»   » ಬಾಕ್ಸ್‌ ಆಫೀಸ್‌ ದಾಖಲೆ ಕಾಣದ ಬಾಲಿವುಡ್‌ನ ನಾಲ್ಕು ತಿಂಗಳು

ಬಾಕ್ಸ್‌ ಆಫೀಸ್‌ ದಾಖಲೆ ಕಾಣದ ಬಾಲಿವುಡ್‌ನ ನಾಲ್ಕು ತಿಂಗಳು

Posted By: Super
Subscribe to Filmibeat Kannada

ಮುಂಬಯಿ : ಏಪ್ರಿಲ್‌ 30ಕ್ಕೆ ಕೊನೆಗೊಂಡ ಮೊದಲ ನಾಲ್ಕು ತಿಂಗಳುಗಳು ಬಾಲಿವುಡ್‌ಗೆ ಆಶಾದಾಯಕವಾಗೇನೂ ಇಲ್ಲ. ಬಾಕ್ಸ್‌ ಆಫೀಸ್‌ ಯಾವುದೇ ದಾಖಲೆಗಳನ್ನು ಕಾಣಲಿಲ್ಲ. ಕಸೂರ್‌ ಹಾಗೂ ಪ್ಯಾರ್‌ ತುನೇ ಕ್ಯಾ ಕಿಯಾ ಚಿತ್ರಗಳನ್ನು ಹೊರತುಪಡಿಸಿದರೆ, ಬಹುತೇಕ ಉಳಿದೆಲ್ಲಾ ಚಿತ್ರಗಳೂ ಸೋಲು ಕಂಡಿವೆ.

2001ರ ಸಾಲಿನ ಮೊದಲ ನಾಲ್ಕು ತಿಂಗಳಲ್ಲಿ ನಾಯಕರಾಗಲೀ, ನಾಯಕಿಯರೇ ಆಗಲಿ, ಯಾವುದೇ ಒಂದು ಹಾಡಾಗಲೀ, ಇಲ್ಲವೇ ಚಿತ್ರಕಥೆಯೇ ಆಗಲೀ ಬಾಕ್ಸ್‌ ಆಫೀಸ್‌ ಗಳಿಕೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಲಿಲ್ಲ. ಮದುವೆಯ ನಂತರ ಮತ್ತೆ ಚಿತ್ರರಂಗಕ್ಕೆ ಮರಳಿದ ಬಾಲಿವುಡ್‌ನ ಪ್ರಖ್ಯಾತ ನಟಿ ಕಾಜೋಲ್‌ ನಟಿಸಿದ ಅಜಯ್‌ ದೇವಗನ್‌ರ 'ರಾಜು ಚಾಚಾ" ಮತ್ತು ರಾಹುಲ್‌ ರಾವಿಲ್‌ರ 'ಕುಚ್‌ ಖಟ್ಟಿ ಕುಚ್‌ ಮೀಠಿ" ಬಗ್ಗೆ ಇದ್ದ ಭಾರೀ ನಿರೀಕ್ಷೆಯೂ ಹುಸಿಯಾಯಿತು. ಈ ಎರಡು ಚಿತ್ರಗಳೂ ಹಣಗಳಿಕೆಯಲ್ಲಿ ಸೋಲುಂಡವು.

ಅಜಯ್‌ ದೇವಗನ್‌ರ ಸೋದರ ಸಂಬಂಧಿ ನಿರ್ದೇಶಿಸಿದ 'ರಾಜು ಚಾಚಾ" ಚಿತ್ರ ನಿರ್ಮಾಣಕ್ಕೆ 300 ದಶಲಕ್ಷ ರುಪಾಯಿ ತಗುಲಿತ್ತು ಎಂದು ವರದಿಯಾಗಿದೆ. ಈ ಚಿತ್ರದ ಹಿನ್ನಡೆಯಿಂದಾಗಿ ಅಜಯ್‌ ದೇವಗನ್‌ರ ಹೊಸ ಚಿತ್ರಗಳ ನಿರ್ಮಾಣಕ್ಕೂ ಹಿನ್ನೆಡೆಯುಂಟಾಗಿದೆ. ಈ ಹಂತದಲ್ಲಿ 'ಬರ್ಫ್‌" ಚಿತ್ರದ ನಿರ್ಮಾಣವೂ ವಿಳಂಬವಾಯ್ತು.

ತಾರೆಯರ ಸಂಭಾವನೆ ಕೂಡ ಈಗ ದುಬಾರಿಯೇ. ಶಾರುಖ್‌ ಖಾನ್‌, ಗೋವಿಂದ, ಐಶ್ವರ್ಯ ರೈ ಮತ್ತು ಕರಿಶ್ಮಾ ಕಪೂರ್‌ ಅವರನ್ನು ಬಾಲಿವುಡ್‌ ನೆಚ್ಚಿನ ತಾರೆಯರೆಂದು ಪರಿಗಣಿಸಿದೆ. ಈ ತಾರೆಯರಿರುವ ಚಿತ್ರದ ಮೇಲೆ ಹಾಕಿದ ಬಂಡವಾಳ ಬಂದೇ ಬರುತ್ತದೆ ಎಂಬ ನಂಬಿಕೆ.

ಆದರೆ, ಈ ವರ್ಷ ಹಾಗಾಗಿಲ್ಲ. ಶಶಿಲಾಲ್‌ ನಾಯರ್‌ರ 'ಒನ್‌ ಟು ಕಾ ಫೋರ್‌", ದೀಪಕ್‌ ಸರೀನ್‌ರ 'ಅಲ್‌ಬೇಲಾ", ಶ್ಯಾಮ್‌ ಬೆನಗಲ್‌ರ 'ಜುಬೇದಾ", ಇಂದಿರಾ ಕುಮಾರ್‌ರ 'ಆಶಿಕ್‌" ಮತ್ತು ಡೇವಿಡ್‌ ಧವನ್‌ರ 'ಜೋಡಿ ನಂ. 1" ಗೂ ಉತ್ತಮ ಆರಂಭವೇನೂ ದೊರಕಲಿಲ್ಲ.

ಈ ಮಧ್ಯೆ ಕಳೆದ ವರ್ಷ ಯಶಸ್ಸಿನ ದಾಖಲೆಗಳನ್ನೇ ಮಾಡಿದ 'ಕಹೋನಾ ಪ್ಯಾರ್‌ ಹೇ" ಮತ್ತು ಹೃತಿಕ್‌ ರೋಷನ್‌ರನ್ನು ಚಿತ್ರರಂಗಕ್ಕೆ ನೀಡಿದ ರಾಕೇಶ್‌ ರೋಷನ್‌ ತಮ್ಮ ಮತ್ತೊಂದು ಮಹತ್ವಾಕಾಂಕ್ಷೆಯ ಚಿತ್ರನಿರ್ಮಾಣಕ್ಕೆ ಅಂತಿಮ ರೂಪ ನೀಡುತ್ತಿದ್ದಾರೆ. ಇಷ್ಟಾದರೂ ಚಿತ್ರ ರಂಗದಲ್ಲಿ ಯಾವ ಯೋಜನೆಗಳು ಯಶಸ್ವಿಯಾಗುತ್ತವೆ. ಯಾವುದು ನೆಲ ಕಚ್ಚುತ್ತವೆ ಎಂದು ನಿರ್ದಿಷ್ಟವಾಗಿ ಹೇಳುವವರಿಲ್ಲ.

ಆದರೆ, ಈ ನಾಲ್ಕು ತಿಂಗಳ ಅವಧಿಯಲ್ಲಿ ಉತ್ತಮ ಮೊತ್ತ ನೀಡಿ ವಿತರಕರು ಕೊಂಡ ವಿಕ್ರಮ್‌ ಭಟ್‌ರ 'ಕಸೂರ್‌" ಹಾಗೂ ತ್ರಿಕೋಣ ಪ್ರೇಮ ಕಥೆಯ ರಜತ್‌ ಮುಖರ್ಜಿ ಅವರ 'ಪ್ಯಾರ್‌ ತುನೇ ಕ್ಯಾ ಕಿಯಾ" ಯಶಸ್ವಿ ಚಿತ್ರಗಳೆಂದು ಪರಿಗಣಿಸಲ್ಪಟ್ಟಿವೆ.

'ಪ್ಯಾರ್‌ ತುನೇ ಕ್ಯಾ ಕಿಯಾ" ಚಿತ್ರದ ನಿರ್ಮಾಪಕ ರಾಮ್‌ ಗೋಪಾಲ್‌ ವರ್ಮಾ ರೀತ್ಯ ಈ ಚಿತ್ರ ನಿರ್ಮಾಣಕ್ಕೆ ತಗುಲಿದ ವೆಚ್ಚ 50 ದಶಲಕ್ಷ. ಇದು 10 ದಶಲಕ್ಷ ಲಾಭ ಗಳಿಸಿದರೂ ಸಾಕು. ಇತ್ತೀಚಿನ ದಿನಗಳ ಚಿತ್ರಗಳ ಗಳಿಕೆ ಗಮನಿಸಿದರೆ ಇದು ಉತ್ತಮ ಗಳಿಕೆಯೇ ಎನ್ನುತ್ತಾರೆ.

ಈಗ ಬಾಲಿವುಡ್‌ನ ಕಣ್ಣೆಲ್ಲಾ ಅಮಿತಾಬ್‌ ಬಚ್ಚನ್‌, ಅಕ್ಷಯ್‌ ಕುಮಾರ್‌ ಜೋಡಿಯ ಸುನೀಲ್‌ ದರ್ಶನ್‌ರ ಏಕ್‌ ರಿಷ್ತಾ , ಅಮೀರ್‌ ಖಾನ್‌ರ ಸ್ವಂತ ನಿರ್ಮಾಣದ 'ಲಗನ್‌" ಚಿತ್ರಗಳ ಮೇಲೆ ನೆಟ್ಟಿದೆ. ಈ ಎರಡು ಬಿಗ್‌ ಬಜೆಟ್‌ ಚಿತ್ರಗಳು ಬಾಕ್ಸ್‌ ಆಫೀಸ್‌ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಕಾದೇ ನೋಡಬೇಕು.

English summary
Kasoor and Pyar Tune Kya Kiya is just the success in first 4 months

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada