HMPV Virus ; ಭಾರತೀಯ ಚಿತ್ರರಂಗಕ್ಕೆ ತಲೆ ನೋವಾಗುತ್ತಾ ಚೀನಾದ ಹೊಸ ವೈರಸ್..?
ಹೆಚ್ಚೇನ್ ಇಲ್ಲ. ಐದು ವರ್ಷದ ಹಿಂದೆ ಅದ್ಯಾವುದೋ ಪೀಡೆ ಕೊರೋನಾ ವೈರಸ್ಸು ಅಮರಿಕೊಂಡು ಜಗತ್ತನ್ನೇ ಅಲ್ಲಾಡಿಸಿತ್ತು. ಬಡವರು-ಶ್ರೀಮಂತರು ಎಂಬ ಭೇದ ಭಾವ ಮಾಡದೇ ಯಾರೆಂದರೆ ಯಾರನ್ನು ಹೊರಗಡೆ ಹೋಗಲು ಬಿಡದೆ ಮನೆಯಲ್ಲಿ ಎಲ್ಲರನ್ನು ಕೂಡಿ ಹಾಕಿತ್ತು. ಜೀವ ಉಳಿಸಿಕೊಳ್ಳುವ ಸಂದರ್ಭ ಎದುರಾಗಿತ್ತು.
ಇನ್ನು ಕೊರೊನಾ ಶುರುವಾದಾಗ ಹೇಳದೇ ಕೇಳದೇ ದೀಢೀರ ಅಂತ ಲಾಕ್ ಡೌನ್ ಮಾಡಿದರಲ್ಲ ಆಗಂತೂ ಜನರಿಗೆ ಅಕ್ಷರಶಃ ರೆಕ್ಕೆಪುಕ್ಕ ಕಿತ್ತು ಕೂರಿಸಿದಂತಾ ಅನುಭವವಾಗಿತ್ತು. ಇನ್ನೂ ಚಿತ್ರರಂಗದ ಪಾಡು ಹೇಳತೀರದ್ದಾಗಿತ್ತು. ಸುಧಾರಿಸಿಕೊಳ್ಳಲಾಗದಷ್ಟು ಚಿತ್ರರಂಗ ನಲುಗಿ ಹೋಗಿತ್ತು. ಹತ್ತಾರು ವರ್ಷಗಳಿಂದ ಚಿತ್ರರಂಗವನ್ನೇ ನಂಬಿ ಬದುಕುತ್ತಿರುವ ನಿರ್ಮಾಪಕರು, ತಂತ್ರಜ್ಞರು ತಲೆಯ ಮೇಲೆ ಕೈ ಹೊತ್ತು ಕುಳಿತುಕೊಂಡಿದ್ದರು. ಅನೇಕರು ಸಾಲದ ಸುಳಿಯಲ್ಲಿ ಸಿಲುಕಿದ್ದರು.

ಈಗ ಐದು ವರ್ಷದ ನಂತರ ಅದೇ ಚೀನಾದಿಂದ ಇದ್ಯಾವುದೋ HMPV ವೈರಸ್ ಭಾರತಕ್ಕೆ ವಕ್ಕರಿಸಿಕೊಂಡಿದೆ. ನಿಜಾ. ಎಚ್‌ಎಂಪಿವಿ {ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ } ವೈರಸ್ ಅಪಾಯಕಾರಿ ಅಲ್ಲವೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನೊಳಗೊಂಡು ಅನೇಕ ರಾಜಕಾರಣಿಗಳು ಹೇಳಿದ್ದಾರೆ. ಆದರೂ ಕೂಡ ಅನೇಕರಲ್ಲಿ ಆತಂಕ ಇದ್ದೇ ಇದೆ. ಇದಕ್ಕೆ ಪೂರಕವಾಗಿ ಆರೋಗ್ಯ ಇಲಾಖೆಗೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆಯನ್ನು ಕೂಡ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನೀಡಿದ್ದಾರೆ.
