»   » ಪ್ರೇಮಾ, ಭಾವನಾ, ಅನುಪ್ರಭಾಕರ್‌, ಶ್ರುತಿ ..

ಪ್ರೇಮಾ, ಭಾವನಾ, ಅನುಪ್ರಭಾಕರ್‌, ಶ್ರುತಿ ..

Posted By: ಪ್ರವೀಣ್‌ಕುಮಾರ್‌
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಮೆರೆಯುತ್ತಿರುವ ಪರಭಾಷಾ ನಟಿಯರ ಬಗ್ಗೆ ಹೇಳುತ್ತಾ ಲೇಖಕರು ನಮ್ಮನೆಯಾಕೆಗಿಂತ ಪಕ್ಕದ ಮನೆಯಾಕೆಯೇ ಚಂದ ಅನ್ನೋ ನಿರ್ಮಾಪಕರ ನಿಲುವನ್ನು ಗೇಲಿ ಮಾಡುತ್ತಾರೆ. ಆದರೆ ಎಲ್ಲೋ ಒಂದೆಡೆ ಇದು ನಿರ್ಮಾಪಕರ ಮನೋಭಾವ ಅಷ್ಟೇ ಅಲ್ಲ , ಪ್ರೇಕ್ಷಕರದ್ದೂ ಕೂಡ ಅನ್ನುವುದಕ್ಕೆ ಇತಿಹಾಸದಲ್ಲಿ ಸಾಕ್ಷಿಗಳು ಸಿಗುತ್ತವೆ. ನಮ್ಮೂರ ಹುಡುಗಿಯರು ಮಾದಕವಾಗಿ ನಟಿಸಿದರೆ ಕನ್ನಡ ಪ್ರೇಕ್ಷಕನಿಗೆ ಅದೇಕೋ ಮುನಿಸು. ಇದನ್ನು ಪೊಸೆಸಿವ್‌ನೆಸ್‌ ಅಂತಾನೂ ಕರೀಬಹುದು. ಉದಾಹರಣೆಗೆ ಭವ್ಯಾ(ಪ್ರಳಯಾಂತಕ), ಅನು ಪ್ರಭಾಕರ್‌ (ಶಾಪ), ಭಾವನ (ನಂಬರ್‌ವನ್‌), ವಿಜಯಲಕ್ಷ್ಮಿ (ಮಾತಿನ ಮಲ್ಲ), ಪ್ರೇಮಾ (ಉತ್ತರ ದ್ರುವದಿಂ ದಕ್ಷಿಣ ದ್ರುವಕೂ), ಮೊದಲಾದ ಅಚ್ಚ ಕನ್ನಡತಿಯರೆಲ್ಲಾ ಒಂದಲ್ಲಾ ಒಂದು ಸಾರಿ ಅರೆಬಟ್ಟೆಯಲ್ಲಿ ಮಾದಕವಾಗಿ ಕಾಣಿಸಿಕೊಳ್ಳಲು ಪ್ರಯತ್ನ ಪಟ್ಟವರೇ. ಆದರೆ ಪ್ರೇಕ್ಷಕ ಇಷ್ಟಪಡಲಿಲ್ಲ. ಅವರೇನಿದ್ದರೂ ಭಾವಪ್ರಧಾನ ಪಾತ್ರಕ್ಕೆ ಅಥವಾ ಅಳುಮುಂಜಿ ಪಾತ್ರಕ್ಕೆ ಲಾಯಕ್ಕು ಎಂದು ಆತ ತೀರ್ಪು ಕೊಟ್ಟಿದ್ದಾಗಿದೆ.

ಇದೇ ಕಾರಣಕ್ಕೆ ಇಬ್ಬರು ನಾಯಕಿಯರು ಇರುವ ಚಿತ್ರ ನಿರ್ಮಾಣವಾಗುವಾಗ ಗ್ಲಾಮರ್‌ಗೆ ಪರಭಾಷಾ ನಟಿ, ಅಭಿನಯಕ್ಕೆ ಲೋಕಲ್‌ ಪ್ರತಿಭೆ ಅನ್ನುವ ಸೂತ್ರಕ್ಕೆ ನಿರ್ಮಾಪಕರು ಗಂಟುಬಿದ್ದರು.

ಜೇಡರ ಬಲೆಯಲ್ಲಿ ಬಯಲಾದ ಜಯಂತಿಯನ್ನು ರಸಿಕರು ಇಷ್ಟಪಟ್ಟರೂ ಆಕೆಯನ್ನು ಫುಲ್‌ಟೈಂ ನಾಯಕಿಯಾಗಿ ಒಪ್ಪಿಕೊಳ್ಳುವುದಕ್ಕೆ ಹಿಂದು ಮುಂದು ನೋಡಿದರು. ಹಾಗಾಗಿ ಕಲ್ಪನಾ, ಆರತಿ, ಭಾರತಿ, ಮಂಜುಳಾ, ಮೊದಲಾದ ನಾಯಕಿಯರ ಪಂಕ್ತಿಯಲ್ಲಿ ಜಯಂತಿ ಹೆಸರು ಕಾಣಿಸಿಕೊಳ್ಳುವುದಿಲ್ಲ.

ನಾಯಕಿ ಪ್ರಧಾನ ಚಿತ್ರಗಳು ಪುಟ್ಟಣ್ಣ ಕಾಲಕ್ಕೆ ಮುಗಿದು ಹೋದವು ಅನ್ನೋ ಮಾತು ಸತ್ಯವಾದರೂ, ಆನಂತರ ಪಿ.ಎಚ್‌. ವಿಶ್ವನಾಥ್‌ ಅವರಂಥವರು ಆ ಟ್ರೆಂಡ್‌ನ್ನು ಮುಂದುವರೆಸಲು ಪ್ರಯತ್ನ ಪಟ್ಟಿದ್ದನ್ನೂ ಮರೆಯುವಂತಿಲ್ಲ. ಆದರೆ ಅದಕ್ಕೆ ತಕ್ಕಂಥ ಅಭಿನೇತ್ರಿಗಳು ನಮ್ಮಲ್ಲಿದ್ದಾರೆಯೇ ಅನ್ನೋ ಪ್ರಶ್ನೆ ಹಾಗೇ ಉಳಿಯುತ್ತದೆ. ತಮಿಳಿನಲ್ಲಿ ಸರಿತಾ, ರೇವತಿ, ಶೋಭಾರಂತ ಅಭಿಜಾತ ನಟಿಯರಿದ್ದಾರೆ. ನಮ್ಮಲ್ಲಿ ಕಲ್ಪನಾ ನಂತರ ಆ ಲೆವೆಲ್‌ಗೆ ಏರಿದ ಏಕೈಕ ನಟಿ ಎಂದರೆ ಸುಧಾರಾಣಿ. ಪಿ.ಎಚ್‌. ವಿಶ್ವನಾಥ್‌ ಅವರ ಅತ್ಯುತ್ತಮ ಚಿತ್ರಗಳು ಹೊರಬಂದಿದ್ದು ಸುಧಾರಾಣಿ ಮದುವೆಯಾಗುವುದಕ್ಕೆ ಮುಂಚೆ. ಸುಧಾರಾಣಿ ತೆರೆ ಮರೆಗೆ ಸರಿದ ನಂತರ ವಿಶ್ವನಾಥ್‌ ಚಿತ್ರವೇ ಇಲ್ಲದ ಖಾಲಿ ಫ್ರೇಮ್‌ಗಳಾಗಿ ಬಿಟ್ಟವು.

ನಾಯಕಿ ಪ್ರಧಾನ ಚಿತ್ರದ ವ್ಯಾಖ್ಯಾನವನ್ನೇ ಬದಲಾಯಿಸಿದ ಕ್ರೆಡಿಟ್ಟು ಮಾಲಾಶ್ರೀಗೆ ಸಲ್ಲಬೇಕು ! ಹೀರೋ ಮಾಡುವ ಕೆಲಸವನ್ನೇ ಹೀರೋಯಿನ್‌ ಮಾಡಿದರೆ ಅದು ನಾಯಕಿ ಪ್ರಧಾನ ಚಿತ್ರ ಅಂದುಕೊಳ್ಳುವಂತಾಯಿತು.

ಈಗಿನ ನಾಯಕಿಯರಿಗಂತೂ ಆಯ್ಕೆ ಸ್ವಾತಂತ್ರ್ಯವೇ ಇಲ್ಲ. ನಾಲ್ಕು ಡ್ಯುಯಟ್‌ಗಳಲ್ಲಿ ಕುಣಿಯುವ ಅವಕಾಶ ಸಿಕ್ಕಿದರೆ ಅದೇ ಗ್ರೇಟ್‌. ಶ್ರುತಿ ಇದ್ದರೆ ಒಂದಿಷ್ಟು ಅಳುವುದಕ್ಕೆ ಸ್ಕೋಪ್‌. ತಮಾಷೆಯೆಂದರೆ ಇಂದಿನ ಸಿನಿಮಾ ಹೀರೋ ಓರಿಯೆಂಟೆಡ್‌ ಮತ್ತು ಡಾಮಿನೇಟ್‌ ನಿಜ. ಆದರೆ ಕಮರ್ಷಿಯಲ್‌ ಸಿನಿಮಾ ನೋಡುವ ಪ್ರೇಕ್ಷಕ ತೆರೆಯ ಮೇಲೆ ಚಂದದ ಮುಖ ನೋಡುವುದಕ್ಕೆ ಇಷ್ಟಪಡುತ್ತಾನೆ. ಅದು ಹೀರೋಯಿನ್‌ನದ್ದೇ ಆಗಿರಬೇಕು. ಹೀರೋ ಹೇಗಿದ್ದರೂ ನಡೆಯುತ್ತದೆ. ಎಂಬಲ್ಲಿಗೆ ನಾಯಕಿ ತನ್ನಿಂದಾಗಿಯೇ ಸಿನಿಮಾ ಓಡುತ್ತದೆ ಎಂದು ವಿನಾ ಕಾರಣ ಸಂತೋಷ ಪಟ್ಟುಕೊಳ್ಳುವುದಕ್ಕೆ ಅಡ್ಡಿಯಿಲ್ಲ.

Read more about: sandalwood kannada cinema
English summary
A response for the article on kannada heroines and the glamour

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada