ಹೊಸ ಸಿನಿಮಾ ಟೀಸರ್ ಅನಾವರಣ ಮಾಡಿ ರಿಲೀಸ್ ದಿನಾಂಕ ಘೋಷಿಸಿದ ಹೊಂಬಾಳೆ ಫಿಲ್ಮ್ಸ್
ಹೈ ಬಜೆಟ್ ಸಿನಿಮಾಗಳನ್ನು ನಿರ್ಮಿಸುತ್ತಿದ್ದ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸೈಲೆಂಟ್ ಆಗಿಬಿಟ್ಟಿದೆ. 'ಕಾಂತಾರ- 1' ಬಳಿಕ ಯಾವುದೇ ಸಿನಿಮಾ ಆರಂಭಿಸಿಲ್ಲ. 'KGF'-3, 'ಸಲಾರ್-2', 'ಕಾಂತಾರ- 2', ಹೃತಿಕ್ ರೋಷನ್ ಜೊತೆಗೂ ಒಂದು ಸಿನಿಮಾ ಘೋಷಣೆ ಮಾಡಿದ್ದಾರೆ. ಸದ್ಯಕ್ಕೆ ಯಾವುದೇ ಸಿನಿಮಾ ಚಿತ್ರೀಕರಣ ನಡೀತಿಲ್ಲ.
ಹೊಂಬಾಳೆ ಫಿಲ್ಮ್ಸ್ ಯಾಕೆ ಇಷ್ಟು ಸೈಲೆಂಟ್ ಆಗಿಬಿಡ್ತು ಎಂದುಕೊಳ್ಳುವ ಸಮಯದಲ್ಲೇ ಸಿನಿರಸಿಕರಿಗೆ ಸಿಹಿಸುದ್ದಿ ಸಿಕ್ಕಿದೆ. ರೆಗ್ಯುಲರ್ ಕಮರ್ಷಿಯಲ್ ಸಿನಿಮಾ ಅಲ್ಲದೇ ಇದ್ದರೂ ಆನಿಮೇಟೆಡ್ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಕ್ಲೀಂ ಪ್ರೊಡಕ್ಷನ್ಸ್ ಜೊತೆ ಸೇರಿ ಹೊಂಬಾಳೆ ಫಿಲ್ಮ್ಸ್ ತೆರೆಗೆ ತಂದಿದ್ದ 'ಮಹಾವತಾರ್ ನರಸಿಂಹ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಭಾರತೀಯ ಚಿತ್ರರಂಗದಲ್ಲಿ ಆನಿಮೇಟೆಡ್ ಚಿತ್ರಗಳಿಗೆ ಕ್ರೇಜ್ ಇಲ್ಲ ಎನ್ನುವ ಮಾತನ್ನು ಸುಳ್ಳಾಗಿಸಿ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು.

ಅಶ್ವಿನ್ ಕುಮಾರ್ ನಿರ್ದೇಶನದ 'ಮಹಾವತಾರ್ ನರಸಿಂಹ' ಸಿನಿಮಾ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಆ ಸಿನಿಮಾ ಬಿಡುಗಡೆಗೂ ಮುನ್ನ 7 ಆನಿಮೇಟೆಡ್ ಸಿನಿಮಾಗಳನ್ನು ಹೊಂಬಾಳೆ ಫಿಲ್ಮ್ಸ್ ಘೋಷಿಸಿತ್ತು. ಇದೀಗ 2ನೇ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೀತಿದೆ. ಟೀಸರ್ ಸಮೇತ ರಿಲೀಸ್ ಡೇಟ್ ಕೂಡ ಘೋಷಣೆಯಾಗಿದೆ.
ಪರಶುರಾಮ ಜಯಂತಿಯ ಶುಭ ಸಂದರ್ಭದಲ್ಲಿ 'ಮಹಾವತಾರ ಪರಶುರಾಮ' ಸಿನಿಮಾ ಘೋಷಣೆಯಾಗಿದೆ. 'ಮಹಾವತಾರ್ ನರಸಿಂಹ' ರೀತಿಯಲ್ಲೇ ಈ ಚಿತ್ರವನ್ನು ತೆರೆಮೇಲೆ ತರಲಾಗುತ್ತಿದೆ. ಇದಕ್ಕಾಗಿ ಕ್ಲೀಂ ಪ್ರೊಡಕ್ಷನ್ಸ್ ಸಂಸ್ಥೆ ಜೊತೆ ಹೊಂಬಾಳೆ ಸಂಸ್ಥೆ ಮತ್ತೆ ಕೈ ಜೋಡಿಸಿದೆ. 'ಮಹಾವತಾರ ಸಿನಿಮಾಟಿಕ್ ಯುನಿವರ್ಸ್'ನಲ್ಲೇ ಇದು ಮತ್ತೊಂದು ಕಥೆ. ಅತ್ಯಾಧುನಿಕ ಅನಿಮ್ಯಾಟಿಕ್ ತಂತ್ರಜ್ಞಾನದ ಮೂಲಕ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಇಂದಿನ ಪೀಳಿಗೆಗೆ ದೃಶ್ಯ ವೈಭವದಂತೆ ಉಣಬಡಿಸುವ ಪ್ರಯತ್ನ ನಡೀತಿದೆ.
'ಮಹಾವತಾರ್ ನರಸಿಂಹ' ಸಿನಿಮಾ ಪಾಕಿಸ್ತಾನದಲ್ಲಿ ಕೂಡ ಸದ್ದು ಮಾಡಿತ್ತು. ಈ ಸಿನಿಮಾ ಚಿತ್ರಮಂದಿರಗಳನ್ನು ದೇವಾಲಯಗಳಾಗಿ ಪರಿವರ್ತಿಸಿತ್ತು. ಸಾಕಷ್ಟು ಜನ ಚಪ್ಪಲಿ ಹೊರಗಡೆ ಬಿಟ್ಟು ಚಿತ್ರಮಂದಿರಗಳ ಒಳಗೆ ಹೋಗಿ ಸಿನಿಮಾ ನೋಡಿದ್ದರು. ತಂದೆ ಹಿರಣ್ಯಕಶಪುವನ್ನು ಎದುರಿಸಿದ ಮಗ ಪುಟ್ಟ ಬಾಲಕ ಪ್ರಹ್ಲಾದ. ಕೊನೆಗೆ ಉಗ್ರನರಸಿಂಹನಾಗಿ ಬಂದು ಹಿರಣ್ಯಕಶಪು ಹೊಟ್ಟೆ ಬಗೆಯುವ ವಿಷ್ಣುವಿನ ಆರ್ಭಟವನ್ನು ತೆರೆಮೇಲೆ ಕಣ್ಣಿಗೆ ಕಟ್ಟಿದಂತೆ ತೋರಿಸಿದ್ದರು. ಸ್ಯಾಮ್ ಸಿ.ಎಸ್ ಸಂಗೀತ ಚಿತ್ರಕ್ಕೆ ಹೆಚ್ಚು ಬಲ ತುಂಬಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ 'ಮಹಾವತಾರ ಪರಶುರಾಮ' ಸಿನಿಮಾ ಕೂಡ ತೆರೆಗಪ್ಪಳಿಸಲಿದೆ.
ಡಿಸೆಂಬರ್ 27ರಂದು 'ಮಹಾವತಾರ ಪರಶುರಾಮ' ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಮಾಹಿತಿ ನೀಡಿದೆ. ಶ್ರೀವಿಷ್ಣುವಿನ ದಶಾವತಾರಗಳಲ್ಲಿ ಪರಶುರಾಮ ಅವತಾರ ಕೂಡ ಒಂದು. ವಿಷ್ಣುಪುರಾಣ ಸೇರಿದಂತೆ ಸಾಕಷ್ಟು ಪೌರಾಣಿಕ ಕಾವ್ಯಗಳನ್ನು ಆಧರಿಸಿ ಸಿನಿಮಾ ಕಟ್ಟಿಕೊಡುವ ಪ್ರಯತ್ನ ನಡೀತಿದೆ.
ಶ್ರೀವಿಷ್ಣುವಿನ 6ನೇ ಅವತಾರ ಪರಶುರಾಮ. ಜಮದಗ್ನಿ ಹಾಗೂ ರೇಣುಕಾ ದಂಪತಿ ಮಗನಾಗಿ ತ್ರೇತಾಯುಗದಲ್ಲಿ ಜನಿಸಿದ ಪರಶುರಾಮ ಸಪ್ತ ಚಿರಂಜೀವಿಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಕಾರ್ತವೀರ್ಯಾರ್ಜುನನು ತನ್ನ ತಂದೆ ಜಮದಗ್ನಿ ಅವರನ್ನು ಕೊಂದ ಸೇಡಿಗಾಗಿ ದುಷ್ಟ ಕ್ಷತ್ರಿಯರನ್ನು ಭೂಮಂಡಲದಲ್ಲಿ 21 ಬಾರಿ ಸಂಹರಿಸಿದರು ಎಂದು ಕಾವ್ಯಗಳಲ್ಲಿ ದಾಖಲಾಗಿದೆ. ಇದೇ ಕಥೆಯನ್ನು ಆನಿಮೇಷನ್ ಚಿತ್ರದಲ್ಲಿ ಕಟ್ಟಿಕೊಡುವ ಪ್ರಯತ್ನ ನಡೀತಿದೆ.
'ಮಹಾವತಾರ ಸಿನಿಮಾಟಿಕ್ ಯುನಿವರ್ಸ್'ನಲ್ಲಿ ಮುಂದೆ 'ಮಹಾವತಾರ್ ರಘುನಂದನ್' (2029), 'ಮಹಾವತಾರ್ ದ್ವಾರಕಾದೀಶ್'(2031), 'ಮಹಾವತಾರ್ ಗೋಕುಲನಂದ'(2033), 'ಮಹಾವತಾರ್ ಕಲ್ಕಿ ಪಾರ್ಟ್-1' (2035) ಹಾಗೂ 'ಮಹಾವತಾರ್ ಕಲ್ಕಿ ಪಾರ್ಟ್-2'(2037) ಚಿತ್ರಗಳು ನಿರ್ಮಾಣವಾಗಲಿದೆ.


Click it and Unblock the Notifications