»   » ತಾರಾತೋಟದಲ್ಲಿ ಉಲ್ಕಾಪಾತ : ಆತ್ಮಹತ್ಯೆ ರೂಪದ ಜೀವಪಾತ!

ತಾರಾತೋಟದಲ್ಲಿ ಉಲ್ಕಾಪಾತ : ಆತ್ಮಹತ್ಯೆ ರೂಪದ ಜೀವಪಾತ!

Posted By: Staff
Subscribe to Filmibeat Kannada

ಮುದ್ದು ಮುದ್ದು ತಾರೆಯರು
ಇವರಿಲ್ಲದೆ ಸಿನಿಮಾ ಮಾಡುವವರಾರು?
ಧನಲಕ್ಷ್ಮಿಯರಿವರು. ಹಣ ದಕ್ಕಿಸಿಕೊಡುವರು
ಮೊಗೆ ಮೊಗೆದು ಹಣ ಗಳಿಸುವರು
ಹೆಜ್ಜೆಗೊಬ್ಬರು ಇವರ ಆರಾಧಿಸುವವರು....

ಸಿನಿಮಾದ ಮಿನುಗು ತಾರೆಯರ ಕುರಿತು ಹೀಗೆ ಕವನ ಗೀಚುತ್ತಾ ಕುಳಿತವರು ನೀವಾದರೆ, ಕೊಂಚ ನಿಲ್ಲಿ. ಈ ತಾರೆಗಳೇ ಉಲ್ಕೆಗಳಾಗಿ ಉದುರಿ ಹೋಗಿರುವ ಉದಾಹರಣೆಗಳು ನಮ್ಮ ಮುಂದಿವೆ. ಸಿನಿಮಾ ಕೂಡ ಪುರುಷ ಪ್ರಾಧಾನ್ಯ. ಆಳುವುದು ಹಾಗಿರಲಿ, ತಮ್ಮಷ್ಟಕ್ಕೆ ಬದುಕಲು ಬಿಡಿ ಎಂದು ನಾಯಕಿಯರು ಅಲವತ್ತುಕೊಳ್ಳಬೇಕಾದ ಪರಿಸ್ಥಿತಿ.

ಬುದ್ಧ ಕನ್ನಡ ಸಿನಿಮಾದಲ್ಲಿ ನಟಿಸಲು ಗೊತ್ತಾಗಿದ್ದ ಪ್ರತ್ಯೂಷ ಎಂಬ ತೆಲುಗು ಹುಡುಗಿಯ ಸಾವಿನ ಸುದ್ದಿ ಹೊರಬಿದ್ದು 15 ದಿನಗಳಾಗಿವೆ. ಆದರೆ ಈವರೆಗೂ ಅದು ಕೊಲೆಯೋ ಆತ್ಮಹತ್ಯೆಯೋ ತಿಳಿದಿಲ್ಲ. ಪ್ರಾಯಶಃ ತಿಳಿಯುವುದೂ ಇಲ್ಲ. ಹೊರ ಜಗತ್ತಿಗೆ ನಾಯಕಿ ಬಣ್ಣ ಬಣ್ಣದ ಪತಂಗ. ಆದರೆ ಆಕೆಯದ್ದು ಅಕ್ಷರಶಃ ಬೆಂಕಿಯ ಸಂಗ. ತೆಲುಗು ಸಿನಿಮಾದ ಒಬ್ಬ ನಾಯಕಿ ಹೆಸರು ಬರೆಯಬೇಡಿ ಅಂತಲೇ ತನ್ನ ಅಳಲನ್ನು ತೋಡಿಕೊಳ್ಳುತ್ತಾಳೆ- 'ನಾನು ಈಗಾಗಲೇ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇನೆ. ನಿರ್ದೇಶಕರು, ನಿರ್ಮಾಪಕರು, ಸಹ ಕಲಾವಿದರ ಕಾಟ ಒಂದು ಕಡೆ. ಮನೆಯಲ್ಲಿನ ಒತ್ತಡಗಳು ಇನ್ನೊಂದು ಕಡೆ. ಬದುಕು ಸಾಕುಸಾಕಾಗಿ ಹೋಗಿದೆ. ದುಡ್ಡು ಮಾತ್ರ ಇದ್ದರೆ ಏನು ಬಂತು? ಕನಿಷ್ಠ ಪಾತ್ರದ ಆಯ್ಕೆ ವಿಷಯದಲ್ಲೂ ಸ್ವಾತಂತ್ರ್ಯ ಇಲ್ಲವಲ್ಲ"!

