»   » ಈ ಫಾರ್ಮುಲಾ ತೂಗಿಸಲು ಜ್ಯೂಹಿ,

ಈ ಫಾರ್ಮುಲಾ ತೂಗಿಸಲು ಜ್ಯೂಹಿ,

By: ವಿಶಾಖ ಎನ್‌.
Subscribe to Filmibeat Kannada

ಸ್ಯಾಂಡಲ್‌ವುಡ್‌ನ ಈ ಹೊತ್ತಿನ ಸೆನ್ಸೇಷನ್‌ 'ಹುಚ್ಚ" ಅರ್ಥಾತ್‌ ಸುದೀಪ್‌. ಎಲ್ಲೆಲ್ಲೂ ಈತನದೇ ಸದ್ದು. ಆದರೆ ಈತನ ಸಿಗರೇಟಿನ ಗಾಢ ಹೊಗೆ ನವ ನಾಯಕಿಯ್ಬಾಳ ಮುಖಕ್ಕೆ ಕಪ್ಪಿಟ್ಟಿದೆ ಅನ್ನೋದು ಸುದ್ದಿಯೇ ಅಲ್ಲ. 'ಚಿತ್ರ"ದಲ್ಲಿ ಈಕೆ ಜಿಂಕೆಮರಿ. 'ಹುಚ್ಚ"ದಲ್ಲಿ ಒಣಕೊಬ್ಬರಿ ! ಕನ್ನಡ ಚಿತ್ರರಂಗದ ಈಚಿನ ಇತಿಹಾಸದ ಪುಟಗಳ ತಿರುವಿ ಹಾಕಿದಲ್ಲಿ ರೇಖಾ ಎಂಬ ಈ ನವ ನಟಿ ಯಾದಿಗೆ ಸೇರಿರುವ ನಾಯಕಿಯರ ದೊಡ್ಡ ಸಾಲೇ ಇಣುಕುತ್ತದೆ. ಸ್ಯಾಂಪಲ್‌ಗೆ ಇದೋ...

  • ಪ್ರಾಣಸಖಿಯಾಗಿ ಗ್ರೇಟ್‌ ಎಂಟ್ರಿ ಕೊಟ್ಟ ಭಾವನಾಗೆ ಲವ್ವೋ ಲವ್ವೋ.. ಅಂಥ ಕುಣಿಯುವ ಪರಿಸ್ಥಿತಿ. ಆಕೆಯ ನಟನೆ ಯಾರಿಗೆ ಬೇಕು; ಹೊಕ್ಕಳು ತೋರಿದರಷ್ಟೇ ಸಾಕು. ಆದರೀಗ ಅದೂ ಸಾಕು ಸಾಕು.
  • ಹಾಲಿನಂಥ ಚೆಲುವು ಆಕೆಯದು. ಭಾವ ತುಂಬಿದ ಅವಳು ಬಿಂದಾಸೂ ಹೌದು. ಮೊದಲ ಚಿತ್ರದಲ್ಲೇ ಎಂಥಾ ನಟನೆ. ಹೆಸರಿಗೆ ತಕ್ಕಂತೆ ವಿಜಯಲಕ್ಷಿ ್ಮ. ಆದರೀಗ ಆಕೆ ಗಾಯಬ್ಬು !
  • ಧಾರಾನಗರಿಯ ಮುಗ್ಧ ಮೊಗದ ದಾಮಿನಿ ಈಗ ಡುಮ್ಮಿ. ಹಾಗಾಗಿ ಆಕೆಯ ಚಿತ್ರಗಳೂ ಕಮ್ಮಿ.
  • ಸುಮ್‌ ಸುಮ್ನೆ ನಗುತ್ತಾ ಉಪೇಂದ್ರ ಜೊತೆಯಲ್ಲೇ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಇಂಟಲೆಕ್ಚುಯಲ್‌ ಹುಡುಗಿ ಚಾಂದನಿ ಮರೆಯಾದದ್ದೂ ನಗುವ ಬಿಸಾಕಿಯೇ !
  • 'ಓ ಮಲ್ಲಿಗೆ" ಚಿತ್ರದ ಮೂಲಕ ಮಾಡೆಲ್‌ ಲೋಕದ ಚಂದಿರೆಯಾಗಿ ಬಂದ ಚೈತಾಲಿಗೆ ದುರಹಂಕಾರ ಅನ್ನೋದು ಆಕೆ ಓದು ಮುಗಿಸಿ ಅಮೆರಿಕೆಯಿಂದ ಈಗ ತಾನೆ ವಾಪಸ್ಸಾದ ನಂತರ ಗಾಂಧಿನಗರದ ಗಮನಕ್ಕೆ ಬಂದಿದೆ.
  • ದೀಪಾಲಿ ಚೆನ್ನು ; ಸಪೂರ. ಆದರೆ ಗಾಂಧಿನಗರಕ್ಕೆ ಅಮೆರಿಕ ಬಲು ದೂರ.
  • ಇನ್ನು 'ಸ್ಪರ್ಶ"ದ ಜಿಂಕೆ ಕಣ್ಣಿನ ಹುಡುಗಿ ರೇಖಾಗೆ ಸಂಭಾವನೆ ಸಂದಿರುವ ಬಗ್ಗೆಯೇ ಅನುಮಾನವಿದೆ.

