»   » ಶಿಷ್ಯನಿಗೆ ಶನಿಕಾಟಗುರುವಿಗೆ ಗುರುದೆಶೆ

ಶಿಷ್ಯನಿಗೆ ಶನಿಕಾಟಗುರುವಿಗೆ ಗುರುದೆಶೆ

Posted By: Staff
Subscribe to Filmibeat Kannada

ಗುಸುಗುಸು ನಿಜವಾಗಿದೆ. 'ಹಾಲಿವುಡ್‌"ನಿಂದ ನಿರ್ದೇಶಕ ಮುರಳಿ ಮೋಹನ್‌ ಔಟಾಗಿದ್ದಾರೆ. ಅಲ್ಲಿಗೆ ನಿರ್ಮಾಪಕ ರಾಮು ಪಾಲಿಗೆ ಮುರಳಿ ಶಾಪಗ್ರಸ್ತರಂತೆ ಕಂಡಿರಬೇಕು. ಮುರಳಿಗೆ ಖೊಕ್‌ ಕೊಟ್ಟಿರುವುದನ್ನು 'ಶಕುನಿ"ಯ ಧ್ಯಾನದಲ್ಲಿರುವ ರಾಮು ಅವರೇ ಸ್ಪಷ್ಟಪಡಿಸಿದ್ದಾರೆ.

ಕಾಸ್ಟೂಮ್‌ಗಾಗಿ 40 ಲಕ್ಷ ಸೇರಿದಂತೆ ಹಾಲಿವುಡ್‌ಗಾಗಿ ಈಗಾಗಲೇ 1.55 ಕೋಟಿ ರುಪಾಯಿಯನ್ನು ರಾಮು ಖರ್ಚು ಮಾಡಿದ್ದಾರೆ. ಈ ಮೊತ್ತಕ್ಕೆ ಸದಭಿರುಚಿಯ ಚಿತ್ರವೊಂದನ್ನು ನಿರ್ಮಿಸಬಹುದಿತ್ತು ಅನ್ನುವುದು ರಾಮು ಅವರಿಗೂ ಗೊತ್ತಾದರೂ, ಹಾಲಿವುಡ್‌ನ ರೇಂಜೇ ಬೇರೆ ಅನ್ನುವುದು ಖಚಿತ ನಿರ್ಣಯ.

ಎಷ್ಟೆಲ್ಲ ನಷ್ಟ , ನೋವು ಅನುಭವಿಸಿದರೂ ಹಾಲಿವುಡ್‌ ಬಗೆಗೆ ರಾಮು ಅವರದು ತೀರದ ಪ್ರೇಮ. ಮುಂದಿನ ವರ್ಷ ಜೂನ್‌ ಹೊತ್ತಿಗೆ ಹಾಲಿವುಡ್‌ ಸೆಟ್ಟೇರಬಹುದು ಎನ್ನುತ್ತಾರೆ ಕನಸುಕಂಗಳಲ್ಲಿ . ಉಪೇಂದ್ರ ಕೂಡ ರಾಮುಗೆ ಇದೇ ಭರವಸೆ ಕೊಟ್ಟಿದ್ದಾರಂತೆ. ಅದೇ ಮಾತನ್ನು ನಾಯಕಿ ಜ್ಯೋತಿಕಾಗೂ ಹೇಳಲಾಗಿದೆ. ಸದ್ಯಕ್ಕೆ ಉಪೇಂದ್ರ ನಾಲ್ಕೈದು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ರಾಮು ಇತರ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಜೂನ್‌ ಇನ್ನೂ ಬಹಳ ದೂರವಿರುವುದರಿಂದ ಆ ಹೊತ್ತಿಗೆ ಕಥೆಯನ್ನು ಇನ್ನಷ್ಟು ಬಿಗಿಗೊಳಿಸಲು ರಾಮು ನಿಶ್ಚಯಿಸಿದ್ದಾರೆ. ಈಗಾಗಲೇ ಅನೇಕ ಬಾರಿ ಮುಂದೆ ಹೋಗಿರುವ ಹಾಲಿವುಡ್‌ನ್ನು 'ಗಣೇಶನ ಮದುವೆ" ಎಂದು ಸ್ಯಾಂಡಲ್‌ವುಡ್‌ ಆಡಿಕೊಂಡರೂ ರಾಮು ತಲೆ ಕೆಡಿಸಿಕೊಂಡಿಲ್ಲ . ಏಕೆಂದರೆ- 'ಇಡೀ ಭಾರತೀಯ ಚಿತ್ರರಂಗ ತಿರುಗಿ ಕನ್ನಡದತ್ತ ನೋಡಬೇಕು, ಹಾಗೆ ಮಾಡ್ತೀನಿ" ಎಂದು ಹಾಲಿವುಡ್‌ ಬಗ್ಗೆ ಉಪೇಂದ್ರ ಹೇಳುತ್ತಿರುವ ಮಾತುಗಳೇ ಅವರ ತಲೆಯಲ್ಲಿ ಗುಂಯ್‌ಗುಡುತ್ತಿವೆ.

ಅಂದಹಾಗೆ, ಮುರಳಿ ಬಲಿಯಿಂದ ತೆರವಾಗಿರುವ ಹಾಲಿವುಡ್‌ ನಿರ್ದೇಶಕನ ಸ್ಥಾನವನ್ನು ಉಪೇಂದ್ರ ತುಂಬಿದ್ದಾರೆ. ಅಂದಹಾಗೆ, ಮುರಳಿ ಮೋಹನ್‌ ಎನ್ನುವ ಈ ನತದೃಷ್ಟ ಉಪೇಂದ್ರ ಅವರ ಶಿಷ್ಯ!

English summary
Murali manohar is out, Upendra will direct the kannada movie Hollywood
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada