ಗಾಂಧಿನಗರದಲ್ಲಿ ಒಂದು ಸುತ್ತು : ಈ ದಿನದ 5 ಸಿನಿಮಾ ಸುದ್ದಿಗಳು
ಕನ್ನಡ ಚಿತ್ರರಂಗದಲ್ಲಿ ಪ್ರತಿದಿನ ಸಿನಿಮಾಗಳ ಕೆಲಸಗಳು ನಡೆಯುತ್ತಲೇ ಇರುತ್ತದೆ. ಯಾವುದೋ ಸಿನಿಮಾದ ಮುಹೂರ್ತ, ಇನ್ಯಾವುದೋ ಸಿನಿಮಾದ ಬಿಡುಗಡೆ, ಮತ್ತೊಂದು ಕಡೆ ವಿವಾದ, ಇನ್ನೊಂದು ಕಡೆ ವಿವಾಹ ಹೀಗೆ ಒಂದೇ ದಿನ ಸಾಕಷ್ಟು ಬೆಳವಣಿಗೆಗಳು ಆಗುತ್ತದೆ.
ಸದ್ಯಕ್ಕೆ ಇಂದು, ಸುದೀಪ್ 'ಕಿಸ್ಮತ್' ಸಿನಿಮಾ ಟ್ರೇಲರ್ ಬಗ್ಗೆ ಟ್ವೀಟ್ ಮಾಡಿದ್ದಾರೆ. ನಟ ಸೃಜನ್ ಗೆ ಹೊಸ ಬಿರುದು ಸಿಕ್ಕಿದೆ. 'ಪೈಲ್ವಾನ್' ಬಗ್ಗೆ ನಾಯಕಿ ಅಕಾಂಕ್ಷ ಸಿಂಗ್ ಸಂತಸ ಹಂಚಿಕೊಂಡಿದ್ದಾರೆ. 'ತಾರಕಾಸುರ' ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಜೊತೆಗೆ 'ಕೆ ಜಿ ಎಫ್' ಸಿನಿಮಾ ನೋಡಲು ಆಂಧ್ರ ಪ್ರೇಕ್ಷಕರು ಕಾತುರರಾಗಿದ್ದಾರೆ.
ಅಂದಹಾಗೆ, ಕನ್ನಡ ಚಿತ್ರರಂಗದ ಈ ದಿನದ ಸಣ್ಣ ಸಣ್ಣ ಸುದ್ದಿಗಳ ಸಂಗ್ರಹ ಮುಂದಿದೆ ಓದಿ...
'ಕಿಸ್ಮತ್'ಗೆ ಕಿಚ್ಚ ವಿಶ್
ನಟ ವಿಜಯ್ ರಾಘವೇಂದ್ರ ಅವರ 'ಕಿಸ್ಮತ್' ಸಿನಿಮಾದ ಟ್ರೇಲರ್ ಬಗ್ಗೆ ಸುದೀಪ್ ಟ್ವೀಟ್ ಮಾಡಿದ್ದಾರೆ. ''ನಮ್ಮ ಚಿತ್ರರಂಗದ ಒಬ್ಬ ಪ್ರತಿಭಾವಂತ ನಟ ವಿಜಯ್ ರಾಘವೇಂದ್ರ ಅವರ ಈ ಸಿನಿಮಾಗೆ ಶುಭವಾಗಲಿ'' ಎಂದಿದ್ದಾರೆ. ವಿಜಯ್ ರಾಘವೇಂದ್ರ ಅವರ ಪಾಲಿಗೆ 'ಕಿಸ್ಮತ್' ಬಹಳ ವಿಶೇಷವಾಗಿದೆ. ಈ ಸಿನಿಮಾದಿಂದ ಅವರು ನಟ ಮಾತ್ರವಲ್ಲದೆ ನಿರ್ದೇಶಕ ಕೂಡ ಆಗಿದ್ದಾರೆ. ಇದೇ ನವೆಂಬರ್ 23 ರಂದು ಚಿತ್ರ ರಿಲೀಸ್ ಆಗುತ್ತಿದೆ.
ಸೃಜನ್ ಗೆ ಬಿರುದು
ನಟ ದರ್ಶನ್ ಹಾಗೂ ಸೃಜನ್ ಲೋಕೇಶ್ ಇತ್ತೀಚಿಗಷ್ಟೆ ಕತಾರ್ ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದರು. ಈ ವೇಳೆ ದರ್ಶನ್ ಅವರಿಗೆ 'ಕರುನಾಡ ಕಲಾ ಕುಲತಿಲಕ' ಎಂಬ ಬಿರುದನ್ನು ನೀಡಿದ್ದು, ಸೃಜನ್ ಗೆ 'ಅಭಿನಯ ರತ್ನ' ಎಂಬ ಬಿರುದು ನೀಡಿ ಗೌರವಿಸಲಾಗಿದೆ.
ಆಂಧ್ರದಲ್ಲಿ ಅಣ್ತಮ್ಮನ ಹವಾ
ನಟ ಯಶ್ ಅಭಿನಯದ 'ಕೆ ಜಿ ಎಫ್' ಸಿನಿಮಾ ನೋಡಲು ಕರ್ನಾಟಕ ಮಾತ್ರವಲ್ಲ ಅನೇಕ ರಾಜ್ಯದ ಜನ ಕಾಯುತ್ತಿದ್ದಾರೆ. ಅದರಲ್ಲಿಯೂ ಆಂಧ್ರ ಹಾಗೂ ತೆಲಂಗಾಣ ಜನ ಸಿನಿಮಾದ ಬಗ್ಗೆ ಬಹಳ ಉತ್ಸುಕರಾಗಿದ್ದಾರೆ. ತಿರುಪತಿ ಸೇರಿದಂತೆ ಕೆಲ ಭಾಗಗಳಲ್ಲಿ ಅಭಿಮಾನಿಗಳು ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

'ತಾರಕಾಸುರ' ರಿಲೀಸ್
'ತಾರಕಾಸುರ' ಸಿನಿಮಾದ ಬಿಡುಗಡೆಯ ದಿನಾಂಕ ಫಿಕ್ಸ್ ಆಗಿದೆ. ಈ ಚಿತ್ರದ ನವೆಂಬರ್ 30 ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. 'ರಥಾವರ' ಖ್ಯಾತಿಯ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಸಿನಿಮಾದ ಟ್ರೇಲರ್ ಗಮನ ಸೆಳೆದಿದೆ. ವೈಭವ್, ಮಾನ್ವಿತಾ ಹರೀಶ್ ಹಾಗೂ ಹಾಲಿವುಡ್ ನಟ ಡ್ಯಾನಿ ಸಫಾನಿ ಚಿತ್ರದಲ್ಲಿ ನಟಿಸಿದ್ದಾರೆ.
ಅಕಾಂಕ್ಷ ಸಿಂಗ್ ಸಂತಸ
ಸುದೀಪ್ ನಟನೆಯ ಪೈಲ್ವಾನ್ ಸಿನಿಮಾದ ಫಸ್ಟ್ ಲುಕ್ ಬಗ್ಗೆ ಸ್ಯಾಂಡಲ್ ವುಡ್ ನ ಅನೇಕರು ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ. ಈಗ ಸ್ವತಃ ಚಿತ್ರದ ನಾಯಕಿ ಅಕಾಂಕ್ಷ ಸಿಂಗ್ ಕೂಡ ಸಿನಿಮಾದ ಬಗ್ಗೆ ತಮ್ಮ ಸಂತಸವನ್ನು ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಇದು ಅವರ ಮೊದಲ ಕನ್ನಡ ಸಿನಿಮಾವಾಗಿದೆ .


Click it and Unblock the Notifications











