ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಜಾಗ; ಅರ್ಜಿ ವಜಾ ಮಾಡಿದ ಹೈಕೋರ್ಟ್
ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕ ಅಭಿಮಾನ್ ಸ್ಟುಡಿಯೋ ಬದಲು ಮೈಸೂರಿನಲ್ಲಿ ನಿರ್ಮಾಣವಾಗಿದೆ. ಆದರೆ ಅಂತ್ಯಕ್ರಿಯೆ ನಡೆದ ಅಭಿಮಾನ್ ಸ್ಟುಡಿಯೋದಲ್ಲಿ ಕೂಡ ಸ್ಮಾರಕ ನಿರ್ಮಾಣ ಆಗಬೇಕು ಎನ್ನುವುದು ಅಭಿಮಾನಿಗಳ ಅಭಿಲಾಷೆ. "ಸ್ಮಾರಕ ನಿರ್ಮಿಸಲು 10 ಗುಂಟೆ ಜಾಗ ಮಂಜೂರು ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು" ಎಂದು ಅಭಿಮಾನಿಗಳು ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದರು.
ವಿ. ಎಸ್. ಎಸ್. ಅಭಿಮಾನ್ ಡಾ. ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ ವತಿಯಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಹೈಕೋರ್ಟ್ ಆ ಅರ್ಜಿಯನ್ನು ವಜಾ ಮಾಡಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿತ್ತು. ಅರ್ಜಿದಾರರ ಪರ ವಾದ ಆಲಿಸಿ ಕೋರ್ಟ್ ತನ್ನ ನಿಲುವು ಸ್ಪಷ್ಟಪಡಿಸಿದೆ. ಜೊತೆಗೆ ಸಲಹೆಯನ್ನು ನೀಡಿದೆ.

"ಸಿನಿಮಾ ಕಲಾವಿದರ ಸ್ಮಾರಕ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಿಸಲು ಸರ್ಕಾರಕ್ಕೆ ಆದೇಶ ಕೊಡಿ ಎಂದು ಯಾರೂ ಕೂಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವುದು ಸೂಕ್ತವಲ್ಲ. ಈ ಅರ್ಜಿಯಲ್ಲಿ ಯಾವ ಸಾರ್ವಜನಿಕ ಹಿತಾಸಕ್ತಿಯೂ ಅಡಗಿಲ್ಲ. ಇಂತಹ ವಿಚಾರಗಳ ಬಗ್ಗೆ ಹೈಕೋರ್ಟ್ ವ್ಯವಹರಿಸುವುದು ಸಾಧ್ಯವಿಲ್ಲ" ಎಂದು ನ್ಯಾಯಪೀಠ ಹೇಳಿದೆ. ಸಾಧ್ಯವಾದರೆ ಸರ್ಕಾರ ಅಥವಾ ಸಂಬಂಧಪಟ್ಟ ಪ್ರಾಧಿಕಾರದ ಮೂಲಕ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಿ ಎಂದು ಸಲಹೆ ನೀಡಿದೆ.
ಅಂದಹಾಗೆ ನಟ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಅಭಿಮಾನ್ ಸ್ಟುಡಿಯೋಗೆ ಮಂಜೂರಾದ ಜಾಗದ ಪೈಕಿ ಕೆಂಗೇರಿ ಹೋಬಳಿ ಮೈಲಸಂದ್ರ ಗ್ರಾಮದ ಸರ್ವೇ ನಂ. 26 ಮತ್ತು 68ರಲ್ಲಿ 10 ಗುಂಟೆ ಜಾಗವನ್ನು ಮಂಜೂರು ಮಾಡಲು 2017ರಲ್ಲಿ ತಹಸೀಲ್ದಾರ್ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ಈವರೆಗೂ ಆ ಪ್ರಸ್ತಾವನೆಗೆ ಯಾವುದೇ ಅನುಮೋದನೆ ದೊರೆತಿಲ್ಲ. ಆದ್ದರಿಂದ ಆ 10 ಗುಂಟೆ ಜಾಗ ಮಂಜೂರು ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ವಿ. ಎಸ್. ಎಸ್. ಅಭಿಮಾನ್ ಡಾ. ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ ಕೋರಿತ್ತು.
ನಟ ಡಾ. ವಿಷ್ಣುವರ್ಧನ್ ಸ್ಮಾರಕ ಜಾಗದ ವಿವಾದ ಇಂದು ನಿನ್ನೆಯದಲ್ಲ. ಈ ರಗಳೆಯೇ ಬೇಡ ಎಂದು ವಿಷ್ಣ ಕುಟುಂಬ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಜಾಗ ಕೇಳಿತ್ತು. ಅದರಂತೆ ಮೈಸೂರಿನ ಎಚ್. ಡಿ. ಕೋಟೆ ರಸ್ತೆಯ ಹಾಲಾಳು ಸಮೀಪ ಸರ್ಕಾರ ಜಾಗ ನೀಡಿತ್ತು. 11 ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ನಿರ್ಮಿಸಿ ಕಳೆದ ವರ್ಷ ಉದ್ಘಾಟನೆ ಮಾಡಲಾಗಿತ್ತು. ಎರಡು ಮುಕ್ಕಾಲು ಎಕರೆ ಜಾಗದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಿದೆ. ವಿಷ್ಣುದಾದಾಗೆ ಸಂಬಂಧಿಸಿದ ಫೋಟೊ ಗ್ಯಾಲರಿ, ಆಡಿಟೋರಿಯಂ, ವಿಷ್ಣು ಪುತ್ಥಳಿ, ಕ್ಲಾಸ್ ರೂಮ್, ಕ್ಯಾಂಟೀನ್ ಏರಿಯಾ ಹೀಗೆ ಹತ್ತು ಹಲವು ವಿಶೇಷಗಳು ಈ ಸ್ಮಾರಕದಲ್ಲಿದೆ.

ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಆಗಿದ್ದರೂ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲಿ ಆಗಬೇಕು ಎನ್ನುತ್ತಿದ್ದಾರೆ. ಪ್ರತಿವರ್ಷ ವಿಷ್ಣು ಹುಟ್ಟುಹಬ್ಬ, ಪುಣ್ಯಸ್ಮರಣೆ ದಿನ ಅಭಿಮಾನ್ ಸ್ಟುಡಿಯೋದಲ್ಲಿರುವ ಸಮಾಧಿಗೆ ಪೂಜೆ ಸಲ್ಲಿಸುತ್ತಾರೆ. ದೊಡ್ಡಮಟ್ಟದಲ್ಲಿ ಜಮಾಯಿಸಿ ನೆಚ್ಚಿನ ನಟನಿಗೆ ನಮನ ಸಲ್ಲಿಸುತ್ತಾ ಬರುತ್ತಿದ್ದಾರೆ.


Click it and Unblock the Notifications











