ಮಲಯಾಳಂ ಸಿನಿಮಾ ವಿತರಣೆಗೆ ಮುಂದಾದ ಹೊಂಬಾಳೆ ಫಿಲ್ಮ್ಸ್; ಆ ಸಿನಿಮಾ ಯಾವುದು? ಇಲ್ಲಿದೆ ಡಿಟೈಲ್ಸ್
ಕನ್ನಡದ ಜನಪ್ರಿಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಈಗ ವಿತರಣೆಗೂ ಮುಂದಾಗಿದೆ. 'ಕೆಜಿಎಫ್', 'ಕಾಂತಾರ', 'ಸಲಾರ್' ಅಂತಹ ಬಿಗ್ ಬಜೆಟ್ ಸಿನಿಮಾಗಳನ್ನೇ ನಿರ್ಮಿಸುತ್ತಿರುವ ನಿರ್ಮಾಣ ಹೊಂಬಾಳೆ ಸಂಸ್ಥೆ ಈಗ ಮಲಯಾಳಂ ಸಿನಿಮಾವೊಂದನ್ನು ವಿತರಣೆ ಮಾಡುವುದಕ್ಕೆ ಮುಂದಾಗಿದೆ. ಆ ಮಲಯಾಳಂ ಸಿನಿಮಾವೇ 'ಎಆರ್‌ಎಂ'.
ಮಲಯಾಳಂನ ಸ್ಟಾರ್ ನಟ ಟೊವಿನೋ ಥಾಮಸ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಎಆರ್‌ಎಂ' ಸಿನಿಮಾ ರಿಲೀಸ್‌ಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ದೇಶಾದ್ಯಂತ ಭರ್ಜರಿ ಪ್ರಚಾರ ಮಾಡುವುದಕ್ಕೆ ಮುಂದಾಗಿದೆ. ಇದೇ ಸೆಪ್ಟೆಂಬರ್ 12ರಂದು ಈ ಸಿನಿಮಾ ಗ್ರ್ಯಾಂಡ್ ಆಗಿ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿರುವ ಈ ಸಿನಿಮಾವನ್ನು ಕನ್ನಡದಲ್ಲಿ ವಿತರಣೆ ಮಾಡುವುದಕ್ಕೆ ಹೊಂಬಾಳೆ ಫಿಲ್ಮ್ಸ್ ನಿರ್ಧರಿಸಿದೆ.

'ಎಆರ್‌ಎಂ' ಸಿನಿಮಾ ತಂಡ ಇತ್ತೀಚೆಗೆ ಬೆಂಗಳೂರಿಗೆ ಬಂದಿತ್ತು. ಈ ಸಿನಿಮಾ ಹೀರೋ ಟೊವಿನೋ ಥಾಮಸ್ ಸೇರಿದಂತೆ ಚಿತ್ರತಂಡ ಪ್ರಚಾರದಲ್ಲಿ ಭಾಗಿಯಾಗಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿರುವ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಮಾಡಲಿದ್ದು, ಕನ್ನಡದ ಅವತರಣಿಕೆಯನ್ನು ಹೊಂಬಾಳೆ ಫಿಲಂಸ್ ಬಿಡುಗಡೆ ಮಾಡಲಿದೆ ಎಂದು ಚಿತ್ರತಂಡ ಘೋಷಣೆ ಮಾಡಿದೆ.
ಅಂದ್ಹಾಗೆ, 'ಎಆರ್‌ಎಂ' ಅಂದರೆ 'ಅಜಯಂಟೆ ರಾಂಡಮ್ ಮೋಷನಂ'. ಇದೊಂದು ಮೂರು ತಲೆಮಾರಿನ ಕಥೆ. ಈ ಸಿನಿಮಾವನ್ನು 3ಡಿಯಲ್ಲೂ ಶೂಟ್ ಮಾಡಿದ್ದು, ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಸಿನಿಮಾ ಆರು ಭಾಷೆಯಲ್ಲಿ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಮಲಯಾಳಂ, ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ ಎನ್ನಲಾಗಿದೆ.
ಜಿತಿನ್ ಲಾಲ್ ನಿರ್ದೇಶಿಸಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತಿದೆ. ಮ್ಯಾಜಿಕ್ ಫ್ರೇಮ್ಸ್ ಬ್ಯಾನರ್‌ನಲ್ಲಿ ಲಿಸ್ಟಿನ್ ಸ್ಟೀಫನ್ ಹಾಗೂ ಯುಜಿಎಂ ಮೂವೀಸ್ ಅಡಿಯಲ್ಲಿ ಡಾ. ಜಕರಿಯಾ ಥಾಮಸ್ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾವನ್ನು ಕನ್ನಡದಲ್ಲಿ ಹೊಂಬಾಳೆ ಫಿಲ್ಮ್ಸ್ ವಿತರಣೆ ಮಾಡುತ್ತಿರುವುದರಿಂದ ಕರ್ನಾಟಕದಲ್ಲೂ ಗ್ರ್ಯಾಂಡ್ ಆಗಿಯೇ ರಿಲೀಸ್ ಆಗಲಿದೆ.
'ಎಆರ್‌ಎಂ' ಸಿನಿಮಾಗೆ ದಿಬು ನೈನನ್ ಥಾಮಸ್ ಸಂಗೀಥ ನೀಡಿದ್ದಾರೆ. ಇನ್ನು ಟೊನಿನೋ ಥಾಮಸ್ ಜೊತೆ ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿ, ಫೇಮಸ್ ಆಗಿರುವ ಕೃತಿ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರೊಂದಿಗೆ ಐಶ್ವರ್ಯ ರಾಜೇಶ್ ಮತ್ತು ಸುರಭಿ ಲಕ್ಷ್ಮಿ 'ಎಆರ್‌ಎಂ' ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಬೇಸಿಲ್ ಜೋಸೆಫ್, ಜಗದೀಶ್, ಹರೀಶ್ ಉತ್ತಮನ್, ಹರೀಶ್ ಪೆರಾಡಿ, ಕಬೀರ್ ಸಿಂಗ್, ಪ್ರಮೋದ್ ಶೆಟ್ಟಿ ಹಾಗೂ ರೋಹಿಣಿ ಕೂಡ ಕಾಣಿಸಿಕೊಂಡಿದ್ದಾರೆ.
ಸುಜಿತ್ ನಂಬಿಯಾರ್ ಎಆರ್‌ಎಂ ಸಿನಿಮಾಗೆ ಕಥೆ ಬರೆದಿದ್ದು, ಇವರೊಂದಿಗೆ ದೀಪು ಪ್ರದೀಪ್ ಜೊತೆಯಾಗಿದ್ದಾರೆ. ವಿಕ್ರಮ್ ಮೂರ್, ಫಿನಿಕ್ಸ್ ಪ್ರಭು ಸಿನಿಮಾಗೆ ಆಕ್ಷನ್ ಸೀನ್‌ಗಳನ್ನು ಕಂಪೋಸ್ ಮಾಡಿದ್ದಾರೆ. 'ಎಆರ್‌ಎಂ' ಸಿನಿಮಾ ಸೆಪ್ಟೆಂಬರ್ 12 ರಂದು ರಿಲೀಸ್ ಆಗುತ್ತಿದ್ದು, ಕನ್ನಡದಲ್ಲಿ ಹೊಂಬಾಳೆ ಫಿಲಂಸ್ ರಿಲೀಸ್ ಮಾಡುತ್ತಿದ್ದರೆ, ತೆಲುಗಿನಲ್ಲಿ ಮೈತ್ರಿ ಮೂವಿ ಮೇಕರ್ಸ್ ಹಾಗೂ ಹಿಂದಿಯಲ್ಲಿ ಅನಿಲ್ ಥಡಾನಿ ಈ ಸಿನಿಮಾವನ್ನು ವಿತರಣೆ ಮಾಡುತ್ತಿರೋದು ಚಿತ್ರತಂಡಕ್ಕೆ ಬಲ ಬಂದಂತಾಗಿದೆ.


Click it and Unblock the Notifications











