆ ಗೆದ್ದು ಬೀಗುವವರು ಬೇಕಾಗಿದ್ದಾರೆ!
ಸಿನಿಮಾ ನೋಡಿಬಂದ ಪ್ರೇಕ್ಷಕ ಮನೆಯಲ್ಲೂ ಚಿತ್ರದ ಒಂದೊಂದು ಸನ್ನಿವೇಶದ ಬಗ್ಗೆ ಖುಷಿಯಿಂದ ಮಾತನಾಡುತ್ತಾನೆಂದರೆ ಆ ಚಿತ್ರ ಸಕ್ಸಸ್ ಆದಂತೆ. ತಮ್ಮ ನೆಗೆಟೀವ್ ಪಬ್ಲಿಸಿಟಿಯಿಂದಲೇ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುತ್ತಿರುವ 'ಹಾಸ್ಟೆಲ್ ಹುಡುಗರು ಬೇಕಾಗಿದ್ದರೆ' ಚಿತ್ರವನ್ನು ನೋಡಿ ಹೊರಬರುವ ಪ್ರೇಕ್ಷಕ ಪಾಸಿಟಿವ್ ನೋಟ್ ಕೊಟ್ಟು ಚಿತ್ರತಂಡಕ್ಕೆ ಶಹಬ್ಬಾಸ್ ಹೇಳುತ್ತಿದ್ದಾನೆ.
ಈ ಚಿತ್ರ ಮಹೂರ್ತದಿಂದ ಹಿಡಿದು ಮೊನ್ನೆಮೊನ್ನೆ ರಮ್ಯಾ ಪುರಾಣದವರೆಗೂ ಸುದ್ದಿಯಲ್ಲೇ ಇತ್ತು. ಜೊತೆಗೆ ಚಿತ್ರದ ಟೀಸರ್/ಟ್ರೈಲರ್ ಕೂಡಾ ಡಿಫರೆಂಟ್ ಆಗಿ ಇದ್ದಿದ್ದರಿಂದ ಪ್ರೇಕ್ಷಕರಿಗೂ ಈ ಚಿತ್ರದ ಮೇಲೆ ಒಂದು ನಿರೀಕ್ಷೆಯಿತ್ತು. ಚಿತ್ರತಂಡಕ್ಕೂ ತಮ್ಮ ಪ್ರೊಡಕ್ಟ್ ಬಗ್ಗೆ ಸಾಕಷ್ಟು ಕಾನ್ಫಿಡೆನ್ಸ್ ಇತ್ತು. ಪ್ರೇಕ್ಷಕರನ್ನು ನಗಿಸಬೇಕು, ಕೊಟ್ಟ ಕಾಸಿಗೆ ಮೋಸ ಆಗಬಾರದು ಎನ್ನುವ ಉದ್ದೇಶದಿಂದಲೇ ನಿರ್ದೇಶಕರು ಚಿತ್ರವನ್ನು ಹೆಣೆದಿದ್ದಾರೆ.

ಚಿತ್ರವೊಂದು ಗೆಲ್ಲಲು ಸ್ಟೋರಿ ಇರಲೇಬೇಕೆಂದೇನೂ ಇಲ್ಲ ಎನ್ನುವ ಸೂತ್ರವನ್ನು ಪಾಲಿಸುವಂತೆ, ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ನಿರೂಪಣೆಯ ಕಡೆ ಹೆಚ್ಚಿನ ಗಮನವನ್ನು ಹರಿಸಿರುವುದು ಚಿತ್ರದ ಗೆಲುವಿಗೆ ಪ್ರಮುಖ ಅಂಶಗಳ್ಳಲ್ಲೊಂದಾಗಬಹುದು. ಬರೀ ಹಾಸ್ಟೆಲ್, ವಾರ್ಡನ್, ವಿದ್ಯಾರ್ಥಿಗಳ ಸುತ್ತಮುತ್ತ ಸಾಗುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಔಟ್ ಎಂಡ್ ಔಟ್ ನಕ್ಕುನಕ್ಕು ಸುಸ್ತಾಗುವ ಸಿನಿಮಾ.
ವರುಣ್ ಸ್ಟುಡಿಯೋಸ್ ಮತ್ತು ಗುಲ್‌ಮೊಹರ್ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬಂದ ಈ ಸಿನಿಮಾದ ಮುಖ್ಯ ಟಾರ್ಗೆಟ್, ಯುವ ಮತ್ತು ವಿದ್ಯಾರ್ಥಿ ಸಮುದಾಯ. ಆದರೂ, ಇಡೀ ಕುಟುಂಬ ಸಮೇತ ನೋಡುವ ಚಿತ್ರ ಇದಾಗಿದ್ದು, ಎರಡು ದಿನಗಳ ರೆಸ್ಪಾನ್ಸ್ ಕೂಡಾ ಅದೇ ದಾಟಿಯಲ್ಲಿದೆ. ರಿಷಬ್ ಶೆಟ್ಟಿ ಮತ್ತು ಲೂಸಿಯಾ ನಿರ್ದೇಶಕ ಪವನ್ ಕುಮಾರ್ ಒಂದೈದು ನಿಮಿಷ ಸಿನಿಮಾದಲ್ಲಿ ಬಂದು ಹೋದರೂ, ಅದು ಅಷ್ಟೊಂದು ಎಫೆಕ್ಟ್ ಆಗಿ ತೆರೆಯ ಮೇಲೆ ಬಂದಿಲ್ಲ. ಆದರೆ, ಇದೇ ಮಾತನ್ನು ರಮ್ಯಾ ಮತ್ತು ದಿಗಂತ್ ಅವರ ಸ್ಕ್ರೀನ್ ಪ್ರೆಸೆನ್ಸ್ ಬಗ್ಗೆ ಹೇಳುವ ಹಾಗೆ ಇಲ್ಲ.
ಎರಡೂ ಕಾಲು ಗಂಟೆ ಹಾಸ್ಟೆಲ್ ಹುಡುಗರ ಸಿಕ್ಕಾಪಟ್ಟೆ ಹಾವಳಿಯನ್ನು ಸಖತ್ತಾಗಿ ಎಂಜಾಯ್ ಮಾಡಬಹುದಾದ ಸಿನಿಮಾ ಇದಾಗಿದೆ. ಅಲ್ಲಲ್ಲಿ ಕಚಗುಳಿ ಇಡುವ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಬಳಸಲಾಗಿರುವ ಸಂಭಾಷಣೆಗಳು ಪ್ರೇಕ್ಷಕರಿಗೆ ಮುದವನ್ನು ನೀಡುತ್ತದೆ. ತುಂಗಾ ಹಾಸ್ಟೆಲ್ ಸುತ್ತಲೇ ಸುತ್ತುವ ಈ ಸಿನಿಮಾದ ಎಡಿಟಿಂಗ್ ಮತ್ತು ಅಜನೀಶ್ ಲೋಕನಾಥ್ ಅವರ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಪ್ಲಸ್ ಪಾಯಿಂಟ್. ಇನ್ನು, ಅರವಿಂದ್ ಕಶ್ಯಪ್ ಅವರ ಕ್ಯಾಮಾರಾ ಕೈಚಳಕ ಕೂಡಾ ಚೆನ್ನಾಗಿ ಕೆಲಸ ಮಾಡಿದೆ.

ಬೇರೆ ಊರಿನಿಂದ ಬಂದು ಹಾಸ್ಟೆಲ್ ನಲ್ಲಿ ಓದುವ ವಿದ್ಯಾರ್ಥಿಗಳ ತರ್ಲೆ, ಅಲ್ಲೊಬ್ಬ ಇರುವ ವಾರ್ಡನ್, ಅವನ ಶಿಸ್ತು.. ಹೀಗೆ ಬಹಳಷ್ಟು ಹುಡುಗರು ತಮ್ಮ ಜೀವನದಲ್ಲಿ ಎದುರಿಸಿದ ಅನುಭವವನ್ನು ನಿರ್ದೇಶಕರು ಅಚ್ಚುಕಟ್ಟಾಗಿ ತೆರೆಯಮೇಲೆ ತಂದಿದ್ದಾರೆ. ಹಾಗಾಗಿ ಯುವ ಸಮುದಾಯಕ್ಕೆ ಈ ಸಿನಿಮಾ ಬೇಗ ಕನೆಕ್ಟ್ ಆಗುತ್ತೆ. ಯಾವುದೇ ಮೈನ್ ಸ್ಟಾರ್ ಕಾಸ್ಟ್ ಇಲ್ಲದೇ, ಕೋಟಿಗಟ್ಟಲೆ ಔಡ್ ಡೋರ್ ಶೂಟಿಂಗಿಗೆ ಖರ್ಚು ಮಾಡದೇ ಚಿತ್ರವನ್ನೂ ಹೀಗೂ ತೆರೆಯ ಮೇಲೆ ತರಬಹುದು ಎನ್ನುವುದಕ್ಕೆ ಹಾಸ್ಟೆಲ್ ಹುಡುಗರು ಒಂದೊಳ್ಳೆ ಉದಾಹರಣೆಯಾಗಬಲ್ಲದು.
ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ದಿವಂಗತ ಪುನೀತ್ ರಾಜಕುಮಾರ್ ಅವರು ರಿಲೀಸ್ ಮಾಡಿದ್ದರು. ಹಾಸ್ಟೆಲ್ ಹುಡುಗರ ಗೋಳು, ಕಾಮಿಡಿಯ ಸುತ್ತ ಸಿನಿಮಾ ಸಾಗುವುದರಿಂದ ಪ್ರೀತಿಪ್ರೇಮಕ್ಕೆ ಚಿತ್ರದಲ್ಲಿ ಅಷ್ಟೇನೂ ಆಸ್ಪದವನ್ನು ನಿರ್ದೇಶಕರು ಕೊಡಲಿಲ್ಲ, ಚಿತ್ರಕಥೆಗೆ ಅದರ ಅವಶ್ಯಕತೆಯೂ ಇಲ್ಲ. ಚಿತ್ರದ ಪ್ರತಿಯೊಂದು ಪಾತ್ರಧಾರಿಯಿಂದ ಉತ್ತಮವಾಗಿ ನಟನಾ ಕಲೆಯನ್ನು ನಿರ್ದೇಶಕರು ಹೊರಹಾಕಿಸಿದ್ದಾರೆ.
ಕಾಂತಾರ ಚಿತ್ರದ ನಂತರ ಪ್ರೇಕ್ಷಕರನ್ನು ಈ ಮಟ್ಟಿಗೆ ಹಾಸ್ಟೆಲ್ ಹುಡುಗರು ಚಿತ್ರಮಂದಿರಕ್ಕೆ ಸೆಳೆಯುತ್ತಿದೆ ಎಂದರೆ ಅದಕ್ಕೆ ಚಿತ್ರದಲ್ಲಿ ಎಲ್ಲೂ ಬೋರ್ ಹೊಡೆಸದ ನಿರೂಪಣೆ ಕಾರಣ. ಕನ್ನಡ ಪ್ರೇಕ್ಷಕರು ಪ್ರತೀಬಾರಿ ಒಂದು ವಿಷಯವನ್ನಂತೂ ಸ್ಯಾಂಡಲ್‌ವುಡ್ ಉದ್ಯಮಕ್ಕೆ ಮನದಟ್ಟು ಮಾಡುತ್ತಿದ್ದಾರೆ. ಅದು ಸಿನಿಮಾ ಚೆನ್ನಾಗಿದ್ದರೆ, ಅದಕ್ಕೆ ಒಳ್ಳೆ ಮೌತ್ ಪಬ್ಲಿಸಿಟಿ ಸಿಕ್ಕರೆ ಯಾವ ದೊಡ್ಡದೊಡ್ಡ ಸ್ಟಾರ್ ಕಾಸ್ಟ್, ಭರ್ಜರಿ ಪ್ರಚಾರವೂ ಬೇಡ. ಕನ್ನಡ ಸಿನಿರಸಿಕರೇ ಹೆಗಲ ಮೇಲೆ ಸಿನಿಮಾವನ್ನು ಹೊತ್ತು ಸಾಗುತ್ತಾರೆ. ಒಂದೊಳ್ಳೆ ಫನ್ ರೈಡ್ ಸಿನಿಮಾ ಇದು, don't miss it.


Click it and Unblock the Notifications











