‘ಬಾರೆ, ತೋರೆ, ಗಾಡಿ ಬಿಡೆ’
ಜ್ಯೋತಿ ಜಿ. ರಾವ್‌ನಾಯಕಿಯನ್ನು ಸೆಟ್‌ಪ್ರಾಪರ್ಟಿ ಥರ ಬಳಸೋದು ಚಿತ್ರರಂಗಕ್ಕೆ ಹೊಸದೇನಲ್ಲ. ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯ ಕೊನೆಯ ಸುತ್ತಿನಲ್ಲೋ, ಬೀದಿ ನಾಟಕಗಳಲ್ಲೋ, ವೇದಿಕೆಗಳಲ್ಲೋ ಮಹಿಳೆಯ ಹಕ್ಕು, ಸ್ವಾತಂತ್ರ್ಯ ಮತ್ತು ಘನತೆಯ ಬಗ್ಗೆ ಮಾತಾಡೋ ಐಶ್ವರ್ಯ ರೈ ಥರದವರೂ ಕೊನೆಗೂ ಮೆಚ್ಚುಗೆಯಾಗುವುದು 'ತಾಲ್"ನಲ್ಲಿ ಮಾದಕವಾಗಿ ನರ್ತಿಸಿದಾಗ. ಮತ್ತು ಇನ್ನಾವುದೋ ಚಿತ್ರದಲ್ಲಿ ಅರಳಿಕೊಂಡಾಗ.
ಸಿನಿಮಾ ಎಂಬ ಲೋಲುಪ ಮಾಧ್ಯಮದ ದೋಷ ಅದು. ಅದು ಎಷ್ಟೇ ಪ್ರಯತ್ನ ಪಟ್ಟರೂ ಲೋಲುಪ್ತಿಯಿಂದ ಆಚೆ ಬರಲಾರದು. sensuous ಆಗದೇ ಅದಕ್ಕೇನೂ ಹೇಳೋದಕ್ಕೆ ಸಾಧ್ಯವಾಗಲಾರದು. ಆದರೆ ಟೀವಿ ಹಾಗಲ್ಲ. ಅದು ನಮ್ಮನ್ನು ಯಾವತ್ತೂ ಲೋಲುಪತೆಯತ್ತ ಒಯ್ಯುವುದಿಲ್ಲ.
ಈ ವಾದವನ್ನು ಬಿಟ್ಟು ಸರಳವಾಗಿ ನೋಡುವುದಾದರೆ,ನಮ್ಮಲ್ಲಿ ಹೀರೋಯಿನ್ ಓರಿಯೆಂಟೆಡ್ ಸಿನಿಮಾ ಬರದೆ ಎಷ್ಟು ದಿನಗಳಾಗಿವೆ ? ಪುಟ್ಟಣ್ಣನ ನಂತರ ಹೆಣ್ಣೇ ಕೇಂದ್ರವಾಗಿರುವ ಸಿನಿಮಾ ಮಾಡಿದವರು ನಮ್ಮಲ್ಲಿ ಯಾರೂ ಇಲ್ಲ. ಅಂಥ ಸ್ತ್ರೀ ಕೇಂದ್ರಿತ ಚಿತ್ರಗಳಲ್ಲಿಯೂ ಆಕೆ ಶೋಷಕಿಯೋ, ಪೋಷಕಿಯೋ ಆಗಿ ಕಾಣಿಸಿದ್ದಾಳೆಯೇ ಹೊರತು, ಆಕೆಗೊಂದು ಪ್ರತ್ಯೇಕ ವ್ಯಕ್ತಿತ್ವವಿರುವುದನ್ನು ಯಾರೂ ತೋರಿಸಿಲ್ಲ.
ಹಾಗಾದರೆ ನಾಯಕಿ ಚಿತ್ರಕ್ಕೆ ಯಾಕೆ ಬೇಕು ? ನಾಯಕನಿಗೆ ಪ್ರೀತಿಸುವುದಕ್ಕೆ, ಕಳಕೊಳ್ಳುವುದಕ್ಕೆ, ಕೊರಗುವುದಕ್ಕೆ. ಆಕೆ ಏನೇ ಇದ್ದರೂ, ಹೀರೋಯಿಸಂಗೆ ಪೂರಕ. ಈಗಂತೂ ಮಂಜುನಾಥನ ಭಕ್ತೆಯಾಬ್ಬಳ ಪಾತ್ರ ಮಾಡಿದರೂ, ನಾಯಕಿ ಕನಸಿನ ದೃಶ್ಯದಲ್ಲಿ ಮಿಡಿತೊಟ್ಟು ಮಿಡಿನಾಗರದಂತೆ ಮಿಡಿಯಬೇಕು. ಮದರ್ ಥೆರೇಸಾಳ ಪಾತ್ರವೇ ಆದರೂ ಆಕೆ ಸಮದರ್ ದೃಶ್ಯದಲ್ಲಿ ಸಮುಂದರನ ಮುಂದೆ ಅಲೆಯಲ್ಲಿ ತೋಯಬೇಕು. ಸೀತೆಯಂಥ ಸಾಧ್ವಿಯೇ ಆಗಿದ್ದರೂ ಸೀಥ್ರೂ ಸೀರೆ ಉಟ್ಟು ಮಳೆಯಲ್ಲಿ ಮೀಯಬೇಕು.
ಇದೇ ಕಾರಣಕ್ಕೆ ನಾಯಕಿ ಬದಲಾಗುತ್ತಿರಬೇಕು. ಯೌವನಕ್ಕಷ್ಟೇ ಅಲ್ಲಿ ಪ್ರಾಧಾನ್ಯ. ರವಿಚಂದ್ರನ್ ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡ ಅನುಪ್ರಭಾಕರ್, ಕನಸುಗಾರದಲ್ಲಿ ರವಿ ಜೊತೆ ಹಾಡಿ ಕುಣಿಯುವ ಚಿಟ್ಟೆ. ಆಕೆ ಮುಂದೆ ತಾಯಿಯಾಗಿ ನಟಿಸಿದರೂ ಚಲ್ತಾ ಹೈ. ಆದರೆ ರವಿಚಂದ್ರನ್ ಇನ್ನೆಂದೂ ಅನುಪ್ರಭಾಕರ್ ತಂದೆಯಾಗಿ ನಟಿಸೋದಿಲ್ಲ . ಅದು ಲೆಕ್ಕಾಚಾರ.
ಅಷ್ಟಕ್ಕೂ ಹೀರೋಯಿನ್ ನೋಡಿ ಸಿನಿಮಾಗೆ ಹೋಗುವ ವರ್ಗ ಎಷ್ಟಿದೆ ಹೇಳಿ? ಆರತಿ, ಕಲ್ಪನಾ ಸ್ವಲ್ಪ ಕಾಲ ಪ್ರೇಕ್ಷಕಿಯರನ್ನು ಸೆಳೆದಿರಬಹುದು. ಮಾಲಾಶ್ರೀ, ಪಡ್ಡೆ ಹುಡುಗರು ಚಿತ್ರಮಂದಿರಕ್ಕೆ ಬರೋದಕ್ಕೆ ಕಾರಣವಾಗಿರಬಹುದು. ಅದು ಬಿಟ್ಟರೆ ಪರದೇಸಿ ನಾಯಕಿಯರು ಬಂದರು ಹೋದರು ಅಷ್ಟೇ. ಅವರು ಯಾರಲ್ಲೂ ಒಂದು ವ್ಯಕ್ತಿತ್ವ ಇದೆ ಎಂದು ಪ್ರೇಕ್ಷಕ ಗುರುತಿಸಲಿಲ್ಲ . ಅವರೆಲ್ಲ ಒಂದೇ ಎರಕದ ಎರಡು ತುಂಡುಗಳಂತೆ ಕಂಡರು ಅಷ್ಟೇ. ಪ್ರೇಕ್ಷಕನಿಗೆ ಬೇಕಾಗಿರೋದು ಅವರ ವ್ಯಕ್ತಿತ್ವವಲ್ಲ. ಯಾವ ಕಡೆ ನೋಡಿದರೂ ಗುಂಡುಗುಂಡು.
ಈ ನಿಟ್ಟಿನಲ್ಲಿ 'ಬಾರೆ, ತೋರೆ, ಗಾಡಿ ಬಿಡೆ" ಲೇಖನ ಅರ್ಥಪೂರ್ಣ. ಚುರುಕಾಗಿ ಓದಿಸಿಕೊಂಡು ಹೋಗುತ್ತದೆ ಅನ್ನೋದು ಓದುಗನಿಗೆ ಬೋನಸ್ಸು.


Click it and Unblock the Notifications