ಪರ್ವ ಚಿತ್ರದಲ್ಲಿ ಚುರುಕಾಗಿ ಹೆಜ್ಜೆ ಹಾಕಿದ್ದ ಹಸನ್ಮುಖಿ ರೋಜಾ ಹೊರತುಪಡಿಸಿ ಯಾರೂ ತಮ್ಮ ಆತ್ಮಹತ್ಯೆಯ ಯತ್ನಗಳ ಬಗೆಗೆ ಮುಕ್ತವಾಗಿ ಹೇಳಿಕೊಂಡಿಲ್ಲ. ನೂರಾರು ಕ್ಯಾಬರೆ ಹಾಡುಗಳಲ್ಲಿ ಮೆರೆದ ಮಾದಕ ಕಣ್ಣಿನ ಸಿಲ್ಕ್‌ಸ್ಮಿತಾ, ವಯಸ್ಸು ಚಿಕ್ಕದಾದರೂ ಉದ್ದಿಮೆಯನ್ನು ತನ್ನ ದುಂಡು ಮುಖ- ಬಾಳೆದಿಂಡಿನಂಥ ತೊಡೆಯ ಮೇಲೆ ನಿಲ್ಲಿಸಿಕೊಳ್ಳುವಷ್ಟರ ಮಟ್ಟಿಗೆ ಬಲು ಬೇಗ ಬೆಳೆದ ದಿವ್ಯ ಭಾರತಿ, ಫಟಾಫಟ್‌ ಜಯಲಕ್ಷ್ಮಿ, ತಮಿಳು ನಾಯಕಿ ವಿಜ್ಜಿ, ಕ್ಯಾಟ್‌ವಾಕ್‌ ಮಾಡಲು ಹೋಗಿ ಸತ್ತಳೆಂದು ಸುದ್ದಿಯಾದ ಕನ್ನಡದ ನಟಿ ಕಂ ಮಾಡೆಲ್‌ ನಿವೇದಿತಾ ಜೈನ್‌... ಹೀಗೆ ಸಾವು ಸುದ್ದಿಯಾಗಿ, ಅದರ ನಂತರದ ರಿಸಲ್ಟೇ ಗೊತ್ತಾಗದ ನಾಯಕಿಯರ ಪಟ್ಟಿ ಚಿಕ್ಕದೇನೂ ಅಲ್ಲ.

ಇನ್ನೂ ಹಿಂದಕ್ಕೆ ಹೋದರೆ ಅಷ್ಟೆಲ್ಲಾ ಮಿನುಗಿದ ಕನ್ನಡದ ಮಂಜುಳಾ, ಕಲ್ಪನಾರ ಸಾವು ಯಾಕಾದದ್ದು ಎಂಬ ಪ್ರಶ್ನೆ. ಉತ್ತರ ಮಾತ್ರ ಚಿದಂಬರ ರಹಸ್ಯ. ದಿನಗಳೆದಂತೆ ಸಾವು ಮರೆತು ಹೋಗುತ್ತದೆ. ಹೊಸ ತಾರೆಯರು ಮಿನುಗುವ ಸಿನಿಮಾ ಆಕಾಶದಲ್ಲಿ ಕಳಚಿ ಬಿದ್ದ ಉಲ್ಕೆಗಳ ಒಂದು ಸಣ್ಣ ನೆನಪೂ ಕಾಣುವುದಿಲ್ಲ.

ಸಾವು ಅಥವಾ ಮದುವೆ ಇದು ಉತ್ತುಂಗಕ್ಕೇರಿದ ನಾಯಕಿಯರಿಗೂ ಸಿಕ್ಕಿದ ಎರಡೇ ಛಾನ್ಸು. ಶ್ರೀದೇವಿ, ಜಯಪ್ರದ, ಅಮಲ ಆಯ್ದುಕೊಂಡದ್ದು ಮದುವೆಯನ್ನ. ಎರಡನೇ ಹೆಂಡತಿಯರಾಗಲು ಇವರಿಗೆ ಅದ್ಯಾವುದೋ ಒತ್ತಡವಿತ್ತು ಎಂಬ ಮಾತು ಈಗಲೂ ಸುಳಿಯುತ್ತದೆ. ಅಮೀರ್‌ ಖಾನನ ಮುದಿ ವಯಸ್ಸಿನ ತಂದೆ ಮದುವೆಯಾದದ್ದು ತನ್ನ ಮಕ್ಕಳಿಗೂ ಚಿಕ್ಕ ವಯಸ್ಸಿನ ದಿವ್ಯಾ ಪಾಲಟ್‌ ಎಂಬಾಕೆಯನ್ನು. ಈಕೆ ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚಿತ್ರದ ನಾಯಕಿ. ಇಂಥಾ ಮದುವೆ ಈಕೆಗೆ ಯಾಕೆ ಬೇಕಿತ್ತು?

ನಾಯಕಿಯರ ಬದುಕಿನ ಪುಟಗಳ ತೆರೆಯುತ್ತಾ ಹೋದಂತೆ ಪ್ರಶ್ನೆಗಳ ಮಳೆ. ಉತ್ತರ ಮಾತ್ರ ಶೂನ್ಯ. ಈ ಸಾವು ನ್ಯಾಯವೇ ಎಂಬ ಪ್ರಶ್ನೆಯನ್ನು ನಾವೇ ಕೇಳಿಕೊಂಡು, ಸುಮ್ಮನಾಗುತ್ತೇವಷ್ಟೆ. ಉದ್ದಿಮೆ ನಡೆಯುತ್ತಲೇ ಇರುತ್ತದೆ. ಸ್ಟಾರ್‌ ಆಗುವ ಕನಸು ಹೊತ್ತ ಚಿಕ್ಕ ವಯಸ್ಸಿನ ಮುದ್ದು ಹುಡುಗಿ ಸ್ವಿಮ್‌ ಸೂಟ್‌ ಹಾಕಿ ಮತ್ತೆ ನಿಲ್ಲುತ್ತಾಳೆ !

English summary
Why do film heroines commit suicide?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada