ಜಾಗತಿಕ ಮಟ್ಟದಲ್ಲಿ ಹೊಂಬಾಳೆ ಫಿಲ್ಮ್ಸ್ ಹೊಸ ಅಧ್ಯಾಯ; ಹೊಸ ಸಾಹಸಕ್ಕೆ ಕೈಹಾಕಿದ ಸಂಸ್ಥೆ
ಭಾರತೀಯ ಚಿತ್ರರಂಗದಲ್ಲಿ ಹೊಂಬಾಳೆ ಫಿಲ್ಮ್ಸ್ ಬಹು ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆಯಾಗಿ ಗುರ್ತಿಸಿಕೊಂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾಗಳ ನಿರ್ಮಾಣ ಮಾಡ್ತಿದೆ. ಮುಂದೆ ಮತ್ತಷ್ಟು ಅದ್ಧೂರಿ ಚಿತ್ರಗಳ ಕನಸು ಕಾಣುತ್ತಿದೆ. ಯಶ್, ಪ್ರಭಾಸ್, ಹೃತಿಕ್ ರೋಷನ್ ಜೊತೆಗೂ ಸಿನಿಮಾ ಘೋಷಿಸಿದೆ.
14 ವರ್ಷಗಳ ಹಿಂದೆ 'ನಿನ್ನಿಂದಲೇ' ಚಿತ್ರದಿಂದ ಶುರುವಾದ ಹೊಂಬಾಳೆ ಪರ್ವ ಬಹಳ ದೊಡ್ಡದಾಗಿ ಬೆಳೆಯುತ್ತಾ ಬಂದಿದೆ. 'ಕೆಜಿಎಫ್' ಸರಣಿ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಂಸ್ಥೆಯ ಬಲ ಹೆಚ್ಚಿಸಿತ್ತು. ಮತ್ತೊಮ್ಮೆ ಬಾಲಿವುಡ್ ಮಂದಿ ಕೂಡ ಸ್ಯಾಂಡಲ್‌ವುಡ್ ಕಡೆ ತಿರುಗಿ ನೋಡುವಂತಾಯಿತು. ಈಗಾಗಲೇ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಿದೆ. ಕರ್ನಾಟಕದಲ್ಲಿ ಸಾಕಷ್ಟು ಸಿನಿಮಾಗಳನ್ನು ವಿತರಣೆ ಸಹ ಮಾಡಿದೆ. ಇದೀಗ ಓವರ್‌ಸೀಸ್ ಮಾರ್ಕೆಟ್‌ನಲ್ಲಿ ಸಿನಿಮಾ ವಿತರಣೆಗೆ ಮುಂದಾಗಿದೆ.

ಹೌದು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ವಿದೇಶಗಳಲ್ಲಿ ಸಿನಿಮಾಗಳನ್ನು ವಿತರಣೆ ಮಾಡಲು ಹೊರಟಿದೆ. ಅದಕ್ಕಾಗಿ ಭಾರೀ ಪ್ಲ್ಯಾನ್ ನಡೆದಿದೆ. ಈ ಬಗ್ಗೆ ಅಧಿಕೃತವಾಗಿ ಸಂಸ್ಥೆ ಮಾಹಿತಿ ಹಂಚಿಕೊಂಡಿದೆ. 'ರಾಜಕುಮಾರ', 'ಕೆಜಿಎಫ್ ಚಾಪ್ಟರ್ 1 ಹಾಗೂ 2, 'ಕಾಂತಾರ', 'ಕಾಂತಾರ ಚಾಪ್ಟರ್ 1', 'ಮಹಾವತಾರ ನರಸಿಂಹ' ಮತ್ತು 'ಸಲಾರ್' ರೀತಿ ದೊಡ್ಡ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ಹೊಂಬಾಳೆ ಫಿಲ್ಮ್ಸ್, ಈಗ 'ಓವರ್ಸೀಸ್ ಡಿಸ್ಟ್ರಿಬ್ಯೂಷನ್' ಕ್ಷೇತ್ರಕ್ಕೆ ಪ್ರವೇಶಿಸಿದೆ.
ನಮ್ಮ ಹೆಮ್ಮೆಯ ಕಥೆಗಳನ್ನು ಜಗತ್ತಿನ ಮೂಲೆ ಮೂಲೆಗೂ ತಲುಪಿಸಲು ಈ ಪ್ರಯತ್ನ ಮಾಡುತ್ತಿರುವುದಾಗಿ ಸಂಸ್ಥೆ ಹೇಳಿದೆ. ಬರೀ ಹೊಂಬಾಳೆ ಫಿಲ್ಮ್ಸ್ ನಿರ್ಮಿಸುವ ಚಿತ್ರಗಳನ್ನು ಮಾತ್ರವಲ್ಲ ಭಾರತದ ಎಲ್ಲಾ ಸಿನಿಮಾಗಳನ್ನು ವಿಶ್ವದಾದ್ಯಂತ ತಲುಪಿಸುವ ಬೃಹತ್ ಜವಾಬ್ದಾರಿಯನ್ನು ಈ ಸಂಸ್ಥೆ ಹೊತ್ತುಕೊಂಡಿರುವುದಾಗಿ ಹೇಳಲಾಗಿದೆ.
ದಶಕಗಳಿಂದ ಕನ್ನಡ ಸೇರಿ ಭಾರತೀಯ ಸಿನಿಮಾಗಳು ವಿದೇಶಗಳಲ್ಲಿ ಸದ್ದು ಮಾಡ್ತಿದೆ. ಕನ್ನಡ ಸಿನಿಮಾಗಳು ಇತ್ತೀಚೆಗೆ ಓವರ್‌ಸೀನ್ ಮಾರ್ಕೆಟ್‌ನಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ನಮ್ಮ ಸಿನಿಮಾಗಳಿಗೆ ಅಲ್ಲಿ ಪ್ರೇಕ್ಷಕ ಬಳಗವಿದೆ. ಆದರೆ ಸಿನಿಮಾಗಳನ್ನು ಅಲ್ಲಿಗೆ ಸರಿಯಾದ ರೀತಿಯಲ್ಲಿ ಕೊಂಡೊಯ್ಯುವ ಪ್ರಯತ್ನಗಳು ನಡೀತಿಲ್ಲ. ಅಲ್ಲಿನ ಸಂಸ್ಥೆಗಳೇ ನಮ್ಮ ಸಿನಿಮಾಗಳನ್ನು ವಿತರಣೆ ಮಾಡುತ್ತಿವೆ. ಹಾಗಾಗಿ ಹೊಂಬಾಳೆ ಸಂಸ್ಥೆ ಈ ದಿಶೆಯಲ್ಲಿ ಆಲೋಚಿಸಿ ದಾಪುಗಾಲು ಇಟ್ಟಿದೆ.
ಹೊಂಬಾಳೆ ಫಿಲ್ಮ್ಸ್ ಭಾರೀ ಬಜೆಟ್ ಸಿನಿಮಾಗಳ ನಿರ್ಮಾಣಕ್ಕೆ ಮುಂದಾಗಿದೆ. ಆ ಚಿತ್ರಗಳನ್ನೆಲ್ಲಾ ಓವರ್‌ಸೀಸ್ ಮಾರ್ಕೆಟ್‌ನಲ್ಲಿ ಬಿಡುಗಡೆ ಮಾಡಲು ಒಂದು ವೇದಿಕೆ ಬೇಕಿತ್ತು. ಅದಕ್ಕಾಗಿ ತನ್ನದೇ ಸಿನಿಮಾ ವಿತರಣೆ ಸಂಸ್ಥೆಯಲ್ಲಿ ಅಲ್ಲಿಗೆ ವಿಸ್ತರಿಸಿದೆ. ದೊಡ್ಡ ನೆಟ್‌ವರ್ಕ್ ಹೊಂದಿರುವ ಸಂಸ್ಥೆ ಬಾಲಿವುಡ್, ಟಾಲಿವುಡ್, ಕಾಲಿವುಡ್ ಹಾಗೂ ಮಾಲಿವುಡ್ ಸಿನಿಮಾಗಳನ್ನು ಕೂಡ ಓವರ್‌ಸೀಸ್‌ನಲ್ಲಿ ರಿಲೀಸ್ ಮಾಡಲಿದೆ. ಹೊಂಬಾಳೆ ಸಂಸ್ಥೆ ಪ್ರಯತ್ನಕ್ಕೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಹೆಚ್ಚು ಕನ್ನಡ ಸಿನಿಮಾಗಳನ್ನು ನಿರ್ಮಾಣ ಮಾಡಿ, ನಮ್ಮ ಸಿನಿಮಾಗಳಲ್ಲಿ ಅಲ್ಲಿ ಬಿಡುಗಡೆ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ.
'ಮಹಾವತಾರ್ ನರಸಿಂಹ' ಬಳಿಕ 7 ಆನಿಮೇಷನ್ ಸಿನಿಮಾಗಳನ್ನು ಹೊಂಬಾಳೆ ಸಂಸ್ಥೆ ಘೋಷಿಸಿದೆ. ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ 'ಕೆಜಿಎಫ್ ಚಾಪ್ಟರ್-3' ಸಿನಿಮಾ ನಿರ್ಮಾಣವಾಗಬೇಕಿದೆ. ಪ್ರಭಾಸ್ ಜೊತೆಗೆ 'ಸಲಾರ್'-2 ಸೇರಿ ಮತ್ತೆರಡು ಸಿನಿಮಾಗಳ ನಿರ್ಮಾಣಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಹೃತಿಕ್ ರೋಷನ್ ಜೊತೆಗೆ ಒಂದು ಸಿನಿಮಾ ಘೋಷಣೆ ಮಾಡಲಾಗಿದೆ.
ಮುಂದಿನ ದಿನಗಳಲ್ಲಿ 'ಕಾಂತಾರ' ಸರಣಿ ಮುಂದುವರೆಸುವ ಲೆಕ್ಕಾಚಾರ ನಡೀತಿದೆ. ಹಾಗಾಗಿ ಓವರ್‌ಸೀಸ್ ಮಾರ್ಕೆಟ್ ಮೇಲೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಕಣ್ಣಿಟ್ಟಿದೆ. ಈ ಮೂಲಕ ತನ್ನ ವ್ಯಾಪಾರವನ್ನು ವಿಸ್ತರಿಸಲಿದೆ.


Click it and Unblock the Notifications











