»   » ಅವರಂತೂ ಕನ್ನಡಿ ಮುಂದೆ ರಿಹರ್ಸಲ್‌ ನಡೆಸುತ್ತಿದ್ದಾರೆ.

ಅವರಂತೂ ಕನ್ನಡಿ ಮುಂದೆ ರಿಹರ್ಸಲ್‌ ನಡೆಸುತ್ತಿದ್ದಾರೆ.

Posted By: Super
Subscribe to Filmibeat Kannada

ಟ್ರೆಂಡ್‌ ಬದಲಾಗಿದೆ ಅನ್ನುವ ವಾಕ್ಯವನ್ನು ಮತ್ತೆ ಹೇಳಬೇಕಾಗಿದೆ. ಹೊಸಮುಖಗಳಿಗೆ ಪ್ರೇಕ್ಷಕ ಹಾತೊರೆಯುತ್ತಿದ್ದಾನೆ ಅನ್ನೋದು ಅರಿವಾದಾಕ್ಷಣ ನಿರ್ಮಾಪಕರು ಮತ್ತು ನಿರ್ದೇಶಕರು ಕೂಡಾ ಹೀರೋ ವೇಷ ಹಾಕೋದಕ್ಕೆ ಸಜ್ಜಾಗುತ್ತಿದ್ದಾರೆ.

ಇನ್ನೊಂದು ವಾರದಲ್ಲಿ ಕನ್ನಡದ ಒಬ್ಬ ಶ್ರೀಮಂತ ನಿರ್ಮಾಪಕ ಮತ್ತು ಇಬ್ಬರು ಆ್ಯಕ್ಷನ್‌ ಪ್ರಿಯ ನಿರ್ದೇಶಕರು ಹೀರೋ ಪಟ್ಟಕ್ಕೆ ಬಡ್ತಿ ಪಡೆಯಲಿದ್ದಾರೆ. ನಿರ್ಮಾಪಕನಾಗುವುದಕ್ಕೆ ಮುಂಚೆ ಸಣ್ಣಪುಟ್ಟ ಖಳನ ಪಾತ್ರಗಳಲ್ಲಿ ತೆರೆಯ ಮೇಲೆ ಬಂದುಹೋಗುವ ಕೆಲಸ ಮಾಡುತ್ತಿದ್ದ ರಾಕ್‌ಲೈನ್‌ ವೆಂಕಟೇಶ್‌ ಈಗ ಫುಲ್‌ಟೈಂ ಹೀರೋ ಆಗುವ ಸಿದ್ಧತೆಯಲ್ಲಿದ್ದಾರೆ. ತಮಿಳು ಚಿತ್ರವೊಂದರ ರೀಮೇಕ್‌ ಎನ್ನಲಾಗಿರುವ ಈ ಚಿತ್ರವನ್ನು ಮಹೇಂದರ್‌ ನಿರ್ದೇಶಿಸುತ್ತಾರೆ.

ತಮ್ಮ ಆರಂಭದ ದಿನಗಳಲ್ಲಿ ಜ್ಯೂನಿಯರ್‌ ಅಂಬರೀಶ್‌ ಎಂದೇ ಹೆಸರಾಗಿದ್ದ ರಾಕ್‌ಲೈನ್‌ ಅವರನ್ನು ಸಾಂಪ್ರದಾಯಿಕ ನಾಯಕನಾಗಿ ಊಹಿಸಿಕೊಳ್ಳುವುದು ಕಷ್ಟ. ಅವರ ಒರಟು ಮುಖ, ಅಷ್ಟೇ ಒರಟು ನಡವಳಿಕೆ ಆ್ಯಂಟಿ ಹೀರೋ ಪಾತ್ರಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆ ಅನ್ನೋದು ಗಾಂಧಿನಗರದ ಕಾಮೆಂಟ್‌. ಆದರೆ ರಾಕ್‌ಲೈನ್‌ ಅವರೇ ಈ ಚಿತ್ರದ ನಿರ್ಮಾಪಕನೂ ಆಗಿರುವುದರಿಂದ ಸೋಲು-ಗೆಲುವು ಇವೆರಡರ ಫಲಾನುಭವಿ ಅವರೇ ಆಗಿರುತ್ತಾರೆ.

'ಲವ್‌ ಯೂ" ಎನ್ನುತ್ತಿರುವ ಶಿವಮಣಿ

ಗೋಲಿಬಾರ್‌, ರಾಜಕೀಯದಂಥ ಆ್ಯಕ್ಷನ್‌ ಚಿತ್ರಗಳ ಮೂಲಕ ಬೆಳಕಿಗೆ ಬಂದ ನಿರ್ದೇಶಕ ಶಿವಮಣಿಯೂ ಈಗ ಹೀರೋ ಆಗುತ್ತಿದ್ದಾರೆ. ಎಂಭತ್ತರ ದಶಕದ ಅಂತ್ಯದಲ್ಲಿ ಒಂದೆರಡು ಟೀವಿ ಸೀರಿಯಲ್‌ಗಳಲ್ಲಿ ನಟಿಸಿದ್ದರ ಹೊರತಾಗಿ ಮಣಿಗೆ ನಟನಾಗಿ ಅಂಥಾ ಅನುಭವ ಏನೂ ಇಲ್ಲ . ಕುರುಚಲು ಗಡ್ಡದಿಂದಾಗಿ ತೆಲುಗು ನಾಯಕ ಚಕ್ರವರ್ತಿ ಥರ ಕಾಣಿಸ್ತಾ ಇದ್ದರೂ ಹೈಟ್‌ನದ್ದೇ ಸಮಸ್ಯೆ. ಐದಡಿ ನಾಲ್ಕಿಂಚು ಎತ್ತರದ ನಟನಿಗೆ ನಾಯಕಿ ಸಿಗುವುದೂ ಕಷ್ಟ. ಅವರ ಪತ್ನಿ ತುಳಸಿ(ಮಾಜಿ ನಾಯಕಿ) ಇವರಿಗಿಂತಲೂ ಕುಳ್ಳಿ.

ಹೀರೋ ಆಗಬೇಕು ಅನ್ನುವ ಶಿವಮಣಿ ಆಸೆಗೆ ಈಗ ನಾಲ್ಕು ವರ್ಷ ತುಂಬಿರಬಹುದು. ಇಲ್ಲಿಯತನಕ ಆ ರಿಸ್ಕ್‌ ತೆಗೆದುಕೊಳ್ಳುವುದಕ್ಕೆ ಯಾವ ನಿರ್ಮಾಪಕರೂ ಸಿದ್ಧರಾಗಿರಲಿಲ್ಲ . ಈಗ ಸಂಪತ್‌ಕುಮಾರ್‌ ಅನ್ನುವ ಹೊಸ ನಿರ್ಮಾಪಕ ಧೈರ್ಯ ಮಾಡಿದ್ದಾರೆ. ರಾಮು ನಿರ್ಮಾಣದ 'ಲಾ ಅಂಡ್‌ ಆರ್ಡರ್‌" ಚಿತ್ರವನ್ನು ಮುಗಿಸಿರುವ ಮಣಿ ಈಗ ಕನ್ನಡಿ ಮುಂದೆ ರಿಹರ್ಸಲ್‌ ನಡೆಸಿದ್ದಾರೆ. ಚಿತ್ರದ ಹೆಸರು 'ಲವ್‌ ಯೂ".

'ಸಚ್ಚಿ"ಯಾಗಿ ಪೊದೆಗಡ್ಡದ ಓಂ ಪ್ರಕಾಶ್‌

ಸದಾ ಭಯಗ್ರಸ್ಥ ಪ್ರಜೆಯಂತೆಯೇ ಕಾಣಿಸುವ ನಿರ್ದೇಶಕ ಓಂ ಪ್ರಕಾಶ್‌ ಅವರಿಗೂ ನಾಯಕನಾಗುವ ಆಸೆ ಕುದುರಿದ್ದನ್ನು ಈ ಶತಮಾನದ ಅದ್ಭುತವೆಂದೇ ಗಾಂಧಿನಗರ ಪರಿಗಣಿಸಿದೆ. ಸುಂದರಾಂಗ, ಹಿಮ್ಯಾನ್‌, ಟೀನೇಜ್‌ ಹೀರೋ ಮೊದಲಾದ ಯಾವ ಪದಪುಂಜಗಳಿಗೂ ಓಂಪ್ರಕಾಶ್‌ ಹೊಂದಿಕೊಳ್ಳುವುದಿಲ್ಲ . ಪೊದೆ ಗಡ್ಡ, ಕೆದರಿದ ಕೂದಲು, ಕೊಂಚ ಮುಂದಕ್ಕೆ ಬಾಗಿದ ದೇಹ, ಮಾತಿಗೆ ಮುಂಚೆ ಗರಗರನೆ ತಿರುಗುವ ಕಣ್ಣಾಲಿ. ಬಹುಶಃ ಈ ವಿಭಿನ್ನ ನಿಲುವಿಗೆ ಹೊಂದಿಕೊಳ್ಳುವ ಕಥೆಯನ್ನೇ ಓಂ ಬರೆದಿರಬಹುದು. ಚಿತ್ರಕ್ಕೆ ನಾಯಕಿ ಇನ್ನೂ ಸಿಕ್ಕಿಲ್ಲ . ಗುರುಕಿರಣ್‌ ಐದು ಹಾಡುಗಳಿಗೆ ರಾಗಸಂಯೋಜನೆ ಮಾಡಿದ್ದಾಗಿದೆ. ಚಿತ್ರದ ಹೆಸರು 'ಸಚ್ಚಿ".

ನಿರ್ದೇಶಕರೇ ಹೀರೋ ಪಟ್ಟವನ್ನು ಅಲಂಕರಿಸುವ ಸಂಪ್ರದಾಯ ಕನ್ನಡಕ್ಕೆ ಹೊಸದೇನಲ್ಲ . ರವಿಚಂದ್ರನ್‌, ಎಸ್‌.ನಾರಾಯಣ್‌, ಎಸ್‌.ಮಹೇಂದರ್‌, ಉಪೇಂದ್ರ ಮೊದಲಾದವರು ಟೂ ಇನ್‌ ಕೆಲಸ ಮಾಡಿದ್ದಾಗಿದೆ. ಈ ಪೈಕಿ ಯಶಸ್ಸು ಕಂಡವರೆಂದರೆ ರವಿ ಮತ್ತು ಉಪೇಂದ್ರ. ಎಸ್‌.ನಾರಾಯಣ್‌ ಅವರ ಮೊದಲೆರಡು ಚಿತ್ರಗಳಷ್ಟೇ ಕ್ಲಿಕ್‌ ಆದವು. ಮೂಲತಃ ನಗೆನಟನಾದ ನಾರಾಯಣ್‌ ಅನಂತರ ಎಲ್ಲ ಹೀರೋಗಳ ಥರ ನವರಸನಾಯಕನಾಗೋದಕ್ಕೆ ಹೋಗಿ ಮುಗ್ಗರಿಸಿದರು. ಮಹೇಂದರ್‌ ಅವರ ಮೊದಲ ಚುಂಬನದಲ್ಲೇ ದಂತಭಗ್ನವಾಯಿತು. 'ಗಟ್ಟಿಮೇಳ" ಚಿತ್ರ ಎರಡು ವಾರವೂ ಓಡಲಿಲ್ಲ .

ಈ ವಾರ ಮತ್ತೊಬ್ಬ ನಟ ನಾಯಕನಟನಾಗಿದ್ದಾನೆ. ಆತನ ಹೆಸರು ದರ್ಶನ್‌. ಪರಿಚಯ ಪೂರ್ತಿಯಾಗಬೇಕಿದ್ದಲ್ಲಿ ಈತ ತೂಗುದೀಪ ಶ್ರೀನಿವಾಸ್‌ ಅವರ ಪುತ್ರ ಎಂದರೆ ಸಾಕು. ಆರಡಿ ಮೂರಿಂಚು ಎತ್ತರದ ಈ ದೈತ್ಯ ಚಿತ್ರರಂಗಕ್ಕೆ ಪ್ರವೇಶಿಸಿದ್ದು ಖಳನಾಯಕನಾಗಿ. ಮೊನ್ನೆ ತೆರೆಕಂಡ 'ಎಲ್ಲಾರ ಮನೆ ದೋಸೇನೂ" ಚಿತ್ರದಲ್ಲೂ ಈತ ಖಳನೇ. ತೂಗುದೀಪ ಅವರ ಕಣ್ಣುಗಳನ್ನೇ ಬಳುವಳಿಯಾಗಿ ಪಡೆದಿರುವ ದರ್ಶನ್‌ 'ಮೆಜೆಸ್ಟಿಕ್‌" ಎನ್ನುವ ಚಿತ್ರದಲ್ಲಿ ನಾಯಕನಾಗಿದ್ದಾರೆ. ಶೂಟಿಂಗ್‌ ಈಗಾಗಲೇ ಶುರುವಾಗಿದೆ.

English summary
Its changing time in Sandalwood : Many Directors turn as heros

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada