'ಹಿಂದಿ ರಾಷ್ಟ್ರ ಭಾಷೆ' ಎಂದು ಹೇಳಿ ಮತ್ತೊಂದು ವಿವಾದಕ್ಕೆ ಕಿಚ್ಚು ಹಚ್ಚಿದ ಕಿಚ್ಚ
Recommended Video
ಕೇಂದ್ರ ಸರ್ಕಾರದ ಭಾಷಾ ತಾರತಮ್ಯ ಮತ್ತು ಅನಗತ್ಯವಾಗಿ ಹಿಂದಿ ಹೇರಿಕೆ ಮಾಡುತ್ತಿರುವುದರ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಹಿಂದಿ ಹೇರಿಕೆ ವಿರೋಧಿಸಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
ಹೀಗಿರುವಾಗ ಕಿಚ್ಚ ಸುದೀಪ್ ಮಾತು ಈಗ ತೀವ್ರ ವಿರೋಧಕ್ಕೆ ಕಾರಣವಾಗುತ್ತಿದೆ. ಪೈಲ್ವಾನ್ ಸಿನಿಮಾದ ಪ್ರಮೋಷನ್ ಸಮಯದಲ್ಲಿ ಮಾತನಾಡಿದ ಸುದೀಪ್, "ಹಿಂದಿ ರಾಷ್ಟ್ರಭಾಷೆ ಅದಕ್ಕಾಗಿ ಹಿಂದಿಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ" ಎಂದು ಹೇಳಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತೀಚಿಗೆ ಕೇಂದ್ರ ಗೃಹ ಸಚಿವ ಅಮಿತಾ ಶಾ 'ಒಂದು ದೇಶ ಒಂದು ಭಾಷೆ' ಎಂದು ಹೇಳುತ್ತಿದ್ದಂತೆ ಹಿಂದಿ ಹೇರಿಕೆ ವಿರೋಧಿಸಿ ನಡೆಯುತ್ತಿದ್ದ #StopHindiImposition ಅಭಿಯಾನ ಮತ್ತಷ್ಟು ಜೋರಾಯಿತು. ಹೀಗಿರಬೇಕಾದರೆ ಕನ್ನಡದ ಸ್ಟಾರ್ ನಟನಾಗಿ ಸುದೀಪ್ ಉತ್ತರ ಭಾರತದಲ್ಲಿ ಕುಳಿತು ಹಿಂದಿ ರಾಷ್ಟ್ರೀಯ ಭಾಷೆ ಅಂತ ಹೇಳಿ ವಿವಾದ ಸೃಷ್ಟಿಸಿದ್ದಾರೆ. ಸುದೀಪ್ ಯಾಕೆ ಹೀಗೆ ಹೇಳಿದ್ರು? ಭಾಷೆ ಬಗ್ಗೆ ಸುದೀಪ್ ಗೆ ಗೊತ್ತಿಲ್ಲವೆ? ಮುಂದೆ ಓದಿ..

ಹಿಂದಿ ಪ್ರೆಸ್ ಮೀಟ್ ನಲ್ಲಿ ನಡೆದ ಘಟನೆ
ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಐದು ಭಾಷೆಯಲ್ಲಿ ತೆರೆಗೆ ಬಂದಿದೆ. ಚಿತ್ರದ ಪ್ರಮೋಷನ್ ಸಮಯದಲ್ಲಿ ಮುಂಬೈನಲ್ಲಿ ಸುದ್ದಿಗೋಷ್ಠಿ ಏರ್ಪಡಿಸಲಾಗಿತ್ತು. ಈ ಸಮಯದಲ್ಲಿ ಪತ್ರಕರ್ತರೊಬ್ಬರು 'ಪೈಲ್ವಾನ್ ಸಿನಿಮಾ ಐದು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಆದ್ರೆ ಹಿಂದಿ ಭಾಷೆಗೆ ಯಾಕೆ ಹೆಚ್ಚು ಒತ್ತು ನೀಡುತ್ತಿದ್ದೀರಿ' ಎಂದು ಪ್ರಶ್ನೆ ಕೇಳಿದ್ದರು.

'ಹಿಂದಿ ರಾಷ್ಟ್ರೀಯ ಭಾಷೆ'
"ಯಾಕಂದ್ರೆ ಹಿಂದಿ ರಾಷ್ಟ್ರ ಭಾಷೆ. ಇಲ್ಲಿಂದನೆ ಪ್ರಾರಂಭವಾಗಿದ್ದು, ಯಾವಾಗಲು ಹಿಂದಿಗೆ ಒಂದು ವೈಟೇಜ್ ಇರುತ್ತೆ. ನನ್ನ ಪ್ರಕಾರ ಬೇರೆ ಭಾಷೆಗೆ ಹೋಲಿದರೆ ಹಿಂದಿ ಮಾತನಾಡುವವರು ಹೆಚ್ಚಿದ್ದಾರೆ. ಹಾಗಾಗಿ ಹಿಂದಿ ವರ್ಷನ್ ಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ" ಎಂದು ಸುದೀಪ್ ಹೇಳಿದ್ದರು. ಸುದೀಪ್ ಹೇಳಿದ ಹಾಗೆ ಹಿಂದಿ ಭಾಷೆ ಮಾತನಾಡುವವರು ಹೆಚ್ಚಿರಬಹುವುದು, ಆದ್ರೆ ಹಿಂದಿ ರಾಷ್ಟ್ರಭಾಷೆಯಲ್ಲ ಎನ್ನುವ ವಿಚಾರ ಸುದೀಪ್ ಗೆ ಗೊತ್ತಿಲ್ಲವಾ? ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಹಿಂದಿ ಹೇರಿಕೆ ವಿರೋಧಿಸಿದ್ದ ಸೌತ್ ಸ್ಟಾರ್ಸ್
ಹಿಂದಿ ಹೇರಿಕೆ ವಿರೋಧಿಸಿ ದಕ್ಷಿಣ ಭಾರತದ ಸ್ಟಾರ್ ನಟರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೂಪರ್ ಸ್ಟಾರ್ ರಜನಿ ಕಾಂತ್, ಕಮಲ್ ಹಾಸನ್ ಸೇರಿದಂತೆ ಕನ್ನಡದಲ್ಲಿ ಶಿವರಾಜ್ ಕಮಾರ್ ಮತ್ತು ಜಗ್ಗೇಶ್ ಹೀಗೆ ಸಾಕಷ್ಟು ನಟರು ಹಿಂದಿ ಹೇರಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಎಲ್ಲಾ ಭಾಷೆಗಳಿಗೂ ಸಮಾನ ಮಾನ್ಯತೆ ಇದೆ
ಸಂವಿಧಾನ 8 ಪರಿಚ್ಛೇದದ ಅನ್ವಯ ಎಲ್ಲಾ ಭಾಷೆಗಳಿಗೂ(22) ಸಮಾನ ಮಾನ್ಯತೆ ಹಾಗೂ ದೇಶದ ಅಧಿಕೃತ ಭಾಷೆ ಎಂದು ಕರೆಸಿಕೊಳ್ಳುವ ಹಕ್ಕಿದೆ. ಅದರೆ, ಹಿಂದಿ ಭಾಷೆಯನ್ನು ಮಾತ್ರ ಹೇರಿಕೆ ಮಾಡುವುದು ಸರಿಯಲ್ಲ. ಹಿಂದಿಯೇತರ ರಾಜ್ಯಗಳ ಜನತೆಯನ್ನು ಎರಡನೇ ದರ್ಜೆ ಪ್ರಜೆಗಳಂತೆ ಕಾಣಲಾಗುತ್ತಿದೆ. ಕೇಂದ್ರ ಸರ್ಕಾರದ ಈ ನೀತಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಹಿಂದಿಯನ್ನು ಅಧಿಕೃತ ಭಾಷೆಯಾಗಿ ಮಾಡಬೇಕು ಎನ್ನುವ ನಿರ್ಧಾರದ ಹೋರಾಟ ಇಂದು ಮೊನ್ನೆಯದಲ್ಲ. 1965ರಿಂದನೂ ಹೋರಾಟ ನಡೆಯುತ್ತಿದೆ.

ಅನೇಕ ಬಾರಿ ಭಾಷಾಭಿಮಾನ ಮೆರೆದಿರುವ ಸುದೀಪ್
ಸುದೀಪ್ ಕನ್ನಡದಲ್ಲಿ ಮಾತ್ರ ಸಿನಿಮಾ ಮಾಡುತ್ತಿಲ್ಲ. ಬೇರೆ ಬೇರೆ ಭಾಷೆಯಲ್ಲೂ ಬಣ್ಣಹಚ್ಚುತ್ತಿದ್ದಾರೆ. ಪರಭಾಷೆಯ ನೆಲದಲ್ಲಿ ನಿಂತು ಸಿನಿಮಾ ಪ್ರಮೋಷನ್ ಮಾಡಿರುವುದು ಇದೇ ಮೊದಲೇನಲ್ಲ. ಅಲ್ಲದೆ ಭಾಷಾಭಿಮಾನದ ಬಗ್ಗೆ ಸುದೀಪ್ ಗೆ ಹೇಳಬೇಕಿಲ್ಲ. ಯಾಕಂದ್ರೆ, ಪ್ರತೀಬಾರಿಯೂ ಪರಭಾಷೆನೆಲದಲ್ಲಿ ನಿಂತು ಕನ್ನಡದಲ್ಲೆ ಮಾತನಾಡಿ ಕನ್ನಡಾಭಿಮಾನ ಮೆರೆಯುವ ಸುದೀಪ್, ಯಾಕೆ ಹಿಂದಿ ರಾಷ್ಟ್ರ ಭಾಷೆ ಎಂದು ಹೇಳಿದ್ದಾರೆ ಎನ್ನುವುದು ಹಿಂದಿ ವಿರೋಧಿಗಳ ಪ್ರಶ್ನೆ.


Click it and Unblock the Notifications