ಇದಕ್ಕೆ ಮುಂಚೆಯೇ ಸಿತಾರಾ, ಚಾರುಲತಾ, ಶಿಲ್ಪ ಮೊದಲಾದ ಅನಿವಾಸೀ ಕರ್ನಾಟಕದವರು ಬಂದು, ಹೋಗಿದ್ದಾಯಿತು. ರುಚಿತಾ ಪ್ರಸಾದ್‌ ಎಂಬ ಸದಾ ಮೈದೋರುವ ನಟಿ ಬಹು ಭಾಷೆಗಳಲ್ಲಿ ತಿಪ್ಪರಲಾಗ ಹಾಕಿ ಬಂದರೂ, ಮಳೆಯಲ್ಲಿ ನೆನೆಸಲು ಮಾತ್ರ ಆಕೆ ಸಾಕು. ಸುಧಾರಾಣಿ ಮುಖದಲ್ಲಿ ಸುಕ್ಕು ಇಣುಕುತ್ತಿದೆ. ತಾರಾಗೆ ಡ್ಯಾನ್ಸ್‌ ಮಾಡೋಕಾಗುತ್ತಾ ? ಅನು ಮದುವೆ ಭರಾಟೇಲಿ ಬಿಜಿ. ಇನ್ನು ಪ್ರೇಮಾ, ಬೇಜಾರಾಗಿದೆ ಸಾರ್‌ ನೋಡಿ ನೋಡಿ.

ಲೀಲಾವತಿಯಿಂದ ಶೃತಿವರೆಗೆ.... : ಅಂದಿನ ಸಿನಿಮಾಗಳಲ್ಲಿನ ಅಳುಮುಂಜಿ ಲೀಲಾವತಿ, ಪಿಳಿಪಿಳಿ ಕಣ್ಣಿನ ಭಾರತಿ, ಬಿಂದಾಸ್‌ ಜಯಂತಿ, ಚುರುಕು ಮಾತು- ಮೊನಚು ನೋಟದ ಆರತಿ, ದುಂಡುಮೊಗದ ಮಂಜುಳಾ, ನಾಚಿಕೆ ನಗುವಿನ ಲಕ್ಷ್ಮಿ.. ಇವರೆಲ್ಲರ ನಟನೆಯಲ್ಲೇ ಹದವಾದ ಗ್ಲಾಮರ್‌ ಇತ್ತು. ಹಾಗಂತ ಸೆರಗು ಜಾರಿಸೋದು ಕಡ್ಡಾಯ ಎಂಬ ನಿಯಮಕ್ಕೆ ಇವರು ಒಳಪಡಲಿಲ್ಲ. ಈಗಲೂ ಆಗೊಮ್ಮೆ ಈಗೊಮ್ಮೆ ನಟಿಸುತ್ತಿರುವ ಶೃತಿ ಕೂಡ ಇದಕ್ಕೆ ಹೊರತಲ್ಲ.

ಆದರೆ ಇವತ್ತು.., ಸೆರಗು ಜಾರಿಸದ, ತೊಡೆ ತೋರಿಸದ ನಟಿಯ ಅಭಿನಯ ಕಟ್ಕೊಂಡು ಏನು ಮಾಡೋದು?! ....ಮಾಲಾಶ್ರೀ, ಸುಧಾರಾಣಿ, ಶೃತಿ, ಸದ್ಯದ ಕನ್ನಡದ ನಂಬರ್‌ ಒನ್‌ ಪ್ರೇಮಾ.. ಎಂಬಲ್ಲಿಗೆ ದೀರ್ಘ ಕಾಲ ನಟಿಸಿದ ನಟಿಯರ ಪಟ್ಟಿ ಮುಗಿದು ಹೋಗುತ್ತದೆ. ಇನ್ನೇನಿದ್ದರೂ ಬಾರೆ, ತೋರೆ, ಗಾಡಿ ಬಿಡೆ ಅನ್ನುವ ಫಾರ್ಮುಲ. ಕಾರಣ, ಛೇಂಜ್‌ ಕೇಳ್ತಾರೆ ಎಲ್ಲ.

ಮುಪ್ಪಿಗೆ ಗೇಣು ದೂರ ಇರುವ ವಿಷ್ಣು ಚಿರಂತನ ಯಜಮಾನ. ನಲವತ್ತನೇ ಹುಟ್ಟುಹಬ್ಬ ಆಚರಿಸಿಕೊಂಡ ಶಿವರಾಜ್‌ ಸದಾ ನಂಬರ್‌ ಒನ್‌. ಆದರೆ ಇದೇ ವಿಷ್ಣು ಜೋಡಿ ಆಡಿ- ಹಾಡಿದ ಎಷ್ಟೋ ನಟಿಯರು ರಿಟೈರ್ಡ್‌ . ಶಿವರಾಜ್‌ ಜೊತೆಗೇ ಬಂದ ಸುಧಾರಾಣಿ ಈಗ ಹೌಸ್‌ ವೈಫ್‌. ನೋಡಿದ ಹಿರೋಯಿನ್‌ನ್ನೇ ಎಷ್ಟು ಅಂಥಾ ನೋಡೋದು ಸಾರ್‌. ಅದಕ್ಕೇ ಜ್ಯೂಹಿ, ರವೀನಾ, ಲೀಸಾ, ರಾಣಿ, ಯುಕ್ತಾ... ಎಲ್ಲರಿಗೂ ರೆಡ್‌ ಕಾರ್ಪೆಟ್‌ ಹಾಸು. ಆದರೆ ಇನ್ನೊಂದೆಡೆ ಓಂ ಪ್ರಕಾಶ್‌ ರಾವ್‌ ಎಂಬ ಪುಕ್ಕಗೂದಲಿನ ನಿರ್ದೇಶಕನನ್ನು ಹೀರೋ ಮಾಡುವ ಯೋಚನೆ !

ಫ್ಲಾಷ್‌ ಬ್ಯಾಕ್‌ : ಜ್ಯೂಹಿ ಮೊದಲ ಚಿತ್ರ 'ಪ್ರೇಮಲೋಕ". ನಿಂಬೆಹಣ್ಣಿನ ಆ ಹುಡುಗಿ ಮುಂದೆ ನಿದ್ದೆ ಗೆಡಿಸಿದ್ದು ಬಾಲಿವುಡ್‌ ಅಭಿಮಾನಿಗಳನ್ನ. ಈಗ ಆಕೆ ಬಾಲಿವುಡ್‌ನಿಂದ ಹೆಚ್ಚೂ ಕಮ್ಮಿ ರಿಟೈರ್ಡ್‌. ಆದರೂ ಸ್ಯಾಂಡಲ್‌ವುಡ್‌ಗೆ ರಿ- ಫ್ರೆಷ್‌ !

ಖುಷ್ಬೂಗೆ ಸ್ವಿಮ್ಮಿಂಗ್‌ ಸೂಟ್‌ ಹಾಕಿಸಿದ್ದು, ಹಸಿರು ಸೀರೆ ಉಡಿಸಿ ಮಲ್ಲಿಗೆ ಮುಡಿಸಿದ್ದು ರವಿಚಂದ್ರನ್‌. ಆಕೆಗೆ ದೇವಾಲಯ ಕಟ್ಟಿದ್ದು ಚೆನ್ನೈನಲ್ಲಿ. ಆಂಟಿಯಾಗಿ ಕನ್ನಡಕ್ಕೆ ರಿ- ಎಂಟ್ರಿ ಕೊಟ್ಟರೂ, ಆಕೆಯಿಂದ ಹಿಂಡಿದ್ದು ಗ್ಲಾಮರನ್ನೇ ಹೊರತು, ನಟನೆಯನ್ನಲ್ಲ.

ತಂಗಿಯಾಗಿ ಕನ್ನಡ ಚಿತ್ರಕ್ಕೆ ಬಂದ ಕನ್ನಡದ ಹುಡುಗಿ ಸೌಂದರ್ಯ ಹೆಚ್ಚು ಸಂಭಾವನೆ ಪಡೆಯುವ ಪೂರ್ಣ ಪ್ರಮಾಣದ ನಾಯಕಿಯಾದದ್ದು ಟಾಲಿವುಡ್‌ನಲ್ಲಿ. ಕನ್ನಡಕ್ಕೆ ಸಲ್ಲದ ಈಕೆ ಅಲ್ಲಿ ಉತ್ತುಂಗಕ್ಕೆ ಏರಿದರೂ, ಕಲಾತ್ಮಕ ಕನ್ನಡ ಚಿತ್ರ ನಿರ್ಮಿಸುತ್ತಿರುವುದು ಸ್ಯಾಂಡವುಡ್‌ಗೆ ಪಾಠ ಆಗುವುದೇ ಇಲ್ಲ.

ಸರಿತಾ, ಮಾಧವಿ, ಜಯಪ್ರದ, ಸುಹಾಸಿನಿ.. ಇವರೆಲ್ಲಾ ಹೊರಗಿಂದ ಬಂದರೂ ಕನ್ನಡ ಚಿತ್ರಗಳಿಗೆ ಕೊಟ್ಟದ್ದು ಬರೇ ಗ್ಲಾಮರನ್ನಲ್ಲ. ಎಲ್ಲೋ ಒಂದು ಕಡೆ ಕನ್ನಡದ ಮನಸ್ಸುಗಳ ಬಿಂಬವಾಗಿ ಉಳಿದವರು. ಆದರಿವತ್ತು ನಮ್ಮೂರಿನವರೇ ಆದ ಭಾವನಾ ಸಾಕು ಸಾಕಾಗುತ್ತಾಳೆ. ಪ್ರೇಮಾ ಸೆರಗು ಜಾರಿಸಿದರೂ ಸಿಕ್ಕಾಪಟ್ಟೆ ಹಳಬಳಾಗಿಬಿಡುತ್ತಾಳೆ. ಅನು ಮದುವೆಯಾಗುತ್ತಿರುವುದೇ ಸ್ವಯಂ ನಿವೃತ್ತಿ ಅನ್ನುವಂಥಾ ಪುಕಾರಾಗುತ್ತದೆ. ಹಳೆ ನೀರು ಹರಿಯುತ್ತದೆ. ಹೊಸನೀರು ಬರುತ್ತದೆ. ಸಂದ, ಸಲ್ಲದ ನಾಯಕಿಯರೆಲ್ಲರೂ ಆ ನೀರಲ್ಲೇ ಕನಸಿನ, ಅಳಲಿನ ದೋಣಿ ಬಿಡುತ್ತಲೇ ಇರುತ್ತಾರೆ !

English summary
Paper boats, yes they are kannada celluloid glamour queens !

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada