ರವಿಚಂದ್ರನ್ ವಿರುದ್ಧ ನಿರ್ಮಾಪಕರು ಮಾಡಿರುವ ಆರೋಪಗಳೇನು?
ನಿರ್ಮಾಪಕರು ಹೊಸ ಕ್ಯಾತೆ ಶುರು ಮಾಡಿದ್ದಾರೆ. ರಿಯಾಲಿಟಿ ಶೋಗಳ ವಿರುದ್ಧ ಇಷ್ಟು ದಿನ ಪ್ರತಿಭಟನೆ ಮಾಡುತ್ತಿದ್ದ ನಿರ್ಮಾಪಕರು ಇದೀಗ ರವಿಚಂದ್ರನ್ ವಿರುದ್ಧ ಕಿಡಿ ಕಾರಿದ್ದಾರೆ.
ಅಶೋಕ್ ನೇತೃತ್ವದ ಕಾರ್ಮಿಕರ ಸಂಘದ ವೇತನ ಪರಿಷ್ಕರಣೆ ಬಗ್ಗೆ ವಾಣಿಜ್ಯ ಮಂಡಳಿ ರಚಿಸಿದ ಸಮಿತಿಯ ಅಧ್ಯಕ್ಷತೆ ವಹಿಸಿದವರು ಕ್ರೇಜಿ ಸ್ಟಾರ್ ರವಿಚಂದ್ರನ್. ಕನ್ನಡ ಚಿತ್ರರಂಗಕ್ಕಾಗಿ ದುಡಿಯುತ್ತಿರುವ ಕಾರ್ಮಿಕರ ವೇತನ ಪರಿಷ್ಕರಣೆ ಬಗ್ಗೆ ಇತ್ತೀಚೆಗಷ್ಟೆ ರವಿಚಂದ್ರನ್ ಸಭೆ ನಡೆಸಿದರು. ಮೂಲಗಳ ಪ್ರಕಾರ 20-70% ವೇತನ ಹೆಚ್ಚಳ ಮಾಡುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. [ಕ್ರೇಜಿ ಸ್ಟಾರ್ ರವಿಚಂದ್ರನ್ ವಿರುದ್ಧ ರೊಚ್ಚಿಗೆದ್ದ ನಿರ್ಮಾಪಕರು]

ಏಕಾಏಕಿ 20-70% ವೇತನ ಹೆಚ್ಚಳ ನೀಡುವುದಕ್ಕೆ ನಿರ್ಮಾಪಕರು ರೆಡಿಯಿಲ್ಲ. ಮೇಲಾಗಿ, ನಿರ್ಮಾಪಕರು ವಿರೋಧಿಸುತ್ತಿರುವ ರಿಯಾಲಿಟಿ ಶೋಗಳಲ್ಲಿ ಕ್ರೇಜಿ ಸ್ಟಾರ್ ಭಾಗವಹಿಸುತ್ತಿದ್ದಾರೆ. ನಿರ್ಮಾಪಕರು ಪ್ರತಿಭಟನೆಯಲ್ಲಿ ನಿರತರಾಗಿದ್ದಾಗ ರವಿಚಂದ್ರನ್ ಫಿಲ್ಮ್ ಚೇಂಬರ್ ನತ್ತ ಸುಳಿಯಲೇ ಇಲ್ಲ.
ಈ ಎಲ್ಲಾ ಕಾರಣಗಳನ್ನಿಟ್ಟುಕೊಂಡು ನಿರ್ಮಾಪಕರು ರವಿಚಂದ್ರನ್ ವಿರುದ್ಧ ವಾಣಿಜ್ಯ ಮಂಡಳಿಗೊಂದು ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ರವಿಚಂದ್ರನ್ ಮೇಲೆ ನಿರ್ಮಾಪಕರು ಮಾಡಿರುವ ಆರೋಪಗಳೇನು? ಮುಂದೆ ಓದಿ.....
ಗೆ,
ಅಧ್ಯಕ್ಷರು
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
ಬೆಂಗಳೂರು
ಮಾನ್ಯರೇ,
ವಿಷಯ: ಶ್ರೀ.ವಿ.ರವಿಚಂದ್ರನ್ ಅಧ್ಯಕ್ಷತೆಯಲ್ಲಿ ಶ್ರೀ ಅಶೋಕ್ ನಾಯಕತ್ವದ ಕಾರ್ಮಿಕರ ವೇತನ ಪರಿಷ್ಕರಿಸುವ ಬಗ್ಗೆ
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಶ್ರೀ ವಿ.ರವಿಚಂದ್ರನ್ ರವರ ಅಧ್ಯಕ್ಷತೆಯಲ್ಲಿ ಶ್ರೀ ಅಶೋಕ್ ನಾಯಕತ್ವದ ಕಾರ್ಮಿಕರ ವೇತನ ಹೆಚ್ಚಿಸಲು ಸಮಿತಿಯನ್ನು ರಚಿಸಿರುವುದು ಸರಿಯಷ್ಟೆ.
ಆದರೆ ಈ ವೇತನ ಪರಿಷ್ಕರಿಸಿದ ನಂತರ ಅದನ್ನು ಅನುಷ್ಠಾನಕ್ಕೆ ತರಬೇಕಾದ ಎಲ್ಲ ನಿರ್ಮಾಪಕರೇ ಸತ್ಯಾಗ್ರಹ, ಸರಣಿ ಉಪವಾಸ ಸತ್ಯಾಗ್ರಹ ಹಾಗೂ ನಿರಂತರ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಸಹ ನಿರ್ಮಾಪಕರ ಕಷ್ಟಕ್ಕೆ ಸ್ಪಂದಿಸದೆ, ರಿಯಾಲಿಟಿ ಶೋಗಳಲ್ಲಿಯೇ ಮಗ್ನರಾಗಿ ನಮ್ಮ ಹೋರಾಟವನ್ನು ಲಘುವಾಗಿ ಪರಿಗಣಿಸಿ, ನಾವು ಬೇಡವೆಂದು ಧಿಕ್ಕಾರ ಹಾಕುತ್ತಿದ್ದ ರಿಯಾಲಿಟಿ ಶೋಗಳಿಗೆ ಮನ್ನಣೆ ನೀಡಿ, ನಮ್ಮನ್ನು ತಿರಸ್ಕಾರದ ದೃಷ್ಟಿಯಲ್ಲಿ ನೋಡಿರುವ ಶ್ರೀ ವಿ.ರವಿಚಂದ್ರನ್ ರವರು ನಿರ್ಮಾಪಕರಿಗೆ ಪೂರಕವಾದ, ನ್ಯಾಯಯುತವಾದ ವರದಿ ನೀಡುತ್ತಾರೆ ಎಂಬ ಯಾವ ನಂಬಿಕೆಯೂ ಇಲ್ಲ. [ಫಿಲ್ಮ್ ಚೇಂಬರ್ ನಲ್ಲಿ ಕೂಗಾಟ-ಕಿತ್ತಾಟ-ರಂಪಾಟ]
ಇವರ ವರ್ತನೆಯಲ್ಲಿ ನಮಗೆ ಅನುಕೂಲವಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ನಿರ್ಮಾಪಕರ ಕಷ್ಟಕ್ಕೆ ಸ್ಪಂದಿಸದ ಇವರು ನೀಡುವ ವರದಿಯನ್ನು ನಾವು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಖಂಡಿತ ಇಲ್ಲ.
ಆದ್ದರಿಂದ ಈ ತಕ್ಷಣವೇ ಈ ಸಮಿತಿಯನ್ನು ರದ್ದುಗೊಳಿಸಿ ನಿರ್ಮಾಪಕರಿಗೆ ಸ್ಪಂದಿಸುವ ಹೊಸ ಸಮಿತಿಯನ್ನು ರಚಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ. ಮತ್ತೊಮ್ಮೆ ತಮ್ಮಲ್ಲಿ ವಿನಯದಿಂದ ವಿನಂತಿಸಿಕೊಳ್ಳುತ್ತೇವೆ. ಈ ಸಮಿತಿಯು ನೀಡುವ ವರದಿಯನ್ನು ಅನುಷ್ಠಾನಕ್ಕೆ ತರಲು ನಾವು ಬಿಡುವುದಿಲ್ಲ. ದಯವಿಟ್ಟು ಸಹಕರಿಸಿ. [ನಿರ್ಮಾಪಕರು ರೊಚ್ಚಿಗೇಳುವುದಕ್ಕೆ 'ಇವರುಗಳೇ' ಕಾರಣ.!]
ಧನ್ಯವಾದಗಳೊಂದಿಗೆ,
ಇಂತಿ ನಿರ್ಮಾಪಕರು


Click it and Unblock the Notifications