ಈ ಹಿನ್ನೆಲೆ ಮುಂಬರುವ ದಿನಗಳಲ್ಲಿ ಕನ್ನಡ ಚಿತ್ರರಂಗ ಸೇರಿ ಭಾರತೀಯ ಚಿತ್ರರಂಗಕ್ಕೆ ಈ ಎಚ್‌ಎಂಪಿವಿ ವೈರಸ್ ತಲೆ ನೋವಾಗುತ್ತಾ ಎನ್ನುವ ಚರ್ಚೆ ಈಗ ನಡೆಯುತ್ತಿದೆ. ಚಿತ್ರರಂಗದಲ್ಲಿರುವ ಅನೇಕರ ಮನದಲ್ಲಿ ಆತಂಕ ಮನೆ ಮಾಡುತ್ತಿದೆ. ಅದರಲ್ಲಿಯೂ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ತುದಿಗಾಲಿನಲ್ಲಿ ನಿಂತ ಅನೇಕರಿಗೆ ತಮ್ಮ ಚಿತ್ರದ ಬಿಡುಗಡೆಯ ಸಮಯದಲ್ಲಿ ಎಲ್ಲಿ ಸರ್ಕಾರ ದೈಹಿಕ ಅಂತರವನ್ನು ಕಾಪಾಡಿಕೊಳ್ಳಬೇಕೆಂಬ ನಿಯಮವೇನಾದರೂ ಹೇರಿ ಬಿಡುತ್ತಾ ? ಮತ್ಯಾವದಾದರೂ ಕಠಿಣ ಕ್ರಮವನ್ನು ಕೈಗೊಳ್ಳುತ್ತಾ ? ಎನ್ನುವ ಚಿಂತೆ ಕಾಡಲು ಶುರು ಮಾಡಿದೆ.
ಇನ್ನೂ ಇದು ಹಬ್ಬದ ಸೀಸನ್. ಸಂಕ್ರಾಂತಿ ಹಬ್ಬದ ಪ್ರಯುಕ್ತ ಕನ್ನಡವೂ ಸೇರಿ ಬೇರೆ ಬೇರೆ ಭಾಷೆಯಲ್ಲಿ ಹಲವಾರು ಚಿತ್ರಗಳು ತೆರೆಗೆ ಬರುತ್ತಿವೆ. ಅದರಲ್ಲಿಯೂ ತೆಲುಗಿನಲ್ಲಿ ರಾಮ್ ಚರಣ್ ಅಭಿನಯದ ಗೇಮ್ ಚೇಂಜರ್, ಬಾಲಯ್ಯ ಅಭಿನಯದ ಡಾಕು ಮಹಾರಾಜ್, ವೆಂಕಟೇಶ್ ಅಭಿನಯದ ಸಂಕ್ರಾಂತಿಕಿ ವಸ್ತುನಾಂ ಚಿತ್ರಗಳು ಬಿಡುಗಡೆಯಾಗುತ್ತಿವೆ. ಇನ್ನು ಈ ಮೂರು ಚಿತ್ರಗಳು ಸ್ಟಾರ್ ಪ್ಲೇವರ್ ಇರುವ ಚಿತ್ರಗಳಾದ ಕಾರಣ ತೆಲುಗು ಚಿತ್ರರಂಗ ಹಣದ ಹೊಳೆ ಹರಿಯುವ ನಿರೀಕ್ಷೆಯನ್ನಿಟ್ಟುಕೊಂಡು ಕುಂತಿದೆ. ಹೀಗಿರುವಾಗ ಈ ಎಚ್‌ಎಂಪಿವಿ ವೈರಸ್‌ದಿಂದ ಲೆಕ್ಕಾಚಾರಗಳೆಲ್ಲ ಉಲ್ಟಾ ಆಗಿ ಬಿಡುವ ಭಯ ಈಗ ಅನೇಕರನ್ನು ಕಾಡುತ್ತಿದೆ. ಕೇವಲ ತೆಲುಗು ಮಾತ್ರವಲ್ಲ ಎಲ್ಲ ಭಾಷೆಯಲ್ಲಿ ಕೂಡ ಸದ್ಯ ಇದೇ ತರಹದ ವಾತಾವರಣ ನಿರ್ಮಾಣವಾಗುತ್ತಿದೆ.
ಒಟ್ನಲ್ಲಿ ಕರ್ನಾಟಕದಲ್ಲಿ ಎರಡು ಹ್ಯೂಮನ್ ಮೆಟಾನ್ಯೂಮೊವೈರಸ್ (ಎಚ್‌ಎಂಪಿವಿ) ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಭಯಪಡುವ ಅಗತ್ಯವಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಜನರು ಭಯಭೀತರಾಗಬೇಡಿ, ಏಕೆಂದರೆ ಈ ವೈರಸ್ ಕೋವಿಡ್-19 ರಂತೆ ಹರಡುವುದಿಲ್ಲ ಎಂದು ಸೋಮವಾರ ರಾಜ್ಯ ಸರ್ಕಾರ ಕೂಡ ತಿಳಿಸಿದೆ. ಮುಂದೇನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಚೀನಾದ ಹೊಸ ವೈರಸ್‌ಗೆ ಆತಂಕ ಪಡೆಬೇಕಾಗಿಲ್ಲ. ಈ ವರದಿ ಚಿತ್ರರಂಗದ ಮೇಲೆ ಹೊಸ ವೈರಸ್‌ದಿಂದ ಆಗಬಹುದಾದ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಪ್ರಕಟಿಸಲಾಗಿದೆ.


Click it and Unblock the Notifications











